
ನವದೆಹಲಿ, 14 ನವೆಂಬರ್ (ಹಿ.ಸ.):
ಮಹಿಳಾ ಗೌರವದ ವಿಚಾರದಲ್ಲಿ ದೊಡ್ಡ ದೊಡ್ಡ ಘೋಷಣೆಗಳನ್ನು ಮಾಡುವ ಕಾಂಗ್ರೆಸ್, ಗಂಭೀರ ಆರೋಪಗಳು ಎದುರಾದಾಗ ಮೌನಕ್ಕೆ ಶರಣಾಗುತ್ತಿದೆ. ಮಹಿಳಾ ಗೌರವದ ಬಗ್ಗೆ ಕಾಂಗ್ರೆಸ್ ದ್ವಂದ್ವ ನಿಲುವು ಅನುಸರಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ಬಿಜೆಪಿ ಸಂಸದೆ ಬಾನ್ಸುರಿ ಸ್ವರಾಜ್ ಅವರು ಶನಿವಾರ ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಾರ್ಖಂಡ್ನ ಕಾಂಗ್ರೆಸ್ ಶಾಸಕ ಭೂಷಣ್ ಭಾಡಾ ವಿರುದ್ಧ ಅಪ್ರಾಪ್ತ ಆದಿವಾಸಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಹಾಗೂ ಮಣಿಪುರದ ಕಾಂಗ್ರೆಸ್ ಸಂಸದ ಬಿಮೋಲ್ ಅಕೋಯಿಜಾಮ್ ಅವರಿಗೆ ಪಕ್ಷದ ಚುನಾವಣಾ ಸಮಿತಿಗಳಲ್ಲಿ ಪ್ರಮುಖ ಜವಾಬ್ದಾರಿ ನೀಡಿರುವುದನ್ನು ಪ್ರಸ್ತಾಪಿಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ದೇಶವು ತನ್ನ ಸಂಸ್ಕೃತಿಯ ಬಗ್ಗೆ ಹೆಮ್ಮೆಪಡುತ್ತಾ ಸೃಷ್ಟಿಯ ಮೂಲಶಕ್ತಿಯ ಪ್ರತೀಕವಾದ ಛಠ್ ಮಾತೆಯ ಆರಾಧನೆಯಲ್ಲಿ ತೊಡಗಿರುವ ಸಂದರ್ಭದಲ್ಲಿ, ಕಾಂಗ್ರೆಸ್ ಶಕ್ತಿಸ್ವರೂಪಿಣಿಯಾದ ಮಹಿಳೆಯನ್ನು ಪದೇಪದೆ ಅವಮಾನಿಸುತ್ತಿದೆ ಎಂದು ಅವರು ಆರೋಪಿಸಿದರು.
ಭಗವಾನ್ ಬಿರ್ಸಾ ಮುಂಡಾ ಅವರ ಜಯಂತಿಯನ್ನು 'ಜನಜಾತೀಯ ಗೌರವ ದಿನ'ವಾಗಿ ಆಚರಿಸುತ್ತಿರುವ ಸಂದರ್ಭದಲ್ಲಿ, ಜಾರ್ಖಂಡ್ನ ಕಾಂಗ್ರೆಸ್ ಶಾಸಕ ಭೂಷಣ್ ಭಾಡಾ ವಿರುದ್ಧ 14 ವರ್ಷದ ಆದಿವಾಸಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಕೇಳಿಬಂದಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಹೇಳಿದರು. ಈ ಪ್ರಕರಣದಲ್ಲಿ ತನಿಖಾ ಸಂಸ್ಥೆಯು ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿರುವುದನ್ನೂ ಉಲ್ಲೇಖಿಸಿದರು.
ಶಾಸಕನು ಬಾಲಕಿಗೆ ಶಿಕ್ಷಣ ಮತ್ತು ಉತ್ತಮ ಜೀವನದ ಆಮಿಷವೊಡ್ಡಿ, ತನ್ನ ಮನೆಯಲ್ಲಿ ಕೆಲಸ ಮಾಡಿಸಿಕೊಂಡಿದ್ದಾನೆ. ಆಕೆಯ ಮೇಲೆ ಹಲ್ಲೆ ನಡೆಸಿ ಬಳಿಕ ಲೈಂಗಿಕ ಶೋಷಣೆ ಮಾಡಿದ್ದಾನೆ ಎಂಬ ಗಂಭೀರ ಆರೋಪಗಳಿವೆ. ಈ ಆರೋಪಗಳು ಅತ್ಯಂತ ಆಘಾತಕಾರಿಯಾಗಿವೆ ಎಂದು ಬಾನ್ಸುರಿ ಸ್ವರಾಜ್ ಹೇಳಿದರು.
ಈ ವಿಚಾರದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ಮೌನವನ್ನು ಪ್ರಶ್ನಿಸಿದ ಅವರು, ತಮ್ಮ ಪಕ್ಷದ ಶಾಸಕರಿಂದ ಈ ಆರೋಪಗಳ ಕುರಿತು ಕಾಂಗ್ರೆಸ್ ನಾಯಕರು ಉತ್ತರ ಕೇಳಿದ್ದಾರೆಯೇ ಎಂದು ಪ್ರಶ್ನಿಸಿದರು. 'ಪಿತೃಪ್ರಧಾನ ವ್ಯವಸ್ಥೆಯನ್ನು ತೊಡೆದುಹಾಕಿ' ಎಂದು ಘೋಷಣೆ ನೀಡುವ ಕಾಂಗ್ರೆಸ್, ಗಂಭೀರ ಆರೋಪಗಳ ವಿಚಾರದಲ್ಲಿ ಇನ್ನೆಷ್ಟು ದಿನ ಮೌನ ವಹಿಸಲಿದೆ ಎಂದು ಟೀಕಿಸಿದರು.
ಮಣಿಪುರದ ಕಾಂಗ್ರೆಸ್ ಸಂಸದ ಬಿಮೋಲ್ ಅಕೋಯಿಜಾಮ್ ಅವರ ವಿಚಾರದಲ್ಲಿಯೂ ಕಾಂಗ್ರೆಸ್ ದ್ವಂದ್ವ ನಿಲುವು ಅನುಸರಿಸುತ್ತಿದೆ ಎಂದು ಆರೋಪಿಸಿದರು. ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ 11 ವಿದ್ಯಾರ್ಥಿನಿಯರು ಅಕೋಯಿಜಾಮ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಶಿಸ್ತು ಕ್ರಮದ ವಿಚಾರಣೆಯಲ್ಲಿ ಅವರು ತಪ್ಪಿತಸ್ಥರೆಂದು ನಿರ್ಧರಿಸಿ ಉದ್ಯೋಗದಿಂದ ವಜಾಗೊಳಿಸಲಾಗಿತ್ತು ಎಂದು ಸ್ವರಾಜ್ ತಿಳಿಸಿದರು.
ಇಂತಹ ಗಂಭೀರ ಆರೋಪಗಳಿದ್ದರೂ ಕಾಂಗ್ರೆಸ್ ಅವರನ್ನು ಗೌರವಿಸಿದಂತಾಗಿದೆ. ಮುಂಬರುವ ಮಣಿಪುರ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅವರನ್ನು ಚುನಾವಣಾ ಸಮಿತಿ, ಪ್ರಚಾರ ಸಮಿತಿ ಹಾಗೂ ಪ್ರಣಾಳಿಕೆ ಸಮಿತಿಗಳ ಸಹ ಅಧ್ಯಕ್ಷರನ್ನಾಗಿ ನೇಮಿಸಿರುವುದು ಅಚ್ಚರಿ ಮೂಡಿಸಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮಹಿಳೆಯರನ್ನು ಕೇವಲ ಸರ್ಕಾರಿ ಯೋಜನೆಗಳ ಫಲಾನುಭವಿಗಳಾಗಿ ನೋಡದೆ, ರಾಷ್ಟ್ರ ನಿರ್ಮಾತೃಗಳು ಮತ್ತು ಸ್ವಾವಲಂಬಿ ಉದ್ಯಮಿಗಳಾಗಿ ರೂಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದರೆ ರಾಹುಲ್ ಗಾಂಧಿ ಮಹಿಳಾ ಗೌರವದ ವಿಚಾರದಲ್ಲಿ ಕೇವಲ ಘೋಷಣೆಗಳಿಗೆ ಸೀಮಿತವಾಗಿದ್ದು, ಗಂಭೀರ ಪ್ರಕರಣಗಳ ಸಂದರ್ಭದಲ್ಲಿ ಮೌನ ವಹಿಸುತ್ತಾರೆ ಎಂದು ಟೀಕಿಸಿದರು.
ಎಲ್ಲವನ್ನೂ ಗಮನಿಸುತ್ತಿರುವ ಮಹಿಳಾ ಮತದಾರರು ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ನಿಂದ ಉತ್ತರ ಕೇಳಲಿದ್ದು, ಮಹಿಳಾ ವಿರೋಧಿ ನಿಲುವಿಗೆ ಪಕ್ಷವನ್ನು ಹೊಣೆಗಾರರನ್ನಾಗಿ ಮಾಡಲಿದ್ದಾರೆ ಎಂದು ಬಾನ್ಸುರಿ ಸ್ವರಾಜ್ ಹೇಳಿದರು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.