
ನವದೆಹಲಿ, 15 ನವೆಂಬರ್ (ಹಿ.ಸ.):
ದೇಶವು ಈ ವರ್ಷ ಜನಜಾತೀಯ ಗೌರವ ದಿನವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಬಡತನದಿಂದ ಮುಕ್ತಿ ಹಾಗೂ ನಕ್ಸಲಿಸಂ ಮತ್ತು ಮಾವೋವಾದಿ ಭಯೋತ್ಪಾದನೆಯ ಅಂತ್ಯ ಎರಡು ಮಹತ್ವದ ಸಾಧನೆಗಳಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಭಗವಾನ್ ಬಿರ್ಸಾ ಮುಂಡಾ ಅವರ 151ನೇ ಜಯಂತಿ ಅಂಗವಾಗಿ ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ಭಾನುವಾರ ಆಯೋಜಿಸಿದ್ದ ಜನಜಾತೀಯ ಗೌರವ ದಿನಾಚರಣೆ ಕಾರ್ಯಕ್ರಮವನ್ನು ವಿಡಿಯೋ ಸಂವಾದದ ಮೂಲಕ ಉದ್ದೇಶಿಸಿ ಅವರು ಮಾತನಾಡಿದರು.
ದೇಶದ ಎರಡು ಪ್ರಮುಖ ಸಾಧನೆಗಳು ಬುಡಕಟ್ಟು ಸಮುದಾಯದೊಂದಿಗೆ ನಿಕಟ ಸಂಬಂಧ ಹೊಂದಿವೆ. ನಕ್ಸಲರ ಹಿಂಸಾಚಾರದಿಂದ ಗಡ್ಚಿರೋಲಿ ಸೇರಿದಂತೆ ದೇಶದ ವಿವಿಧ ಬುಡಕಟ್ಟು ಪ್ರದೇಶಗಳಲ್ಲಿ ಅತಿ ಹೆಚ್ಚು ನಷ್ಟವಾಗಿರುವುದು ಆದಿವಾಸಿ ಸಮುದಾಯಕ್ಕೆ. 2014ರಲ್ಲಿ ದೇಶದ ಸುಮಾರು 125 ಜಿಲ್ಲೆಗಳು ಮಾವೋವಾದ ಮತ್ತು ನಕ್ಸಲಿಸಂನಿಂದ ಬಾಧಿತವಾಗಿದ್ದವು. ಈ ಪ್ರದೇಶಗಳಲ್ಲಿ ಪ್ರತಿವರ್ಷ ನೂರಾರು ಹಿಂಸಾಚಾರದ ಘಟನೆಗಳು ನಡೆಯುತ್ತಿದ್ದವು. ಸಾವಿರಾರು ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದರು. ಅವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬುಡಕಟ್ಟು ಸಮುದಾಯದವರಿದ್ದರು ಎಂದು ಹೇಳಿದರು.
ಮಾವೋವಾದ ಮತ್ತು ನಕ್ಸಲಿಸಂ ಪೀಡಿತ ಪ್ರದೇಶಗಳಲ್ಲಿ ಬುಡಕಟ್ಟು ಸಮುದಾಯದ ಜನರನ್ನು ದೀರ್ಘಕಾಲ ನಿರ್ಲಕ್ಷಿಸಲಾಗಿತ್ತು. ಅವರ ಹಕ್ಕುಗಳನ್ನು ಕಸಿದುಕೊಳ್ಳಲಾಗಿತ್ತು. ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲೂ ಅವಕಾಶವಿರಲಿಲ್ಲ. ಜನರು ಮತದಾನ ಮಾಡದಂತೆ ತಡೆಯಲಾಗುತ್ತಿತ್ತು. ಆದರೆ, ಅಂದಿನ ಸರ್ಕಾರಗಳು ಮೂಕಪ್ರೇಕ್ಷಕರಾಗಿದ್ದವು. ನಕ್ಸಲರು ಬುಡಕಟ್ಟು ಕುಟುಂಬಗಳ ಹೆಣ್ಣುಮಕ್ಕಳನ್ನು ಬಲವಂತವಾಗಿ ಕರೆದೊಯ್ಯುತ್ತಿದ್ದರು. ಸಂತ್ರಸ್ತ ಕುಟುಂಬಗಳು ಅಸಹಾಯಕ ಸ್ಥಿತಿಯಲ್ಲಿ ನೋವು ಅನುಭವಿಸುತ್ತಿದ್ದವು ಎಂದು ಹಿಂದಿನ ಪರಿಸ್ಥಿತಿಯನ್ನು ವಿವರಿಸಿದರು.
ನಕ್ಸಲಿಸಂ ಅಂತ್ಯಗೊಂಡ ಬಳಿಕ ಬುಡಕಟ್ಟು ಸಮುದಾಯದ ತಾಯಂದಿರು ಮತ್ತು ಸಹೋದರಿಯರು ಈಗ ಸುರಕ್ಷಿತ ಭಾವನೆ ಹೊಂದಿದ್ದಾರೆ. ಸರ್ಕಾರಕ್ಕೆ ಆಶೀರ್ವಾದ ಮಾಡುತ್ತಿದ್ದಾರೆ. ನಕ್ಸಲಿಸಂನಿಂದ ಬಾಲ್ಯ ಕಳೆದುಕೊಂಡಿದ್ದ ಮಕ್ಕಳು ಇಂದು ಯುವಕರಾಗಿ ದೇಶದ ಮುಖ್ಯವಾಹಿನಿಗೆ ಸೇರುತ್ತಿದ್ದಾರೆ ಎಂದು ತಿಳಿಸಿದರು.
ಛತ್ತೀಸ್ಗಢದ ಬಸ್ತರ್ ಪ್ರದೇಶದಲ್ಲಿ ಹಿಂದೆ ಜನರು ಹೋಗಲು ಹೆದರುತ್ತಿದ್ದರು. ಆದರೆ, ಈಗ ಅಲ್ಲಿನ ಪರಿಸ್ಥಿತಿ ಬದಲಾಗುತ್ತಿದೆ. ಇತ್ತೀಚೆಗೆ ತಾವು ಬಸ್ತರ್ನಲ್ಲಿ ಭದ್ರತಾ ಪಡೆಗಳ ಯೋಧರೊಂದಿಗೆ ದೀಪಾವಳಿ ಆಚರಿಸಿದ್ದಾಗಿ ಸ್ಮರಿಸಿದ ಪ್ರಧಾನಿ, ಇದು ಆ ಪ್ರದೇಶಗಳಲ್ಲಿ ಭದ್ರತೆ ಮತ್ತು ವಿಶ್ವಾಸದ ಹೊಸ ವಾತಾವರಣ ನಿರ್ಮಾಣವಾಗುತ್ತಿರುವುದರ ಸಂಕೇತವಾಗಿದೆ ಎಂದರು.
ನಕ್ಸಲಿಸಂ ಪೀಡಿತ ಪ್ರದೇಶಗಳಲ್ಲಿ ಭದ್ರತೆಯ ಜತೆಗೆ ಅಭಿವೃದ್ಧಿಗೂ ಸರ್ಕಾರ ಆದ್ಯತೆ ನೀಡಿದೆ. ಅಭಿವೃದ್ಧಿಯಲ್ಲಿ ಹಿಂದುಳಿದ ಪ್ರದೇಶಗಳನ್ನು ಮುನ್ನಡೆಸಲು ದೇಶಾದ್ಯಂತ 100ಕ್ಕೂ ಹೆಚ್ಚು ಮಹತ್ವಾಕಾಂಕ್ಷಿ ಜಿಲ್ಲೆಗಳು ಹಾಗೂ 500ಕ್ಕೂ ಹೆಚ್ಚು ಮಹತ್ವಾಕಾಂಕ್ಷಿ ತಾಲ್ಲೂಕುಗಳಲ್ಲಿ ವಿಶೇಷ ಅಭಿಯಾನಗಳನ್ನು ನಡೆಸಲಾಗುತ್ತಿದೆ. ಇವುಗಳಲ್ಲಿ ಹೆಚ್ಚಿನ ಸಂಖ್ಯೆಯ ಬುಡಕಟ್ಟು ಜನಸಂಖ್ಯೆ ಹೊಂದಿರುವ ಪ್ರದೇಶಗಳೂ ಸೇರಿವೆ. ಅಲ್ಲಿನ ಜನರಿಗೆ ಉತ್ತಮ ಸೌಲಭ್ಯ ಮತ್ತು ಪ್ರಗತಿಯ ಅವಕಾಶಗಳನ್ನು ಒದಗಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಹೇಳಿದರು.
ಕೃಷಿ ಕ್ಷೇತ್ರದಲ್ಲಿ ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗಾಗಿ 'ಪಿಎಂ ಕೃಷಿ ಧನ್-ಧಾನ್ಯ ಯೋಜನೆ'ಯಡಿ 100 ಜಿಲ್ಲೆಗಳ ಮೇಲೆ ವಿಶೇಷ ಗಮನ ಹರಿಸಲಾಗುತ್ತಿದೆ. ಈ ಮೂಲಕ ರೈತರು, ಬಡ ಕುಟುಂಬಗಳು ಮತ್ತು ಬುಡಕಟ್ಟು ಸಮುದಾಯದವರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದರು.
ದೇಶದಲ್ಲಿ ರಾಷ್ಟ್ರೀಯ ದಿನಗಳು ಮತ್ತು ಉತ್ಸವಗಳನ್ನು ವಿದೇಶಿ ದೃಷ್ಟಿಕೋನದಿಂದ ನೋಡುವ ಬದಲು ನಮ್ಮ ಪರಂಪರೆ, ಇತಿಹಾಸ ಮತ್ತು ಮಹಾನ್ ನಾಯಕರ ಹೆಮ್ಮೆಯೊಂದಿಗೆ ಆಚರಿಸಲಾಗುತ್ತಿದೆ. ಇದು ರಾಷ್ಟ್ರೀಯ ಪ್ರಜ್ಞೆಯಲ್ಲಿ ಆಗಿರುವ ಮಹತ್ವದ ಬದಲಾವಣೆಯಾಗಿದೆ. ಬುಡಕಟ್ಟು ಸಮುದಾಯದ ನಾಯಕರ ಹೋರಾಟ ಮತ್ತು ಕೊಡುಗೆಗಳಿಗೆ ಸೂಕ್ತ ಗೌರವ ನೀಡುವುದು ಸ್ವದೇಶಿ ಸ್ವಾಭಿಮಾನದ ಭಾಗವಾಗಿದೆ ಎಂದು ಹೇಳಿದರು.
ಭಗವಾನ್ ಬಿರ್ಸಾ ಮುಂಡಾ ಅವರ ಹೋರಾಟ ಹಾಗೂ ಉಲ್ಗುಲಾನ್ ಚಳವಳಿಯನ್ನು ಸ್ಮರಿಸಿದ ಮೋದಿ, ಯುವ ವಯಸ್ಸಿನಲ್ಲಿಯೇ ಅವರು ಮಾಡಿದ ತ್ಯಾಗ ಮತ್ತು ಹೋರಾಟ ಇಂದಿಗೂ ಕೋಟ್ಯಂತರ ದೇಶವಾಸಿಗಳಿಗೆ ಸ್ಫೂರ್ತಿಯಾಗಿದೆ ಎಂದರು.
2021ರ ನವೆಂಬರ್ 15ರಂದು ಜನಜಾತೀಯ ಗೌರವ ದಿನ ಆಚರಣೆಗೆ ಚಾಲನೆ ನೀಡಲಾಗಿತ್ತು. ಅಂದಿನಿಂದ ಇದು ರಾಷ್ಟ್ರೀಯ ಉತ್ಸವವಾಗಿ ಬೆಳೆದಿದೆ. ಕಳೆದ ವರ್ಷ ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜಯಂತಿ ಸಂದರ್ಭದಲ್ಲಿ ದೇಶಾದ್ಯಂತ ಎರಡು ಲಕ್ಷಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕೋಟ್ಯಂತರ ಜನರು ಭಾಗವಹಿಸಿದ್ದರು ಎಂದು ತಿಳಿಸಿದರು.
246 ಅಭಿವೃದ್ಧಿ ಯೋಜನೆಗಳಿಗೆ ಚಾಲನೆ
ಕಾರ್ಯಕ್ರಮದಲ್ಲಿ ಸುಮಾರು 3,000 ಕೋಟಿ ರೂ. ವೆಚ್ಚದ 246 ಅಭಿವೃದ್ಧಿ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿ, ಶಿಲಾನ್ಯಾಸ ನೆರವೇರಿಸಿದರು. ಬುಡಕಟ್ಟು ಸಮುದಾಯದ ಶಿಕ್ಷಣ, ಆರೋಗ್ಯ ಸೇವೆ, ಜೀವನೋಪಾಯ ಮತ್ತು ಸಮುದಾಯ ಮೂಲಸೌಕರ್ಯಗಳನ್ನು ಬಲಪಡಿಸುವುದು ಈ ಯೋಜನೆಗಳ ಉದ್ದೇಶವಾಗಿದೆ.
ಒಟ್ಟು 173 ಯೋಜನೆಗಳನ್ನು ಉದ್ಘಾಟಿಸಲಾಯಿತು. ಇದರಲ್ಲಿ ಬುಡಕಟ್ಟು ವಿದ್ಯಾರ್ಥಿಗಳಿಗಾಗಿ 38 ಏಕಲವ್ಯ ಮಾದರಿ ವಸತಿ ಶಾಲೆಗಳು ಹಾಗೂ ಪ್ರಧಾನಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನದಡಿ 100 ಬಹುಉದ್ದೇಶ ಕೇಂದ್ರಗಳು ಸೇರಿವೆ. ಈ ಕೇಂದ್ರಗಳು ವಿವಿಧ ಸರ್ಕಾರಿ ಸೇವೆಗಳ ವಿತರಣೆಗೆ ಹಾಗೂ ಸಮುದಾಯ ಚಟುವಟಿಕೆಗಳಿಗೆ ಪ್ರಮುಖ ಕೇಂದ್ರಗಳಾಗಿ ಕಾರ್ಯನಿರ್ವಹಿಸಲಿವೆ.
ಇದರ ಜತೆಗೆ ಪ್ರಧಾನಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ ಮತ್ತು ಧರ್ತಿ ಆಬಾ ಜನಜಾತೀಯ ಗ್ರಾಮ ಉತ್ಕರ್ಷ ಅಭಿಯಾನದಡಿ ವಿವಿಧ ಯೋಜನೆಗಳನ್ನು ಉದ್ಘಾಟಿಸಲಾಯಿತು.
ಅರುಣಾಚಲ ಪ್ರದೇಶದ ಇಟಾನಗರದಲ್ಲಿ ಜನಜಾತೀಯ ಸಂಶೋಧನಾ ಸಂಸ್ಥೆಯ ಕಟ್ಟಡ ಹಾಗೂ ಮಿಜೋರಾಂನ ಐಜ್ವಾಲ್ನಲ್ಲಿ ರೋಪುಯಿಲಿಯಾನಿ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ವಸ್ತುಸಂಗ್ರಹಾಲಯವೂ ಪ್ರಮುಖ ಯೋಜನೆಗಳಾಗಿವೆ. ಬುಡಕಟ್ಟು ಸಮುದಾಯದ ಸಂಸ್ಕೃತಿ ಮತ್ತು ಪರಂಪರೆಯನ್ನು ಸಂರಕ್ಷಿಸುವುದು ಇವುಗಳ ಉದ್ದೇಶವಾಗಿದೆ.
ರೋಪುಯಿಲಿಯಾನಿ ವಸ್ತುಸಂಗ್ರಹಾಲಯವು ಮಿಜೋ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ಧೈರ್ಯ, ಸಾಹಸ ಮತ್ತು ತ್ಯಾಗವನ್ನು ಸ್ಮರಿಸುವುದರ ಜತೆಗೆ ಮಿಜೋ ಸಮುದಾಯದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸಲಿದೆ. 19ನೇ ಶತಮಾನದಲ್ಲಿ ಬ್ರಿಟಿಷರ ವಸಾಹತುಶಾಹಿ ಆಡಳಿತವನ್ನು ಧೈರ್ಯದಿಂದ ವಿರೋಧಿಸಿದ್ದ ಮಿಜೋ ಮಹಿಳಾ ನಾಯಕಿ ರೋಪುಯಿಲಿಯಾನಿ ಅವರ ಹೆಸರನ್ನು ಈ ವಸ್ತುಸಂಗ್ರಹಾಲಯಕ್ಕೆ ಇಡಲಾಗಿದೆ.
19 ಏಕಲವ್ಯ ಶಾಲೆಗಳಿಗೆ ಶಿಲಾನ್ಯಾಸ
ಬುಡಕಟ್ಟು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶದಿಂದ ಪ್ರಧಾನಿ 19 ಹೊಸ ಏಕಲವ್ಯ ಮಾದರಿ ವಸತಿ ಶಾಲೆಗಳ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದರು.
ಬುಡಕಟ್ಟು ಉತ್ಪಾದಕರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ತಲುಪಿಸಲು ಅನುಕೂಲವಾಗುವಂತೆ 12 ಬುಡಕಟ್ಟು ಬಹುಉದ್ದೇಶ ಮಾರುಕಟ್ಟೆ ಕೇಂದ್ರಗಳ ನಿರ್ಮಾಣಕ್ಕೂ ಶಂಕುಸ್ಥಾಪನೆ ನೆರವೇರಿಸಿದರು. ಇದರ ಜತೆಗೆ ಪ್ರಧಾನಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ ಹಾಗೂ ಧರ್ತಿ ಆಬಾ ಜನಜಾತೀಯ ಗ್ರಾಮ ಉತ್ಕರ್ಷ ಅಭಿಯಾನದಡಿ 42 ಇತರ ಯೋಜನೆಗಳಿಗೂ ಶಿಲಾನ್ಯಾಸ ನೆರವೇರಿಸಿದರು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.