
ನವದೆಹಲಿ, 14 ನವೆಂಬರ್ (ಹಿ.ಸ.):
ಅಂಚೆ ಸೇವೆಗಳನ್ನು ದುರುಪಯೋಗಪಡಿಸಿಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾದಕ ವಸ್ತುಗಳನ್ನು ಕಳ್ಳಸಾಗಣೆ ಮಾಡುವ ಯತ್ನವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ವಿಫಲಗೊಳಿಸಿದ್ದಾರೆ. ದೆಹಲಿಯ ವಿದೇಶಿ ಅಂಚೆ ಕಚೇರಿಯಲ್ಲಿ ಯುರೋಪ್‌ನಿಂದ ಬಂದ ಅನುಮಾನಾಸ್ಪದ ಪಾರ್ಸೆಲ್‌ವೊಂದನ್ನು ಪರಿಶೀಲಿಸಿ 10.8 ಕೆ.ಜಿ. ತೂಕದ ಆಂಫೆಟಮಿನ್ ಎಂಬ ನಿಷೇಧಿತ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕುರಿತು ಶನಿವಾರ ಮಾಹಿತಿ ನೀಡಿರುವ ಕೇಂದ್ರ ಹಣಕಾಸು ಸಚಿವಾಲಯ, ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳಿಗೆ ದೊರೆತ ಖಚಿತ ಮಾಹಿತಿಯ ಆಧಾರದ ಮೇಲೆ ಅನುಮಾನಾಸ್ಪದ ಪಾರ್ಸೆಲ್‌ನ್ನು ಪರಿಶೀಲಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ ಎಂದು ತಿಳಿಸಿದೆ.
ಯುರೋಪ್‌ನಿಂದ ಬಂದಿದ್ದ ಪಾರ್ಸೆಲ್‌ನಲ್ಲಿ ಬಟ್ಟೆಗಳಿವೆ ಎಂದು ನಮೂದಿಸಲಾಗಿತ್ತು. ಆರಂಭಿಕ ಪರಿಶೀಲನೆಯಲ್ಲಿ ಪೆಟ್ಟಿಗೆಯೊಳಗೆ ಸಾಮಾನ್ಯ ಬಳಕೆಯ ಬಟ್ಟೆಗಳು ಪತ್ತೆಯಾಗಿದ್ದವು. ಆದರೆ, ಪ್ಯಾಕಿಂಗ್‌ನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಪೆಟ್ಟಿಗೆಯ ನಾಲ್ಕೂ ಬದಿಗಳ ಗೋಡೆಗಳಲ್ಲಿ ತಲಾ ಎರಡು ಪ್ಲಾಸ್ಟಿಕ್ ಚೀಲಗಳನ್ನು ಅಡಗಿಸಿಟ್ಟಿರುವುದು ಪತ್ತೆಯಾಗಿದೆ.
ಒಟ್ಟು ಎಂಟು ಪ್ಯಾಕೆಟ್‌ಗಳಲ್ಲಿ ಗುಲಾಬಿ ಬಣ್ಣದ ಪುಡಿ ಪತ್ತೆಯಾಗಿದ್ದು, ಪರೀಕ್ಷಿಸಿದಾಗ ಅದು ಆಂಫೆಟಮಿನ್ ಮಾದಕ ವಸ್ತು ಎಂಬುದು ದೃಢಪಟ್ಟಿದೆ.
ಸ್ವಾಪಕ ಔಷಧಗಳು ಮತ್ತು ಮನಃಪ್ರಭಾವಿ ವಸ್ತುಗಳ ಕಾಯ್ದೆ-1985ರ (ಎನ್‌ಡಿಪಿಎಸ್) ನಿಬಂಧನೆಗಳ ಅಡಿಯಲ್ಲಿ ಎಲ್ಲ ಎಂಟು ಪ್ಯಾಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಕುರಿತು ಮುಂದಿನ ತನಿಖೆ ಮುಂದುವರಿದಿದೆ ಎಂದು ಸಚಿವಾಲಯ ತಿಳಿಸಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.