


ಕುರುಗೋಡು, 18 ನವೆಂಬರ್ (ಹಿ.ಸ.)
ಭಾರತ ಸರ್ಕಾರ, ಕರ್ನಾಟಕ ಸರ್ಕಾರ, ರಾಷ್ಟಿಯ ಆರೋಗ್ಯ ಅಭಿಯಾನ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕುರುಗೋಡು ತಾಲೂಕಿನ ಹೊಸ ಗೆಣಿಕೆಹಾಳ್ ಗ್ರಾಮದ ಕೆಂಚಮ್ಮ ದೇವಸ್ಥಾನದ ಬಯಲು ಆವರಣದಲ್ಲಿ ‘ನವಜಾತ ಶಿಶು ಆರೈಕೆ ಆರೋಗ್ಯ ಜಾಗೃತಿ ಕಾರ್ಯಕ್ರಮ'ವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ, ಜಿಲ್ಲಾ ಆರ್.ಸಿ.ಹೆಚ್.ಓ. ಅಧಿಕಾರಿಗಳ ಕಾರ್ಯಾಲಯ, ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಕುರುಗೋಡು, ಪ್ರಾಥಮಿಕ ಆರೋಗ್ಯ ಕೇಂದ್ರ ಓರ್ವಾಯಿ, ಸಮುದಾಯ ಆರೋಗ್ಯ ಕೇಂದ್ರ ಕುರುಗೋಡು ಹಾಗೂ ಮಹಾತ್ಮ ಗಾಂಧಿ ಗ್ರಾಮ ಪಂಚಾಯತ್ ಗೆಣಿಕೆಹಾಳ್ ಮತ್ತು ಹೊಸ ಗೆಣಿಕೆಹಾಳ್ ನ ಆಯುಷ್ಮಾನ್ ಆರೋಗ್ಯ ಮಂದಿರದ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿಗಳಾದ ರೇಣುಕಾ ಅವರು ಮಾತನಾಡಿ, ಹುಟ್ಟಿದ 1 ಗಂಟೆಯೊಳಗೆ ಎದೆ ಹಾಲುಣಿಸುವುದನ್ನು ಆರಂಭಿಸಬೇಕು ಮತ್ತು ಮುಂದಿನ 6 ತಿಂಗಳವರೆಗೆ ಕೇವಲ ಎದೆ ಹಾಲು ಮಾತ್ರ ನೀಡಬೇಕು. ಮಗುವನ್ನು ತಕ್ಷಣ ಒರೆಸಿ, ಬೆಚ್ಚಗಿನ ಬಟ್ಟೆಯಲ್ಲಿ ಸುತ್ತಿ, ತಾಯಿಯ ಎದೆಯ ಮೇಲೆ ಮಲಗಿಸಿಕೊಳ್ಳಬೇಕು. ಹೊಕ್ಕುಳ ಬಳ್ಳಿಯನ್ನು ಸ್ವಚ್ಛವಾಗಿ ಹಾಗೂ ಒಣಗಿದಂತೆ ಇಡಬೇಕು, ಅದಕ್ಕೆ ಯಾವುದೇ ಪದಾರ್ಥಗಳನ್ನು ಹಚ್ಚಬಾರದು. ಹೊಕ್ಕುಳ ಬಳ್ಳಿ ಬಿದ್ದ ನಂತರವೇ ಮಗುವಿಗೆ ಸ್ನಾನ ಮಾಡಿಸಬೇಕು, ಅಲ್ಲಿಯವರೆಗೆ ಒದ್ದೆ ಬಟ್ಟೆಯಿಂದ ಮಗುವನ್ನು ಒರೆಸಬೇಕು ಎಂದು ತಿಳಿಸಿದರು.
ಹುಟ್ಟಿದ ತಕ್ಷಣ ಮಗುವಿಗೆ ಕಡ್ಡಾಯವಾಗಿ ಬಿಸಿಜಿ, ಒಪಿವಿ-0 ಮತ್ತು ಹೆಪಟೈಟಿಸ್-ಬಿ ಲಸಿಕೆಗಳನ್ನು ಕೊಡಿಸಬೇಕು. ಮಗುವಿಗೆ ಜ್ವರ ಬಂದರೂ, ಹಾಲು ಕುಡಿಯದಿದ್ದರೂ, ಉಸಿರಾಟದ ತೊಂದರೆ ಇದ್ದರೂ, ಕಾಮಾಲೆ ಹೆಚ್ಚಾದರೂ ಅಥವಾ ಹೊಕ್ಕುಳಿನಲ್ಲಿ ಕೀವು ಕಂಡರೆ ತಕ್ಷಣ ಆಸ್ಪತ್ರೆಗೆ ಕರೆದೊಯ್ಯಬೇಕು. ಬಾಣಂತಿಗೆ ಪೌಷ್ಟಿಕ ಆಹಾರ, ಸಾಕಷ್ಟು ನೀರು ಮತ್ತು ವಿಶ್ರಾಂತಿ ಅತ್ಯಗತ್ಯ ಎಂದರು.
ಗರ್ಭಿಣಿ ತಾಯಂದಿರಿಗೆ ಗರ್ಭಾವಸ್ಥೆಯಲ್ಲಿ ಹಾಗೂ ಹೆರಿಗೆಯ ನಂತರ ‘ತಾಯಿ ಕಾರ್ಡ್'ನಲ್ಲಿರುವ ಎಲ್ಲಾ ಮಾಹಿತಿಯನ್ನು ಕಡ್ಡಾಯವಾಗಿ ಓದಿ ಅರ್ಥೈಸಿಕೊಂಡು ಪಾಲಿಸುವಂತೆ ತಿಳಿಸಿದರು.
ಸಾಮಾನ್ಯ ಅಥವಾ ಸಿಜೇರಿಯನ್ ಹೆರಿಗೆಯಾದ ಬಳಿಕ 3 ರಿಂದ 4 ವರ್ಷಗಳವರೆಗೆ ತಾತ್ಕಾಲಿಕ ಕುಟುಂಬ ಯೋಜನೆಗಳನ್ನು ಅಳವಡಿಸಿಕೊಂಡ ನಂತರವೇ ಎರಡನೇ ಮಗುವಿನ ಬಗ್ಗೆ ಯೋಚಿಸಬೇಕು ಎಂದು ಮಹಿಳೆಯರಿಗೆ ಮನವರಿಕೆ ಮಾಡಿಕೊಡಲಾಯಿತು.
ಪ್ರಾಥಮಿಕ ಸುರಕ್ಷಣಾಧಿಕಾರಿ ರೇಣುಕಾ, ಹೊಸ ಗೆಣಿಕೆಹಾಳ್ ಗ್ರಾಮದ ಹಿರಿಯರಾದ ಲಲಿತಮ್ಮ, ಸ್ನೇಹಾ ಕ್ಲಿನಿಕ್ ಆಪ್ತ ಸಮಾಲೋಚಕ ಮಹಬೂಬ್ ಭಾಷಾ ಹಾಗೂ ಆಶಾ ಕಾರ್ಯಕರ್ತೆ ಮಮತಾ ಸೇರಿದಂತೆ ಗ್ರಾಮದ ಗರ್ಭಿಣಿಯರು, ನವಜಾತ ಶಿಶುವಿನ ತಾಯಂದಿರು, ಮಹಿಳೆಯರು ಮತ್ತು ಹಿರಿಯರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್