
ನವದೆಹಲಿ, 15 ನವೆಂಬರ್ (ಹಿ.ಸ.):
ಗುಜರಾತ್ ಮುಖ್ಯಮಂತ್ರಿಯಾಗಿ ಹಾಗೂ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಆಡಳಿತದ ನೇತೃತ್ವ ವಹಿಸಿಕೊಂಡು 25 ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ನೀತಿ ಆಯೋಗವು ಐದು ರಾಷ್ಟ್ರೀಯ ಕಾರ್ಯಾಗಾರಗಳ ಸರಣಿಯನ್ನು ಆಯೋಜಿಸಲಿದೆ.
ನವೆಂಬರ್ 2026ರಿಂದ ಸೆಪ್ಟೆಂಬರ್ 2027ರವರೆಗೆ ನಡೆಯಲಿರುವ ಈ ಕಾರ್ಯಾಗಾರಗಳಲ್ಲಿ ನಾಯಕತ್ವ, ಉತ್ತಮ ಆಡಳಿತ, ಸಮಗ್ರ ಅಭಿವೃದ್ಧಿ, ನಾಗರಿಕತೆಯ ಗುರುತು ಹಾಗೂ ಜಾಗತಿಕ ಮಟ್ಟದಲ್ಲಿ ಭಾರತದ ಪಾತ್ರ ಸೇರಿದಂತೆ ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಯಲಿದೆ. ಮೊದಲ ಕಾರ್ಯಾಗಾರ ನವೆಂಬರ್ 17ರಂದು ನವದೆಹಲಿಯ ಭಾರತ ಮಂಟಪದಲ್ಲಿ ನಡೆಯಲಿದೆ.
ಗುಜರಾತ್ ಮುಖ್ಯಮಂತ್ರಿಯಾಗಿ ಹಾಗೂ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಅವರ 25 ವರ್ಷಗಳ ಆಡಳಿತಾವಧಿಯಲ್ಲಿ ಕೈಗೊಂಡ ಪ್ರಮುಖ ನಿರ್ಧಾರಗಳು ಮತ್ತು ಅವುಗಳ ಪರಿಣಾಮಗಳನ್ನು ಅಧ್ಯಯನ ಮಾಡುವುದು ಈ ಸರಣಿಯ ಉದ್ದೇಶವಾಗಿದೆ. ಈ ಆಡಳಿತ ಪಯಣದ ಭಾಗವಾಗಿದ್ದ ಅಧಿಕಾರಿಗಳು, ಸಂಸ್ಥೆಗಳು ಹಾಗೂ ನಾಗರಿಕರ ನೇರ ಅನುಭವಗಳನ್ನು ದಾಖಲಿಸಲಾಗುತ್ತದೆ. ಬಳಿಕ ಅವುಗಳನ್ನು ಅಧ್ಯಯನ ಸಾಮಗ್ರಿ, ಸಂಶೋಧನಾ ಪ್ರಬಂಧಗಳು ಮತ್ತು ಮಾದರಿ ಅಧ್ಯಯನಗಳ ರೂಪದಲ್ಲಿ ಸಿದ್ಧಪಡಿಸಲಾಗುವುದು. ಇದರಿಂದ ನಾಗರಿಕ ಸೇವಾ ಅಧಿಕಾರಿಗಳು, ತರಬೇತಿ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಹಾಗೂ ವಿದ್ಯಾರ್ಥಿಗಳಿಗೆ ಅನುಭವಗಳನ್ನು ಅಧ್ಯಯನ ಮಾಡಲು ಅವಕಾಶ ದೊರೆಯಲಿದೆ.
ಐದು ಪ್ರಮುಖ ವಿಷಯಗಳ ಕುರಿತು ಚರ್ಚೆ
ಕಾರ್ಯಾಗಾರಗಳ ಸರಣಿಯಲ್ಲಿ ಐದು ಪ್ರಮುಖ ವಿಷಯಗಳನ್ನು ಆಯ್ಕೆ ಮಾಡಲಾಗಿದೆ. ನವೆಂಬರ್ 2026ರಲ್ಲಿ 'ಗುರಿಯೇ ಉಸಿರಾಗಿರುವ ನಾಯಕತ್ವ', ಜನವರಿ 2027ರಲ್ಲಿ 'ಫಲಿತಾಂಶ ನೀಡುವ ಉತ್ತಮ ಆಡಳಿತ', ಏಪ್ರಿಲ್ 2027ರಲ್ಲಿ 'ಸಮಗ್ರ ಅಭಿವೃದ್ಧಿ', ಜುಲೈ 2027ರಲ್ಲಿ 'ನಾಗರಿಕತೆಯ ಗುರುತು' ಹಾಗೂ ಸೆಪ್ಟೆಂಬರ್ 2027ರಲ್ಲಿ 'ಜಾಗತಿಕ ಶಕ್ತಿಯಾಗಿ ಭಾರತ' ಎಂಬ ವಿಷಯಗಳ ಕುರಿತು ಕಾರ್ಯಾಗಾರಗಳು ನಡೆಯಲಿವೆ.
ಮೊದಲ ಕಾರ್ಯಾಗಾರದಲ್ಲಿ ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುರಾಗ್ ಜೈನ್ ಭಾಗವಹಿಸುವವರನ್ನು ಸ್ವಾಗತಿಸಲಿದ್ದಾರೆ. ಆಯೋಗದ ಉಪಾಧ್ಯಕ್ಷ ಅಶೋಕ್ ಕುಮಾರ್ ಲಾಹಿರಿ ಆರಂಭಿಕ ಭಾಷಣ ಮಾಡಲಿದ್ದಾರೆ. ಪ್ರಧಾನಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಡಾ. ಪಿ.ಕೆ. ಮಿಶ್ರಾ ಉದ್ಘಾಟನಾ ಭಾಷಣ ಮಾಡಲಿದ್ದು, ಕೋಟಕ್ ಮಹೀಂದ್ರಾ ಬ್ಯಾಂಕ್ ಸಂಸ್ಥಾಪಕ ಉದಯ್ ಕೋಟಕ್ ಮುಖ್ಯ ಭಾಷಣ ಮಾಡಲಿದ್ದಾರೆ. ನೀತಿ ಆಯೋಗದ ಸದಸ್ಯ ಡಾ. ಆರ್. ಬಾಲಸುಬ್ರಮಣ್ಯಂ ಕಾರ್ಯಾಗಾರದ ರೂಪುರೇಷೆಗಳನ್ನು ಮಂಡಿಸಲಿದ್ದಾರೆ.
ನಾಲ್ಕು ಪ್ರಮುಖ ಅನುಭವಗಳ ಹಂಚಿಕೆ
ಮೊದಲ ಕಾರ್ಯಾಗಾರದಲ್ಲಿ ನಾಲ್ಕು ಪ್ರಮುಖ ಅನುಭವಗಳ ಕುರಿತು ವಿಶೇಷ ಅಧಿವೇಶನಗಳನ್ನು ಆಯೋಜಿಸಲಾಗಿದೆ. 2001ರ ಭೂಕಂಪದ ಬಳಿಕ ಕಚ್ ಪ್ರದೇಶದ ಪುನರ್ ನಿರ್ಮಾಣ ಕಾರ್ಯಗಳ ಕುರಿತು ಗುಜರಾತ್ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್ ಟೋಪ್ನೊ ಅನುಭವ ಹಂಚಿಕೊಳ್ಳಲಿದ್ದಾರೆ.
ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಕೈಗೊಂಡ ಕ್ರಮಗಳ ಕುರಿತು ಕೇಂದ್ರದ ಮಾಜಿ ಆರೋಗ್ಯ ಕಾರ್ಯದರ್ಶಿ ಹಾಗೂ ಕೇಂದ್ರ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷೆ ಪ್ರೀತಿ ಸೂದನ್ ಮಾತನಾಡಲಿದ್ದಾರೆ. 'ಲಖಪತಿ ದೀದಿ' ಯೋಜನೆಯ ಕುರಿತು ಗ್ರಾಮೀಣಾಭಿವೃದ್ಧಿ ಸಚಿವಾಲಯದ ಮಾಜಿ ಕಾರ್ಯದರ್ಶಿ ಶೈಲೇಶ್ ಕುಮಾರ್ ಸಿಂಗ್ ಹಾಗೂ ಬಾಹ್ಯಾಕಾಶ ಕ್ಷೇತ್ರವನ್ನು ಖಾಸಗಿ ಸಹಭಾಗಿತ್ವಕ್ಕೆ ಮುಕ್ತಗೊಳಿಸಿದ ಕ್ರಮಗಳ ಕುರಿತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಾಜಿ ಅಧ್ಯಕ್ಷ ಡಾ. ಎಸ್. ಸೋಮನಾಥ್ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.
'ವಿಕಸಿತ ಭಾರತಕ್ಕಾಗಿ ನಾಯಕತ್ವ' ವಿಷಯದ ಕುರಿತು ಸಂವಾದವೂ ನಡೆಯಲಿದೆ. ನೀತಿ ಆಯೋಗದ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ವಿ.ಆರ್. ಸುಬ್ರಹ್ಮಣ್ಯಂ ಸಂವಾದದ ನಿರ್ವಹಣೆ ಮಾಡಲಿದ್ದಾರೆ. ಉತ್ತರ ಪ್ರದೇಶದ ನಗರಾಭಿವೃದ್ಧಿ ಮತ್ತು ಇಂಧನ ಸಚಿವ ಅರವಿಂದ್ ಕುಮಾರ್ ಶರ್ಮಾ, ಅಹಮದಾಬಾದ್ನ ಭಾರತೀಯ ನಿರ್ವಹಣಾ ಸಂಸ್ಥೆಯ ಪ್ರಾಧ್ಯಾಪಕ ವಿಶಾಲ್ ಗುಪ್ತಾ, ನೀತಿ ಆಯೋಗದ ವಿಶೇಷ ಸಹವರ್ತಿ ದೇಬಜಾನಿ ಘೋಷ್ ಹಾಗೂ ಹರ್ದೋಯಿ ಜಿಲ್ಲೆಯ ಜಂಟಿ ಮ್ಯಾಜಿಸ್ಟ್ರೇಟ್ ನಾರಾಯಣಿ ಭಾಟಿಯಾ ಭಾಗವಹಿಸಲಿದ್ದಾರೆ.
ಕೇಂದ್ರ ಸಂಪುಟ ಕಾರ್ಯದರ್ಶಿ ಡಾ. ಟಿ.ವಿ. ಸೋಮನಾಥನ್ ಕಾರ್ಯಾಗಾರದ ಸಮಾರೋಪ ಭಾಷಣ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಐಜಿಒಟಿ ಕರ್ಮಯೋಗಿ ವೇದಿಕೆಯಲ್ಲಿ 'ಕರ್ಮಯೋಗಿ ಸಂಕಲ್ಪ'ಕ್ಕೆ ಚಾಲನೆ ನೀಡಲಿದ್ದಾರೆ. ಇದರಡಿ ದೇಶಾದ್ಯಂತ ಸರ್ಕಾರಿ ಅಧಿಕಾರಿಗಳು ತಮ್ಮ ನಾಯಕತ್ವದ ಕಾರ್ಯವೈಖರಿಯಲ್ಲಿ ನಿರ್ದಿಷ್ಟ ಬದಲಾವಣೆಗಳನ್ನು ತರುವ ಸಂಕಲ್ಪ ಕೈಗೊಳ್ಳಲಿದ್ದಾರೆ.
900 ಮಂದಿ ಭಾಗವಹಿಸುವ ನಿರೀಕ್ಷೆ
ಮೊದಲ ಕಾರ್ಯಾಗಾರದಲ್ಲಿ ಸುಮಾರು 900 ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಇವರಲ್ಲಿ 250 ಮಂದಿ ನೇರವಾಗಿ ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ 150 ಕಾರ್ಯದರ್ಶಿಗಳು ಹಾಗೂ ಹಿರಿಯ ಅಧಿಕಾರಿಗಳು, ಮಹತ್ವಾಕಾಂಕ್ಷಿ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಇದರಲ್ಲಿ ಸೇರಿದ್ದಾರೆ.
ಇದಲ್ಲದೆ ಪ್ರಮುಖ ಶಿಕ್ಷಣ ಸಂಸ್ಥೆಗಳ 25 ವಿದ್ಯಾರ್ಥಿಗಳು ಹಾಗೂ ಪ್ರಮುಖ ಸರ್ಕಾರಿ ಯೋಜನೆಗಳ 50 ಸಮುದಾಯ ಪ್ರತಿನಿಧಿಗಳು ಮತ್ತು ಫಲಾನುಭವಿಗಳು ಭಾಗವಹಿಸಲಿದ್ದಾರೆ. ಕಾರ್ಯಾಗಾರದ ಕಲಾಪಗಳನ್ನು ಐಜಿಒಟಿ ಕರ್ಮಯೋಗಿ ವೇದಿಕೆಯಲ್ಲಿ ಪ್ರಸಾರ ಮಾಡಲಾಗುವುದು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.