
ಕೋಲಾರ, 31 ಅಕ್ಟೋಬರ್ (ಹಿ.ಸ) :
ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಮಂಜೂರಾಗಿರುವ ನೂತನ ಪೊಲೀಸ್ ಠಾಣೆಯನ್ನು ಕೂಡಲೇ ಪ್ರಾರಂಭಿಸಬೇಕು. ಇಲ್ಲವಾದಲ್ಲಿ ನರಸಾಪುರದಲ್ಲಿ ಅನಿರ್ದಿಷ್ಟಾವಧಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಎಚ್ಚರಿಕೆ ನೀಡಿದೆ.
ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ನರಸಾಪುರಕ್ಕೆ ನೂತನ ಪೊಲೀಸ್ ಠಾಣೆ ಮಂಜೂರು ಮಾಡಲಾಗಿತ್ತು. ಆದರೆ ಇದುವರೆಗೂ ಠಾಣೆ ಆರಂಭಿಸದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ರೈತ ಸಂಘದ ಮುಖಂಡರು, ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್ ಅವರಿಗೆ ಮನವಿ ಸಲ್ಲಿಸಿ ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ನರಸಾಪುರ ಮತ್ತು ವೇಮಗಲ್ ಕೈಗಾರಿಕಾ ಪ್ರದೇಶಗಳು ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಹೊರರಾಜ್ಯ ಹಾಗೂ ವಿದೇಶಗಳಿಂದ ಸಾವಿರಾರು ಜನರು ಉದ್ಯೋಗ ಅರಸಿ ಬರುತ್ತಿದ್ದಾರೆ. ಕೈಗಾರಿಕೆಗಳಲ್ಲಿ ಸಾವಿರಾರು ಕಾರ್ಮಿಕರು ಮೂರು ಪಾಳಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಹಿಳಾ ಕಾರ್ಮಿಕರೂ ರಾತ್ರಿ ಸೇರಿದಂತೆ ಮೂರು ಪಾಳಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಈ ಭಾಗದಲ್ಲಿ ಪೊಲೀಸ್ ಭದ್ರತೆಯ ಅಗತ್ಯ ಹೆಚ್ಚಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ವೇಮಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 107 ಗ್ರಾಮಗಳಿದ್ದು, ಪ್ರತಿದಿನ ನೂರಾರು ಜನರು ತಮ್ಮ ಕೆಲಸ ಕಾರ್ಯಗಳಿಗಾಗಿ ಠಾಣೆಗೆ ಭೇಟಿ ನೀಡುತ್ತಿದ್ದಾರೆ. ಆದರೆ ಠಾಣೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಗೃಹರಕ್ಷಕ ದಳದ ಸಿಬ್ಬಂದಿಯನ್ನೂ ನಿಯೋಜಿಸಿದ್ದರೂ ಕೆಲಸದ ಒತ್ತಡ ಕಡಿಮೆಯಾಗಿಲ್ಲ ಎಂದು ಸಂಘದ ಮುಖಂಡರು ಗಮನ ಸೆಳೆದಿದ್ದಾರೆ.
ಇದಲ್ಲದೆ, ಕೈಗಾರಿಕಾ ಪ್ರದೇಶಗಳಲ್ಲಿ ಕೊಲೆ, ದರೋಡೆ, ಕಳ್ಳತನ, ಗಾಂಜಾ ಮಾರಾಟ, ಮಟ್ಕಾ, ಜೂಜಾಟ, ಬೈಕ್ ಸಾಹಸ ಸೇರಿದಂತೆ ವಿವಿಧ ಕಾನೂನುಬಾಹಿರ ಚಟುವಟಿಕೆಗಳು ಹೆಚ್ಚಾಗುತ್ತಿವೆ. ವಾಹನ ಸವಾರರಿಗೆ ಕಿರಿಕಿರಿ ಉಂಟುಮಾಡುವ ಘಟನೆಗಳೂ ನಡೆಯುತ್ತಿವೆ. ಬೆಂಗಳೂರು ನಗರಕ್ಕೆ ಸಮೀಪದಲ್ಲಿರುವ ಈ ಪ್ರದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವುದು ಅನಿವಾರ್ಯವಾಗಿದೆ ಎಂದು ರೈತ ಸಂಘ ಒತ್ತಾಯಿಸಿದೆ.
ನರಸಾಪುರ ಪೊಲೀಸ್ ಠಾಣೆ ಆರಂಭಿಸಬೇಕೆಂಬುದು ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದೆ. ಪ್ರಸ್ತುತ ನರಸಾಪುರ ಹೊರ ಪೊಲೀಸ್ ಠಾಣೆಯ ಮುಂಭಾಗದಲ್ಲಿರುವ ಖಾಲಿ ಸರ್ಕಾರಿ ಹಳೆಯ ಆಸ್ಪತ್ರೆ ಕಟ್ಟಡದಲ್ಲಿ ತಾತ್ಕಾಲಿಕವಾಗಿ ನೂತನ ಪೊಲೀಸ್ ಠಾಣೆ ಆರಂಭಿಸಬಹುದು. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಹೊಸ ಕಟ್ಟಡ ನಿರ್ಮಾಣವಾಗುವವರೆಗೆ ಇದೇ ಕಟ್ಟಡದಲ್ಲಿ ಠಾಣೆ ಕಾರ್ಯಾರಂಭ ಮಾಡುವಂತೆ ರೈತ ಸಂಘದ ಮುಖಂಡರು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಯುವ ಘಟಕದ ಅಧ್ಯಕ್ಷ ಕಲ್ವಮಂಜಲಿ ರಾಮು, ಶಿವಣ್ಣ, ಕೊತ್ತಮೀರಿ ಮಂಜುನಾಥ್, ಜಿಲ್ಲಾಧ್ಯಕ್ಷ ಜಿ. ನಾರಾಯಣಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಶೆಟ್ಟಿ, ಎಲ್.ಎನ್. ಬಾಬು, ಜೋಡಿಕೃಷ್ಣಾಪುರ ಮಂಜಪ್ಪ, ರಾಮಸಂದ್ರ ಅನಂತ, ಮಡಿವಾಳ ಮುನಿರಾಜು, ವಿಶ್ವನಗರ ಶಬೀರ್, ಕ್ಯಾಲನೂರು ಕ್ರಾಸ್ ಮುನಿಯಪ್ಪ, ಸುಳಿದೇನಹಳ್ಳಿ ವೆಂಕಟರಾಜು, ದೊಡ್ಡನಹಳ್ಳಿ ಕೃಷ್ಣಪ್ಪ, ತೇರಹಳ್ಳಿ ಚಂದ್ರಪ್ಪ, ದೊಡ್ಡ ಕುರುಬರಹಳ್ಳಿ ಶಂಕರೇಗೌಡ, ಎನ್. ಅನಿಲ್, ಆನಂದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್