
ಗದಗ, 10 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಒಂದು ಕಾಲದಲ್ಲಿ ಗತ ವೈಭವದಿಂದ ಮೆರೆದ ನಾಡಾಗಿದ್ದ ಐತಿಹಾಸಿಕ ಲಕ್ಕುಂಡಿ ಗ್ರಾಮವು ಇಂದು ಮತ್ತೆ ದೇಶ–ವಿದೇಶದ ಗಮನ ಸೆಳೆಯುತ್ತಿದೆ. ಲಕ್ಕುಂಡಿಯಲ್ಲಿ ನಿಧಿ ಪತ್ತೆಯಾದ ಬೆನ್ನಲ್ಲೇ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಕಲ್ಯಾಣ ಚಾಲುಕ್ಯರ ಕಾಲದ ವೈಭವದ ಕೇಂದ್ರವಾಗಿದ್ದ ಲಕ್ಕುಂಡಿ ಗ್ರಾಮದಲ್ಲಿ 101 ದೇವಸ್ಥಾನಗಳು ಹಾಗೂ 101 ಪುರಾತನ ಬಾವಿಗಳಿದ್ದು, ಇವುಗಳು ಇಂದಿಗೂ ಆ ಕಾಲದ ಶ್ರೀಮಂತ ಇತಿಹಾಸವನ್ನು ಜೀವಂತವಾಗಿ ಸಾರುತ್ತಿವೆ.
ಲಕ್ಕುಂಡಿ ಗ್ರಾಮದ ಪ್ರಮುಖ ಆಕರ್ಷಣೆಯಾಗಿ ಮಾಣಿಕ್ಯಶ್ವರ ದೇವಾಲಯ ಪ್ರವಾಸಿಗರ ಗಮನ ಸೆಳೆಯುತ್ತಿದೆ. ಕಲ್ಯಾಣ ಚಾಲುಕ್ಯರು ನಿರ್ಮಿಸಿದ ಈ ದೇವಾಲಯವು ತ್ರಿಕೂಟಾಚಲ ಶೈಲಿಯಲ್ಲಿ ನಿರ್ಮಿತವಾಗಿದ್ದು, ಅಮೋಘ ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿದೆ. ಸಾಲಿಗ್ರಾಮ ಶಿಲೆಯಿಂದ ಕೆತ್ತನೆ ಮಾಡಲಾದ ಅಪರೂಪದ ಶಿವಲಿಂಗ ದೇವಾಲಯದ ವಿಶೇಷತೆಯಾಗಿದ್ದು, ಗೋಡೆಗಳ ಮೇಲಿನ ಸೂಕ್ಷ್ಮ ಶಿಲ್ಪಕಲೆಗಳು ಆ ಕಾಲದ ಶಿಲ್ಪಿಗಳ ಕೈಚಾಣಾಕ್ಷತೆಯನ್ನು ಪ್ರತಿಬಿಂಬಿಸುತ್ತವೆ.
ದೇವಾಲಯದ ಮುಂಭಾಗದಲ್ಲಿರುವ ಮುಸುಕಿನ ಬಾವಿಯೂ ಪ್ರವಾಸಿಗರಿಗೆ ವಿಶೇಷ ಆಕರ್ಷಣೆಯಾಗಿದೆ. ಎರಡು ಅಂತಸ್ತಿನಂತೆ ಕಾಣುವ ಕಂಬಗಳು ಹಾಗೂ ಶಿಲ್ಪಕಲೆಯಿಂದ ಕೆತ್ತನೆ ಮಾಡಲಾದ ವಿನ್ಯಾಸಗಳು ನೋಡುಗರನ್ನು ಅಚ್ಚರಿಗೊಳಿಸುತ್ತವೆ. ಆದರೆ ಪುರಾತನ ಈ ಬಾವಿಯಲ್ಲಿ ಪಾಚಿ ಬೆಳೆದು, ಕಲುಷಿತ ನೀರು ನಿಂತಿರುವುದು ಹಾಗೂ ನಿರ್ವಹಣೆಯ ಕೊರತೆ ಸ್ಪಷ್ಟವಾಗಿ ಗೋಚರಿಸುತ್ತಿದೆ.
ಸುತ್ತಮುತ್ತಲಿನ ಅವ್ಯವಸ್ಥೆ ಮತ್ತು ಸ್ವಚ್ಛತೆಯ ಕೊರತೆ ಪ್ರವಾಸಿಗರನ್ನು ನಿರಾಶೆಗೊಳಿಸುತ್ತಿದೆ.
ಇದಲ್ಲದೆ ದೇವಾಲಯ ಹಾಗೂ ಮುಸುಕಿನ ಬಾವಿಗೆ ತಲುಪುವ ಸರಿಯಾದ ರಸ್ತೆ ವ್ಯವಸ್ಥೆಯ ಕೊರತೆ ಸಮಸ್ಯೆಯಾಗಿದೆ. ಸ್ವಚ್ಛತೆ, ರಸ್ತೆ, ಮೂಲಸೌಕರ್ಯಗಳ ಕೊರತೆಯಿಂದ ಲಕ್ಕುಂಡಿಯ ವೈಭವ ಸಂಪೂರ್ಣವಾಗಿ ಹೊರಹೊಮ್ಮಲು ಅಡ್ಡಿಯಾಗುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಸಿದ್ದು ಪಾಟೀಲ್ ಮಾತನಾಡಿ, “ಮಾಣಿಕ್ಯಶ್ವರ ದೇವಾಲಯ ಕೇಂದ್ರ ಪುರಾತತ್ವ ಇಲಾಖೆಗೆ ಒಳಪಟ್ಟಿದ್ದರೂ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ತಕ್ಷಣವೇ ರಸ್ತೆ ಅಭಿವೃದ್ಧಿ, ಬಾವಿ ಸ್ವಚ್ಛತೆ ಹಾಗೂ ಮೂಲಸೌಕರ್ಯ ಒದಗಿಸಲು ಕೇಂದ್ರ ಪುರಾತತ್ವ ಇಲಾಖೆ ಮನವಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಸ್ಥಳೀಯರು ಕೂಡ ಕೇಂದ್ರ ಪುರಾತತ್ವ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಲಕ್ಕುಂಡಿಯ ಐತಿಹಾಸಿಕ ದೇವಾಲಯಗಳು ಹಾಗೂ ಬಾವಿಗಳನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸುವಂತೆ ಸ್ಥಳೀಯರು ಹಾಗೂ ಪ್ರವಾಸಿಗರು ಒತ್ತಾಯ ಮಾಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP