
ನವದೆಹಲಿ, 12 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಸಂಸತ್ತಿನ ಬಜೆಟ್ ಅಧಿವೇಶನದ 12ನೇ ದಿನವಾದ ಗುರುವಾರ, ಕಾಂಗ್ರೆಸ್ ಸೇರಿದಂತೆ ಪ್ರತಿ ಪಕ್ಷಗಳ ಸಂಸದರು ಸಂಸತ್ ಭವನದ ಸಂಕೀರ್ಣದಲ್ಲಿರುವ ಮಕರ ದ್ವಾರದ ಮುಂದೆ ಪ್ರತಿಭಟನೆ ನಡೆಸಿದರು.
ಭಾರತ–ಅಮೆರಿಕಾ ವ್ಯಾಪಾರ ಒಪ್ಪಂದ, ಲೋಕಸಭಾ ಸ್ಪೀಕರ್ ಕೊಠಡಿಯಲ್ಲಿ ನಡೆದಿದೆ ಎಂದು ಆರೋಪಿಸಲಾದ ಅಸಭ್ಯ ವರ್ತನೆ ಸೇರಿದಂತೆ ಹಲವು ವಿಷಯಗಳ ಕುರಿತು ಅವರು ಘೋಷಣೆಗಳನ್ನು ಹಾಕಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಸಂಸದರಾದ ಪ್ರಮೋದ್ ತಿವಾರಿ, ರಾಜೀವ್ ಶುಕ್ಲಾ, ದೀಪೇಂದರ್ ಹೂಡಾ, ಸಮಾಜವಾದಿ ಪಕ್ಷದ ರಾಮ್ ಗೋಪಾಲ್ ಯಾದವ್, ಧರ್ಮೇಂದ್ರ ಯಾದವ್, ಜಯಾ ಬಚ್ಚನ್, ಪ್ರಿಯಾ ಸರೋಜ್ ಸೇರಿದಂತೆ ಅನೇಕ ಪ್ರತಿ ಪಕ್ಷದ ಸದಸ್ಯರು ಭಾಗವಹಿಸಿದರು.
ಸಂಸದರು “ಎಂಎಸ್‌ಪಿ ಉಳಿಸಿ”, “ಅಪರಾಧ ನಿರ್ಮೂಲನೆ”, “ಟ್ರ್ಯಾಪ್ ಡೀಲ್ ಬೇಡ” ಎಂಬ ಬರಹಗಳಿದ್ದ ಬ್ಯಾನರ್‌ಗಳು ಮತ್ತು ಪೋಸ್ಟರ್‌ಗಳನ್ನು ಹಿಡಿದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ, ಪ್ರತಿಪಕ್ಷದ ಸಂಸದರು ಲೋಕಸಭಾ ಸ್ಪೀಕರ್ ಅವರ ಕೊಠಡಿಗೆ ನುಗ್ಗಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ, “ನಾವು ಯಾರನ್ನೂ ನಿಂದಿಸಿಲ್ಲ. ಒಬ್ಬ ಅಥವಾ ಇಬ್ಬರು ಸಂಸದರು ಕೋಪದಿಂದ ಮಾತನಾಡಿದಿರಬಹುದು. ರಿಜಿಜು ನನ್ನ ಮೇಲೆ ಪ್ರಚೋದನೆ ಆರೋಪ ಮಾಡಿದ್ದಾರೆ, ಅದು ಸಂಪೂರ್ಣ ಸುಳ್ಳು. ನಾನು ಶಾಂತವಾಗಿ ಕುಳಿತು ಕೊನೆಯಲ್ಲಿ ಕೆಲವು ಮಾತುಗಳನ್ನು ಹೇಳಿದ್ದೇನೆ,” ಎಂದು ಸ್ಪಷ್ಟಪಡಿಸಿದರು.
ರಾಹುಲ್ ಗಾಂಧಿ ವಿರುದ್ಧದ ಹಕ್ಕುಚ್ಯುತಿ ನಿರ್ಣಯದ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸಂಸದ ರಾಜೀವ್ ಶುಕ್ಲಾ, “ಬಿಜೆಪಿಗೆ ಉತ್ತರವಿಲ್ಲದ ಹಲವು ಪ್ರಶ್ನೆಗಳನ್ನು ರಾಹುಲ್ ಗಾಂಧಿ ಎತ್ತುತ್ತಿರುವುದರಿಂದ ಅವರನ್ನು ಗುರಿಯಾಗಿಸಲಾಗುತ್ತಿದೆ. ಕೆಲವೊಮ್ಮೆ ಹಕ್ಕುಚ್ಯುತಿ ನಿರ್ಣಯ, ಕೆಲವೊಮ್ಮೆ ಅಮಾನತು ಇದು ನಿರಂತರ ಪ್ರಕ್ರಿಯೆಯಾಗಿದೆ,” ಎಂದು ಆರೋಪಿಸಿದರು.
ಅವರು, ಪಂಡಿತ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ಮನಮೋಹನ್ ಸಿಂಗ್ ಅವರ ಆಡಳಿತಕಾಲದ ಕೊಡುಗೆಗಳನ್ನು ಉಲ್ಲೇಖಿಸಿ, “ಕಾಂಗ್ರೆಸ್ ದೇಶವನ್ನು ನಿರ್ಮಿಸಿದೆ, ಬಿಜೆಪಿ ಅದನ್ನು ಮಾರಾಟ ಮಾಡುತ್ತಿದೆ,” ಎಂದು ಟೀಕಿಸಿದರು.
ಭಾರತ–ಅಮೆರಿಕಾ ವ್ಯಾಪಾರ ಒಪ್ಪಂದದ ಪರಿಣಾಮ ಕುರಿತು ಮಾತನಾಡಿದ ಕಾಂಗ್ರೆಸ್ ಸಂಸದ ಜೆ.ಬಿ. ಮಾಥರ್, “ಕಾಶ್ಮೀರದ ಆಪಲ್ ಬೆಳೆಗಾರರು ಈಗಾಗಲೇ ತಮ್ಮ ವ್ಯಾಪಾರಕ್ಕೆ ಹಾನಿಯಾಗಿದೆ ಎಂದು ಹೇಳಿದ್ದಾರೆ. ದೇಶದ ಇತರ ಭಾಗಗಳಿಂದಲೂ ಇದೇ ರೀತಿಯ ಪ್ರತಿಕ್ರಿಯೆಗಳು ಬರುತ್ತಿವೆ. ಎಲ್ಲಾ ಕ್ಷೇತ್ರಗಳು ಪರಿಣಾಮ ಅನುಭವಿಸಿದಾಗ ವಿರೋಧ ಪಕ್ಷ ಮೌನವಾಗಿರಲು ಸಾಧ್ಯವಿಲ್ಲ. ಜನರ ಧ್ವನಿಯನ್ನು ನಾವು ಎತ್ತುತ್ತಿದ್ದೇವೆ,” ಎಂದು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa