
ಬೆಂಗಳೂರು, 19 ನವೆಂಬರ್ (ಹಿ.ಸ.):
ಭಾರತದ ಪ್ರಥಮ ಮಹಿಳಾ ಪ್ರಧಾನಿ, ಭಾರತ ರತ್ನ ಪುರಸ್ಕೃತೆ ಇಂದಿರಾ ಗಾಂಧಿ ಅವರ 109ನೇ ಜನ್ಮದಿನದ ಅಂಗವಾಗಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಗೌರವ ನಮನ ಸಲ್ಲಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿರುವ ಅವರು, ದಿಟ್ಟ ನಿರ್ಧಾರ, ದೃಢನಿಶ್ಚಯ ಹಾಗೂ ಅಚಲ ರಾಜಕೀಯ ಇಚ್ಛಾಶಕ್ತಿಯಿಂದ ಉಕ್ಕಿನ ಮಹಿಳೆ ಎಂದು ಖ್ಯಾತರಾಗಿದ್ದ ಇಂದಿರಾ ಗಾಂಧಿ ಅವರು ಜನಸಾಮಾನ್ಯರ ಪಾಲಿಗೆ ಪ್ರೀತಿಯ 'ಪ್ರಿಯದರ್ಶಿನಿ'ಯಾಗಿದ್ದರು ಎಂದು ಸ್ಮರಿಸಿದ್ದಾರೆ.
ಬಡವರು, ರೈತರು, ಮಹಿಳೆಯರು ಹಾಗೂ ಶೋಷಿತ ಸಮುದಾಯಗಳ ಏಳಿಗೆಗಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದ ಅವರು, ಬ್ಯಾಂಕುಗಳ ರಾಷ್ಟ್ರೀಕರಣ, ಬಡತನ ನಿರ್ಮೂಲನೆ ಅಭಿಯಾನ ಹಾಗೂ ಹಸಿರು ಕ್ರಾಂತಿಗೆ ಉತ್ತೇಜನ ನೀಡುವಂತಹ ಐತಿಹಾಸಿಕ ನಿರ್ಧಾರಗಳ ಮೂಲಕ ದೇಶದ ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಹೇಳಿದ್ದಾರೆ.
1971ರ ಐತಿಹಾಸಿಕ ಯುದ್ಧದಲ್ಲಿ ಪ್ರದರ್ಶಿಸಿದ ನಾಯಕತ್ವ, ರಾಷ್ಟ್ರದ ಸಾರ್ವಭೌಮತೆ ಮತ್ತು ಅಖಂಡತೆಯ ವಿಚಾರದಲ್ಲಿ ತೋರಿದ ದೃಢ ನಿಲುವು ಹಾಗೂ ಜಾಗತಿಕ ವೇದಿಕೆಯಲ್ಲಿ ಭಾರತದ ಸ್ವಾಭಿಮಾನವನ್ನು ಎತ್ತಿಹಿಡಿದ ಅವರ ರಾಜಕೀಯ ದೂರದೃಷ್ಟಿ ಎಂದೆಂದಿಗೂ ಸ್ಮರಣೀಯ ಎಂದು ಬಣ್ಣಿಸಿದ್ದಾರೆ.
ಇಂದಿರಾ ಗಾಂಧಿ ಅವರು ತಮ್ಮ ರಾಜಕೀಯ ಬದುಕಿಗೆ ಪ್ರೇರಣೆಯಾಗಿದ್ದು, ಅಪಾರ ಗೌರವ ಹೊಂದಿರುವ ಅಚ್ಚುಮೆಚ್ಚಿನ ನಾಯಕಿಯಾಗಿದ್ದಾರೆ. ಅವರ ಜನಪರ ಕಾಳಜಿ, ಧೈರ್ಯ, ತ್ಯಾಗ ಹಾಗೂ ರಾಷ್ಟ್ರದ ಮೇಲಿನ ಅಚಲ ಬದ್ಧತೆ ತಮ್ಮ ಸಾರ್ವಜನಿಕ ಜೀವನಕ್ಕೆ ಸದಾ ಸ್ಫೂರ್ತಿಯಾಗಿವೆ ಎಂದು ಬಿ.ಕೆ. ಹರಿಪ್ರಸಾದ್ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.