ಬೆಂಗಳೂರಿನಲ್ಲಿ ಮಿನಿ ಎಲೆಕ್ಟ್ರಿಕ್ ಬೈಕ್ಗಳ ಹಾವಳಿ: ಪಾದಚಾರಿಗಳ ಸುರಕ್ಷತೆಗೆ ಆತಂಕ
ಬೆಂಗಳೂರು, 19 ಅಕ್ಟೋಬರ್ (ಹಿ.ಸ.): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಿನಿ ಎಲೆಕ್ಟ್ರಿಕ್ ಬೈಕ್ಗಳ ಬಳಕೆ ಹೆಚ್ಚಾಗುತ್ತಿದ್ದು, ಅವುಗಳ ಸವಾರರು ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಪಾದಚಾರಿಗಳ ಸುರಕ್ಷತೆಗೆ ಗಂಭೀರ ಸವಾಲಾಗಿ ಪರಿಣಮಿಸಿದೆ. ಸಿಗ್ನಲ್ ಜಂಪ್, ಫುಟ್ಪಾತ್ ಮೇಲೆ ಸವಾರಿ, ನೋ-ಎಂಟ್
Bengaluru-Mini-Electric-Bikes-Traffic-Rules-Pedestrian-Safety-Concerns


ಬೆಂಗಳೂರು, 19 ಅಕ್ಟೋಬರ್ (ಹಿ.ಸ.):

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಿನಿ ಎಲೆಕ್ಟ್ರಿಕ್ ಬೈಕ್ಗಳ ಬಳಕೆ ಹೆಚ್ಚಾಗುತ್ತಿದ್ದು, ಅವುಗಳ ಸವಾರರು ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಪಾದಚಾರಿಗಳ ಸುರಕ್ಷತೆಗೆ ಗಂಭೀರ ಸವಾಲಾಗಿ ಪರಿಣಮಿಸಿದೆ.

ಸಿಗ್ನಲ್ ಜಂಪ್, ಫುಟ್ಪಾತ್ ಮೇಲೆ ಸವಾರಿ, ನೋ-ಎಂಟ್ರಿ ರಸ್ತೆಯಲ್ಲಿ ಸಂಚಾರ ಹಾಗೂ ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸುವಂತಹ ಘಟನೆಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ.

ಪರಿಸರ ಸ್ನೇಹಿ ವಾಹನಗಳೆಂಬ ಕಾರಣಕ್ಕೆ ಜನಪ್ರಿಯತೆ ಗಳಿಸುತ್ತಿರುವ ಮಿನಿ ಎಲೆಕ್ಟ್ರಿಕ್ ಬೈಕ್ಗಳು, ಕೆಲ ಸವಾರರ ನಿರ್ಲಕ್ಷ್ಯದಿಂದ ಅಪಾಯಕಾರಿಯಾಗಿ ಪರಿಣಮಿಸುತ್ತಿವೆ. ಪಾದಚಾರಿಗಳು ಸಂಚರಿಸಬೇಕಾದ ಫುಟ್ಪಾತ್ಗಳಲ್ಲಿಯೇ ಈ ವಾಹನಗಳನ್ನು ಚಲಾಯಿಸುವುದರಿಂದ ವೃದ್ಧರು, ಮಕ್ಕಳು ಸೇರಿದಂತೆ ಸಾರ್ವಜನಿಕರ ಜೀವಕ್ಕೆ ಅಪಾಯ ಎದುರಾಗಿದೆ. ಇಂತಹ ಉಲ್ಲಂಘನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕಾನೂನಿನಲ್ಲಿರುವ ಮಿತಿಗಳು ಸವಾಲಾಗಿವೆ.

ಕಾನೂನಿನ ಮಿತಿಯೇ ಸವಾರರಿಗೆ ವರದಾನ?

250 ವ್ಯಾಟ್ಗಿಂತ ಕಡಿಮೆ ಮೋಟಾರ್ ಸಾಮರ್ಥ್ಯ ಹೊಂದಿರುವ ಮತ್ತು ಗಂಟೆಗೆ ಗರಿಷ್ಠ 25 ಕಿ.ಮೀ. ವೇಗದ ಮಿತಿಯೊಳಗಿರುವ ಕೆಲವು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು, ನಿಗದಿತ ತಾಂತ್ರಿಕ ಷರತ್ತುಗಳನ್ನು ಪೂರೈಸಿದರೆ ಮೋಟಾರು ವಾಹನ ಕಾಯ್ದೆಯ ನೋಂದಣಿ ಮತ್ತು ಪರವಾನಗಿ ನಿಯಮಗಳಿಂದ ವಿನಾಯಿತಿ ಪಡೆಯುತ್ತವೆ. ಈ ಕಾನೂನು ಚೌಕಟ್ಟಿನ ಕಾರಣದಿಂದ ಇಂತಹ ವಾಹನಗಳ ಸಂಚಾರ ನಿಯಂತ್ರಣ ಮತ್ತು ನಿಯಮ ಉಲ್ಲಂಘನೆಗಳ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರದಲ್ಲಿ ಗೊಂದಲ ಎದುರಾಗುತ್ತಿದೆ.

ಆದರೆ, ಈ ವಿನಾಯಿತಿಯನ್ನು ಸಂಚಾರ ನಿಯಮಗಳನ್ನು ಉಲ್ಲಂಘಿಸಲು ಮುಕ್ತ ಅವಕಾಶವೆಂದು ಪರಿಗಣಿಸಲಾಗದು. ಪಾದಚಾರಿಗಳ ಸುರಕ್ಷತೆಗೆ ಧಕ್ಕೆ ಉಂಟುಮಾಡುವ ರೀತಿಯಲ್ಲಿ ವಾಹನ ಚಲಾಯಿಸುವುದನ್ನು ತಡೆಯಲು ಸೂಕ್ತ ಕಾನೂನು ಕ್ರಮಗಳು ಅಗತ್ಯ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಜಾಗೃತಿಗೆ ಮಾತ್ರ ಸೀಮಿತವಾಗಿರುವ ಕ್ರಮ

ಈ ಕುರಿತು ಪ್ರತಿಕ್ರಿಯಿಸಿರುವ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ಅವರು, ಮೋಟಾರು ವಾಹನ ಕಾಯ್ದೆಯಡಿ ಇಂತಹ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಲು ಸದ್ಯ ಅವಕಾಶವಿಲ್ಲದ ಹಿನ್ನೆಲೆಯಲ್ಲಿ ಸವಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಅಪಘಾತ ಸಂಭವಿಸಿದರೆ ಹೊಣೆ ಯಾರದ್ದು?

ಮಿನಿ ಎಲೆಕ್ಟ್ರಿಕ್ ಬೈಕ್ಗಳು ಸಾಮಾನ್ಯ ದ್ವಿಚಕ್ರ ವಾಹನಗಳ ವೇಗದಲ್ಲಿಯೇ ಸಂಚರಿಸುವ ಸಂದರ್ಭಗಳಲ್ಲಿ ಅಪಘಾತಗಳ ಆತಂಕವೂ ಹೆಚ್ಚಿದೆ. ಇಂತಹ ವಾಹನಗಳಿಂದ ಪಾದಚಾರಿಗಳಿಗೆ ಗಾಯವಾದರೆ ಅಥವಾ ಜೀವಹಾನಿ ಸಂಭವಿಸಿದರೆ ಹೊಣೆಗಾರಿಕೆ ಯಾರದ್ದು ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಎತ್ತುತ್ತಿದ್ದಾರೆ.

ವಾಹನಗಳ ತಾಂತ್ರಿಕ ಸಾಮರ್ಥ್ಯ ಮತ್ತು ವೇಗದ ಮಿತಿಯನ್ನು ಮಾತ್ರ ಆಧರಿಸದೆ, ಪಾದಚಾರಿಗಳ ಸುರಕ್ಷತೆ, ಫುಟ್ಪಾತ್ ಬಳಕೆ ಹಾಗೂ ಸಂಚಾರ ನಿಯಮಗಳ ಪಾಲನೆಯನ್ನೂ ಗಮನದಲ್ಲಿಟ್ಟುಕೊಂಡು ಸರ್ಕಾರ ಸೂಕ್ತ ಮಾರ್ಗಸೂಚಿಗಳನ್ನು ರೂಪಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.

ಕಾನೂನಿನಲ್ಲಿರುವ ಮಿತಿಗಳನ್ನು ಪರಿಶೀಲಿಸಿ, ನಿಯಮ ಉಲ್ಲಂಘಿಸುವವರ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಳ್ಳಲು ಅಗತ್ಯ ಬದಲಾವಣೆಗಳನ್ನು ತರಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande