ಜಾಗತಿಕ ಕಡಲ ಭದ್ರತೆಯಲ್ಲಿ ಭಾರತ ಐತಿಹಾಸಿಕ ಹೆಜ್ಜೆ
ನವದೆಹಲಿ, 12 ಫೆಬ್ರವರಿ (ಹಿ.ಸ.) : ಆ್ಯಂಕರ್ : ಭಾರತೀಯ ನೌಕಾಪಡೆಯು ಮೊದಲ ಬಾರಿಗೆ ಬಹುರಾಷ್ಟ್ರೀಯ ಸಂಯೋಜಿತ ಕಾರ್ಯಪಡೆ–154 (CTF-154) ಯ ಆತಿಥ್ಯ ವಹಿಸಿಕೊಂಡಿದೆ. ಹಿಂದೂ ಮಹಾಸಾಗರ ಪ್ರದೇಶ ಸೇರಿದಂತೆ ವಿಶಾಲ ಸಮುದ್ರ ವಲಯದಲ್ಲಿ ಕಡಲ ಭದ್ರತೆ ಮತ್ತು ಸಾಮರ್ಥ್ಯ ವೃದ್ಧಿಗೆ ಭಾರತ ತೋರಿದ ಬದ್ಧತೆಗೆ ಇದು
INDIA-NAVY-COMBINED-TASK-FORCE


ನವದೆಹಲಿ, 12 ಫೆಬ್ರವರಿ (ಹಿ.ಸ.) :

ಆ್ಯಂಕರ್ : ಭಾರತೀಯ ನೌಕಾಪಡೆಯು ಮೊದಲ ಬಾರಿಗೆ ಬಹುರಾಷ್ಟ್ರೀಯ ಸಂಯೋಜಿತ ಕಾರ್ಯಪಡೆ–154 (CTF-154) ಯ ಆತಿಥ್ಯ ವಹಿಸಿಕೊಂಡಿದೆ. ಹಿಂದೂ ಮಹಾಸಾಗರ ಪ್ರದೇಶ ಸೇರಿದಂತೆ ವಿಶಾಲ ಸಮುದ್ರ ವಲಯದಲ್ಲಿ ಕಡಲ ಭದ್ರತೆ ಮತ್ತು ಸಾಮರ್ಥ್ಯ ವೃದ್ಧಿಗೆ ಭಾರತ ತೋರಿದ ಬದ್ಧತೆಗೆ ಇದು ಮಹತ್ವದ ಮೈಲುಗಲ್ಲಾಗಿದೆ.

ಬಹ್ರೇನ್‌ನ ಮನಾಮದಲ್ಲಿರುವ ಸಂಯೋಜಿತ ಸಾಗರ ಪಡೆ ಪ್ರಧಾನ ಕಚೇರಿಯಲ್ಲಿ ಫೆಬ್ರವರಿ 11ರಂದು ನಡೆದ ಹಸ್ತಾಂತರ ಸಮಾರಂಭದಲ್ಲಿ ಅಮೆರಿಕ ನೌಕಾಪಡೆಯ ವೈಸ್ ಅಡ್ಮಿರಲ್ ಕರ್ಟ್ ರೆನ್‌ಶಾ ಅಧ್ಯಕ್ಷತೆ ವಹಿಸಿದರು. ಭಾರತೀಯ ನೌಕಾಪಡೆಯ ಉಪ ಮುಖ್ಯಸ್ಥ ವೈಸ್ ಅಡ್ಮಿರಲ್ ತರುಣ್ ಸೋಬ್ತಿ ಹಾಗೂ ಹಲವು ಸದಸ್ಯ ರಾಷ್ಟ್ರಗಳ ಹಿರಿಯ ಸೈನಿಕ ಅಧಿಕಾರಿಗಳು ಉಪಸ್ಥಿತರಿದ್ದರು.

ಇಟಾಲಿಯನ್ ನೌಕಾಪಡೆಯ ಕಮೋಡೋರ್ ಆಂಡ್ರಿಯಾ ಬೀಲಿ ಅವರು CTF-154 ಕಮಾಂಡ್ ಅನ್ನು ಭಾರತೀಯ ನೌಕಾಪಡೆಯ ಕಮೋಡೋರ್ ಮಿಲಿಂದ್ ಮೊಕಾಶಿ ಅವರಿಗೆ ಹಸ್ತಾಂತರಿಸಿದರು. ತಮ್ಮ ಅಧಿಕಾರಾವಧಿಯಲ್ಲಿ ಕಮೋಡೋರ್ ಬೀಲಿ ‘ಆಪರೇಷನ್ ಕಂಪಾಸ್ ರೋಸ್–V’ ಸೇರಿದಂತೆ ಹಲವು ಪ್ರಮುಖ ತರಬೇತಿ ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ಮುನ್ನಡೆಸಿದರು. 22 ರಾಷ್ಟ್ರಗಳ ಸುಮಾರು 140 ಕಡಲ ಭದ್ರತಾ ತಜ್ಞರು ಭಾಗವಹಿಸಿದ್ದ ಈ ಅಭ್ಯಾಸ ಕಾರ್ಯಪಡೆಯ ಇತಿಹಾಸದಲ್ಲಿಯೇ ಅತಿದೊಡ್ಡದಾಗಿದೆ. ಕೀನ್ಯಾದಲ್ಲಿ ನಡೆದ ‘ಆಪರೇಷನ್ ಸದರ್ನ್ ರೆಡಿನೆಸ್’ ನಲ್ಲಿ ದಾಖಲೆಯ 160 ಮಂದಿ ಪಾಲ್ಗೊಂಡಿದ್ದರು.

ನೌಕಾಪಡೆಯ ವಕ್ತಾರ ಕ್ಯಾಪ್ಟನ್ ವಿವೇಕ್ ಮಧ್ವಾಲ್ ಅವರ ಮಾಹಿತಿ ಪ್ರಕಾರ, CTF-154 ಮುಖ್ಯವಾಗಿ ಸದಸ್ಯ ರಾಷ್ಟ್ರಗಳ ತರಬೇತಿ ಮತ್ತು ಸಾಮರ್ಥ್ಯ ವೃದ್ಧಿಗೆ ಸಮರ್ಪಿತವಾಗಿದೆ. ಕಡಲ ಡೊಮೇನ್ ಜಾಗೃತಿ (MDA), ಸಮುದ್ರ ಕಾನೂನು, ಕಡಲ ಪ್ರತಿಬಂಧ ಕಾರ್ಯಾಚರಣೆಗಳು, ಕಡಲ ರಕ್ಷಣಾ ಮತ್ತು ಸಹಾಯ ಹಾಗೂ ನಾಯಕತ್ವ ಅಭಿವೃದ್ಧಿ ಎಂಬ ಐದು ಪ್ರಮುಖ ಸ್ತಂಭಗಳ ಮೇಲೆ ತರಬೇತಿ ಕೇಂದ್ರೀಕರಿಸಿದೆ.

ಮೇ 2023ರಲ್ಲಿ ಸ್ಥಾಪನೆಯಾದ CTF-154, ಮಧ್ಯಪ್ರಾಚ್ಯ ಮತ್ತು ಅದರಾಚೆ ಪ್ರದೇಶಗಳಲ್ಲಿ ಕಡಲ ಭದ್ರತೆಯನ್ನು ಬಲಪಡಿಸುವ ಉದ್ದೇಶ ಹೊಂದಿದೆ. ಕಳ್ಳಸಾಗಣೆ, ಕಡಲ್ಗಳ್ಳತನ ಮತ್ತು ಅನಿಯಮಿತ ವಲಸೆ ಮೊದಲಾದ ಸವಾಲುಗಳಿಗೆ ಎದುರಿಸಲು ಸದಸ್ಯ ರಾಷ್ಟ್ರಗಳ ಕಾರ್ಯಾಚರಣಾ ಸಾಮರ್ಥ್ಯವನ್ನು ಹೆಚ್ಚಿಸುವತ್ತ ಕಾರ್ಯಪಡೆ ಗಮನ ಹರಿಸಿದೆ.

CTF-150, 151, 152 ಹಾಗೂ 153 ಕಾರ್ಯಪಡೆಗಳೊಂದಿಗೆ ಸಮನ್ವಯ ಸಾಧಿಸುತ್ತಿರುವ CTF-154 ನೇತೃತ್ವವನ್ನು ಭಾರತ ವಹಿಸಿಕೊಳ್ಳುವುದು, 47 ಸದಸ್ಯ ರಾಷ್ಟ್ರಗಳ ನಡುವೆ ಭಾರತ ವಿಶ್ವಾಸಾರ್ಹ ಭದ್ರತಾ ಪಾಲುದಾರನಾಗಿ ಹೊರಹೊಮ್ಮಿರುವುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande