ಅರಣ್ಯ ಉತ್ಪನ್ನಗಳ ಮೂಲಕ ಬುಡಕಟ್ಟು ಸಮುದಾಯಗಳಿಗೆ ಆದಾಯದ ಹೊಸ ಮಾರ್ಗ: ಪ್ರಧಾನಮಂತ್ರಿ ಜನಜಾತೀಯ ವಿಕಾಸ ಮಿಷನ್
ನವದೆಹಲಿ, 14 ನವೆಂಬರ್ (ಹಿ.ಸ.): ಬುಡಕಟ್ಟು ಸಮುದಾಯಗಳ ಆರ್ಥಿಕ ಸ್ವಾವಲಂಬನೆ ಹೆಚ್ಚಿಸುವುದು ಹಾಗೂ ಅರಣ್ಯ ಉತ್ಪನ್ನಗಳ ಮೂಲಕ ಆದಾಯ ಗಳಿಸಲು ಹೊಸ ಅವಕಾಶಗಳನ್ನು ಸೃಷ್ಟಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಜನಜಾತೀಯ ವಿಕಾಸ ಮಿಷನ್ ಜಾರಿಗೊಳಿಸಿದೆ. ಈ ಯೋಜನೆಯಡಿ ಬುಡಕಟ್ಟು ಅರಣ್ಯ ಉತ್ಪನ್ನ
ಸಾಂದರ್ಭಿಕ


ನವದೆಹಲಿ, 14 ನವೆಂಬರ್ (ಹಿ.ಸ.):

ಬುಡಕಟ್ಟು ಸಮುದಾಯಗಳ ಆರ್ಥಿಕ ಸ್ವಾವಲಂಬನೆ ಹೆಚ್ಚಿಸುವುದು ಹಾಗೂ ಅರಣ್ಯ ಉತ್ಪನ್ನಗಳ ಮೂಲಕ ಆದಾಯ ಗಳಿಸಲು ಹೊಸ ಅವಕಾಶಗಳನ್ನು ಸೃಷ್ಟಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಜನಜಾತೀಯ ವಿಕಾಸ ಮಿಷನ್ ಜಾರಿಗೊಳಿಸಿದೆ. ಈ ಯೋಜನೆಯಡಿ ಬುಡಕಟ್ಟು ಅರಣ್ಯ ಉತ್ಪನ್ನ ಸಂಗ್ರಹಕಾರರನ್ನು ಸಮುದಾಯದ ಒಡೆತನದ ಉದ್ಯಮಿಗಳನ್ನಾಗಿ ರೂಪಿಸುವ ಪ್ರಯತ್ನ ನಡೆಯುತ್ತಿದೆ.

ದೇಶದ 10.4 ಕೋಟಿ ಪರಿಶಿಷ್ಟ ಪಂಗಡದ ಜನಸಂಖ್ಯೆಯಲ್ಲಿ ಬಹುತೇಕರು ತಮ್ಮ ವಾರ್ಷಿಕ ಆದಾಯದ ಶೇ.20ರಿಂದ 40ರಷ್ಟು ಆದಾಯವನ್ನು ಸಣ್ಣ ಅರಣ್ಯ ಉತ್ಪನ್ನಗಳ ಮಾರಾಟದಿಂದ ಗಳಿಸುತ್ತಾರೆ. ಜೇನುತುಪ್ಪ, ತೆಂದು ಎಲೆ, ಮಹುವಾ ಹೂವು, ಹುಣಸೆಹಣ್ಣು, ಅಂಟು, ಬಿದಿರು ಹಾಗೂ ಕಾಡು ಔಷಧೀಯ ಸಸ್ಯಗಳು ಅವರ ಜೀವನೋಪಾಯದ ಪ್ರಮುಖ ಆಧಾರವಾಗಿವೆ.

ಆದರೆ, ಈ ಹಿಂದೆ ಮಧ್ಯವರ್ತಿಗಳಿಗೆ ಕಡಿಮೆ ಬೆಲೆಗೆ ಉತ್ಪನ್ನಗಳನ್ನು ಮಾರಾಟ ಮಾಡಬೇಕಾದ ಅನಿವಾರ್ಯತೆ ಬುಡಕಟ್ಟು ಸಮುದಾಯಗಳಿಗಿತ್ತು. ಇದರಿಂದ ಉತ್ಪನ್ನಗಳ ನೈಜ ಮಾರುಕಟ್ಟೆ ಮೌಲ್ಯ ಅವರಿಗೆ ದೊರೆಯುತ್ತಿರಲಿಲ್ಲ. ಈ ಸಮಸ್ಯೆಗೆ ಪರಿಹಾರ ಕಲ್ಪಿಸಲು ಕೇಂದ್ರ ಸರ್ಕಾರ 2021-22ರಲ್ಲಿ ಪ್ರಧಾನಮಂತ್ರಿ ಜನಜಾತೀಯ ವಿಕಾಸ ಮಿಷನ್ ಆರಂಭಿಸಿದೆ.

ವನಧನ್ ವಿಕಾಸ ಕೇಂದ್ರಗಳ ಮೂಲಕ ಉದ್ಯಮಶೀಲತೆಗೆ ಉತ್ತೇಜನ

ಈ ಯೋಜನೆಯಡಿ ಬುಡಕಟ್ಟು ಅರಣ್ಯ ಉತ್ಪನ್ನ ಸಂಗ್ರಹಕಾರರನ್ನು ಸ್ವಸಹಾಯ ಗುಂಪುಗಳಾಗಿ ಸಂಘಟಿಸಿ ವನಧನ್ ವಿಕಾಸ ಕೇಂದ್ರಗಳೊಂದಿಗೆ ಸಂಪರ್ಕಿಸಲಾಗುತ್ತದೆ. ಸುಮಾರು 300 ಬುಡಕಟ್ಟು ಸದಸ್ಯರನ್ನು ಒಳಗೊಂಡ 15 ಸ್ವಸಹಾಯ ಗುಂಪುಗಳ ಸಮೂಹವೊಂದಕ್ಕೆ ಒಂದು ವನಧನ್ ವಿಕಾಸ ಕೇಂದ್ರವನ್ನು ಸ್ಥಾಪಿಸಲಾಗುತ್ತದೆ. ಈ ಕೇಂದ್ರದ ಕನಿಷ್ಠ ಶೇ.60ರಷ್ಟು ಸದಸ್ಯರು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು.

2026ರ ಮಾರ್ಚ್ ಅಂತ್ಯದವರೆಗೆ ದೇಶಾದ್ಯಂತ 4,172 ವನಧನ್ ವಿಕಾಸ ಕೇಂದ್ರಗಳಿಗೆ ಅನುಮೋದನೆ ನೀಡಲಾಗಿದೆ. ಇವುಗಳ ಮೂಲಕ 12.48 ಲಕ್ಷ ಬುಡಕಟ್ಟು ಸದಸ್ಯರನ್ನು ಸಂಘಟಿಸಲಾಗಿದೆ. ಈ ಪೈಕಿ 2,911 ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, 2026ರ ಜುಲೈ 31ರವರೆಗೆ ಸುಮಾರು 168 ಕೋಟಿ ರೂಪಾಯಿ ಮೌಲ್ಯದ ಮಾರಾಟ ದಾಖಲಿಸಿವೆ.

87 ಅರಣ್ಯ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ

ಬುಡಕಟ್ಟು ಸಮುದಾಯಗಳ ಅರಣ್ಯ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ದೊರಕಿಸಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ 87 ಬಗೆಯ ಸಣ್ಣ ಅರಣ್ಯ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿದೆ.

2006ರ ಅರಣ್ಯ ಹಕ್ಕುಗಳ ಕಾಯ್ದೆಯು ಬುಡಕಟ್ಟು ಹಾಗೂ ಇತರ ಸಾಂಪ್ರದಾಯಿಕ ಅರಣ್ಯವಾಸಿಗಳಿಗೆ ಅರಣ್ಯ ಉತ್ಪನ್ನಗಳ ಸಂಗ್ರಹಣೆ, ಬಳಕೆ ಮತ್ತು ಮಾರಾಟದ ಹಕ್ಕುಗಳನ್ನು ಒದಗಿಸಿದೆ. ಪಂಚಾಯತ್‌ಗಳ (ಪರಿಶಿಷ್ಟ ಪ್ರದೇಶಗಳಿಗೆ ವಿಸ್ತರಣೆ) ಕಾಯ್ದೆ-1996ರ ಅಡಿಯಲ್ಲಿ ಬುಡಕಟ್ಟು ಗ್ರಾಮ ಪಂಚಾಯಿತಿಗಳಿಗೆ ಸಣ್ಣ ಅರಣ್ಯ ಉತ್ಪನ್ನಗಳ ಮೇಲಿನ ಮಾಲೀಕತ್ವದ ಹಕ್ಕುಗಳನ್ನೂ ನೀಡಲಾಗಿದೆ.

ಭಾರತೀಯ ಬುಡಕಟ್ಟು ಸಹಕಾರಿ ಮಾರುಕಟ್ಟೆ ಅಭಿವೃದ್ಧಿ ಒಕ್ಕೂಟದ ಮೂಲಕ ಅರಣ್ಯ ಉತ್ಪನ್ನಗಳ ಖರೀದಿ ಮತ್ತು ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. 2013-14ರಿಂದ ಈ ಯೋಜನೆಯಡಿ ರಾಜ್ಯ ಸರ್ಕಾರಗಳು ಒಟ್ಟು 2,67,954 ಮೆಟ್ರಿಕ್ ಟನ್ ಸಣ್ಣ ಅರಣ್ಯ ಉತ್ಪನ್ನಗಳನ್ನು 693.98 ಕೋಟಿ ರೂಪಾಯಿ ಮೌಲ್ಯಕ್ಕೆ ಖರೀದಿಸಿವೆ.

ಕೌಶಲ, ತಂತ್ರಜ್ಞಾನ ಮತ್ತು ಆರ್ಥಿಕ ನೆರವು

ಅರಣ್ಯ ಉತ್ಪನ್ನಗಳ ಸಂಗ್ರಹಣೆ, ಸಂಸ್ಕರಣೆ ಮತ್ತು ಮೌಲ್ಯವರ್ಧನೆಗೆ ಅಗತ್ಯವಾದ ತರಬೇತಿಯನ್ನು ಬುಡಕಟ್ಟು ಸದಸ್ಯರಿಗೆ ನೀಡಲಾಗುತ್ತಿದೆ. ವೈಜ್ಞಾನಿಕ ವಿಧಾನದಲ್ಲಿ ಉತ್ಪನ್ನಗಳನ್ನು ಸಂಗ್ರಹಿಸುವುದು, ಕತ್ತರಿಸುವುದು, ಸ್ವಚ್ಛಗೊಳಿಸುವುದು, ಒಣಗಿಸುವುದು ಹಾಗೂ ಪ್ಯಾಕಿಂಗ್ ಮಾಡುವ ಕುರಿತು ತರಬೇತಿ ಒದಗಿಸಲಾಗುತ್ತದೆ.

ಸ್ವಸಹಾಯ ಗುಂಪುಗಳಿಗೆ ಅಗತ್ಯ ಮೂಲಸೌಕರ್ಯ, ಸಂಸ್ಕರಣಾ ಯಂತ್ರೋಪಕರಣಗಳು ಮತ್ತು ತರಬೇತಿ ಸಾಮಗ್ರಿಗಳನ್ನು ಒದಗಿಸಲಾಗುತ್ತದೆ. ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು ಹಾಗೂ ರಾಷ್ಟ್ರೀಯ ಪರಿಶಿಷ್ಟ ಪಂಗಡ ಹಣಕಾಸು ಮತ್ತು ಅಭಿವೃದ್ಧಿ ನಿಗಮದ ಮೂಲಕ ಕಾರ್ಯನಿರತ ಬಂಡವಾಳದ ಸೌಲಭ್ಯ ಕಲ್ಪಿಸಲಾಗುತ್ತದೆ. ಉತ್ಪನ್ನಗಳ ಸಂಗ್ರಹಣೆ ಮತ್ತು ಸಾಗಣೆಗೆ ಬಾಡಿಗೆ ಆಧಾರಿತ ನೆರವನ್ನೂ ನೀಡಲಾಗುತ್ತದೆ.

ಮಾರುಕಟ್ಟೆ ಸಂಪರ್ಕಕ್ಕೆ ಆದ್ಯತೆ

ಬುಡಕಟ್ಟು ಪ್ರದೇಶಗಳಲ್ಲಿರುವ 5,000ಕ್ಕೂ ಅಧಿಕ ಸ್ಥಳೀಯ ಸಂತೆಗಳನ್ನು ಹಂತ ಹಂತವಾಗಿ ಆಧುನೀಕರಿಸಲಾಗುತ್ತಿದೆ. ಶಾಶ್ವತ ಕಟ್ಟಡಗಳು, ಸಂಗ್ರಹಣಾ ವ್ಯವಸ್ಥೆ, ಕುಡಿಯುವ ನೀರು, ನೆರಳಿನ ವ್ಯವಸ್ಥೆ ಮತ್ತು ತೂಕದ ಉಪಕರಣಗಳನ್ನು ಒದಗಿಸುವ ಮೂಲಕ ಉತ್ಪನ್ನಗಳ ಮಾರಾಟಕ್ಕೆ ಅನುಕೂಲ ಕಲ್ಪಿಸಲಾಗುತ್ತಿದೆ.

ವನಧನ್ ವಿಕಾಸ ಕೇಂದ್ರಗಳು ಖಾಸಗಿ ಹಾಗೂ ಲಾಭರಹಿತ ಸಂಸ್ಥೆಗಳ ಸಹಯೋಗದೊಂದಿಗೆ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ವಿಸ್ತರಣೆಗೆ ಅವಕಾಶ ಹೊಂದಿವೆ. ಭಾರತೀಯ ಬುಡಕಟ್ಟು ಸಹಕಾರಿ ಮಾರುಕಟ್ಟೆ ಅಭಿವೃದ್ಧಿ ಒಕ್ಕೂಟವು ಮಾರುಕಟ್ಟೆಯ ದರಗಳು ಹಾಗೂ ಅಂತರ್ಜಾಲ ಮಾರಾಟದ ಅವಕಾಶಗಳ ಕುರಿತು ಮಾಹಿತಿ ನೀಡುತ್ತದೆ.

ಹಬ್ಬಗಳು, ವಸ್ತುಪ್ರದರ್ಶನಗಳು, ಕರಕುಶಲ ಮೇಳಗಳು ಹಾಗೂ ಅಂತರ್ಜಾಲ ಮಾರುಕಟ್ಟೆಗಳ ಮೂಲಕ ಬುಡಕಟ್ಟು ಉತ್ಪನ್ನಗಳಿಗೆ ಪ್ರಚಾರ ನೀಡಲಾಗುತ್ತಿದೆ. ಉತ್ಪನ್ನಗಳ ಭೌಗೋಳಿಕ ಗುರುತಿನ ನೋಂದಣಿ, ಸಂಶೋಧನೆ ಮತ್ತು ಅಭಿವೃದ್ಧಿಗೂ ನೆರವು ಒದಗಿಸಲಾಗುತ್ತಿದೆ.

ಬುಡಕಟ್ಟು ಮಹಿಳೆಯರ ಆರ್ಥಿಕ ಸಬಲೀಕರಣ

ಅರಣ್ಯ ಉತ್ಪನ್ನಗಳ ಸಂಗ್ರಹಣೆ ಮತ್ತು ಮಾರಾಟದಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿರುವುದರಿಂದ ಈ ಯೋಜನೆ ಬುಡಕಟ್ಟು ಮಹಿಳೆಯರ ಆರ್ಥಿಕ ಸ್ವಾವಲಂಬನೆಗೂ ನೆರವಾಗುತ್ತಿದೆ.

ಅರುಣಾಚಲ ಪ್ರದೇಶದ ಲೆಪರಾಡಾ ಜಿಲ್ಲೆಯಲ್ಲಿ ಅಕ್ಟೋಬರ್ 2021ರಲ್ಲಿ ಸ್ಥಾಪಿಸಲಾದ ನ್ಯಗಾಮಾನೆ, ಹೋ ಯೋರ್ಬೆ, ಮೆಡುಮಹ್ಗಡುಮ್ ವನಧನ್ ವಿಕಾಸ ಕೇಂದ್ರದಲ್ಲಿ ಸ್ವಸಹಾಯ ಗುಂಪುಗಳಿಗೆ ಸೇರಿದ 300 ಮಹಿಳೆಯರು ಮತ್ತು ರೈತರು ಸದಸ್ಯರಾಗಿದ್ದಾರೆ.

ಸ್ಥಳೀಯವಾಗಿ ಲಭ್ಯವಿರುವ ಅರಣ್ಯ ಹಾಗೂ ಕೃಷಿ ಉತ್ಪನ್ನಗಳನ್ನು ಸಂಸ್ಕರಿಸಿ ಮಾರುಕಟ್ಟೆಗೆ ಯೋಗ್ಯವಾದ ವಸ್ತುಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಕಿಂಗ್ ಚಿಲ್ಲಿ ಉಪ್ಪಿನಕಾಯಿ, ಬಿದಿರಿನ ಚಿಗುರಿನ ಉಪ್ಪಿನಕಾಯಿ, ಅರಿಶಿಣದ ಪುಡಿ, ಶುಂಠಿ ಪುಡಿ, ಅನಾನಸ್ ಜಾಮ್, ಅನಾನಸ್ ಪಾನೀಯ ಮತ್ತು ಕಿತ್ತಳೆ ಪಾನೀಯ ಸೇರಿದಂತೆ ಹಲವು ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ.

2022-23ರಿಂದ ಈ ಕೇಂದ್ರವು 11 ಲಕ್ಷ ರೂಪಾಯಿ ಮೌಲ್ಯದ ಉತ್ಪನ್ನಗಳನ್ನು ಮಾರಾಟ ಮಾಡಿದೆ. ಇದರಿಂದ ಮಹಿಳೆಯರಿಗೆ ವರ್ಷವಿಡೀ ಆದಾಯ ಗಳಿಸುವ ಅವಕಾಶ ದೊರೆತಿದೆ. ಮಹಿಳೆಯರು ಕೇವಲ ಕಾರ್ಮಿಕರಾಗಿ ಉಳಿಯದೆ, ಉದ್ಯಮದ ಸಹಮಾಲೀಕರಾಗಿಯೂ ಗುರುತಿಸಿಕೊಂಡಿದ್ದಾರೆ.

ನ.15ರಂದು ಜನಜಾತೀಯ ಗೌರವ ದಿನಾಚರಣೆ

ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯವು ನವೆಂಬರ್ 1ರಿಂದ 15ರವರೆಗೆ ದೇಶಾದ್ಯಂತ ಜನಜಾತೀಯ ಗೌರವ ಪಾಕ್ಷಿಕ ಆಚರಿಸುತ್ತಿದೆ. ನವೆಂಬರ್ 15ರಂದು ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರ ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನದ ಅಂಗವಾಗಿ ಜನಜಾತೀಯ ಗೌರವ ದಿನ ಆಚರಿಸಲಾಗುತ್ತದೆ. 2021ರಲ್ಲಿ ಕೇಂದ್ರ ಸರ್ಕಾರ ಈ ದಿನವನ್ನು ಜನಜಾತೀಯ ಗೌರವ ದಿನವೆಂದು ಘೋಷಿಸಿತ್ತು.

ಈ ಸಂದರ್ಭದಲ್ಲಿ ವಿವಿಧ ರಾಜ್ಯಗಳಲ್ಲಿ ಬುಡಕಟ್ಟು ಸಮುದಾಯಗಳಿಗಾಗಿ 300ಕ್ಕೂ ಅಧಿಕ ಯೋಜನೆಗಳಿಗೆ ಚಾಲನೆ ನೀಡಲು ಉದ್ದೇಶಿಸಲಾಗಿದೆ. ಇವುಗಳಲ್ಲಿ 228 ಯೋಜನೆಗಳ ಉದ್ಘಾಟನೆ ಹಾಗೂ 74 ಯೋಜನೆಗಳಿಗೆ ಶಂಕುಸ್ಥಾಪನೆ ಸೇರಿವೆ.

ಇದರೊಂದಿಗೆ ಜನಹಿತ ಪೋರ್ಟಲ್ ಮತ್ತು ರಾಷ್ಟ್ರೀಯ ಅರಣ್ಯ ಹಕ್ಕುಗಳ ಕಾಯ್ದೆಯ ಡಿಜಿಟಲ್ ವೇದಿಕೆ ಎಂಬ ಎರಡು ರಾಷ್ಟ್ರೀಯ ಡಿಜಿಟಲ್ ಉಪಕ್ರಮಗಳನ್ನೂ ಆರಂಭಿಸಲಾಗುತ್ತಿದೆ. 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬುಡಕಟ್ಟು ಸಂಶೋಧನಾ ಸಂಸ್ಥೆಗಳ ಮೂಲಕ 160ಕ್ಕೂ ಅಧಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

ಬುಡಕಟ್ಟು ಸಮುದಾಯಗಳ ಸಾಂಪ್ರದಾಯಿಕ ಅರಣ್ಯ ಆರ್ಥಿಕತೆಯನ್ನು ಬಲಪಡಿಸುವುದು, ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸುವುದು ಮತ್ತು ಸಮುದಾಯದ ಮಾಲೀಕತ್ವದ ಉದ್ಯಮಗಳನ್ನು ಉತ್ತೇಜಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಈ ಮೂಲಕ 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ಗುರಿ ಸಾಧನೆಯಲ್ಲಿ ಬುಡಕಟ್ಟು ಸಮುದಾಯಗಳನ್ನೂ ಒಳಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande