
ಕೋಲಾರ, 31 ಅಕ್ಟೋಬರ್ (ಹಿ.ಸ.) : ಪ್ರಚಾರದ ಹಂಗಿಲ್ಲದೆ, ಗಡಿಭಾಗಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡ ಭಾಷೆ, ನೆಲ, ಜಲ ಹಾಗೂ ಸಂಸ್ಕೃತಿಗಾಗಿ ತೆರೆಮರೆಯಲ್ಲಿ ಶ್ರಮಿಸುತ್ತಿರುವ ನೈಜ ಕನ್ನಡದ ಕಲಿಗಳನ್ನು ಗುರುತಿಸಿ ಸನ್ಮಾನಿಸುತ್ತಿರುವ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯ ಅತ್ಯಂತ ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ಅಭಿಪ್ರಾಯಪಟ್ಟರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 'ಕನ್ನಡ ರಾಜ್ಯೋತ್ಸವ ಹಾಗೂ ಕನ್ನಡ ಪರಿಚಾರಕ ಪ್ರಶಸ್ತಿ ಪ್ರದಾನ' ಮಾಡಿ ಮಾತನಾಡಿದರು.
ಭಾಷೆ ಎಂಬುದು ಯಾವುದೇ ನಾಡು, ಸಂಸ್ಕೃತಿ ಹಾಗೂ ಜನರ ಉಸಿರು. ಭಾಷೆಯ ಆಧಾರದ ಮೇಲೆಯೇ ರಾಜ್ಯಗಳ ವಿಂಗಡಣೆಯಾದ ಇತಿಹಾಸವನ್ನು ಸ್ಮರಿಸಿದ ಅವರು, ಇಂತಹ ಭಾಷೆಯ ಉಳಿವಿಗಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಎಲೆಮರೆಯ ಕಾಯಿಗಳನ್ನು ಗುರುತಿಸುವ ಕಾರ್ಯ ನಿಜಕ್ಕೂ ಅರ್ಥಪೂರ್ಣ. ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ಅವರು ಆಶಿಸಿದರು.
ಸಮಾರಂಭದಲ್ಲಿ ಬಿಇಎಂಎಲ್ ನಲ್ಲಿ ೩೮ ವರ್ಷಗಳ ಸುದೀರ್ಘ ಸೇವೆ ಸಲ್ಲಿಸುವ ಮೂಲಕ ಕಾರ್ಮಿಕ ವಲಯದಲ್ಲಿ ಕನ್ನಡದ ಕಟ್ಟಾಳುವಾಗಿ ದುಡಿದ ರಂಗರಾಮಯ್ಯ ಹಾಗೂ ಗಡಿಭಾಗದಲ್ಲಿ ಅನ್ಯಭಾಷೆಗಳ ಪ್ರಭಾವದ ನಡುವೆಯೂ ಕನ್ನಡ ಚಲನಚಿತ್ರಗಳ ಪ್ರದರ್ಶನ ಮಾಡುವ ಮೂಲಕ ನಾಡು-ನುಡಿಯ ಜಾಗೃತಿ ಮೂಡಿಸುತ್ತಿರುವ ಸುನೀಲ್ ಕುಮಾರ್ ಅವರಿಗೆ 'ಕನ್ನಡ ಪರಿಚಾರಕ' ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್, ಖಜಾಂಚಿ ಬಿ. ಎಲ್. ರಾಜೇಂದ್ರ ಸಿಂಹ, ಕಾರ್ಯನಿರತ ಪತ್ರಕರ್ತರ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಮುನಿರಾಜು, ಗ್ರಾಮೀಣ ಪತ್ರಕರ್ತರ ಬಸ್ ಪಾಸ್ ಯೋಜನೆಯ ಸಮಿತಿ ಸದಸ್ಯ ಹೆಚ್ ಎಲ್. ಸುರೇಶ್, ವಾರ್ತಾ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು ಸೇರಿದಂತೆ ಸಂಘದ ಪದಾಧಿಕಾರಿಗಳು, ಹಿರಿಯ ಪತ್ರಕರ್ತರು ಹಾಗೂ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಗ್ರಾಮೀಣ ಪತ್ರಕರ್ತರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್