
ಕೋಲಾರ, 31 ಅಕ್ಟೋಬರ್ (ಹಿ.ಸ.) : ಗ್ರಾಮೀಣ ಭಾಗದ ಪತ್ರಕರ್ತರ ಸೇವೆಯನ್ನು ಗುರುತಿಸಿ ಸರ್ಕಾರವು ಬಸ್ ಪಾಸ್ ವಿತರಿಸುತ್ತಿರುವುದು ಸಮಾಜ ಹಾಗೂ ಪತ್ರಿಕಾರಂಗಕ್ಕೆ ನೀಡುತ್ತಿರುವ ಒಳ್ಳೆಯ ಸಂದೇಶವಾಗಿದೆ. ಜಿಲ್ಲೆಯ ಗ್ರಾಮೀಣ ಪತ್ರಕರ್ತರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ತಮ್ಮ ವೃತ್ತಿಜೀವನದಲ್ಲಿ ಇನ್ನಷ್ಟು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್ ಕರೆ ನೀಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಆಯೋಜಿಸಿದ್ದ ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ವಿತರಿಸಿ ಮಾತನಾಡಿದರು. ಪತ್ರಕರ್ತರಿಗೆ ಬಸ್ ಪಾಸ್ ನೀಡುತ್ತಿರುವುದು ಸರ್ಕಾರದ ಒಂದು ಆಶಾದಾಯಕ ಹಾಗೂ ಉಪಯುಕ್ತ ಯೋಜನೆಯಾಗಿz. ಪ್ರತಿಯೊಬ್ಬ ಅರ್ಹ ಪತ್ರಕರ್ತರು ಈ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ರಾಜ್ಯ ಗ್ರಾಮೀಣ ಬಸ್ ಪಾಸ್ ಸಮಿತಿ ಸದಸ್ಯ ಎಚ್.ಎಲ್.ಸುರೇಶ್ ಮಾತನಾಡಿ ಪ್ರಸ್ತುತ ಜಿಲ್ಲಾ ಮಟ್ಟದಲ್ಲಿ ಪತ್ರಕರ್ತರಿಗೆ ನೀಡಲಾಗುತ್ತಿರುವ ಬಸ್ ಪಾಸ್ ಸೌಲಭ್ಯವನ್ನು ೧೦೦ ಕಿಲೋಮೀಟರ್ ವ್ಯಾಪ್ತಿಗೆ ವಿಸ್ತರಿಸಲು ರಾಜ್ಯಮಟ್ಟದ ಸಮಿತಿಯು ಸತತ ಪ್ರಯತ್ನ ನಡೆಸುತ್ತಿದೆ. ಇದಕ್ಕೆ ಸರ್ಕಾರದ ಮತ್ತು ವಾರ್ತಾ ಇಲಾಖೆಯ ಕಡೆಯಿಂದ ಸಕಾರಾತ್ಮಕ ಸ್ಪಂದನೆ ದೊರೆತಿದ್ದು, ಶೀಘ್ರದಲ್ಲೇ ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ನಾನು ಇದೇ ಜಿಲ್ಲೆಯವನಾಗಿರುವ ಕಾರಣ, ಕೋಲಾರ ಜಿಲ್ಲೆಯ ಪ್ರತಿಯೊಬ್ಬ ಗ್ರಾಮೀಣ ಪತ್ರಕರ್ತನಿಗೂ ಈ ಸೌಲಭ್ಯ ತಲುಪಿಸುವ ಜವಾಬ್ದಾರಿ ನನ್ನದಾಗಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್