
ಡೆಹ್ರಾಡೂನ್, 06 ನವೆಂಬರ್ (ಹಿ.ಸ.):
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ 'ಮತ ಉಳಿಸಿ ಯಾತ್ರೆ'ಯನ್ನು 'ನುಸುಳುಕೋರರನ್ನು ಉಳಿಸುವ ಯಾತ್ರೆ' ಎಂದು ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಟೀಕಿಸಿದ್ದಾರೆ.
ಉತ್ತರಾಖಂಡ ರಾಜ್ಯ ಸ್ಥಾಪನೆಯ 26ನೇ ವರ್ಷಾಚರಣೆ ಅಂಗವಾಗಿ ಶುಕ್ರವಾರ ಡೆಹ್ರಾಡೂನ್ನ ಪರೇಡ್ ಮೈದಾನದಲ್ಲಿ ನಡೆದ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ಮೂಲಕ ಅಕ್ರಮವಾಗಿ ದೇಶ ಪ್ರವೇಶಿಸಿರುವವರನ್ನು ಮತದಾರರ ಪಟ್ಟಿಯಿಂದ ಹೊರಗಿಡುವ ಕಾರ್ಯ ನಡೆಯುತ್ತಿದೆ. ಆದರೆ ರಾಹುಲ್ ಗಾಂಧಿ ಯಾತ್ರೆ ನಡೆಸುವ ಮೂಲಕ ಇದನ್ನು ವಿರೋಧಿಸುತ್ತಿದ್ದಾರೆ. ದೇಶದಲ್ಲಿ ಯಾವುದೇ ಕಾರಣಕ್ಕೂ ನುಸುಳುಕೋರರನ್ನು ಸಹಿಸುವುದಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಓಲೈಕೆ ರಾಜಕಾರಣವನ್ನು ಟೀಕಿಸಿದ ಅವರು, ಶುಕ್ರವಾರದ ಪ್ರಾರ್ಥನೆಗಾಗಿ ರಜೆ ಘೋಷಿಸುವ ಪ್ರಸ್ತಾಪ ಹಾಗೂ ರಾಮಮಂದಿರ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದನ್ನೂ ಪ್ರಸ್ತಾಪಿಸಿದರು. 2027ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 65ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದ್ದು, ಉತ್ತರಾಖಂಡದಲ್ಲಿ ಸತತ ಮೂರನೇ ಬಾರಿಗೆ ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಾಜಪೇಯಿ ಉತ್ತರಾಖಂಡ ರಾಜ್ಯ ರಚಿಸಿದರು
ಉತ್ತರಾಖಂಡ ರಾಜ್ಯ ರಚನೆಯನ್ನು ಕಾಂಗ್ರೆಸ್ ತಡೆಯಲು ಪ್ರಯತ್ನಿಸಿತ್ತು ಎಂದು ಆರೋಪಿಸಿದ ಅಮಿತ್ ಶಾ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು 2000ರ ನವೆಂಬರ್ 9ರಂದು ಪ್ರತ್ಯೇಕ ರಾಜ್ಯ ರಚಿಸುವ ಮೂಲಕ ಜನರ ಬಹುದಿನಗಳ ಕನಸನ್ನು ನನಸಾಗಿಸಿದರು ಎಂದರು.
ಅಟಲ್ ಬಿಹಾರಿ ವಾಜಪೇಯಿ ರಾಜ್ಯವನ್ನು ರಚಿಸಿದರೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ರಾಜ್ಯವನ್ನು ಅಭಿವೃದ್ಧಿಪಡಿಸುವ ಕಾರ್ಯ ಮಾಡುತ್ತಿದ್ದಾರೆ. ಉತ್ತರಾಖಂಡ ಕೇವಲ ರಾಜ್ಯವಲ್ಲ, ದೇಶದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪ್ರಜ್ಞೆಯ ಪ್ರಮುಖ ಕೇಂದ್ರವಾಗಿದೆ ಎಂದು ಹೇಳಿದರು.
-------
ಹಿಂದೂಸ್ತಾನ್ ಸಮಾಚಾರ್ / Rakesh.M.B.