
ನವದೆಹಲಿ, 15 ನವೆಂಬರ್ (ಹಿ.ಸ.):
ಭಾರತ ಮತ್ತು ಸಿಂಗಾಪುರ ನಡುವಿನ ಶಿಕ್ಷಣ ಕ್ಷೇತ್ರದ ಸಹಕಾರವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಸಿಂಗಾಪುರದ ಶಿಕ್ಷಣ ಸಚಿವ ಡೆಸ್ಮಂಡ್ ಲೀ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
ನಾಲ್ಕನೇ ಭಾರತ–ಸಿಂಗಾಪುರ ಹ್ಯಾಕಥಾನ್ ಉದ್ಘಾಟನೆಯ ಬಳಿಕ ಸಿಂಗಾಪುರದ ಎಸ್ಎಂಯು ವಿಶ್ವವಿದ್ಯಾಲಯದಲ್ಲಿ ಈ ಸಭೆ ನಡೆಯಿತು. ಶಾಲಾ ಶಿಕ್ಷಣ, ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಸಂಶೋಧನೆ ಮತ್ತು ನಾವೀನ್ಯತೆ ಕ್ಷೇತ್ರಗಳಲ್ಲಿ ಉಭಯ ದೇಶಗಳ ಸಹಕಾರ ವಿಸ್ತರಿಸುವ ಕುರಿತು ಚರ್ಚಿಸಲಾಯಿತು ಎಂದು ಪ್ರಹ್ಲಾದ ಜೋಶಿ ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ತಿಳಿಸಿದ್ದಾರೆ.
ಶಿಕ್ಷಕರು ಮತ್ತು ವಿದ್ಯಾರ್ಥಿಗಳ ವಿನಿಮಯ ಕಾರ್ಯಕ್ರಮಗಳನ್ನು ಹೆಚ್ಚಿಸುವುದು, ಶೈಕ್ಷಣಿಕ ಅರ್ಹತೆಗಳಿಗೆ ಪರಸ್ಪರ ಮಾನ್ಯತೆ ನೀಡುವುದು, ಜಂಟಿ ಸಾಮರ್ಥ್ಯವರ್ಧನೆ ಕಾರ್ಯಕ್ರಮಗಳನ್ನು ರೂಪಿಸುವುದು ಹಾಗೂ ಉದ್ಯಮ ಮತ್ತು ಶಿಕ್ಷಣ ಸಂಸ್ಥೆಗಳ ನಡುವಿನ ಸಂಪರ್ಕ ಬಲಪಡಿಸುವ ಮೂಲಕ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ಕುರಿತು ಮಾತುಕತೆ ನಡೆಯಿತು.
ಶಿಕ್ಷಣ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆ, ಸುಧಾರಿತ ವಸ್ತು ವಿಜ್ಞಾನ, ಶುದ್ಧ ಇಂಧನ, ಹಣಕಾಸು ತಂತ್ರಜ್ಞಾನ, ಅರೆವಾಹಕಗಳು ಸೇರಿದಂತೆ ಉದಯೋನ್ಮುಖ ತಂತ್ರಜ್ಞಾನಗಳಲ್ಲಿನ ಸಹಕಾರದ ಬಗ್ಗೆಯೂ ಚರ್ಚಿಸಲಾಯಿತು. ಜಂಟಿ ಸಂಶೋಧನೆ ಹಾಗೂ 'ಭಾರತ್ ಇನ್ನೋವೇಟ್ಸ್' ಮೂಲಕ ಆಳವಾದ ತಂತ್ರಜ್ಞಾನ ಆಧಾರಿತ ನವೋದ್ಯಮಗಳು ಮತ್ತು ನವೋದ್ಯಮಿಗಳಿಗೆ ಬೆಂಬಲ ನೀಡುವ ಬಗ್ಗೆಯೂ ಸಮಾಲೋಚನೆ ನಡೆಸಲಾಯಿತು.
ಹೆಚ್ಚಿನ ಸಂಖ್ಯೆಯಲ್ಲಿ ಸಿಂಗಾಪುರದ ವಿಶ್ವವಿದ್ಯಾಲಯಗಳು ಭಾರತದಲ್ಲಿ ತಮ್ಮ ಶಾಖೆಗಳನ್ನು ಸ್ಥಾಪಿಸುವಂತೆ ಪ್ರಹ್ಲಾದ ಜೋಶಿ ಆಹ್ವಾನಿಸಿದರು. ಸಿಂಗಾಪುರದ ರಾಷ್ಟ್ರೀಯ ವಿಶ್ವವಿದ್ಯಾಲಯದ ವಿಶ್ವವಿದ್ಯಾಲಯ ಪಟ್ಟಣ ಮಾದರಿಯನ್ನು ಆಧರಿಸಿ ಭಾರತದಲ್ಲಿ ಉದ್ದೇಶಿತ ವಿಶ್ವವಿದ್ಯಾಲಯ ಪಟ್ಟಣಗಳನ್ನು ಅಭಿವೃದ್ಧಿಪಡಿಸಲು ಸಿಂಗಾಪುರದ ಪರಿಣತಿ ಮತ್ತು ಸಹಕಾರವನ್ನು ಕೋರಿದರು.
2027ರಲ್ಲಿ ಐದನೇ ಭಾರತ–ಸಿಂಗಾಪುರ ಹ್ಯಾಕಥಾನ್ ಅನ್ನು ಭಾರತದಲ್ಲಿ ಆಯೋಜಿಸುವ ಪ್ರಸ್ತಾವನೆಯನ್ನೂ ಮುಂದಿಡಲಾಯಿತು. ಜತೆಗೆ, ಉಭಯ ದೇಶಗಳ ಉನ್ನತ ಶಿಕ್ಷಣ ಸಂಸ್ಥೆಗಳ ಸಮ್ಮೇಳನವನ್ನು ನಿಯಮಿತವಾಗಿ ಆಯೋಜಿಸುವ ಕುರಿತು ಪ್ರಸ್ತಾಪಿಸಲಾಯಿತು.
ಭಾರತದ ಶಿಕ್ಷಣ ಕ್ಷೇತ್ರದ ಸಹಭಾಗಿತ್ವಕ್ಕೆ ಸಿಂಗಾಪುರ ನೀಡುತ್ತಿರುವ ನಿರಂತರ ಬೆಂಬಲವನ್ನು ಶ್ಲಾಘಿಸಿದ ಪ್ರಹ್ಲಾದ ಜೋಶಿ, ಶಿಕ್ಷಣ ಸಹಕಾರವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ವಿಶ್ವಾಸ ವ್ಯಕ್ತಪಡಿಸಿದರು. ಈ ಉದ್ದೇಶಗಳ ಮುಂದಿನ ಚರ್ಚೆಗಾಗಿ ಸಿಂಗಾಪುರದ ಶಿಕ್ಷಣ ಸಚಿವ ಡೆಸ್ಮಂಡ್ ಲೀ ಅವರನ್ನು ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿರುವುದಾಗಿಯೂ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.