
ಹುಬ್ಬಳ್ಳಿ, 22 ಜನವರಿ (ಹಿ.ಸ.):
ಆ್ಯಂಕರ್:
ಗೋಬಿ ಮಂಚೂರಿ, ಮಶ್ರೂಮ್ ಮಂಚೂರಿ ಎಂದಾಕ್ಷಣ ಎಲ್ಲರಿಗೂ ಪರಿಚಿತ. ಆದರೆ ಇದೇ ಸಾಲಿಗೆ ಸೇರಿಕೊಳ್ಳುವ ಬಾಳೆಕಾಯಿ ಮಂಚೂರಿ ಈಗ ಮನೆಮನೆಗಳಲ್ಲಿ ಗಮನ ಸೆಳೆಯುತ್ತಿದೆ. ಸರಳ ಪದಾರ್ಥಗಳಿಂದ ತಯಾರಾಗುವ ಈ ಹೊಸ ರುಚಿಯ ತಿಂಡಿ ಚಳಿಗಾಲದಲ್ಲಿ ಟೀ ಜೊತೆ ಸವಿಯಲು ಅತಿ ಸೂಕ್ತವಾಗಿದೆ.
ಬಾಳೆಕಾಯಿಯನ್ನು ಆಧಾರವನ್ನಾಗಿ ಮಾಡಿಕೊಂಡು ತಯಾರಿಸುವ ಮಂಚೂರಿ, ಆರೋಗ್ಯಕರವಾಗಿದ್ದು ರುಚಿಯಲ್ಲೂ ಹಿಂದೆ ಬೀಳುವುದಿಲ್ಲ. ಕಡಿಮೆ ವೆಚ್ಚದಲ್ಲಿ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಈ ಸ್ನ್ಯಾಕ್, ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರಿಗೂ ಇಷ್ಟವಾಗುವಂತಿದೆ.
ಬೇಕಾಗುವ ಪದಾರ್ಥಗಳು:
ಬಾಳೆಕಾಯಿ, ಕಾರ್ನ್‌ಫ್ಲೋರ್ ಅಥವಾ ಅಕ್ಕಿ ಹಿಟ್ಟು, ಈರುಳ್ಳಿ, ಶುಂಠಿ–ಬೆಳ್ಳುಳ್ಳಿ ಪೇಸ್ಟ್, ಟೊಮೆಟೊ ಸಾಸ್, ಸೋಯಾ ಸಾಸ್, ಉಪ್ಪು, ಸಕ್ಕರೆ, ಮೆಣಸಿನ ಪುಡಿ ಹಾಗೂ ಎಣ್ಣೆ.
ತಯಾರಿಸುವ ವಿಧಾನ:
ಮೊದಲು ಬಾಳೆಕಾಯಿಯನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆಯದೇ ಹದವಾಗಿ ಬೇಯಿಸಬೇಕು. ಬಳಿಕ ಸಿಪ್ಪೆ ತೆಗೆದು ಮ್ಯಾಶ್ ಮಾಡಿ, ಅದಕ್ಕೆ ಉಪ್ಪು, ಚಿಟಿಕೆ ಸಕ್ಕರೆ, ಕಾರ್ನ್‌ಫ್ಲೋರ್, ಅಕ್ಕಿ ಹಿಟ್ಟು ಹಾಗೂ ಮೆಣಸಿನ ಪುಡಿ ಸೇರಿಸಿ ಮಿಶ್ರಣ ಮಾಡಬೇಕು. ಈ ಮಿಶ್ರಣವನ್ನು ಉಂಡೆಗಳನ್ನಾಗಿ ಮಾಡಿ ಎಣ್ಣೆಯಲ್ಲಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಕರಿಯಬೇಕು.
ಬೇರೆ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಹೆಚ್ಚಿದ ಈರುಳ್ಳಿ ಹಾಗೂ ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಹುರಿದು, ಅದಕ್ಕೆ ಟೊಮೆಟೊ ಸಾಸ್ ಮತ್ತು ಸೋಯಾ ಸಾಸ್ ಸೇರಿಸಬೇಕು. ನಂತರ ಕರಿದ ಬಾಳೆಕಾಯಿ ಉಂಡೆಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿದರೆ ಬಾಳೆಕಾಯಿ ಮಂಚೂರಿ ಸಿದ್ಧ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa