
ನವದೆಹಲಿ, 14 ನವೆಂಬರ್ (ಹಿ.ಸ.):
ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಆಯ್ದ ಕೃತಿಗಳನ್ನು ಒಳಗೊಂಡಿರುವ ‘ನೆಹರು ಆರ್ಕೈವ್ ಡಾಟ್ ಇನ್’ ಡಿಜಿಟಲ್ ದಾಖಲೆ ಸಂಗ್ರಹವು ಮೊದಲ ವರ್ಷದಲ್ಲೇ 10 ಲಕ್ಷಕ್ಕೂ ಅಧಿಕ ವಿಶಿಷ್ಟ ವೀಕ್ಷಕರನ್ನು ಆಕರ್ಷಿಸಿದೆ. ಈ ಜಾಲತಾಣದ ಪುಟಗಳನ್ನು 40 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಿಸಲಾಗಿದೆ ಎಂದು ಕಾಂಗ್ರೆಸ್ ತಿಳಿಸಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಶನಿವಾರ ಸಾಮಾಜಿಕ ಜಾಲತಾಣದಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ. ಡಿಜಿಟಲ್ ದಾಖಲೆ ಸಂಗ್ರಹ ಆರಂಭವಾಗಿ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅವರು ಈ ವಿವರಗಳನ್ನು ಪ್ರಕಟಿಸಿದ್ದಾರೆ.
1903ರಿಂದ 1964ರವರೆಗಿನ ಅವಧಿಯನ್ನು ಒಳಗೊಂಡ ಜವಾಹರಲಾಲ್ ನೆಹರು ಅವರ ಆಯ್ದ ಕೃತಿಗಳ 100 ಸಂಪುಟಗಳನ್ನು ಈ ಡಿಜಿಟಲ್ ಸಂಗ್ರಹ ಹೊಂದಿದೆ. ಇದರಲ್ಲಿ ಸುಮಾರು 77 ಸಾವಿರ ಪುಟಗಳು, 34 ಸಾವಿರಕ್ಕೂ ಅಧಿಕ ಪಠ್ಯ ದಾಖಲೆಗಳು ಮತ್ತು 3 ಸಾವಿರಕ್ಕೂ ಹೆಚ್ಚು ಛಾಯಾಚಿತ್ರಗಳಿವೆ. 20ನೇ ಶತಮಾನದ ಭಾರತದ ಇತಿಹಾಸವನ್ನು ಅರ್ಥಮಾಡಿಕೊಳ್ಳಲು ಈ ಸಂಗ್ರಹ ಮಹತ್ವದ ಮೂಲ ಆಕರವಾಗಿದೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ಈ ಜಾಲತಾಣವನ್ನು ಮೊಬೈಲ್ ಬಳಕೆಗೆ ಅನುಕೂಲವಾಗುವಂತೆ ರೂಪಿಸಲಾಗಿದೆ. ದಾಖಲೆಗಳನ್ನು ಸುಲಭವಾಗಿ ಹುಡುಕುವ, ಉಚಿತವಾಗಿ ಪಡೆಯುವ ಹಾಗೂ ಭಾಷಾಂತರಿಸುವ ಸೌಲಭ್ಯಗಳಿವೆ. ವಿಶೇಷವಾಗಿ ಯುವಜನರನ್ನು ಗಮನದಲ್ಲಿಟ್ಟುಕೊಂಡು ಇದನ್ನು ಅಭಿವೃದ್ಧಿಪಡಿಸಲಾಗಿದೆ. ಸಾರ್ವಜನಿಕರು, ವಿದ್ಯಾರ್ಥಿಗಳು, ಸಂಶೋಧಕರು, ಇತಿಹಾಸಕಾರರು, ಪತ್ರಕರ್ತರು ಮಾತ್ರವಲ್ಲದೆ ನೆಹರು ಅವರ ಅಭಿಮಾನಿಗಳು ಮತ್ತು ಟೀಕಾಕಾರರೂ ಈ ಸಂಗ್ರಹದಲ್ಲಿ ಆಸಕ್ತಿ ತೋರಿದ್ದಾರೆ ಎಂದು ತಿಳಿಸಿದ್ದಾರೆ.
ಮುಂದಿನ ಆವೃತ್ತಿಯಾದ ‘ನೆಹರು ಆರ್ಕೈವ್-2’ರಲ್ಲಿ ಆಯ್ದ ಕೃತಿಗಳ ಜತೆಗೆ ಭಾರತ ಮತ್ತು ವಿದೇಶಗಳ ಹಲವು ಮೂಲಗಳಿಂದ ಸಂಗ್ರಹಿಸಿದ ನೆಹರು ಅವರಿಗೆ ಸಂಬಂಧಿಸಿದ ಹೆಚ್ಚುವರಿ ಮಾಹಿತಿಗಳನ್ನು ಸೇರ್ಪಡೆಗೊಳಿಸಲಾಗುವುದು. ಪತ್ರಗಳು, ಛಾಯಾಚಿತ್ರಗಳು, ದಾಖಲೆಗಳು, ಪುಸ್ತಕಗಳು, ಚಲನಚಿತ್ರಗಳು, ಧ್ವನಿಮುದ್ರಣಗಳು ಹಾಗೂ ನೆಹರು ಅವರ ಜೀವಿತಾವಧಿಯಲ್ಲಿ ಪ್ರಕಟವಾದ ವ್ಯಂಗ್ಯಚಿತ್ರಗಳು ಮತ್ತು ರೇಖಾಚಿತ್ರಗಳು ಈ ಆವೃತ್ತಿಯಲ್ಲಿ ಲಭ್ಯವಾಗಲಿವೆ ಎಂದು ಹೇಳಿದ್ದಾರೆ.
‘ನೆಹರು ಆರ್ಕೈವ್ ಡಾಟ್ ಇನ್’ ಜವಾಹರಲಾಲ್ ನೆಹರು ಸ್ಮಾರಕ ನಿಧಿಯ ಉಪಕ್ರಮವಾಗಿದೆ. ಈ ನಿಧಿಯ ಟ್ರಸ್ಟ್ ಪತ್ರಕ್ಕೆ 1964ರ ಡಿಸೆಂಬರ್ 21ರಂದು ಅಂದಿನ ಉಪರಾಷ್ಟ್ರಪತಿ ಡಾ. ಜಾಕಿರ್ ಹುಸೇನ್, ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಸೇರಿದಂತೆ 30ಕ್ಕೂ ಹೆಚ್ಚು ಗಣ್ಯರು ಸಹಿ ಹಾಕಿದ್ದರು. ಅಂದಿನ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಹೊರಡಿಸಿದ್ದ ಮನವಿಯನ್ನೂ ಜೈರಾಮ್ ರಮೇಶ್ ಸ್ಮರಿಸಿದ್ದಾರೆ.
ನೆಹರು ಅವರ ಪರಂಪರೆಯನ್ನು ಮಸುಕುಗೊಳಿಸಲು ಮತ್ತು ಅವರ ವಿರುದ್ಧ ಟೀಕೆಗಳನ್ನು ನಡೆಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿರುವ ಜೈರಾಮ್ ರಮೇಶ್, ಅವರ ಪರಂಪರೆಯನ್ನು ಸಂರಕ್ಷಿಸಲು, ರಕ್ಷಿಸಲು ಹಾಗೂ ವ್ಯಾಪಕ ಜನಸಮುದಾಯಕ್ಕೆ ತಲುಪಿಸಲು ಈ ಡಿಜಿಟಲ್ ದಾಖಲೆ ಸಂಗ್ರಹ ಪ್ರಮುಖ ಮಾಧ್ಯಮವಾಗಲಿದೆ ಎಂದು ತಿಳಿಸಿದ್ದಾರೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.