
ಕೋಲಾರ, 31 ಅಕ್ಟೋಬರ್ (ಹಿ.ಸ):
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ದೇಶದ ಅಭಿವೃದ್ಧಿಗೆ ಹಲವು ಮಹತ್ವದ ಕೊಡುಗೆಗಳನ್ನು ನೀಡಿದ್ದು, ಬಡವರು, ರೈತರು ಹಾಗೂ ದುರ್ಬಲ ವರ್ಗಗಳ ಏಳಿಗೆಗಾಗಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದರು ಎಂದು ವಿಧಾನ ಪರಿಷತ್ ಸದಸ್ಯ ಎಂ.ಎಲ್. ಅನಿಲ್ ಕುಮಾರ್ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ೪೨ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ತಂದೆ ಜವಾಹರಲಾಲ್ ನೆಹರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಆಡಳಿತದ ಅನುಭವ ಪಡೆದ ಇಂದಿರಾ ಗಾಂಧಿ, ನಂತರ ದೇಶದ ಪ್ರಧಾನಿಯಾಗಿ ದೀರ್ಘಕಾಲ ಸೇವೆ ಸಲ್ಲಿಸಿದರು. ದೇಶದ ಮೊದಲ ಮಹಿಳಾ ಪ್ರಧಾನಿಯಾಗಿ ಆಡಳಿತ ನಡೆಸಿದ ಅವರು, ತಮ್ಮ ದಿಟ್ಟ ನಿರ್ಧಾರಗಳಿಂದ ಉಕ್ಕಿನ ಮಹಿಳೆ ಎಂಬ ಖ್ಯಾತಿ ಗಳಿಸಿದ್ದರು ಎಂದರು.
ಬ್ಯಾಂಕ್ ಗಳ ರಾಷ್ಟ್ರೀಕರಣದ ಮೂಲಕ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸಾಮಾನ್ಯ ಜನರಿಗೂ ಮುಕ್ತಗೊಳಿಸಿದರು. ಬಡವರಿಗೆ ಆಹಾರ ಭದ್ರತೆ ಕಲ್ಪಿಸಲು ಸಾರ್ವಜನಿಕ ಪಡಿತರ ವ್ಯವಸ್ಥೆಯನ್ನು ಬಲಪಡಿಸಿದರು. ಬಡವರಿಗಾಗಿ ಮನೆ, ಪಿಂಚಣಿ ಸೇರಿದಂತೆ ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ೨೦ ಅಂಶಗಳ ಕಾರ್ಯಕ್ರಮದ ಮೂಲಕ ದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದರು. ಭೂ ಸುಧಾರಣೆಗಳ ಮೂಲಕ ಉಳುವವನೇ ಭೂಮಿಯ ಒಡೆಯನಾಗಬೇಕು ಎಂಬ ಆಶಯಕ್ಕೆ ಬಲ ನೀಡಿದ ಮಹಾನ್ ನಾಯಕಿ ಎಂದರು
ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಭಾರತಕ್ಕೆ ಜಯ ತಂದುಕೊಡುವುದರ ಜತೆಗೆ ಬಾಂಗ್ಲಾದೇಶ ಉದಯಕ್ಕೂ ಕಾರಣರಾದರು. ದೇಶದ ಏಕತೆ ಮತ್ತು ಸಮಗ್ರತೆಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಮಹಾನ್ ನಾಯಕಿ ಇಂದಿರಾ ಗಾಂಧಿ. ಇನ್ನೂ ಹಲವು ವರ್ಷ ದೇಶಕ್ಕೆ ನಾಯಕತ್ವ ನೀಡಬೇಕಿದ್ದ ಅವರನ್ನು ಅಂಗರಕ್ಷಕರ ಗುಂಡಿಗೆ ಬಲಿಯಾಗುವಂತೆ ಮಾಡಲಾಯಿತು ಎಂದು ಸ್ಮರಿಸಿದರು.
ಇಂದಿರಾ ಗಾಂಧಿ ಅವರ ಹೆಸರಿನಲ್ಲಿಯೇ ಕಾಂಗ್ರೆಸ್ ಪಕ್ಷ ಹಲವು ಚುನಾವಣೆಗಳನ್ನು ಎದುರಿಸಿದ ಇತಿಹಾಸವಿದೆ. ಪ್ರಸ್ತುತ ಜಾತಿ, ಧರ್ಮದ ಹೆಸರಿನಲ್ಲಿ ರಾಜಕೀಯ ನಡೆಯುತ್ತಿರುವ ಸಂದರ್ಭದಲ್ಲಿ ಅವರ ಜಾತ್ಯತೀತ, ಜನಪರ ಚಿಂತನೆಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಕಾಂಗ್ರೆಸ್ ಕಾರ್ಯಕರ್ತರು ಅವರ ಹೆಜ್ಜೆಗುರುತುಗಳನ್ನು ಅನುಸರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಅಫ್ಸರ್, ಹಿರಿಯ ಮುಖಂಡ ಬೆಳಗಾನಹಳ್ಳಿ ಮುನಿವೆಂಕಟಪ್ಪ, ಪರಿಶಿಷ್ಟ ಪಂಗಡ ಜಿಲ್ಲಾ ಘಟಕದ ಅಧ್ಯಕ್ಷ ಎನ್. ಅಂಬರೀಶ್, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ವೈ. ಶಿವಕುಮಾರ್ ಕೋಮುಲ್ ನಿರ್ದೇಶಕ ಷಂಷೀರ್, ಮುಖಂಡರಾದ ಮದನಹಳ್ಳಿ ಮಹೇಶ್, ರಾಜಕಲ್ಲಹಳ್ಳಿ ಶ್ರೀನಿವಾಸ್, ಖಾದ್ರಿಪುರ ಬಾಬು, ಉಮಾಶಂಕರ್, ನದೀಂ, ಜಾಲಿಬಾನು, ಚಿನ್ನಾಪುರ ನಾನಾರಾಯಣಸ್ವಾಮಿ, ಜನ್ನಘಟ್ಟ ನವೀನ್, ಜಾಲಿಬಾನು, ಗೋವಿಂದರಾಜು, ವಾಸು, ಮುನಿವೆಂಕಟಪ್ಪ, ಸೇರಿದಂತೆ ಕಾರ್ಯಕರ್ತರು ಭಾಗಿಯಾಗಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್