
ನವದೆಹಲಿ, 15 ನವೆಂಬರ್ (ಹಿ.ಸ.):
ಭಗವಾನ್ ಬುದ್ಧನ ಪವಿತ್ರ ಅವಶೇಷಗಳು ನವೆಂಬರ್ 14ರಂದು ಅರುಣಾಚಲ ಪ್ರದೇಶದ ನಾಮಸಾಯಿಯಲ್ಲಿರುವ ಗೋಲ್ಡನ್ ಪಗೋಡಾ ತಲುಪಿವೆ. ರಾಜ್ಯದಲ್ಲಿ ಪವಿತ್ರ ಅವಶೇಷಗಳ ಪ್ರದರ್ಶನದ ಮೂರನೇ ಹಾಗೂ ಅಂತಿಮ ಹಂತ ಇದಾಗಿದೆ. ರಾಜ್ಯಪಾಲ ನಿವೃತ್ತ ಲೆಫ್ಟಿನೆಂಟ್ ಜನರಲ್ ಕೈವಲ್ಯ ತ್ರಿವಿಕ್ರಮ್ ಪರ್ನಾಯಕ್ ಅವರು ಅವಶೇಷಗಳನ್ನು ಸ್ವಾಗತಿಸಿದರು. ನವೆಂಬರ್ 20ರವರೆಗೆ ಭಕ್ತರಿಗೆ ಗೋಲ್ಡನ್ ಪಗೋಡಾದಲ್ಲಿ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಕೇಂದ್ರ ಸಂಸ್ಕೃತಿ ಸಚಿವಾಲಯದ ಪ್ರಕಾರ, ಪವಿತ್ರ ಅವಶೇಷಗಳನ್ನು ನಲುಂಗ್ ಹೆಲಿಪ್ಯಾಡ್ನಲ್ಲಿ ವಿಧ್ಯುಕ್ತವಾಗಿ ಸ್ವೀಕರಿಸಿದ ಬಳಿಕ ಗೋಲ್ಡನ್ ಪಗೋಡಾ (ಕಾಂಗ್ಮು ಖಾಮ್)ದಲ್ಲಿ ಪ್ರತಿಷ್ಠಾಪಿಸಲಾಯಿತು. ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಚೌನಾ ಮೆಯಿನ್, ರಾಜ್ಯದ ಸಚಿವರು, ಜನಪ್ರತಿನಿಧಿಗಳು ಹಾಗೂ ಬೌದ್ಧ ಧರ್ಮಗುರುಗಳು ಉಪಸ್ಥಿತರಿದ್ದರು. ಬಳಿಕ ರಾಜ್ಯಪಾಲರು ಪ್ರದರ್ಶನವನ್ನು ಉದ್ಘಾಟಿಸಿದರು.
ಪವಿತ್ರ ಅವಶೇಷಗಳು ಭಗವಾನ್ ಬುದ್ಧನ ಜೀವನ, ಜ್ಞಾನೋದಯ ಮತ್ತು ಅವರ ಶಾಶ್ವತ ಬೋಧನೆಗಳ ಸಂಕೇತವಾಗಿವೆ ಎಂದು ರಾಜ್ಯಪಾಲರು ತಿಳಿಸಿದರು. ಸಂಘರ್ಷ, ಅಸಹಿಷ್ಣುತೆ ಮತ್ತು ಹಿಂಸಾಚಾರ ಹೆಚ್ಚುತ್ತಿರುವ ಇಂದಿನ ಸಂದರ್ಭದಲ್ಲಿ ಶಾಂತಿ, ಕರುಣೆ, ಜ್ಞಾನ ಮತ್ತು ಅಹಿಂಸೆಯ ಬುದ್ಧನ ಸಂದೇಶಕ್ಕೆ ವಿಶೇಷ ಮಹತ್ವವಿದೆ ಎಂದು ಹೇಳಿದರು. ಈ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಮರಸ್ಯ ಮತ್ತು ಪರಸ್ಪರ ಗೌರವದ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಗೋಲ್ಡನ್ ಪಗೋಡಾದ ಧ್ಯಾನ ಕೇಂದ್ರದಲ್ಲಿ ಎರಡು ವಿಶೇಷ ಪ್ರದರ್ಶನಗಳನ್ನೂ ಉದ್ಘಾಟಿಸಲಾಯಿತು.
ಅಂತರರಾಷ್ಟ್ರೀಯ ಬೌದ್ಧ ಒಕ್ಕೂಟ ಆಯೋಜಿಸಿರುವ ‘ಪವಿತ್ರ ಪಿಪ್ರಹ್ವಾ ಅನ್ವೇಷಣೆ: ಬುದ್ಧನ ಪವಿತ್ರ ಅವಶೇಷಗಳು ಮತ್ತು ಅವುಗಳ ಪತ್ತೆಯ ಕಥೆ’ ಎಂಬ ಪ್ರದರ್ಶನದಲ್ಲಿ ಉತ್ತರ ಪ್ರದೇಶದ ಪಿಪ್ರಹ್ವಾದಲ್ಲಿ ನಡೆದ ಪುರಾತತ್ವ ಸಂಶೋಧನೆಗಳು ಹಾಗೂ ಬುದ್ಧನ ಅವಶೇಷಗಳ ಐತಿಹಾಸಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಪರಿಚಯಿಸಲಾಗಿದೆ. ಪಿಪ್ರಹ್ವಾ ರತ್ನ ಸಂಗ್ರಹದ ಇತಿಹಾಸ ಮತ್ತು ಒಂದು ಶತಮಾನಕ್ಕೂ ಹೆಚ್ಚಿನ ಅವಧಿಯ ಬಳಿಕ 2025ರಲ್ಲಿ ಅದು ಭಾರತಕ್ಕೆ ಮರಳಿದ ವಿವರಗಳನ್ನೂ ಪ್ರದರ್ಶಿಸಲಾಗಿದೆ.
ನವದೆಹಲಿ ರಾಷ್ಟ್ರೀಯ ವಸ್ತುಸಂಗ್ರಹಾಲಯ ಸಿದ್ಧಪಡಿಸಿರುವ ‘ಧಮ್ಮದ ಸಂಗಮ: ಶಾಸ್ತ್ರೀಯ ಪರಂಪರೆಗಳು, ಜೀವಂತ ಕಲೆ ಮತ್ತು ಮಾನವಶಾಸ್ತ್ರೀಯ ದೃಷ್ಟಿಕೋನಗಳು’ ಎಂಬ ಮತ್ತೊಂದು ಪ್ರದರ್ಶನದಲ್ಲಿ ಬೌದ್ಧ ಧರ್ಮದ ಕಲೆ, ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸಲಾಗಿದೆ.
ಇದಕ್ಕೂ ಮೊದಲು ಪಶ್ಚಿಮ ಕಾಮೆಂಗ್ ಜಿಲ್ಲೆಯ ಬೊಮ್ಡಿಲಾದ ಥುಬ್ಚೋಗ್ ಗತ್ಸೆಲ್ ಲಿಂಗ್ ಮಠದಲ್ಲಿ ನವೆಂಬರ್ 8ರಿಂದ 13ರವರೆಗೆ ಆರು ದಿನಗಳ ಪ್ರದರ್ಶನ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ 35 ಸಾವಿರಕ್ಕೂ ಅಧಿಕ ಭಕ್ತರು ಪವಿತ್ರ ಅವಶೇಷಗಳ ದರ್ಶನ ಪಡೆದಿದ್ದರು. ಅದಕ್ಕೂ ಮೊದಲು ಅಕ್ಟೋಬರ್ 31ರಿಂದ ನವೆಂಬರ್ 7ರವರೆಗೆ ತವಾಂಗ್ ಮಠದಲ್ಲಿ ನಡೆದ ಪ್ರದರ್ಶನಕ್ಕೆ 31 ಸಾವಿರಕ್ಕೂ ಅಧಿಕ ಭಕ್ತರು ಭೇಟಿ ನೀಡಿದ್ದರು. ಈ ಮೂಲಕ ತವಾಂಗ್ ಮತ್ತು ಬೊಮ್ಡಿಲಾದಲ್ಲಿ ಒಟ್ಟು 66 ಸಾವಿರಕ್ಕೂ ಅಧಿಕ ಜನರು ದರ್ಶನ ಪಡೆದಿದ್ದಾರೆ.
ಅರುಣಾಚಲ ಪ್ರದೇಶದಲ್ಲಿ 13 ವರ್ಷಗಳ ಅಂತರದ ಬಳಿಕ ಬುದ್ಧನ ಪವಿತ್ರ ಅವಶೇಷಗಳ ಪ್ರದರ್ಶನ ಆಯೋಜಿಸಲಾಗಿದೆ. ನಾಮಸಾಯಿಯಲ್ಲಿ ನವೆಂಬರ್ 14ರಿಂದ 20ರವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶವಿದ್ದು, ನವೆಂಬರ್ 21ರಂದು ಪವಿತ್ರ ಅವಶೇಷಗಳನ್ನು ನವದೆಹಲಿಯ ರಾಷ್ಟ್ರೀಯ ವಸ್ತುಸಂಗ್ರಹಾಲಯಕ್ಕೆ ಮರಳಿ ಕೊಂಡೊಯ್ಯಲು ನಿರ್ಧರಿಸಲಾಗಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.