ಜಾನುವಾರುಗಳ ಕಾಲುಬಾಯಿ ರೋಗ ನಿಯಂತ್ರಣ ಸನ್ನದ್ಧತೆ: ಬೆಂಗಳೂರಿನಲ್ಲಿ ‘ವಜ್ರ-ಸ್ಯಾಟ್’ ರಾಷ್ಟ್ರೀಯ ಅಭ್ಯಾಸ ಮುಕ್ತಾಯ
25 ರಾಜ್ಯಗಳು, 3 ಕೇಂದ್ರಾಡಳಿತ ಪ್ರದೇಶಗಳ 83 ಪ್ರತಿನಿಧಿಗಳು ಭಾಗಿ; ರೋಗದ ಆರಂಭಿಕ ಪತ್ತೆ, ತ್ವರಿತ ದೃಢೀಕರಣ ಮತ್ತು ಸಂಘಟಿತ ಪ್ರತಿಕ್ರಿಯೆಗೆ ಆದ್ಯತೆ
India Prepares Preventive Measures Against FMD SAT-1 Spread in 17 West Asian Countries


ಬೆಂಗಳೂರು, 06 ನವೆಂಬರ್ (ಹಿ.ಸ.):

ಜಾನುವಾರುಗಳಿಗೆ ಹರಡುವ ಕಾಲುಬಾಯಿ ರೋಗದ (ಎಫ್ಎಂಡಿ) ಎಸ್ಎಟಿ-1 ತಳಿಯ ಸಂಭವನೀಯ ಹರಡುವಿಕೆಯನ್ನು ಎದುರಿಸಲು ಭಾರತದ ಸನ್ನದ್ಧತೆಯನ್ನು ಬಲಪಡಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ ಆಯೋಜಿಸಿದ್ದ ಎರಡು ದಿನಗಳ ರಾಷ್ಟ್ರೀಯ ಅಭ್ಯಾಸ ‘ವಜ್ರ-ಸ್ಯಾಟ್’ ಗುರುವಾರ ಮುಕ್ತಾಯಗೊಂಡಿತು.

ಭಾರತ ಸರ್ಕಾರದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ ಹಾಗೂ ಬೆಂಗಳೂರಿನ ಐಸಿಎಆರ್-ರಾಷ್ಟ್ರೀಯ ಪಶುವೈದ್ಯಕೀಯ ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ರೋಗ ಮಾಹಿತಿ ಸಂಸ್ಥೆಯ (ಐಸಿಎಆರ್-ನಿವೇಡಿ) ಸಮನ್ವಯದಲ್ಲಿ ನವೆಂಬರ್ 4 ಮತ್ತು 5ರಂದು ಈ ಅಭ್ಯಾಸ ನಡೆಯಿತು.

‘ಬೇಗ ಪತ್ತೆಹಚ್ಚಿ, ವೇಗವಾಗಿ ದೃಢೀಕರಿಸಿ, ಒಟ್ಟಾಗಿ ನಿಯಂತ್ರಿಸಿ’ ಎಂಬ ಘೋಷವಾಕ್ಯದಡಿ ನಡೆದ ಈ ಅಭ್ಯಾಸದಲ್ಲಿ 25 ರಾಜ್ಯಗಳು, ಮೂರು ಕೇಂದ್ರಾಡಳಿತ ಪ್ರದೇಶಗಳು ಸೇರಿದಂತೆ ವಿವಿಧ ರಾಷ್ಟ್ರೀಯ ಸಂಸ್ಥೆಗಳ 83 ಪ್ರತಿನಿಧಿಗಳು ಭಾಗವಹಿಸಿದ್ದರು.

ಕಾಲುಬಾಯಿ ರೋಗದ ಎಸ್ಎಟಿ-1 ತಳಿ ಭಾರತದಲ್ಲಿ ಈವರೆಗೆ ವರದಿಯಾಗಿಲ್ಲ. ಆದರೆ ಆಫ್ರಿಕಾದಿಂದ ಪಶ್ಚಿಮ ಏಷ್ಯಾದ ಕೆಲವು ಭಾಗಗಳವರೆಗೆ ಈ ತಳಿಯ ಭೌಗೋಳಿಕ ಹರಡುವಿಕೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಈ ಅಭ್ಯಾಸ ಆಯೋಜಿಸಲಾಗಿತ್ತು.

ಜಾನುವಾರುಗಳ ಆರೋಗ್ಯ, ರೈತರ ಜೀವನೋಪಾಯ ಮತ್ತು ಪಶುಸಂಗೋಪನಾ ಆರ್ಥಿಕತೆಯನ್ನು ರಕ್ಷಿಸುವುದು ಇದರ ಪ್ರಮುಖ ಉದ್ದೇಶವಾಗಿತ್ತು.

ರಾಜ್ಯಗಳ ಪಶುಸಂಗೋಪನಾ ಇಲಾಖೆಗಳು, ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಸಂಸ್ಥೆಗಳು, ಪಶುವೈದ್ಯಕೀಯ ರೋಗ ಪತ್ತೆ ಪ್ರಯೋಗಾಲಯಗಳು, ಪಶುವೈದ್ಯಕೀಯ ವಿಶ್ವವಿದ್ಯಾಲಯಗಳು, ಲಸಿಕೆ ತಯಾರಿಕಾ ಸಂಸ್ಥೆಗಳು ಹಾಗೂ ರಕ್ಷಣಾ ಮತ್ತು ಗಡಿ ಭದ್ರತಾ ಸಂಸ್ಥೆಗಳ ಪ್ರತಿನಿಧಿಗಳು ಅಭ್ಯಾಸದಲ್ಲಿ ಪಾಲ್ಗೊಂಡಿದ್ದರು.

ರೋಗ ಹರಡುವಿಕೆಯ ಕಾಲ್ಪನಿಕ ಸನ್ನಿವೇಶಗಳನ್ನು ಸೃಷ್ಟಿಸಿ, ಆರಂಭಿಕ ಪತ್ತೆ, ಪ್ರಯೋಗಾಲಯ ಪರೀಕ್ಷೆಗಳ ಮೂಲಕ ರೋಗ ದೃಢೀಕರಣ, ಸಾಂಕ್ರಾಮಿಕ ರೋಗಶಾಸ್ತ್ರೀಯ ತನಿಖೆ,

ಪ್ರಾಣಿಗಳ ಸಾಗಣೆ ನಿಯಂತ್ರಣ, ತುರ್ತು ಲಸಿಕೆ ಸಿದ್ಧತೆ, ಅಪಾಯದ ಕುರಿತು ಮಾಹಿತಿ ವಿನಿಮಯ ಮತ್ತು ವಿವಿಧ ಇಲಾಖೆಗಳ ಸಮನ್ವಯದ ಪ್ರತಿಕ್ರಿಯೆ ಕುರಿತು ಚರ್ಚಿಸಲಾಯಿತು.

ನವೆಂಬರ್ 4ರಂದು ನಡೆದ ಉದ್ಘಾಟನಾ ಅಧಿವೇಶನದಲ್ಲಿ ಪಶುಸಂಗೋಪನಾ ಇಲಾಖೆಯ ಆಯುಕ್ತೆ ಡಾ. ನವೀನಾ ಬಿ.ಎಂ. ಮಾತನಾಡಿ, ಮುಂಚಿತ ಸನ್ನದ್ಧತೆ, ರೋಗದ ಆರಂಭಿಕ ಪತ್ತೆ, ಸಕಾಲಿಕ ಪ್ರತಿಕ್ರಿಯೆ ಹಾಗೂ ಕೇಂದ್ರ ಮತ್ತು ರಾಜ್ಯ ಸಂಸ್ಥೆಗಳ ನಡುವಿನ ಪರಿಣಾಮಕಾರಿ ಸಮನ್ವಯದ ಅಗತ್ಯವನ್ನು ಒತ್ತಿಹೇಳಿದರು.

ಐಸಿಎಆರ್-ನಿವೇಡಿ ನಿರ್ದೇಶಕ ಡಾ. ಬಲದೇವ್ ಆರ್. ಗುಲಾಟಿ ಅವರು ಎಸ್ಎಟಿ-1 ತಳಿಯ ಬದಲಾಗುತ್ತಿರುವ ಸಾಂಕ್ರಾಮಿಕ ಪರಿಸ್ಥಿತಿಯನ್ನು ವಿವರಿಸಿ, ಅಪಾಯ ಆಧಾರಿತ ಕಣ್ಗಾವಲು, ಸಾಂಕ್ರಾಮಿಕ ರೋಗಶಾಸ್ತ್ರೀಯ ಮಾಹಿತಿ ಸಂಗ್ರಹ ಮತ್ತು ಮುನ್ನೆಚ್ಚರಿಕೆ ವ್ಯವಸ್ಥೆಗಳ ಮಹತ್ವವನ್ನು ತಿಳಿಸಿದರು.

ಐಸಿಎಆರ್-ರಾಷ್ಟ್ರೀಯ ಕಾಲುಬಾಯಿ ರೋಗ ಸಂಸ್ಥೆಯ ನಿರ್ದೇಶಕ ಡಾ. ಜೆ.ಕೆ. ಮೊಹಾಪಾತ್ರ ಅವರು ಪ್ರಯೋಗಾಲಯಗಳ ಸನ್ನದ್ಧತೆ, ತ್ವರಿತ ರೋಗನಿರ್ಣಯ ಮತ್ತು ಲಸಿಕೆಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವ ಅಗತ್ಯವನ್ನು ಪ್ರತಿಪಾದಿಸಿದರು. ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯದ ನಿರ್ದೇಶಕ ಬ್ರಿಗೇಡಿಯರ್ ಎಂ.ಎಂ. ರಾಮಚಂದ್ರ ಅವರು ಗಡಿಯಾಚೆಗಿನ ಪ್ರಾಣಿ ರೋಗಗಳ ಹರಡುವಿಕೆ ತಡೆಗೆ ವಿವಿಧ ಸಂಸ್ಥೆಗಳ ಸಮನ್ವಯ ಮತ್ತು ಗಡಿ ಪ್ರದೇಶಗಳಲ್ಲಿ ಜಾಗರೂಕತೆ ಅಗತ್ಯವೆಂದು ಹೇಳಿದರು.

ನವೆಂಬರ್ 5ರಂದು ನಡೆದ ಸಮಾರೋಪ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಪಶುಸಂಗೋಪನಾ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ (ಜಾನುವಾರು ಆರೋಗ್ಯ) ರಾಮಶಂಕರ್ ಸಿನ್ಹಾ ಅವರು, ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ರೋಗ ನಿಯಂತ್ರಣ ಸನ್ನದ್ಧತೆಯನ್ನು ಬಲಪಡಿಸುವ ಅಗತ್ಯವನ್ನು ಒತ್ತಿಹೇಳಿದರು. ಐಸಿಎಆರ್-ಎನ್ಐಎಫ್ಎಂಡಿಯ ತಾಂತ್ರಿಕ ನೆರವಿನೊಂದಿಗೆ ಪ್ರಾದೇಶಿಕ ಕಾಲುಬಾಯಿ ರೋಗ ಪ್ರಯೋಗಾಲಯಗಳು ಹಾಗೂ ಪ್ರಾದೇಶಿಕ ರೋಗ ಪತ್ತೆ ಪ್ರಯೋಗಾಲಯಗಳ ಸಾಮರ್ಥ್ಯ ಹೆಚ್ಚಿಸಬೇಕು ಎಂದು ತಿಳಿಸಿದರು.

ಸಮಾರೋಪ ಚರ್ಚೆಯಲ್ಲಿ ರೋಗದ ಕುರಿತು ಸಕಾಲಿಕ ಮಾಹಿತಿ ನೀಡುವುದು, ಪ್ರಯೋಗಾಲಯಗಳಲ್ಲಿ ತ್ವರಿತ ದೃಢೀಕರಣ, ನಿರಂತರ ಕಣ್ಗಾವಲು, ಪ್ರಾಣಿಗಳ ಸಾಗಣೆ ನಿಯಂತ್ರಣ, ಲಸಿಕೆ ಸಿದ್ಧತೆ ಮತ್ತು ರಾಜ್ಯಗಳ ನಡುವಿನ ಸಮನ್ವಯಕ್ಕೆ ಆದ್ಯತೆ ನೀಡಲಾಯಿತು. ಅಭ್ಯಾಸದ ವೇಳೆ ವ್ಯಕ್ತವಾದ ಅಭಿಪ್ರಾಯಗಳು ಮತ್ತು ಶಿಫಾರಸುಗಳು ಎಸ್ಎಟಿ-1 ತಳಿಯ ಸಂಭವನೀಯ ಹರಡುವಿಕೆಯನ್ನು ಎದುರಿಸಲು ರಾಷ್ಟ್ರೀಯ ಸನ್ನದ್ಧತೆ ಹಾಗೂ ಸಂಘಟಿತ ಪ್ರತಿಕ್ರಿಯೆ ಕಾರ್ಯವಿಧಾನಗಳನ್ನು ಮತ್ತಷ್ಟು ಬಲಪಡಿಸಲಿವೆ.

ಇದೇ ವೇಳೆ, ನವೆಂಬರ್ 5ರಂದು ಕಾಲುಬಾಯಿ ರೋಗಮುಕ್ತ ವಲಯ ಗುರುತಿಸುವಿಕೆ ಕುರಿತು ಪ್ರತ್ಯೇಕ ತಾಂತ್ರಿಕ ಸಭೆಯನ್ನೂ ನಡೆಸಲಾಯಿತು.

ಪಶುಸಂಗೋಪನಾ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಮತ್ತು ಆಯುಕ್ತರ ಸಹ-ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವಿಧ ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ವೀರ್ಯ ಉತ್ಪಾದನಾ ಕೇಂದ್ರಗಳು ಮತ್ತು ವೀರ್ಯ ಬ್ಯಾಂಕುಗಳನ್ನು ಕಾಲುಬಾಯಿ ರೋಗಮುಕ್ತ ವಲಯಗಳೆಂದು ಗುರುತಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ರೋಗ ತಡೆಗಟ್ಟುವಿಕೆಯನ್ನು ಬಲಪಡಿಸುವುದು, ಅಮೂಲ್ಯ ಜಾನುವಾರುಗಳ ಆನುವಂಶಿಕ ಸಂಪನ್ಮೂಲಗಳನ್ನು ಸಂರಕ್ಷಿಸುವುದು ಹಾಗೂ ಸುರಕ್ಷಿತ ಜಾನುವಾರು ವ್ಯಾಪಾರಕ್ಕೆ ಅವಕಾಶ ಕಲ್ಪಿಸುವುದು ಈ ಉಪಕ್ರಮದ ಉದ್ದೇಶವಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande