ಪರಪ್ಪನ ಅಗ್ರಹಾರ ಜೈಲಿನಲ್ಲಿ ನಿಷೇಧಿತ ವಸ್ತುಗಳ ಕಳ್ಳಸಾಗಣೆ: ಎರಡು ಪ್ರತ್ಯೇಕ ಪ್ರಕರಣ ದಾಖಲು
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಿಷೇಧಿತ ವಸ್ತುಗಳ ಕಳ್ಳಸಾಗಣೆ ಪ್ರಕರಣಗಳು ಮತ್ತೆ ಬೆಳಕಿಗೆ ಬಂದಿವೆ. ಜೈಲಿನೊಳಗೆ ₹11,500 ನಗದು ಸಾಗಿಸಲು ಯತ್ನಿಸಿದ ವಿಚಾರಣಾಧೀನ ಮಹಿಳಾ ಕೈದಿ ಸಿಕ್ಕಿಬಿದ್ದಿದ್ದು, ಮತ್ತೊಂದೆಡೆ ಕೈದಿಗಳ ಬ್ಯಾರಕ್ಗಳಲ್ಲಿ ಮೊಬೈಲ್ ಫೋನ್ಗಳು ಮತ್ತು ಸಿಮ್ ಕಾರ್ಡ್ಗಳು ಪತ್ತೆಯಾಗಿ
parappana-agrahara-jail-smuggling-cases-mobile-phones-sim-cards-cash-seized


ಬೆಂಗಳೂರು, 19 ಅಕ್ಟೋಬರ್ (ಹಿ.ಸ.):

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಿಷೇಧಿತ ವಸ್ತುಗಳ ಕಳ್ಳಸಾಗಣೆ ಪ್ರಕರಣಗಳು ಮತ್ತೆ ಬೆಳಕಿಗೆ ಬಂದಿದ್ದು, ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಜೈಲಿನೊಳಗೆ ₹11,500 ನಗದು ಸಾಗಿಸಲು ಯತ್ನಿಸಿದ ವಿಚಾರಣಾಧೀನ ಮಹಿಳಾ ಕೈದಿ ಸಿಕ್ಕಿಬಿದ್ದಿದ್ದರೆ, ಮತ್ತೊಂದೆಡೆ ಇಬ್ಬರು ಸಜಾಬಂಧಿಗಳ ಬ್ಯಾರಕ್ಗಳಲ್ಲಿ ಎರಡು ಮೊಬೈಲ್ ಫೋನ್ಗಳು ಹಾಗೂ ಮೂರು ಸಿಮ್ ಕಾರ್ಡ್ಗಳು ಪತ್ತೆಯಾಗಿವೆ. ಈ ಘಟನೆಗಳು ಜೈಲಿನ ಭದ್ರತಾ ವ್ಯವಸ್ಥೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ.

ತಪಾಸಣೆ ವೇಳೆ ಮಹಿಳಾ ಕೈದಿ ಸಿಕ್ಕಿಬಿದ್ದಳು

ವಿಚಾರಣಾಧೀನ ವಿದೇಶಿ ಮಹಿಳಾ ಕೈದಿ ಆಗ್ನೆಸ್ ನಂಬಲಿರಾವ್ ಅವರನ್ನು ಅಕ್ಟೋಬರ್ 12ರಂದು ನ್ಯಾಯಾಲಯದ ವಿಚಾರಣೆಗೆ ಕರೆದೊಯ್ಯಲಾಗಿತ್ತು. ವಿಚಾರಣೆ ಮುಗಿಸಿ ಮರಳಿ ಜೈಲಿಗೆ ಕರೆತಂದಾಗ, ಮುಖ್ಯ ದ್ವಾರದಲ್ಲಿ ಸಿಬ್ಬಂದಿ ನಡೆಸಿದ ಕಡ್ಡಾಯ ತಪಾಸಣೆ ವೇಳೆ ಆಕೆಯ ಬಳಿ ₹11,500 ನಗದು ಪತ್ತೆಯಾಗಿದೆ.

ಜೈಲಿನೊಳಗೆ ಹಣ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದ್ದರೂ, ಹಣವನ್ನು ಯಾರ ಗಮನಕ್ಕೂ ಬಾರದಂತೆ ಬಚ್ಚಿಟ್ಟುಕೊಂಡು ಒಳಗೆ ಕೊಂಡೊಯ್ಯಲು ಮಹಿಳೆ ಯತ್ನಿಸಿದ್ದಳು ಎನ್ನಲಾಗಿದೆ. ತಪಾಸಣೆ ವೇಳೆ ಹಣ ಪತ್ತೆಯಾದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬ್ಯಾರಕ್ಗಳಲ್ಲಿ ಮೊಬೈಲ್, ಸಿಮ್ ಕಾರ್ಡ್ ಪತ್ತೆ

ಮತ್ತೊಂದು ಪ್ರಕರಣದಲ್ಲಿ ಕೇಂದ್ರ ಕಾರಾಗೃಹದ ಅಧೀಕ್ಷಕ ಬಿ.ಎಂ. ಕೊಟ್ರೇಶ್ ನೀಡಿದ ದೂರಿನ ಮೇರೆಗೆ ಇಬ್ಬರು ಸಜಾಬಂಧಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಾಲತೇಶ್ ಎಂಬ ಸಜಾಬಂಧಿ ಇರುವ ಟವರ್-2ರ ಬ್ಯಾರಕ್ನ ನಾಲ್ಕನೇ ಕೊಠಡಿಯಲ್ಲಿ ಒಂದು ಮೊಬೈಲ್ ಫೋನ್ ಮತ್ತು ಸಿಮ್ ಕಾರ್ಡ್ ಪತ್ತೆಯಾಗಿದೆ.

ಇದೇ ವೇಳೆ ಸಿ ಬ್ಯಾರಕ್ನ ಐದನೇ ಕೊಠಡಿಯಲ್ಲಿ ಅನಿರೀಕ್ಷಿತ ತಪಾಸಣೆ ನಡೆಸಿದಾಗ, ಮಹಮ್ಮದ್ ನವಾಜ್ ಎಂಬಾತ ಟೋಪಿಯೊಳಗೆ ಬಚ್ಚಿಟ್ಟಿದ್ದ ಮೂರು ಸಿಮ್ ಕಾರ್ಡ್ಗಳು ಹಾಗೂ ಒಂದು ಮೊಬೈಲ್ ಫೋನ್ ಪತ್ತೆಯಾಗಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ನಿಷೇಧಿತ ವಸ್ತುಗಳು ಜೈಲಿನೊಳಗೆ ಬಂದಿದ್ದೇಗೆ?

ಜೈಲಿನೊಳಗೆ ಮೊಬೈಲ್ ಫೋನ್ಗಳು, ಸಿಮ್ ಕಾರ್ಡ್ಗಳು ಹಾಗೂ ನಗದು ಹಣ ಪ್ರವೇಶಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ನಿಷೇಧಿತ ವಸ್ತುಗಳನ್ನು ಜೈಲಿನೊಳಗೆ ತಂದವರು ಯಾರು? ಅವುಗಳನ್ನು ಕೈದಿಗಳಿಗೆ ಪೂರೈಸಿದವರು ಯಾರು? ಭದ್ರತಾ ತಪಾಸಣೆಯ ನಡುವೆಯೂ ಇಂತಹ ವಸ್ತುಗಳು ಒಳಗೆ ಪ್ರವೇಶಿಸಲು ಹೇಗೆ ಸಾಧ್ಯವಾಯಿತು? ಎಂಬ ಪ್ರಶ್ನೆಗಳು ಉದ್ಭವಿಸಿವೆ.

ಈ ಕುರಿತು ತನಿಖೆ ನಡೆಸಿ, ನಿಷೇಧಿತ ವಸ್ತುಗಳ ಪೂರೈಕೆಯ ಮೂಲವನ್ನು ಪತ್ತೆಹಚ್ಚಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಜೈಲು ಅಧಿಕಾರಿಗಳು ದೂರಿನಲ್ಲಿ ಮನವಿ ಮಾಡಿದ್ದಾರೆ.

ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದು, ತನಿಖೆಯ ಬಳಿಕ ಕಳ್ಳಸಾಗಣೆಯ ಹಿಂದಿನ ಜಾಲದ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande