ಅಗ್ನಿಪಥ ಯೋಜನೆ ರದ್ದುಪಡಿಸಿ, ನಿಯಮಿತ ಸೈನಿಕರ ನೇಮಕಾತಿ ಆರಂಭಿಸಲು ಕಾಂಗ್ರೆಸ್ ಆಗ್ರಹ
ನವದೆಹಲಿ, 06 ನವೆಂಬರ್ (ಹಿ.ಸ.): ಅಗ್ನಿಪಥ ಯೋಜನೆಯನ್ನು ರದ್ದುಗೊಳಿಸಿ ನಿಯಮಿತ ಸೈನಿಕರ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ. ಈ ಬೇಡಿಕೆಯನ್ನು ಮುಂದಿಟ್ಟುಕೊಂಡು ದೇಶಾದ್ಯಂತ ಅಗ್ನಿವೀರ ಸೈನಿಕರ ಸಮಸ್ಯೆಗಳನ್ನು ಪ್ರಸ್ತಾಪಿಸಲು ‘ಜೈ ಜವಾನ್–ಭಾಗ 2’ ಅಭಿಯಾನ ಆರಂಭಿಸುವುದಾ
कांग्रेस के पूर्व सैनिक विभाग के चेयरमैन कर्नल रोहित चौधरी (सेवानिवृत्त) शुक्रवार को नई दिल्ली स्थित कांग्रेस मुख्यालय में पत्रकार वार्ता को संबोधित करते हुए।


ನವದೆಹಲಿ, 06 ನವೆಂಬರ್ (ಹಿ.ಸ.):

ಅಗ್ನಿಪಥ ಯೋಜನೆಯನ್ನು ರದ್ದುಗೊಳಿಸಿ ನಿಯಮಿತ ಸೈನಿಕರ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ. ಈ ಬೇಡಿಕೆಯನ್ನು ಮುಂದಿಟ್ಟುಕೊಂಡು ದೇಶಾದ್ಯಂತ ಅಗ್ನಿವೀರ ಸೈನಿಕರ ಸಮಸ್ಯೆಗಳನ್ನು ಪ್ರಸ್ತಾಪಿಸಲು ‘ಜೈ ಜವಾನ್–ಭಾಗ 2’ ಅಭಿಯಾನ ಆರಂಭಿಸುವುದಾಗಿ ಪಕ್ಷ ಘೋಷಿಸಿದೆ.

ಶುಕ್ರವಾರ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಪಕ್ಷದ ಮಾಜಿ ಸೈನಿಕರ ವಿಭಾಗದ ಅಧ್ಯಕ್ಷ ಕರ್ನಲ್ (ನಿವೃತ್ತ) ರೋಹಿತ್ ಚೌಧರಿ, ಸರ್ಕಾರವು ಸೇನೆಯ ಮೇಲೆ ಅಗ್ನಿಪಥ ಯೋಜನೆಯನ್ನು ಹೇರಿದೆ. ಇದೀಗ ಮೊದಲ ತಂಡದ ನಾಲ್ಕು ವರ್ಷಗಳ ಸೇವಾವಧಿ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಶೇ.75ರಷ್ಟು ಅಗ್ನಿವೀರರಿಗೆ ಎರಡು ವರ್ಷಗಳ ಸೇವಾವಿಸ್ತರಣೆ ನೀಡಲು ನಿರ್ಧರಿಸಲಾಗಿದೆ. ಹಾಗಾದರೆ ಅಗ್ನಿವೀರರನ್ನು ಕಾಯಂ ಸೈನಿಕರನ್ನಾಗಿ ಏಕೆ ನೇಮಕ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಈ ಯೋಜನೆಯಿಂದ ಸೇನೆಯಲ್ಲಿ ಸುಮಾರು 2.25 ಲಕ್ಷ ಸೈನಿಕರ ಕೊರತೆ ಉಂಟಾಗಿದೆ. ಸೇನೆ ಮತ್ತು ವಾಯುಪಡೆಗೆ ಆಯ್ಕೆಯಾಗಿ ನೇಮಕಾತಿಗಾಗಿ ಕಾಯುತ್ತಿದ್ದ ಸುಮಾರು 1.5 ಲಕ್ಷ ಯುವಜನರ ನಿರೀಕ್ಷೆ ಹುಸಿಯಾಗಿದೆ ಎಂದು ಅವರು ಆರೋಪಿಸಿದರು.

ನಿಯಮಿತ ಸೈನಿಕರಿಗೆ ದೊರೆಯುವಂತೆಯೇ ಅಗ್ನಿವೀರರಿಗೂ ರಜೆ, ವಿವಾಹಕ್ಕೆ ಅನುಮತಿ ಹಾಗೂ ಇತರ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು. ಕರ್ತವ್ಯದ ವೇಳೆ ಹುತಾತ್ಮರಾಗುವ ಅಗ್ನಿವೀರರ ಕುಟುಂಬಗಳಿಗೆ ಜೀವನಪರ್ಯಂತ ಪಿಂಚಣಿ ನೀಡಬೇಕು. ವೈದ್ಯಕೀಯ ಕಾರಣಗಳಿಂದ ಸೇವೆಯಿಂದ ಹೊರಗುಳಿದ ಅಗ್ನಿವೀರರನ್ನು ಮತ್ತೆ ಸೇವೆಗೆ ಸೇರಿಸಿಕೊಳ್ಳಬೇಕು. ಕಾಯಂ ಸೇವೆಗೆ ಆಯ್ಕೆಯಾಗುವ ಶೇ.25ರಷ್ಟು ಅಗ್ನಿವೀರರಿಗೆ ನೇಮಕಾತಿ ದಿನಾಂಕದಿಂದಲೇ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.

ಪಶ್ಚಿಮ ಉತ್ತರ ಪ್ರದೇಶದ ಮಾಜಿ ಸೈನಿಕರ ವಿಭಾಗದ ಉಪಾಧ್ಯಕ್ಷ ಕರ್ನಲ್ ಸಿಧಿರ್ ಕುಮಾರ್ ಮಾತನಾಡಿ, ಅಗ್ನಿಪಥ ಯೋಜನೆಯಿಂದ ಸೇನೆಯ ತರಬೇತಿ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿದೆ. ಡಿಸೆಂಬರ್‌ನಲ್ಲಿ ಶೇ.75ರಷ್ಟು ಅಗ್ನಿವೀರರು ಸೇವೆಯಿಂದ ಹೊರಬರುವುದರಿಂದ ಸೈನಿಕರ ಕೊರತೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಿದರು.

ಉತ್ತರಾಖಂಡದ ಮಾಜಿ ಸೈನಿಕರ ವಿಭಾಗದ ಅಧ್ಯಕ್ಷ ಕರ್ನಲ್ ರಾಮ್ ರತನ್ ನೇಗಿ ಮಾತನಾಡಿ, ಅಗ್ನಿಪಥ ಯೋಜನೆಯಿಂದ ಉತ್ತರಾಖಂಡದಲ್ಲಿ ತಲೆಮಾರುಗಳಿಂದ ಮುಂದುವರಿದ ಸೇನೆಗೆ ಸೇರುವ ಸಂಪ್ರದಾಯದ ಮೇಲೆ ಪರಿಣಾಮ ಉಂಟಾಗಿದೆ ಎಂದರು.

ಚಂಡೀಗಢದ ಮಾಜಿ ಸೈನಿಕರ ವಿಭಾಗದ ಅಧ್ಯಕ್ಷ ಲೆಫ್ಟಿನೆಂಟ್ ಕರ್ನಲ್ ನವಜೋತ್ ಸಿಂಗ್ ಥಿಂಡ್ ಮಾತನಾಡಿ, ರಾಹುಲ್ ಗಾಂಧಿ ಅವರ ನಿರಂತರ ವಿರೋಧ ಮತ್ತು ಒತ್ತಡದ ಹಿನ್ನೆಲೆಯಲ್ಲಿ ಸರ್ಕಾರ ಯೋಜನೆಯಲ್ಲಿ ಬದಲಾವಣೆಗಳನ್ನು ಮಾಡಬೇಕಾಯಿತು ಎಂದು ಹೇಳಿದರು.

ಅಗ್ನಿಪಥ ಯೋಜನೆ ರದ್ದುಗೊಳಿಸುವವರೆಗೆ ಕಾಂಗ್ರೆಸ್ ತನ್ನ ಹೋರಾಟವನ್ನು ಮುಂದುವರಿಸಲಿದೆ ಎಂದು ತಿಳಿಸಿದರು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande