ದೂರಸಂಪರ್ಕ ಸೇವಾ ಸಂಸ್ಥೆಗಳ ನಡುವಿನ ಒಪ್ಪಂದ ನೋಂದಣಿ ನಿಯಮ ತಿದ್ದುಪಡಿ: ಜನವರಿ 1ರಿಂದ ಜಾರಿ
ನವದೆಹಲಿ, 06 ನವೆಂಬರ್ (ಹಿ.ಸ.): ದೂರಸಂಪರ್ಕ ಸೇವಾ ಸಂಸ್ಥೆಗಳ ನಡುವಿನ ಪರಸ್ಪರ ಸಂಪರ್ಕ ಒಪ್ಪಂದಗಳ ನೋಂದಣಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ನಿಯಮಗಳನ್ನು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ತಿದ್ದುಪಡಿ ಮಾಡಿದೆ. ಹೊಸ ನಿಯಮಗಳು 2027ರ ಜನವರಿ 1ರಿಂದ ಜಾರಿಗೆ ಬರಲಿವೆ. ಶುಕ್ರವಾ
ट्राई


ನವದೆಹಲಿ, 06 ನವೆಂಬರ್ (ಹಿ.ಸ.):

ದೂರಸಂಪರ್ಕ ಸೇವಾ ಸಂಸ್ಥೆಗಳ ನಡುವಿನ ಪರಸ್ಪರ ಸಂಪರ್ಕ ಒಪ್ಪಂದಗಳ ನೋಂದಣಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ನಿಯಮಗಳನ್ನು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ತಿದ್ದುಪಡಿ ಮಾಡಿದೆ. ಹೊಸ ನಿಯಮಗಳು 2027ರ ಜನವರಿ 1ರಿಂದ ಜಾರಿಗೆ ಬರಲಿವೆ.

ಶುಕ್ರವಾರ ‘ಪರಸ್ಪರ ಸಂಪರ್ಕ ಒಪ್ಪಂದಗಳ ನೋಂದಣಿ (ನಾಲ್ಕನೇ ತಿದ್ದುಪಡಿ) ನಿಯಮಗಳು-2026’ ಪ್ರಕಟಿಸಿರುವ ಟ್ರಾಯ್, ಎಲ್ಲ ದೂರಸಂಪರ್ಕ ಸೇವಾ ಸಂಸ್ಥೆಗಳು ತಮ್ಮ ಒಪ್ಪಂದಗಳು ಹಾಗೂ ಅವುಗಳಲ್ಲಿ ಮಾಡಿರುವ ಬದಲಾವಣೆಗಳನ್ನು ಪ್ರಾಧಿಕಾರದ ಜಾಲತಾಣದಲ್ಲಿ ಕಡ್ಡಾಯವಾಗಿ ನೋಂದಾಯಿಸಬೇಕು ಎಂದು ಸೂಚಿಸಿದೆ.

2027ರ ಜನವರಿ 1ರಂದು ಜಾರಿಯಲ್ಲಿರುವ ಎಲ್ಲ ಹಳೆಯ ಒಪ್ಪಂದಗಳನ್ನು 15 ದಿನಗಳೊಳಗೆ ಜಾಲತಾಣದಲ್ಲಿ ಸಲ್ಲಿಸಬೇಕು. ಹೊಸ ಒಪ್ಪಂದಗಳು ಮತ್ತು ಅವುಗಳಿಗೆ ಮಾಡಲಾಗುವ ತಿದ್ದುಪಡಿಗಳನ್ನು ಒಪ್ಪಂದಕ್ಕೆ ಸಹಿ ಹಾಕಿದ ಅಥವಾ ಬದಲಾವಣೆ ಮಾಡಿದ 15 ದಿನಗಳೊಳಗೆ ನೋಂದಾಯಿಸುವುದು ಕಡ್ಡಾಯವಾಗಿದೆ. ಈ ಹಿಂದೆ ಮುದ್ರಿತ ಪ್ರತಿಗಳೊಂದಿಗೆ ಫ್ಲಾಪಿ ಅಥವಾ ಡಿಸ್ಕೆಟ್‌ನಲ್ಲಿ ವಿದ್ಯುನ್ಮಾನ ಪ್ರತಿಗಳನ್ನು ಸಲ್ಲಿಸುವ ವ್ಯವಸ್ಥೆ ಜಾರಿಯಲ್ಲಿತ್ತು. ಇದೀಗ ಅದನ್ನು ರದ್ದುಗೊಳಿಸಲಾಗಿದೆ.

ಹೊಸ ನಿಯಮಗಳ ಪ್ರಕಾರ, ಒಪ್ಪಂದಗಳ ವಿದ್ಯುನ್ಮಾನ ಪ್ರತಿಗಳನ್ನು ಪಠ್ಯ ಹುಡುಕಲು ಸಾಧ್ಯವಾಗುವ ಪಿಡಿಎಫ್ ಮಾದರಿಯಲ್ಲಿ ಸಲ್ಲಿಸಬೇಕು. ಒಪ್ಪಂದಗಳ ನೋಂದಣಿ ಪುಸ್ತಕವನ್ನು ಪರಿಶೀಲಿಸಲು, ಅದರ ನಿಗದಿತ ಭಾಗಗಳನ್ನು ವೀಕ್ಷಿಸಲು ಹಾಗೂ ಪ್ರತಿಗಳು ಅಥವಾ ಆಯ್ದ ಭಾಗಗಳನ್ನು ಪಡೆಯಲು ಜಾಲತಾಣದ ಮೂಲಕವೇ ಅರ್ಜಿ ಸಲ್ಲಿಸಬಹುದು. ಇದರಿಂದ ಸಾರ್ವಜನಿಕರಿಗೆ ಭೌತಿಕ ವ್ಯವಸ್ಥೆಯ ಜತೆಗೆ ಆನ್‌ಲೈನ್ ಮೂಲಕವೂ ದಾಖಲೆಗಳನ್ನು ಪರಿಶೀಲಿಸುವ ಅವಕಾಶ ದೊರೆಯಲಿದೆ.

ಪರಸ್ಪರ ಸಂಪರ್ಕ ಒಪ್ಪಂದಗಳಿಗೆ ಸಂಬಂಧಿಸಿದ ವಿವಿಧ ವರ್ಗಗಳ ಸಮಗ್ರ ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ ಮತ್ತು ಕಾಲಮಿತಿಯೊಳಗೆ ಸಲ್ಲಿಸುವಂತೆ ಸೇವಾ ಸಂಸ್ಥೆಗಳಿಗೆ ಟ್ರಾಯ್ ಸೂಚಿಸಬಹುದು. ಇದರಿಂದ ಒಪ್ಪಂದಗಳಿಗೆ ಸಂಬಂಧಿಸಿದ ಮಾಹಿತಿಯಲ್ಲಿ ಏಕರೂಪತೆ ತರಲು ಹಾಗೂ ನಿಯಂತ್ರಣ ಮತ್ತು ಮೇಲ್ವಿಚಾರಣಾ ವ್ಯವಸ್ಥೆಯನ್ನು ಉತ್ತಮಪಡಿಸಲು ಸಹಕಾರಿಯಾಗಲಿದೆ.

ಒಪ್ಪಂದಗಳ ನೋಂದಣಿ ಪುಸ್ತಕವನ್ನು ಪರಿಶೀಲಿಸಲು ಪ್ರತಿ ಗಂಟೆಗೆ ಅಥವಾ ಅದರ ಭಾಗಕ್ಕೆ 1,500 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ. ಪ್ರತಿಗಳು ಅಥವಾ ಆಯ್ದ ಭಾಗಗಳನ್ನು ಪಡೆಯಲು ಪ್ರತಿ ಪುಟಕ್ಕೆ 500 ರೂಪಾಯಿ ಪಾವತಿಸಬೇಕು. ಈ ಶುಲ್ಕ ವ್ಯವಸ್ಥೆಯು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ಮಾಹಿತಿ ಪ್ರವೇಶ ನಿಯಮಗಳು-2005ಕ್ಕೆ ಅನುಗುಣವಾಗಿದೆ. ನಿಯಮ ಉಲ್ಲಂಘನೆಯ ಸ್ವರೂಪ ಮತ್ತು ಗಂಭೀರತೆಯನ್ನು ಆಧರಿಸಿ ವಿವಿಧ ಹಂತದ ಆರ್ಥಿಕ ದಂಡ ವಿಧಿಸುವ ಅವಕಾಶವನ್ನೂ ಕಲ್ಪಿಸಲಾಗಿದೆ.

ದೂರಸಂಪರ್ಕ ಕ್ಷೇತ್ರದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಜಾಲಗಳನ್ನು ತಾಂತ್ರಿಕ ಹಾಗೂ ವಾಣಿಜ್ಯಿಕವಾಗಿ ಸಂಪರ್ಕಿಸುವ ವ್ಯವಸ್ಥೆಯೇ ಪರಸ್ಪರ ಸಂಪರ್ಕ ವ್ಯವಸ್ಥೆಯಾಗಿದೆ. ಇದರಿಂದ ವಿಭಿನ್ನ ಸೇವಾ ಸಂಸ್ಥೆಗಳ ಗ್ರಾಹಕರು ಪರಸ್ಪರ ಸಂವಹನ ನಡೆಸಲು ಸಾಧ್ಯವಾಗುತ್ತದೆ ಎಂದು ಟ್ರಾಯ್ ತಿಳಿಸಿದೆ.

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಕಾಯ್ದೆ-1997ರ ಕಲಂ 11(1)(ಬಿ)ಯ ಉಪಖಂಡಗಳು (7) ಮತ್ತು (8)ರ ಅಡಿಯಲ್ಲಿ ಪರಸ್ಪರ ಸಂಪರ್ಕ ಒಪ್ಪಂದಗಳ ನೋಂದಣಿ ಪುಸ್ತಕ ನಿರ್ವಹಿಸುವ ಹಾಗೂ ನಿಗದಿತ ಶುಲ್ಕ ಮತ್ತು ಷರತ್ತುಗಳೊಂದಿಗೆ ಸಾರ್ವಜನಿಕರ ಪರಿಶೀಲನೆಗೆ ಅವಕಾಶ ಕಲ್ಪಿಸುವ ಅಧಿಕಾರವನ್ನು ಪ್ರಾಧಿಕಾರ ಹೊಂದಿದೆ.

ಈ ವ್ಯವಸ್ಥೆಯ ಪರಿಶೀಲನೆಗಾಗಿ ಟ್ರಾಯ್ 2025ರ ಏಪ್ರಿಲ್ 3ರಂದು ಪೂರ್ವಸಮಾಲೋಚನಾ ಪತ್ರ ಪ್ರಕಟಿಸಿತ್ತು. ಬಳಿಕ 2025ರ ನವೆಂಬರ್ 10ರಂದು ಸಮಾಲೋಚನಾ ಪತ್ರ ಹೊರಡಿಸಿ ವಿವಿಧ ಪಾಲುದಾರರಿಂದ ಅಭಿಪ್ರಾಯಗಳನ್ನು ಆಹ್ವಾನಿಸಿತ್ತು. ಈ ಪ್ರಕ್ರಿಯೆಯಲ್ಲಿ 17 ಪಾಲುದಾರರು ತಮ್ಮ ಅಭಿಪ್ರಾಯಗಳನ್ನು ಹಾಗೂ ಒಂಬತ್ತು ಪಾಲುದಾರರು ಪ್ರತಿಕ್ರಿಯಾತ್ಮಕ ಅಭಿಪ್ರಾಯಗಳನ್ನು ಸಲ್ಲಿಸಿದ್ದರು. 2026ರ ಜನವರಿ 28ರಂದು ಈ ಕುರಿತು ಮುಕ್ತ ಚರ್ಚೆಯನ್ನೂ ನಡೆಸಲಾಗಿತ್ತು. ಸ್ವೀಕರಿಸಿದ ಸಲಹೆಗಳು ಮತ್ತು ಅವುಗಳ ವಿಶ್ಲೇಷಣೆಯ ಆಧಾರದ ಮೇಲೆ ತಿದ್ದುಪಡಿ ನಿಯಮಗಳನ್ನು ಅಂತಿಮಗೊಳಿಸಲಾಗಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande