
ಬೆಂಗಳೂರು, 06 ನವೆಂಬರ್ (ಹಿ.ಸ.):
ಕೌಟುಂಬಿಕ ಕಲಹ ಮತ್ತು ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕ್ಯಾಬ್ ಚಾಲಕನೊಬ್ಬ ತನ್ನ ಪತ್ನಿ ಸೇರಿದಂತೆ ಆಕೆಯ ಕುಟುಂಬದ ಏಳು ಮಂದಿಯನ್ನು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಕಳೆದ 15ರಿಂದ 20 ದಿನಗಳ ಅವಧಿಯಲ್ಲಿ ಒಬ್ಬೊಬ್ಬರನ್ನಾಗಿ ಏಳು ಮಂದಿಯನ್ನು ಹತ್ಯೆ ಮಾಡಿರುವುದಾಗಿ ಆರೋಪಿ ಪೊಲೀಸರ ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಾಜಿನಗರದ ನಿವಾಸಿ ಇಂದುಶೇಖರ್ನನ್ನು ಪೊಲೀಸರು ಬಂಧಿಸಿದ್ದು, ಆತನ ಅಪ್ರಾಪ್ತ ಪುತ್ರಿಯನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಆರೋಪಿಯ ಮಾಹಿತಿ ಮೇರೆಗೆ ನಂದಿಬೆಟ್ಟದ ಪ್ರದೇಶದಲ್ಲಿ ಶೋಧ ನಡೆಸಿ ಏಳು ವರ್ಷದ ಬಾಲಕ ಪುನೀತ್ನ ಮೃತದೇಹವನ್ನು ಪತ್ತೆಹಚ್ಚಲಾಗಿದೆ. ಉಳಿದ ಆರು ಮೃತದೇಹಗಳಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ನಾಪತ್ತೆ ದೂರು ನೀಡಿದ್ದ ಸಂಬಂಧಿಕರು
ಬೆಂಗಳೂರಿನ ಶ್ರೀರಾಮಪುರದ ಎರಡು ನಿಕಟ ಸಂಬಂಧಿ ಕುಟುಂಬಗಳಿಗೆ ಸೇರಿದ ಏಳು ಮಂದಿ ನಾಪತ್ತೆಯಾಗಿರುವ ಕುರಿತು ನವೆಂಬರ್ 3ರಂದು ತುಂಗಮ್ಮ ಎಂಬುವವರು ಶ್ರೀರಾಮಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು.
ತನಿಖೆಯ ವೇಳೆ ನಾಪತ್ತೆಯಾದವರ ಸಂಬಂಧಿ ಹಾಗೂ ಅಳಿಯ ಇಂದುಶೇಖರ್ ಮೇಲೆ ಅನುಮಾನ ವ್ಯಕ್ತವಾಗಿತ್ತು. ನವೆಂಬರ್ 4ರಂದು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪರಸ್ಪರ ವಿರೋಧಾಭಾಸದ ಹೇಳಿಕೆಗಳನ್ನು ನೀಡಿದ್ದಾನೆ.
ಬಳಿಕ ತೀವ್ರ ವಿಚಾರಣೆ ನಡೆಸಿದಾಗ ಏಳು ಮಂದಿಯನ್ನು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ನಿ, ಅತ್ತೆ, ಭಾವಂದಿರು ಸೇರಿದಂತೆ ಏಳು ಮಂದಿ ಬಲಿ
ಹತ್ಯೆಯಾದವರನ್ನು ಆರೋಪಿಯ ಪತ್ನಿ ಸುನೀತಾ, ಅತ್ತೆ ರೂಪಾವತಿ, ಭಾವಂದಿರಾದ ಶಿವಕುಮಾರ್ ಮತ್ತು ಶಂಕರ್, ಅವರ ಪತ್ನಿಯರಾದ ದಿವ್ಯಾ ಮತ್ತು ನಳಿನಿ ಹಾಗೂ ಏಳು ವರ್ಷದ ಪುನೀತ್ ಎಂದು ಗುರುತಿಸಲಾಗಿದೆ. ಪುನೀತ್, ಶಿವಕುಮಾರ್ ಅವರ ಪುತ್ರನಾಗಿದ್ದಾನೆ.
ಇಂದುಶೇಖರ್ ಸುಮಾರು 20 ವರ್ಷಗಳ ಹಿಂದೆ ಸುನೀತಾಳನ್ನು ವಿವಾಹವಾಗಿದ್ದ. ದಂಪತಿ ರಾಜಾಜಿನಗರದ ಭಾಷ್ಯಂ ವೃತ್ತದ ಸಮೀಪ ವಾಸವಾಗಿದ್ದರು. ಇತ್ತೀಚಿನ ದಿನಗಳಲ್ಲಿ ಇಬ್ಬರ ನಡುವೆ ತೀವ್ರ ಮನಸ್ತಾಪ ಉಂಟಾಗಿತ್ತು. ಹಲವು ಬಾರಿ ರಾಜಿ ಪಂಚಾಯಿತಿ ನಡೆದರೂ ಸಮಸ್ಯೆ ಬಗೆಹರಿದಿರಲಿಲ್ಲ.
ಪತ್ನಿಯೊಂದಿಗಿನ ಕಲಹಕ್ಕೆ ಆಕೆಯ ತಾಯಿ ಮತ್ತು ಸಹೋದರರ ಬೆಂಬಲವೇ ಕಾರಣ ಎಂದು ಆರೋಪಿ ಭಾವಿಸಿದ್ದ ಎನ್ನಲಾಗಿದೆ. ಪತ್ನಿ ತವರು ಮನೆಗೆ ಹೋಗಬಾರದೆಂದು ನಿರ್ಬಂಧಿಸಿದ್ದರೂ ಆಕೆ ತಾಯಿಯ ಮನೆಗೆ ಭೇಟಿ ನೀಡುತ್ತಿದ್ದುದರಿಂದ ಆಕ್ರೋಶಗೊಂಡಿದ್ದ ಎಂದು ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದುಬಂದಿದೆ.
ರುಬ್ಬುಗುಂಡಿನಿಂದ ಹೊಡೆದು ಹತ್ಯೆ
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿ ಮೊದಲು ಪತ್ನಿ ಸುನೀತಾಳನ್ನು ಮನೆಯಲ್ಲಿದ್ದ ಮಸಾಲೆ ರುಬ್ಬುವ ಕಲ್ಲಿನಿಂದ ಹೊಡೆದು ಹತ್ಯೆ ಮಾಡಿದ್ದಾನೆ. ಬಳಿಕ ಮೃತದೇಹವನ್ನು ನಂದಿಬೆಟ್ಟದ ಪ್ರದೇಶಕ್ಕೆ ಸಾಗಿಸಿ ಎಸೆದಿದ್ದಾನೆ ಎನ್ನಲಾಗಿದೆ. ಪತ್ನಿ ಗೆಳತಿಯರೊಂದಿಗೆ ಪ್ರವಾಸಕ್ಕೆ ತೆರಳಿದ್ದಾಳೆ ಎಂದು ನೆರೆಹೊರೆಯವರಿಗೆ ನಂಬಿಸಿದ್ದಾನೆ.
ನಂತರ ಮದ್ಯದ ಔತಣಕೂಟದ ನೆಪದಲ್ಲಿ ಭಾವಂದಿರಾದ ಶಿವಕುಮಾರ್ ಮತ್ತು ಶಂಕರ್ ಅವರನ್ನು ಮನೆಗೆ ಕರೆಸಿಕೊಂಡು ಹತ್ಯೆ ಮಾಡಿದ್ದಾನೆ. ಬಳಿಕ ಅವರ ಪತ್ನಿಯರಾದ ದಿವ್ಯಾ, ನಳಿನಿ, ಅತ್ತೆ ರೂಪಾವತಿ ಹಾಗೂ ಬಾಲಕ ಪುನೀತ್ನನ್ನು ಪ್ರತ್ಯೇಕವಾಗಿ ಕರೆಸಿಕೊಂಡು ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹತ್ಯೆಗಳ ಬಳಿಕ ಮನೆಯಲ್ಲಿದ್ದ ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಿ, ಕೊಲೆಗೆ ಬಳಸಿದ್ದ ರುಬ್ಬುಗುಂಡನ್ನು ರಾಸಾಯನಿಕ ಬಳಸಿ ತೊಳೆದು ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾನೆ ಎನ್ನಲಾಗಿದೆ. ಮೃತರ ಮೊಬೈಲ್ಗಳನ್ನು ಬಳಸಿ ಅವರು ಊರಿಗೆ ಅಥವಾ ಪ್ರವಾಸಕ್ಕೆ ತೆರಳಿದ್ದಾರೆ ಎಂಬಂತೆ ಕುಟುಂಬದವರಿಗೆ ಸಂದೇಶಗಳನ್ನೂ ಕಳುಹಿಸಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಅಪ್ರಾಪ್ತ ಪುತ್ರಿಗೆ ತಂದೆಯಿಂದ ಮಾನಸಿಕ ಪ್ರಭಾವ
ಈ ಪ್ರಕರಣದಲ್ಲಿ ಆರೋಪಿಯ ಅಪ್ರಾಪ್ತ ಪುತ್ರಿಯ ಪಾತ್ರದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತದೇಹಗಳನ್ನು ಪ್ಯಾಕ್ ಮಾಡಿ ಸಾಗಿಸಲು ಪುತ್ರಿ ಸಹಕರಿಸಿದ್ದಾಳೆ ಎಂದು ಇಂದುಶೇಖರ್ ಆರೋಪಿಸಿದ್ದಾನೆ. ಅಲ್ಲದೆ, ಮಗುವನ್ನು ಹತ್ಯೆ ಮಾಡುವ ಯೋಜನೆಯನ್ನೂ ರೂಪಿಸಿದ್ದ ಎಂಬ ಮಾಹಿತಿ ತನಿಖೆಯಲ್ಲಿ ಹೊರಬಂದಿದೆ.
ಅಪ್ರಾಪ್ತ ಪುತ್ರಿಗೆ ಆರೋಪಿ ಮಾನಸಿಕವಾಗಿ ಪ್ರಭಾವ ಬೀರಿದ್ದಾನೆ ಎಂದು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಆರೋಪಿಯನ್ನು ಬಂಧಿಸುವ ಸಂದರ್ಭದಲ್ಲಿ ಮಗುವೊಂದನ್ನು ರಕ್ಷಿಸಲಾಗಿದೆ. ಪುತ್ರಿಯ ಪಾತ್ರದ ಕುರಿತು ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.
ರಾಜಾಜಿನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಮಾಧ್ಯಮಗಳಿಗೆ ಪ್ರಕರಣದ ಪ್ರಾಥಮಿಕ ತನಿಖೆಯ ವಿವರಗಳನ್ನು ನೀಡಿದರು.
ಆರೋಪಿಯ ಸ್ವಯಂಪ್ರೇರಿತ ಹೇಳಿಕೆಯ ಪ್ರಕಾರ, ವೈಯಕ್ತಿಕ ಕಾರಣಗಳಿಂದ ತನ್ನ ಪತ್ನಿ ಹಾಗೂ ಆಕೆಯ ಕುಟುಂಬದ ಆರು ಮಂದಿಯನ್ನು ಸೇರಿ ಏಳು ಜನರನ್ನು ಹತ್ಯೆ ಮಾಡಿರುವುದಾಗಿ ತಿಳಿಸಿದ್ದಾನೆ.
ಈ ಘಟನೆಗಳು 15ರಿಂದ 20 ದಿನಗಳ ಅವಧಿಯಲ್ಲಿ ನಡೆದಿವೆ ಎಂದು ಹೇಳಿಕೊಂಡಿದ್ದಾನೆ. ಆದರೆ ಈ ಅವಧಿ ಮತ್ತು ಘಟನೆಗಳ ನಿಖರ ವಿವರಗಳನ್ನು ಇನ್ನೂ ಪರಿಶೀಲಿಸಬೇಕಿದೆ ಎಂದು ಹೇಳಿದರು.
ಆರೋಪಿ ಸಂಬಂಧಿಕರನ್ನು ಒಬ್ಬೊಬ್ಬರನ್ನಾಗಿ ಮನೆಗೆ ಕರೆಸಿಕೊಂಡು ಹತ್ಯೆ ಮಾಡಿ, ಮೃತದೇಹಗಳನ್ನು ವಿವಿಧ ಸ್ಥಳಗಳಲ್ಲಿ ವಿಲೇವಾರಿ ಮಾಡಿರುವುದಾಗಿ ತಿಳಿಸಿದ್ದಾನೆ. ಈವರೆಗೆ ಒಂದು ಮೃತದೇಹ ಮಾತ್ರ ಪತ್ತೆಯಾಗಿದೆ. ಉಳಿದ ಆರು ಮೃತದೇಹಗಳ ಪತ್ತೆಗಾಗಿ ವಿವಿಧ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಆರೋಪಿಯ ಮಾಹಿತಿ ಮೇರೆಗೆ ನಂದಿಬೆಟ್ಟದ ಪ್ರದೇಶದಲ್ಲಿ ಸುಮಾರು ನಾಲ್ಕು ಗಂಟೆಗಳ ಕಾಲ ಶೋಧ ನಡೆಸಿ ಬಾಲಕ ಪುನೀತ್ನ ಮೃತದೇಹ ಪತ್ತೆಹಚ್ಚಲಾಗಿದೆ. ಉಳಿದ ಮೃತದೇಹಗಳ ಪತ್ತೆಗಾಗಿ ಸ್ಥಳೀಯ ಪೊಲೀಸರು, ವಿಧಿವಿಜ್ಞಾನ ತಜ್ಞರು ಹಾಗೂ ಅಪರಾಧ ಸ್ಥಳ ಪರಿಶೀಲನಾ ತಂಡಗಳು ವಿವಿಧ ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸುತ್ತಿವೆ.
ಕಾರ್, ರುಬ್ಬುಗುಂಡು ವಶಕ್ಕೆ
ಹತ್ಯೆಗೆ ಬಳಸಿದ್ದ ರುಬ್ಬುಗುಂಡು ಹಾಗೂ ಮೃತದೇಹಗಳನ್ನು ಸಾಗಿಸಲು ಬಳಸಿದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸುಮಾರು ಆರು-ಏಳು ವರ್ಷಗಳ ಹಿಂದೆ ಮಡಿವಾಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಸರಗಳ್ಳತನ ಪ್ರಕರಣದಲ್ಲಿಯೂ ಇಂದುಶೇಖರ್ ವಿರುದ್ಧ ಆರೋಪವಿದ್ದ ಹಿನ್ನೆಲೆಯಲ್ಲಿ ಆ ಪ್ರಕರಣದ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ.
ಏಳು ಮಂದಿಯ ಹತ್ಯೆಗೆ ಸಂಬಂಧಿಸಿದಂತೆ ಆರೋಪಿಯ ಹೇಳಿಕೆಗಳನ್ನು ಪರಿಶೀಲಿಸುತ್ತಿರುವ ಪೊಲೀಸರು, ಉಳಿದ ಆರು ಮೃತದೇಹಗಳ ಪತ್ತೆ, ಹತ್ಯೆಗಳ ನಿಖರ ಕಾರಣ ಹಾಗೂ ಘಟನೆಗಳ ಕ್ರಮವನ್ನು ಪತ್ತೆಹಚ್ಚಲು ತನಿಖೆ ಮುಂದುವರಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R