
ನವದೆಹಲಿ, 06 ನವೆಂಬರ್ (ಹಿ.ಸ.):
ಅಗ್ನಿಪಥ ಯೋಜನೆಯಲ್ಲಿ ಇತ್ತೀಚೆಗೆ ಘೋಷಿಸಿರುವ ಬದಲಾವಣೆಗಳು ಮೂಲ ಯೋಜನೆಯಲ್ಲಿನ ಲೋಪಗಳನ್ನು ಬಹಿರಂಗಪಡಿಸಿವೆ. ಹೀಗಾಗಿ, ಭಾಗಶಃ ತಿದ್ದುಪಡಿಗಳ ಬದಲಿಗೆ ಯೋಜನೆಯನ್ನು ಸಂಪೂರ್ಣವಾಗಿ ಹಿಂಪಡೆದು, ಸೇನೆಯಲ್ಲಿ ಕಾಯಂ ನೇಮಕಾತಿ ವ್ಯವಸ್ಥೆಯನ್ನು ಪುನಃ ಜಾರಿಗೊಳಿಸಬೇಕು ಎಂದು ಭಾರತೀಯ ಯುವ ಕಾಂಗ್ರೆಸ್ ಆಗ್ರಹಿಸಿದೆ.
ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಉದಯ ಭಾನು ಚಿಬ್ ಶುಕ್ರವಾರ ಈ ಕುರಿತು ಹೇಳಿಕೆ ನೀಡಿದ್ದು, ಅಗ್ನಿವೀರರ ಸೇವಾವಧಿಯನ್ನು ನಾಲ್ಕರಿಂದ ಆರು ವರ್ಷಗಳಿಗೆ ವಿಸ್ತರಿಸುವುದು ಹಾಗೂ ಕಾಯಂ ನೇಮಕಾತಿಗೆ ಅವಕಾಶ ಕಲ್ಪಿಸುವ ಘೋಷಣೆ ಹಲವು ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಹೇಳಿದ್ದಾರೆ.
ದೇಶದ ಯುವಜನರಿಗೆ ಕಾಯಂ ಉದ್ಯೋಗ, ಗೌರವ ಮತ್ತು ಭದ್ರತೆ ಬೇಕೇ ಹೊರತು ಅವರ ಭವಿಷ್ಯದೊಂದಿಗೆ ಪ್ರಯೋಗ ನಡೆಸುವುದಲ್ಲ. ಸೇನಾ ನೇಮಕಾತಿಗೆ ಸಿದ್ಧತೆ ನಡೆಸುತ್ತಿದ್ದ ಯುವಕರು ಹಲವು ವರ್ಷಗಳಿಂದ ಶ್ರಮಿಸಿ ನ್ಯಾಯಕ್ಕಾಗಿ ಹೋರಾಡಿದ್ದಾರೆ. ಆದರೆ, ಸರ್ಕಾರ ತನ್ನ ಹಠಮಾರಿ ನಿಲುವನ್ನು ಮುಂದುವರಿಸಿತ್ತು. ಇದೀಗ ಮೊದಲ ತಂಡದ ಅಗ್ನಿವೀರರ ಸೇವಾವಧಿ ಮುಕ್ತಾಯದ ಹಂತಕ್ಕೆ ಬರುತ್ತಿರುವ ಸಂದರ್ಭದಲ್ಲಿ ಘೋಷಿಸಿರುವ ಬದಲಾವಣೆಗಳು ಅವರ ಭವಿಷ್ಯದ ಅನಿಶ್ಚಿತತೆಯನ್ನು ಮತ್ತಷ್ಟು ಹೆಚ್ಚಿಸಿವೆ ಎಂದು ತಿಳಿಸಿದ್ದಾರೆ.
ದೇಶದ ಸೇವೆಗಾಗಿ ತಮ್ಮ ಜೀವನದ ಅಮೂಲ್ಯ ವರ್ಷಗಳನ್ನು ಮೀಸಲಿಟ್ಟ ಯುವಕರಿಗೆ ಭವಿಷ್ಯದ ಭದ್ರತೆ, ಗೌರವ ಹಾಗೂ ಕಾಯಂ ಸೈನಿಕರಿಗೆ ಸಮಾನವಾದ ಸೇವಾ ಸೌಲಭ್ಯಗಳನ್ನು ಒದಗಿಸಬೇಕು. ಅಗ್ನಿವೀರರ ಧ್ವನಿಯನ್ನು ಯುವ ಕಾಂಗ್ರೆಸ್ ನಿರ್ಲಕ್ಷಿಸಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಭದ್ರತೆ ಮತ್ತು ಸಶಸ್ತ್ರ ಪಡೆಗಳ ಬಲವರ್ಧನೆಗೆ ಕಾಯಂ, ಪಾರದರ್ಶಕ ಹಾಗೂ ಸಮರ್ಥ ನೇಮಕಾತಿ ವ್ಯವಸ್ಥೆ ಅಗತ್ಯವಾಗಿದೆ. ಸೈನಿಕರ ಘನತೆ ಮತ್ತು ಗೌರವವನ್ನು ಕಾಪಾಡುವುದರ ಜೊತೆಗೆ ಯುವಜನರ ವೃತ್ತಿಜೀವನದ ಭದ್ರತೆಯನ್ನೂ ಖಾತರಿಪಡಿಸಬೇಕು. ಸೇನೆಯ ಸಾಂಸ್ಥಿಕ ಅನುಭವ ಹಾಗೂ ಕಾರ್ಯಾಚರಣೆಯ ಸಾಮರ್ಥ್ಯವನ್ನು ಉಳಿಸಿಕೊಳ್ಳುವಂತಹ ನೇಮಕಾತಿ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎಂದು ಯುವ ಕಾಂಗ್ರೆಸ್ ಆಗ್ರಹಿಸಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.