
ನವದೆಹಲಿ, 12 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಮೋದಿ ಸರ್ಕಾರದ ವ್ಯಾಪಾರ ಒಪ್ಪಂದ, ಹೊಸ ಕಾರ್ಮಿಕ ಕಾನೂನುಗಳು ಹಾಗೂ ಮನರೇಗಾ ಯೋಜನೆಗೆ ಧಕ್ಕೆ ತರುವ ಕ್ರಮಗಳ ವಿರುದ್ಧ ದೇಶದಾದ್ಯಂತ ಕಾರ್ಮಿಕ ಸಂಘಟನೆಗಳು, ರೈತರು ಮತ್ತು ಶ್ರಮಿಕರು ಬೀದಿಗಿಳಿದಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕೋಟ್ಯಂತರ ಶ್ರಮಜೀವಿ ರೈತರು, ಕಾರ್ಮಿಕರು ಮತ್ತು ಕಾರ್ಮಿಕ ವರ್ಗದ ಭವಿಷ್ಯವನ್ನು ಅಡವಿಡುವ ಜನವಿರೋಧಿ ‘ಟ್ರ್ಯಾಪ್ ಡೀಲ್’ ಅನ್ನು ನಾವು ದೃಢವಾಗಿ ವಿರೋಧಿಸುತ್ತೇವೆ,” ಎಂದು ಖರ್ಗೆ ಹೇಳಿದ್ದಾರೆ.
ವಿದೇಶಿ ಒತ್ತಡಕ್ಕೆ ಮಣಿದು ಮೋದಿ ಸರ್ಕಾರ ದೇಶದ ಕೋಟ್ಯಂತರ ನಾಗರಿಕರ ಜೀವನದೊಂದಿಗೆ ಆಟವಾಡಿದೆ ಎಂದು ಅವರು ಆರೋಪಿಸಿದರು. “‘ಈ ಬಾರಿ ಟ್ರಂಪ್ ಸರ್ಕಾರ’ ಎಂದು ಹೇಳುವವರು ಭಾರತದ ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ ತಂದಿದ್ದಾರೆ. ನಮ್ಮ ಕಾರ್ಮಿಕರು, ಸಣ್ಣ ಉದ್ಯಮಿಗಳು ಮತ್ತು ಸಾಮಾನ್ಯ ಜನತೆ ಇದನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ,” ಎಂದು ಅವರು ವಾಗ್ದಾಳಿ ನಡೆಸಿದರು.
ಬೀದಿಗಳಿಂದ ಸಂಸತ್ತಿನವರೆಗೆ ಹೋರಾಟ ಮುಂದುವರಿಯಲಿದೆ ಎಂದು ಖರ್ಗೆ ಎಚ್ಚರಿಕೆ ನೀಡಿದ್ದು, ಕಾರ್ಮಿಕ ಮತ್ತು ರೈತರ ಹಕ್ಕುಗಳ ರಕ್ಷಣೆಗೆ ಕಾಂಗ್ರೆಸ್ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa