ಸಾಮಾಜಿಕ ಜಾಲತಾಣದ ಪೋಸ್ಟ್: ಕಂಗನಾ ರಣಾವತ್ ವಿರುದ್ಧ ಶಿಮ್ಲಾದಲ್ಲಿ ಎಫ್ಐಆರ್ ದಾಖಲು
ಶಿಮ್ಲಾ, 14 ನವೆಂಬರ್ (ಹಿ.ಸ.): ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಪೋಸ್ಟ್‌ಗೆ ಸಂಬಂಧಿಸಿದಂತೆ ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದೆ ಕಂಗನಾ ರಣಾವತ್ ವಿರುದ್ಧ ಶಿಮ್ಲಾದಲ್ಲಿ ಎಫ್‌ಐಆರ್ ದಾಖಲಾಗಿದೆ. ನವೆಂಬರ್ 10ರಂದು ಕಂಗನಾ ಪ್ರಕಟಿಸಿದ್ದ ಪೋಸ್ಟ್‌ನಲ್ಲಿ ಮಾಜಿ ಪ್ರಧಾನಿ ಇಂದಿ
Fir


ಶಿಮ್ಲಾ, 14 ನವೆಂಬರ್ (ಹಿ.ಸ.):

ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಪೋಸ್ಟ್‌ಗೆ ಸಂಬಂಧಿಸಿದಂತೆ ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದೆ ಕಂಗನಾ ರಣಾವತ್ ವಿರುದ್ಧ ಶಿಮ್ಲಾದಲ್ಲಿ ಎಫ್‌ಐಆರ್ ದಾಖಲಾಗಿದೆ.

ನವೆಂಬರ್ 10ರಂದು ಕಂಗನಾ ಪ್ರಕಟಿಸಿದ್ದ ಪೋಸ್ಟ್‌ನಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಸಂಜಯ್ ಗಾಂಧಿ ಹಾಗೂ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಸಾವಿನ ಘಟನೆಗಳನ್ನು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ರಾಜಕೀಯ ಬೆಳವಣಿಗೆಯೊಂದಿಗೆ ತಳುಕು ಹಾಕಿರುವುದಕ್ಕೆ ದೂರುದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಶಿಮ್ಲಾ ನಗರದ ಬಾಲೂಗಂಜ್ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 353(2), 196(1)(ಬಿ) ಮತ್ತು 356(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಶಿಮ್ಲಾದ ಕಸುಂಬ್ಟಿ ನಿವಾಸಿ ಅತುಲ್ ಶರ್ಮಾ ಎಂಬುವವರು ನೀಡಿದ ದೂರಿನ ಪ್ರಕಾರ, ಕಂಗನಾ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಗಾಂಧಿ ಕುಟುಂಬದ ಹಳೆಯ ವಿಡಿಯೊವೊಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ಸೋನಿಯಾ ಗಾಂಧಿ ಅವರನ್ನು 'ನಿಗೂಢ ವಿದೇಶಿ ಪ್ರಜೆ' ಎಂದು ಉಲ್ಲೇಖಿಸಿ, ವಿದೇಶದ ಕೆಫೆಯೊಂದರಲ್ಲಿ ರಾಜೀವ್ ಗಾಂಧಿ ಅವರನ್ನು ಭೇಟಿಯಾದ ಘಟನೆಯನ್ನು ಪ್ರಸ್ತಾಪಿಸಲಾಗಿತ್ತು.

ಇದರೊಂದಿಗೆ ಇಂದಿರಾ ಗಾಂಧಿ, ಸಂಜಯ್ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಸಾವಿನ ಘಟನೆಗಳು ಹಾಗೂ ಸೋನಿಯಾ ಗಾಂಧಿ ರಾಜಕೀಯವಾಗಿ ಪ್ರಭಾವಶಾಲಿಯಾಗಿ ಬೆಳೆದ ಬೆಳವಣಿಗೆಗಳನ್ನು ಒಂದೇ ಸರಣಿಯಲ್ಲಿ ಪ್ರಸ್ತುತಪಡಿಸಲಾಗಿತ್ತು. ಅಲ್ಲದೆ, 'ಎಷ್ಟು ಅನುಕೂಲಕರವಾಗಿದೆ' ಎಂಬ ಅರ್ಥದ ವ್ಯಂಗ್ಯಾತ್ಮಕ ಹೇಳಿಕೆಯನ್ನೂ ಪೋಸ್ಟ್‌ನಲ್ಲಿ ಬಳಸಲಾಗಿತ್ತು. ಸಂಜಯ್ ಗಾಂಧಿ ಅವರ ಸಾವಿನ ಬಳಿಕ ಮೇನಕಾ ಗಾಂಧಿ ಅವರನ್ನು ಕುಟುಂಬದ ನಿವಾಸದಿಂದ ಹೊರಹಾಕಿದ ಘಟನೆಯ ಬಗ್ಗೆಯೂ ಉಲ್ಲೇಖಿಸಲಾಗಿತ್ತು.

ಈ ಘಟನೆಗಳನ್ನು ಈ ರೀತಿಯಲ್ಲಿ ಜೋಡಿಸಿ ಪ್ರಸ್ತುತಪಡಿಸಿರುವುದರಿಂದ ಮೂವರು ನಾಯಕರ ಸಾವಿನ ಘಟನೆಗಳು ಮತ್ತು ನಂತರದ ರಾಜಕೀಯ ಬೆಳವಣಿಗೆಗಳ ನಡುವೆ ಅನುಮಾನ ಮೂಡುವ ಸಾಧ್ಯತೆಯಿದೆ ಎಂದು ದೂರುದಾರರು ಆರೋಪಿಸಿದ್ದಾರೆ. ವಿದೇಶಿ ಮೂಲದ ಕುರಿತಾದ ಹೇಳಿಕೆಗಳು ಜನರ ನಡುವೆ ದ್ವೇಷ ಮತ್ತು ವೈಮನಸ್ಸು ಹರಡುವ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.

ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 196 ಮತ್ತು 353ರ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ದೂರುದಾರರು ಮನವಿ ಮಾಡಿದ್ದು, ರಾಷ್ಟ್ರೀಯ ಏಕತೆಗೆ ಸಂಬಂಧಿಸಿದ ಸೆಕ್ಷನ್ 197(1)(ಡಿ) ಅಡಿಯಲ್ಲಿಯೂ ತನಿಖೆ ನಡೆಸುವಂತೆ ಕೋರಿದ್ದಾರೆ. ಆದರೆ, ದಾಖಲಾದ ಎಫ್‌ಐಆರ್‌ನಲ್ಲಿ ಸೆಕ್ಷನ್ 197 ಅನ್ನು ಸೇರಿಸಲಾಗಿಲ್ಲ.

ಸಂಬಂಧಿತ ಸಾಮಾಜಿಕ ಜಾಲತಾಣದ ಪೋಸ್ಟ್‌ನ ಸತ್ಯಾಸತ್ಯತೆ, ಮೂಲ ಸಂಪರ್ಕ ಕೊಂಡಿ, ಪ್ರಕಟಣೆಯ ಸಮಯ ಮತ್ತು ಡಿಜಿಟಲ್ ದಾಖಲೆಗಳನ್ನು ಪರಿಶೀಲಿಸುವಂತೆಯೂ ದೂರುದಾರರು ಪೊಲೀಸರಿಗೆ ಮನವಿ ಮಾಡಿದ್ದಾರೆ. ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ವಿಡಿಯೊದ ಯೂಟ್ಯೂಬ್ ಸಂಪರ್ಕ ಕೊಂಡಿಯನ್ನು ಒದಗಿಸಿ, ಅದರ ಮೂಲ ಹಾಗೂ ನೈಜ ಹಿನ್ನೆಲೆಯನ್ನು ದೃಢಪಡಿಸುವಂತೆ ಕೋರಿದ್ದಾರೆ. ಅಲ್ಲದೆ, ಪೋಸ್ಟ್ ಎಷ್ಟು ವ್ಯಾಪಕವಾಗಿ ಹರಡಿದೆ ಮತ್ತು ಅದಕ್ಕೆ ಸಾರ್ವಜನಿಕರಿಂದ ಬಂದ ಪ್ರತಿಕ್ರಿಯೆಗಳ ಬಗ್ಗೆಯೂ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

ಪೊಲೀಸ್ ದಾಖಲೆಗಳ ಪ್ರಕಾರ, ನವೆಂಬರ್ 13ರಂದು ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಮೂಲಕ ದೂರು ಠಾಣೆಗೆ ತಲುಪಿದೆ. ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ಸಹಾಯಕ ಉಪನಿರೀಕ್ಷಕ ಮದನ್ ಲಾಲ್ ಅವರಿಗೆ ವಹಿಸಲಾಗಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande