
ನವದೆಹಲಿ, 15 ನವೆಂಬರ್ (ಹಿ.ಸ.):
ಛತ್ ಮಹಾಪರ್ವದ ಪವಿತ್ರ ಸಂದರ್ಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವು ಗಣ್ಯರು ದೇಶವಾಸಿಗಳಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸಂದೇಶ ಪ್ರಕಟಿಸಿ, ಜನರ ಧಾರ್ಮಿಕ ನಂಬಿಕೆ ಮತ್ತು ಭಕ್ತಿಯ ಮಹಾಪರ್ವವಾದ ಛತ್ ಹಬ್ಬದ ಸಂದರ್ಭದಲ್ಲಿ ಭಾರತ ಹಾಗೂ ವಿದೇಶಗಳಲ್ಲಿ ನೆಲೆಸಿರುವ ಎಲ್ಲ ಭಾರತೀಯರಿಗೆ ಹೃತ್ಪೂರ್ವಕ ಶುಭಾಶಯಗಳನ್ನು ಕೋರಿದ್ದಾರೆ.
ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು, ಜನರ ನಂಬಿಕೆ, ಭಕ್ತಿ, ಆತ್ಮಶಿಸ್ತು ಮತ್ತು ಪ್ರಕೃತಿಯ ಬಗೆಗಿನ ಕೃತಜ್ಞತೆಯ ಸಂಕೇತವಾಗಿರುವ ಈ ಮಹಾಪರ್ವವು ಸೇವೆ, ಸಮರ್ಪಣೆ ಹಾಗೂ ಸಾಮಾಜಿಕ ಸಾಮರಸ್ಯದ ಮೌಲ್ಯಗಳನ್ನು ಸಾರುತ್ತದೆ ಎಂದು ತಿಳಿಸಿದ್ದಾರೆ. ಛತ್ತಿ ಮಾತೆಯ ಆರಾಧನೆಯ ಈ ಪವಿತ್ರ ಹಬ್ಬ ಎಲ್ಲರ ಜೀವನದಲ್ಲಿ ಸಂತೋಷ, ಶಾಂತಿ, ಉತ್ತಮ ಆರೋಗ್ಯ ಮತ್ತು ಸಮೃದ್ಧಿ ತರಲಿ ಎಂದು ಹಾರೈಸಿದ್ದಾರೆ.
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು, ಛತ್ ಹಬ್ಬವು ನಂಬಿಕೆ, ತಪಸ್ಸು, ಶಿಸ್ತು ಮತ್ತು ಪ್ರಕೃತಿಯ ಬಗೆಗಿನ ಕೃತಜ್ಞತೆಯ ಅಪೂರ್ವ ಸಂಗಮವಾಗಿದೆ ಎಂದು ಹೇಳಿದ್ದಾರೆ. ಅಸ್ತಮಿಸುವ ಸೂರ್ಯನಿಗೆ ಅರ್ಘ್ಯ ಅರ್ಪಿಸುವ ಸಂಪ್ರದಾಯವು ಪ್ರಕೃತಿಯ ಗೌರವ, ಜೀವನದ ಬಗೆಗಿನ ಕೃತಜ್ಞತೆ ಮತ್ತು ಭಾರತೀಯ ಸಂಸ್ಕೃತಿಯ ಮೇಲಿನ ಆಳವಾದ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ. ಕಠಿಣ ಉಪವಾಸ ಮತ್ತು ಅಚಲ ಭಕ್ತಿಯಿಂದ ವ್ರತ ಆಚರಿಸುವ ಎಲ್ಲ ಭಕ್ತರ ನಿಷ್ಠೆಗೆ ಗೌರವ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಛತ್ ಮಹಾಪರ್ವದ ಮೂರನೇ ದಿನವಾದ ಇಂದು ಸಂಜೆ ಅಸ್ತಮಿಸುವ ಸೂರ್ಯದೇವನಿಗೆ ಅರ್ಘ್ಯ ಅರ್ಪಿಸಿ ಪೂಜೆ ಸಲ್ಲಿಸಲಾಗುತ್ತದೆ. ಸೂರ್ಯದೇವ ಮತ್ತು ಛತ್ತಿ ಮಾತೆಯ ಆಶೀರ್ವಾದ ಎಲ್ಲರ ಮೇಲಿರಲಿ. ಪ್ರತಿಯೊಬ್ಬರ ಜೀವನ ಸುಖ, ಶಾಂತಿ ಮತ್ತು ಉತ್ತಮ ಆರೋಗ್ಯದಿಂದ ಕೂಡಿರಲಿ ಎಂದು ಹಾರೈಸಿದ್ದಾರೆ.
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು, ಸೂರ್ಯದೇವ ಮತ್ತು ಛತ್ತಿ ಮಾತೆಯ ಆಶೀರ್ವಾದ ಪ್ರತಿಯೊಂದು ಮನೆ ಮತ್ತು ಅಂಗಳವನ್ನು ಧನ-ಧಾನ್ಯಗಳಿಂದ ತುಂಬಿಸಲಿ. ಎಲ್ಲರ ಜೀವನದಲ್ಲಿ ಸುಖ, ಸಮೃದ್ಧಿ, ಕಲ್ಯಾಣ ಮತ್ತು ಸಂತೋಷ ನೆಲೆಸಲಿ. ಎಲ್ಲರೂ ಪ್ರಗತಿ ಹೊಂದಲಿ ಹಾಗೂ ಎಲ್ಲರ ಆಶಯಗಳು ಈಡೇರಲಿ ಎಂದು ಪ್ರಾರ್ಥಿಸಿದ್ದಾರೆ.
ಕೇಂದ್ರ ಜವಳಿ ಸಚಿವ ಗಿರಿರಾಜ್ ಸಿಂಗ್ ಅವರು, ಛತ್ ಮಹಾಪರ್ವದ ಸಂದರ್ಭದಲ್ಲಿ ಸೂರ್ಯದೇವ ಮತ್ತು ಛತ್ತಿ ಮಾತೆಯು ಎಲ್ಲರಿಗೂ ಸುಖ, ಶಾಂತಿ, ಸಮೃದ್ಧಿ ಹಾಗೂ ಉತ್ತಮ ಆರೋಗ್ಯ ಕರುಣಿಸಲಿ ಎಂದು ಹಾರೈಸಿದ್ದಾರೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.