ಮೇಕೆದಾಟು ನಮ್ಮ ಹಕ್ಕು, ಅಣೆಕಟ್ಟು ಕಟ್ಟಿ ತಮಿಳುನಾಡಿಗೂ ನೀರು ಕೊಡುತ್ತೇವೆ: ಡಿ.ಕೆ. ಶಿವಕುಮಾರ್
ಬೆಂಗಳೂರು, 14 ನವೆಂಬರ್ (ಹಿ.ಸ.): ಮೇಕೆದಾಟು ಯೋಜನೆ ಕರ್ನಾಟಕದ ಹಕ್ಕಾಗಿದ್ದು, ಸುಪ್ರೀಂ ಕೋರ್ಟ್ ನೀಡಿರುವ ಆದೇಶದಂತೆ ಯೋಜನೆ ಅನುಷ್ಠಾನಗೊಳಿಸುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿದೆ. ಅಣೆಕಟ್ಟು ನಿರ್ಮಿಸಿ ತಮಿಳುನಾಡಿಗೂ ನೀರು ಒದಗಿಸುತ್ತೇವೆ. ಯೋಜನೆಯನ್ನು ವಿರೋಧಿಸುವ ಬದಲು ತಮಿಳುನಾಡಿನವರು ನಿಯೋಗ
ವಿಧಾನಸೌಧದ ಆವರಣದಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್


ಬೆಂಗಳೂರು, 14 ನವೆಂಬರ್ (ಹಿ.ಸ.):

ಮೇಕೆದಾಟು ಯೋಜನೆ ಕರ್ನಾಟಕದ ಹಕ್ಕಾಗಿದ್ದು, ಸುಪ್ರೀಂ ಕೋರ್ಟ್ ನೀಡಿರುವ ಆದೇಶದಂತೆ ಯೋಜನೆ ಅನುಷ್ಠಾನಗೊಳಿಸುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿದೆ. ಅಣೆಕಟ್ಟು ನಿರ್ಮಿಸಿ ತಮಿಳುನಾಡಿಗೂ ನೀರು ಒದಗಿಸುತ್ತೇವೆ. ಯೋಜನೆಯನ್ನು ವಿರೋಧಿಸುವ ಬದಲು ತಮಿಳುನಾಡಿನವರು ನಿಯೋಗದೊಂದಿಗೆ ಬಂದು ಚರ್ಚೆ ನಡೆಸಲಿ. ಯೋಜನೆಯಿಂದ ಅವರಿಗಾಗುವ ಅನುಕೂಲಗಳನ್ನು ವಿವರಿಸಲು ಸಿದ್ಧನಿದ್ದೇನೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದ ಆವರಣದಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆಗೆ ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಮಾಣಿಕಂ ಟ್ಯಾಗೋರ್ ಸೇರಿದಂತೆ ಅಲ್ಲಿನ ನಾಯಕರು ವಿರೋಧ ವ್ಯಕ್ತಪಡಿಸುತ್ತಿರುವ ಕುರಿತು ಪ್ರತಿಕ್ರಿಯಿಸಿದರು.

ಯಾರು ಬೇಕಾದರೂ ವಿರೋಧ ವ್ಯಕ್ತಪಡಿಸಲಿ. ಇದು ನಮ್ಮ ರಾಜ್ಯ, ನಮ್ಮ ಹಕ್ಕು ಎಂಬುದನ್ನು ತಮಿಳುನಾಡಿನವರೂ ಅರ್ಥಮಾಡಿಕೊಳ್ಳಬೇಕು. ಅವರು ತಮ್ಮ ನಿಯೋಗದೊಂದಿಗೆ ಬಂದರೆ ಅಣೆಕಟ್ಟು ನಿರ್ಮಾಣದ ಸ್ಥಳಕ್ಕೆ ಕರೆದೊಯ್ದು ಯೋಜನೆಯ ಸಂಪೂರ್ಣ ಮಾಹಿತಿ ನೀಡುತ್ತೇನೆ. ಈ ವಿಚಾರದಲ್ಲಿ ರಾಜಕೀಯ ಮಾಡಲಾಗುತ್ತಿದೆ. ಕಾಂಗ್ರೆಸ್ ವಿರೋಧಿಸದಿದ್ದರೆ ಡಿಎಂಕೆ ವಿರೋಧಿಸುತ್ತದೆ, ಡಿಎಂಕೆ ವಿರೋಧಿಸದಿದ್ದರೆ ಎಐಎಡಿಎಂಕೆ ವಿರೋಧಿಸುತ್ತದೆ. ಆದರೆ ಇದು ರಾಜಕೀಯ ವಿಚಾರವಲ್ಲ. ದೇಶದ ಕಾನೂನನ್ನು ಎಲ್ಲರೂ ಗೌರವಿಸಬೇಕು ಎಂದು ಹೇಳಿದರು.

ಸುಪ್ರೀಂ ಕೋರ್ಟ್ ತಮಿಳುನಾಡಿಗೆ 177 ಟಿಎಂಸಿ ನೀರಿನ ಹಕ್ಕನ್ನು ಸ್ಪಷ್ಟಪಡಿಸಿದೆ. ಅವರಿಗೆ ಸಲ್ಲಬೇಕಾದ ನೀರನ್ನು ಒದಗಿಸುವುದು ನಮ್ಮ ಕರ್ತವ್ಯ. ಅದೇ ರೀತಿ ಕರ್ನಾಟಕದ ಹಕ್ಕುಗಳನ್ನು ರಕ್ಷಿಸುವ ಜವಾಬ್ದಾರಿಯೂ ನಮ್ಮ ಮೇಲಿದೆ. ಅಣೆಕಟ್ಟು ನಿರ್ಮಿಸಿ ತಮಿಳುನಾಡಿಗೂ ನೀರು ಒದಗಿಸುತ್ತೇವೆ. ಅವರ ಹಿತಾಸಕ್ತಿಗೆ ಧಕ್ಕೆಯಾಗದಂತೆ ಯೋಜನೆ ಅನುಷ್ಠಾನಗೊಳಿಸುವ ಬಗ್ಗೆ ಚರ್ಚಿಸಲು ಸಿದ್ಧನಿದ್ದೇನೆ ಎಂದರು.

ಕೇಂದ್ರ ಸರ್ಕಾರ ಈ ಯೋಜನೆಯಿಂದ ಮುಳುಗಡೆಯಾಗುವ ಅರಣ್ಯ ಪ್ರದೇಶಕ್ಕೆ ಬದಲಿ ಭೂಮಿ ಒದಗಿಸುವಂತೆ ಸೂಚಿಸಿದೆ. ಉಳಿದಂತೆ ಇದು ಕರ್ನಾಟಕದ ಭೂಪ್ರದೇಶದಲ್ಲಿ ನಿರ್ಮಾಣವಾಗುವ ರಾಜ್ಯದ ಯೋಜನೆಯಾಗಿದೆ ಎಂದು ತಿಳಿಸಿದರು.

ಅನುಮತಿಗಾಗಿ ಕೇಂದ್ರದ ಮೇಲೆ ಒತ್ತಡ

ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಅಗತ್ಯವಿರುವ ಅರಣ್ಯ ಮತ್ತು ಪರಿಸರ ಇಲಾಖೆಯ ಅನುಮತಿಗಳನ್ನು ನೀಡುವಂತೆ ಕೇಂದ್ರ ಸರ್ಕಾರದ ಗಮನ ಸೆಳೆಯಲಾಗಿದೆ. ಎಲ್ಲ ಪಕ್ಷಗಳೂ ಯೋಜನೆಯ ವಿಚಾರದಲ್ಲಿ ಒಪ್ಪಿಗೆ ಸೂಚಿಸಿವೆ. ಅಗತ್ಯ ದಾಖಲೆಗಳನ್ನು ಸಲ್ಲಿಸುವ ಪ್ರಕ್ರಿಯೆ ನಡೆಯುತ್ತಿದೆ. ಅನುಮತಿಗಳು ದೊರೆತ ತಕ್ಷಣ ಯೋಜನೆಯನ್ನು ಮುಂದಕ್ಕೆ ಕೊಂಡೊಯ್ಯಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದು ಹೇಳಿದರು.

ರಾಜಕಾರಣದಲ್ಲಿ ಸ್ಪರ್ಧೆ, ಅಭಿವೃದ್ಧಿಯಲ್ಲಿ ಸಹಕಾರ

ಪ್ರಧಾನಿ ನರೇಂದ್ರ ಮೋದಿ ಅವರ ರಾಜ್ಯ ಭೇಟಿಯ ಸಂದರ್ಭದಲ್ಲಿ ಅವರೊಂದಿಗಿನ ಮಾತುಕತೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ರಾಜಕಾರಣ ಮಾಡುವಾಗ ಸ್ಪರ್ಧೆ ಇರಲಿ, ಆದರೆ ಅಭಿವೃದ್ಧಿ ವಿಚಾರದಲ್ಲಿ ಸಹಕಾರ ಇರಬೇಕು. ರಾಜಕೀಯವಾಗಿ ನಾವು ಸ್ಪರ್ಧೆ ಮಾಡುತ್ತೇವೆ. ಆದರೆ ರಾಜ್ಯದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರದ ಸಹಕಾರ ಪಡೆಯುವುದು ನಮ್ಮ ಜವಾಬ್ದಾರಿ ಎಂದರು.

ಮೇಕೆದಾಟು ಯೋಜನೆಯ ಜತೆಗೆ ಕಸ್ತೂರಿರಂಗನ್ ವರದಿಯನ್ನು ತಿರಸ್ಕರಿಸಬೇಕು ಎಂಬ ಬೇಡಿಕೆಯನ್ನೂ ಕೇಂದ್ರದ ಮುಂದಿಟ್ಟಿದ್ದೇನೆ. ಮೆಟ್ರೊ ಯೋಜನೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಸಮಾನ ಪಾಲುದಾರಿಕೆ ಇರಬೇಕು ಎಂದು ಒತ್ತಾಯಿಸಿದ್ದೇನೆ. ಈ ಕುರಿತು ತಾಂತ್ರಿಕ ಸಮಿತಿ ರಚಿಸುವಂತೆಯೂ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.

ಮುಂದಿನ ಹಂತಗಳಲ್ಲಿ ಮೆಟ್ರೊ ಸಂಪರ್ಕ ಜಾಲವನ್ನು 500 ಕಿ.ಮೀ.ವರೆಗೆ ವಿಸ್ತರಿಸುವ ಗುರಿ ಹೊಂದಲಾಗಿದೆ. ಬಾಕಿ ಇರುವ ಮೆಟ್ರೊ ಯೋಜನೆಗಳ ಪ್ರಸ್ತಾವನೆಗಳಿಗೆ ತ್ವರಿತ ಅನುಮೋದನೆ ನೀಡುವಂತೆ ಕೇಂದ್ರವನ್ನು ಕೋರಿದ್ದೇನೆ ಎಂದರು.

ಡಬಲ್ ಡೆಕ್ಕರ್ ಮೇಲ್ಸೇತುವೆಗೆ ಮನವರಿಕೆ

ಬೆಂಗಳೂರಿನ ಡಬಲ್ ಡೆಕ್ಕರ್ ಮೇಲ್ಸೇತುವೆ ಯೋಜನೆಗೆ ಕೇಂದ್ರ ಸರ್ಕಾರ ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ, ಸಚಿವ ಕೃಷ್ಣ ಬೈರೇಗೌಡ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಯೋಜನೆಯ ಅಗತ್ಯವನ್ನು ವಿವರಿಸಲಾಗಿದೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ರಸ್ತೆಗಳ ಪ್ರಮಾಣ ಕೇವಲ ಶೇ.8ರಷ್ಟಿದೆ. ಇತರ ನಗರಗಳಲ್ಲಿ ಇದು ಶೇ.18ರಿಂದ 20ರಷ್ಟಿದೆ. ನಗರದಲ್ಲಿ ಪ್ರತಿ ಚದರ ಅಡಿಗೆ ಸುಮಾರು 50 ಸಾವಿರ ರೂ. ಪರಿಹಾರ ನೀಡಬೇಕಾದ ಪರಿಸ್ಥಿತಿಯಿದ್ದು, ಯೋಜನೆಯ ವೆಚ್ಚವನ್ನು ರಾಜ್ಯ ಸರ್ಕಾರವೊಂದರಿಂದಲೇ ಭರಿಸುವುದು ಕಷ್ಟ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ವೆಚ್ಚ ಹಂಚಿಕೊಂಡು ಡಬಲ್ ಡೆಕ್ಕರ್ ಯೋಜನೆ ಅನುಷ್ಠಾನಗೊಳಿಸಬೇಕಿದೆ ಎಂದು ಮನವರಿಕೆ ಮಾಡಲಾಗಿದೆ ಎಂದರು.

ಈ ಸಂಬಂಧ ಸರ್ವಪಕ್ಷ ನಿಯೋಗವನ್ನು ಕರೆದುಕೊಂಡು ಬರುವುದಾಗಿಯೂ ಪ್ರಧಾನಿಯವರಿಗೆ ತಿಳಿಸಿದ್ದು, ಅವರು ಒಪ್ಪಿಗೆ ಸೂಚಿಸಿದ್ದಾರೆ. ನಾನು ರಾಜ್ಯದ ಪ್ರತಿನಿಧಿಯಾಗಿ ರಾಜ್ಯದ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದ್ದೇನೆ. ಯಾರು ಏನೇ ಊಹಿಸಿಕೊಳ್ಳಲಿ ಎಂದು ಶಿವಕುಮಾರ್ ಹೇಳಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande