
ನವದೆಹಲಿ, 15 ನವೆಂಬರ್ (ಹಿ.ಸ.):
ಸೈಬರ್ ಭದ್ರತೆ, ಡಿಜಿಟಲ್ ವಿಧಿವಿಜ್ಞಾನ ಮತ್ತು ಗುಪ್ತಚರ ಮಾಹಿತಿ ಕ್ಷೇತ್ರಗಳ ಕುರಿತ ಮೂರನೇ ರಾಷ್ಟ್ರೀಯ ಸಮ್ಮೇಳನವು ನವೆಂಬರ್ 16 ಮತ್ತು 17ರಂದು ನವದೆಹಲಿಯಲ್ಲಿ ನಡೆಯಲಿದೆ.
ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಂಸ್ಥೆ (ನೈಲಿಟ್) ಈ ಸಮ್ಮೇಳನವನ್ನು ಆಯೋಜಿಸಿದೆ. ನಗರದ ಡಾ. ಅಂಬೇಡ್ಕರ್ ಅಂತರರಾಷ್ಟ್ರೀಯ ಕೇಂದ್ರದಲ್ಲಿ ನಡೆಯಲಿರುವ ಸಮ್ಮೇಳನಕ್ಕೆ ‘ಸೈಬರ್ ಸುರಕ್ಷಿತ ಭಾರತ: ಭಾರತದ ಡಿಜಿಟಲ್ ಭವಿಷ್ಯವನ್ನು ಬಲಪಡಿಸುವುದು’ ಎಂಬ ವಿಷಯವನ್ನು ನಿಗದಿಪಡಿಸಲಾಗಿದೆ.
ಸಮ್ಮೇಳನದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರತಿನಿಧಿಗಳು, ಕಾನೂನು ಜಾರಿ ಸಂಸ್ಥೆಗಳು, ರಕ್ಷಣಾ ಮತ್ತು ನ್ಯಾಯಾಂಗ ಇಲಾಖೆಗಳ ಅಧಿಕಾರಿಗಳು, ತಂತ್ರಜ್ಞಾನ ಕಂಪನಿಗಳು, ಉದ್ಯಮ ಸಂಸ್ಥೆಗಳು ಹಾಗೂ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಸೈಬರ್ ಬೆದರಿಕೆಗಳು ಮತ್ತು ಡಿಜಿಟಲ್ ತನಿಖೆಯ ಸವಾಲುಗಳ ಕುರಿತು ಚರ್ಚಿಸುವುದರ ಜತೆಗೆ ವಿವಿಧ ಸಂಸ್ಥೆಗಳ ನಡುವಿನ ಸಮನ್ವಯ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಸಮ್ಮೇಳನದ ಪ್ರಮುಖ ಉದ್ದೇಶವಾಗಿದೆ.
ಕೃತಕ ಬುದ್ಧಿಮತ್ತೆ, ಬ್ಲಾಕ್ಚೈನ್ ಭದ್ರತೆ ಮತ್ತು ಸೈಬರ್ ಗುಪ್ತಚರ ಮಾಹಿತಿ ಸೇರಿದಂತೆ ಉದಯೋನ್ಮುಖ ತಂತ್ರಜ್ಞಾನಗಳ ಬಳಕೆಯ ಬಗ್ಗೆಯೂ ಚರ್ಚೆ ನಡೆಯಲಿದೆ. ಸೈಬರ್ ಭದ್ರತೆ, ಡಿಜಿಟಲ್ ವಿಧಿವಿಜ್ಞಾನ, ಕೃತಕ ಬುದ್ಧಿಮತ್ತೆ ಭದ್ರತೆ, ಪ್ರಮುಖ ಮೂಲಸೌಕರ್ಯಗಳ ರಕ್ಷಣೆ, ಸೈಬರ್ ಬೆದರಿಕೆ ಮಾಹಿತಿ, ಬ್ಲಾಕ್ಚೈನ್ ಮತ್ತು ಕ್ರಿಪ್ಟೊ, ಡ್ರೋನ್ ಹಾಗೂ ಅಂತರ್ಜಾಲ ಸಂಪರ್ಕಿತ ಸಾಧನಗಳ ವಿಧಿವಿಜ್ಞಾನ, ಡಿಜಿಟಲ್ ಸಾಕ್ಷ್ಯಗಳು, ಸೈಬರ್ ಕಾನೂನು ಮತ್ತು ಮೇಘ ಗಣಕ ಭದ್ರತೆ ಸೇರಿದಂತೆ 10 ವಿಷಯಗಳನ್ನು ಚರ್ಚೆಗೆ ಆಯ್ಕೆ ಮಾಡಲಾಗಿದೆ.
ಸಮ್ಮೇಳನದ ಅಂಗವಾಗಿ ಉದ್ಘಾಟನಾ ಅಧಿವೇಶನ, ತಾಂತ್ರಿಕ ಮತ್ತು ಉದ್ಯಮ ಅಧಿವೇಶನಗಳು, ಚರ್ಚಾಗೋಷ್ಠಿಗಳು ಹಾಗೂ ಉದ್ಯಮ ಪ್ರದರ್ಶನ ನಡೆಯಲಿವೆ. ಅಲ್ಲದೆ, ‘ಸೈಬರ್ ಕುಸ್ತಿ-2026’ ಹೆಸರಿನಲ್ಲಿ ಸೈಬರ್ ಭದ್ರತೆ ಮತ್ತು ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನ ಸ್ಪರ್ಧೆಯನ್ನೂ ಆಯೋಜಿಸಲಾಗಿದೆ.
ಈ ಸ್ಪರ್ಧೆಗೆ 1,031 ತಂಡಗಳ 3,093 ಸ್ಪರ್ಧಿಗಳು ನೋಂದಾಯಿಸಿಕೊಂಡಿದ್ದಾರೆ. ಮೊದಲ ಹಂತಕ್ಕೆ 923 ತಂಡಗಳ 2,769 ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗಿದೆ. ಎರಡನೇ ಹಂತಕ್ಕೆ 50 ತಂಡಗಳು ಹಾಗೂ ಮೂರನೇ ಹಂತಕ್ಕೆ 10 ತಂಡಗಳು ಅರ್ಹತೆ ಪಡೆದಿವೆ. ಮೂರು ಹಂತಗಳಲ್ಲಿ ನಡೆಯುವ ಸ್ಪರ್ಧೆಯನ್ನು ‘ವಿಮರ್ಶೆ, ದಾಳಿ ಮತ್ತು ರಕ್ಷಣೆ’ ಎಂಬ ವಿಷಯಗಳ ಆಧಾರದಲ್ಲಿ ರೂಪಿಸಲಾಗಿದೆ.
ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ, ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ, ದೆಹಲಿ ಪೊಲೀಸ್, ಸೈಬರ್ಪೀಸ್, ಮಾನದಂಡ ಪರೀಕ್ಷೆ ಮತ್ತು ಗುಣಮಟ್ಟ ಪ್ರಮಾಣೀಕರಣ ನಿರ್ದೇಶನಾಲಯ, ಸೇನಾ ದೂರಸಂಪರ್ಕ ಎಂಜಿನಿಯರಿಂಗ್ ಕಾಲೇಜು ಸೇರಿದಂತೆ ಹಲವು ಸಂಸ್ಥೆಗಳು ಜ್ಞಾನ ಪಾಲುದಾರರಾಗಿ ಭಾಗವಹಿಸಲಿವೆ. ಡಿಜಿಟಲ್ ವಿಧಿವಿಜ್ಞಾನ ಮತ್ತು ಸೈಬರ್ ಭದ್ರತಾ ಕ್ಷೇತ್ರದ ವಿವಿಧ ಕಂಪನಿಗಳು ಉದ್ಯಮ ಪಾಲುದಾರರಾಗಿ ಪಾಲ್ಗೊಳ್ಳಲಿವೆ.
ಸಮ್ಮೇಳನದ ಸಂದರ್ಭದಲ್ಲಿ ನೈಲಿಟ್ ಮತ್ತು ಉದ್ಯಮ ಪಾಲುದಾರರ ನಡುವೆ ತಿಳಿವಳಿಕೆ ಒಪ್ಪಂದಗಳಿಗೆ ಸಹಿ ಹಾಕಲಾಗುವುದು. ಸಾಂಸ್ಥಿಕ ಸಹಭಾಗಿತ್ವ, ಜ್ಞಾನ ವಿನಿಮಯ, ಜಂಟಿ ಉಪಕ್ರಮಗಳು, ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಸೈಬರ್ ಭದ್ರತೆ ಮತ್ತು ಡಿಜಿಟಲ್ ವಿಧಿವಿಜ್ಞಾನ ಕ್ಷೇತ್ರಗಳಲ್ಲಿ ಸಾಮರ್ಥ್ಯ ವೃದ್ಧಿಸುವುದು ಈ ಒಪ್ಪಂದಗಳ ಉದ್ದೇಶವಾಗಿದೆ.
ನೈಲಿಟ್ನ ಮೊದಲ ರಾಷ್ಟ್ರೀಯ ಸಮ್ಮೇಳನ 2024ರಲ್ಲಿ ನಾಗಾಲ್ಯಾಂಡ್ನ ಕೊಹಿಮಾದಲ್ಲಿ ನಡೆದಿತ್ತು. ಎರಡನೇ ಆವೃತ್ತಿ 2025ರಲ್ಲಿ ಅಸ್ಸಾಂನ ಗುವಾಹಟಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿತ್ತು. ಇದೀಗ ಮೂರನೇ ಆವೃತ್ತಿಯ ಮೂಲಕ ಸಮ್ಮೇಳನವನ್ನು ರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ವಿಸ್ತರಿಸುವುದರ ಜತೆಗೆ ಸೈಬರ್ ಭದ್ರತಾ ಕ್ಷೇತ್ರದ ಸಂಸ್ಥೆಗಳು ಮತ್ತು ತಜ್ಞರ ನಡುವಿನ ಸಹಕಾರವನ್ನು ಬಲಪಡಿಸಲು ಉದ್ದೇಶಿಸಲಾಗಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.