
ಬೆಂಗಳೂರು, 12 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳನ್ನು ಆಯೋಜಿಸಬೇಕೇ ಬೇಡವೇ ಎಂಬ ಮಹತ್ವದ ಪ್ರಶ್ನೆಗೆ ಸಂಬಂಧಿಸಿ ವಿಧಾನ ಸೌಧದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು.
ಸಭೆಯಲ್ಲಿ ಡಿಜಿ ಮತ್ತು ಐಜಿಪಿ ಸಲೀಂ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಆರ್‌ಸಿಬಿ ಸಿಇಒ ರಾಜೇಶ್ ಮೇನನ್, ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಸೇರಿದಂತೆ ಪ್ರಮುಖರು ಭಾಗವಹಿಸಿ ಭದ್ರತೆ, ವ್ಯವಸ್ಥಾಪನೆ ಹಾಗೂ ಕಾನೂನು ಅಂಶಗಳ ಬಗ್ಗೆ ಚರ್ಚೆ ನಡೆಸಿದರು.
ಚಿನ್ನಸ್ವಾಮಿ ಮೈದಾನದಲ್ಲಿ ಐಪಿಎಲ್ ಪಂದ್ಯ ನಡೆಸಲು ಅನುಮತಿ ನೀಡುವ ಕುರಿತು ನಡೆದ ಸಮಾಲೋಚನೆಯಲ್ಲಿ ಬಹುತೇಕ ಒಪ್ಪಿಗೆ ವ್ಯಕ್ತವಾಗಿದೆ ಎನ್ನಲಾಗಿದೆ. ಇದೀಗ ಈ ವಿಷಯ ಸಚಿವ ಸಂಪುಟದ ಸಭೆಯ ಅಂಗಳಕ್ಕೆ ತಲುಪಿದ್ದು, ಸಂಜೆಯೊಳಗೆ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.
ಸಭೆ ಬಳಿಕ ಮಾತನಾಡಿದ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್, “ಸಭೆ ಉತ್ತಮವಾಗಿ ನಡೆದಿದೆ. ಐಪಿಎಲ್ ಉದ್ಘಾಟನಾ ಪಂದ್ಯ ಹಾಗೂ ಅಂತಾರಾಷ್ಟ್ರೀಯ ಪಂದ್ಯಗಳ ಆಯೋಜನೆ ಕುರಿತು ಚರ್ಚೆ ಮಾಡಿದ್ದೇವೆ. ಇಂದಿನ ಸಂಪುಟ ಸಭೆಯ ಬಳಿಕ ಅಂತಿಮ ತೀರ್ಮಾನ ಪ್ರಕಟವಾಗಲಿದೆ. ಎಲ್ಲರೂ ತಾಳ್ಮೆಯಿಂದ ಕಾಯಬೇಕು” ಎಂದರು.
ಚಿನ್ನಸ್ವಾಮಿಯಲ್ಲೇ ಐಪಿಎಲ್ ಉದ್ಘಾಟನೆ ನಡೆಯುವ ಸಾಧ್ಯತೆ ಕುರಿತು ಪ್ರತಿಕ್ರಿಯಿಸಿದ ಅವರು, “ಹಿಂದಿನ ಬಾರಿ ಯಾವ ಫ್ರಾಂಚೈಸಿ ಗೆದ್ದಿದೆಯೋ ಆ ರಾಜ್ಯದಲ್ಲೇ ಉದ್ಘಾಟನಾ ಪಂದ್ಯ ನಡೆಯಬೇಕು ಎನ್ನುವ ಮಾತು ಇದೆ. ಈ ದಿಕ್ಕಿನಲ್ಲಿ ಕೆಎಸ್‌ಸಿಎ ಮತ್ತು ಆರ್‌ಸಿಬಿ ಒಟ್ಟಾಗಿ ಕೆಲಸ ಮಾಡುತ್ತಿವೆ” ಎಂದರು.
ಹೈಕೋರ್ಟ್‌ಗೆ ವಿಷಯ ಹೋದರೆ ಸಮಸ್ಯೆಯಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಷರತ್ತುಗಳನ್ನು ಹಂತ ಹಂತವಾಗಿ ಪೂರೈಸುತ್ತೇವೆ. ಆಟಗಾರರು ಹಾಗೂ ಅಭಿಮಾನಿಗಳ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಉದ್ಘಾಟನೆಗೂ ಮುನ್ನ ಮೊದಲ ಹಂತದ ಕಾಮಗಾರಿ ಪೂರ್ಣಗೊಳಿಸುತ್ತೇವೆ” ಎಂದು ಭರವಸೆ ನೀಡಿದರು. ಬಿಸಿಸಿಐ ಸಹಕಾರ ನೀಡಿದ್ದು, ಜಾವಗಲ್ ಶ್ರೀನಾಥ್, ಅನಿಲ್ ಕುಂಬ್ಳೆ ಸೇರಿದಂತೆ ಹಲವು ಗಣ್ಯರು ಸಹ ಬೆಂಬಲ ನೀಡಿದ್ದಾರೆ ಎಂದು ತಿಳಿಸಿದರು.
ಸಭೆ ಬಳಿಕ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, “ಕೆಎಸ್‌ಸಿಎ ಮತ್ತು ಆರ್‌ಸಿಬಿ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ಜಸ್ಟೀಸ್ ಕುನ್ಹಾ ವರದಿ ಆಧಾರದ ಮೇಲೆ ಶಿಫಾರಸುಗಳನ್ನು ಪರಿಶೀಲಿಸಿದ್ದೇವೆ. ಮುಂದೆ ಯಾವುದೇ ಪಂದ್ಯ ಆಯೋಜನೆಗೆ ವರದಿಯ ಅಂಶಗಳನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸಲಾಗಿದೆ” ಎಂದರು.
“ಆರ್‌ಸಿಬಿ ಹಿಂದೆ ಗೆದ್ದಿರುವ ಹಿನ್ನೆಲೆಯಲ್ಲಿ ಉದ್ಘಾಟನಾ ಪಂದ್ಯವನ್ನು ಬೆಂಗಳೂರಿನಲ್ಲಿ ನಡೆಸಲು ಮನವಿ ಮಾಡಲಾಗಿದೆ. ಸರ್ಕಾರ ರಚಿಸಿದ್ದ ಸಮಿತಿ ವರದಿಯ ಸಾಧಕ-ಬಾಧಕಗಳನ್ನು ಚರ್ಚಿಸಿದ್ದೇವೆ. ಅಂತಿಮ ತೀರ್ಮಾನವನ್ನು ಸಚಿವ ಸಂಪುಟ ಕೈಗೊಳ್ಳಲಿದೆ. ಅದರ ನಂತರ ಅಧಿಕೃತ ಘೋಷಣೆ ಮಾಡುತ್ತೇವೆ” ಎಂದು ಸ್ಪಷ್ಟಪಡಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa