
ಬೆಂಗಳೂರು, 19 ಅಕ್ಟೋಬರ್ (ಹಿ.ಸ.):
ಪತ್ನಿ ತನ್ನ ಸೋದರ ಸಂಬಂಧಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ವಿಚಾರ ತಿಳಿದು ಮನನೊಂದ ಪತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ನೆರಿಗಾ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಮುನಿಕೃಷ್ಣ (35) ಎಂದು ಗುರುತಿಸಲಾಗಿದೆ. ಆಟೊ ಚಾಲಕರಾಗಿ ಕೆಲಸ ಮಾಡುತ್ತಿದ್ದ ಅವರು, ಸುಮಾರು 10 ವರ್ಷಗಳ ಹಿಂದೆ ನಯನ ಎಂಬುವವರನ್ನು ವಿವಾಹವಾಗಿದ್ದರು. ದಂಪತಿಗೆ ಆರು ವರ್ಷದ ಮಗನಿದ್ದು, ನಯನ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದರು ಎಂದು ತಿಳಿದುಬಂದಿದೆ.
ಮುನಿಕೃಷ್ಣ ಅವರ ಸಂಬಂಧಿ ಕುಮಾರ ಕ್ಯಾಬ್ ಚಾಲಕರಾಗಿ ಕೆಲಸ ಮಾಡುತ್ತಿದ್ದು, ನಯನ ಅವರನ್ನು ಕಾರಿನಲ್ಲಿ ಕೆಲಸಕ್ಕೆ ಕರೆದುಕೊಂಡು ಹೋಗಿ ಬರುತ್ತಿದ್ದ ಎನ್ನಲಾಗಿದೆ. ಈ ನಡುವೆ ಕಳೆದ ಎರಡು ವರ್ಷಗಳಿಂದ ನಯನ ಮತ್ತು ಕುಮಾರ ನಡುವೆ ಅನೈತಿಕ ಸಂಬಂಧವಿತ್ತು ಎಂಬ ಆರೋಪ ಕೇಳಿಬಂದಿದೆ.
ಕೆಲವು ದಿನಗಳ ಹಿಂದೆ ಕುಮಾರ, ಮುನಿಕೃಷ್ಣ ಅವರಿಗೆ ವಾಟ್ಸ್ಆ್ಯಪ್ ಮೂಲಕ ಇಬ್ಬರೂ ಒಟ್ಟಿಗಿರುವ ಫೋಟೊಗಳು, ವಿಡಿಯೊಗಳು ಹಾಗೂ ಚಾಟ್ಗಳನ್ನು ಕಳುಹಿಸಿದ್ದ ಎನ್ನಲಾಗಿದೆ. ಅಲ್ಲದೆ, ನಯನ ಅವರ ಹೊಟ್ಟೆಯಲ್ಲಿರುವ ಮಗು ತನ್ನದು ಎಂದು ಸಂದೇಶ ಕಳುಹಿಸಿದ್ದ ಎಂಬ ಆರೋಪವೂ ಇದೆ. ಈ ವಿಚಾರ ತಿಳಿದ ಬಳಿಕ ಮುನಿಕೃಷ್ಣ ಮತ್ತು ನಯನ ನಡುವೆ ಜಗಳವಾಗಿದ್ದು, ನಯನ ತವರು ಮನೆಗೆ ತೆರಳಿದ್ದರು ಎಂದು ಮೂಲಗಳು ತಿಳಿಸಿವೆ.
ಇದಾದ ಬಳಿಕವೂ ಕುಮಾರ ಮುನಿಕೃಷ್ಣ ಅವರನ್ನು ಹೀಯಾಳಿಸಿ, ಸಾರ್ವಜನಿಕವಾಗಿ ಅವಮಾನಿಸುತ್ತಿದ್ದ ಎನ್ನಲಾಗಿದೆ. ಇದರಿಂದ ತೀವ್ರವಾಗಿ ಮನನೊಂದಿದ್ದ ಮುನಿಕೃಷ್ಣ, ಆತ್ಮಹತ್ಯೆ ಮಾಡಿಕೊಳ್ಳುವ ಹಿಂದಿನ ದಿನ ತಮ್ಮ ಸಹೋದರನಿಗೆ ಕರೆ ಮಾಡಿ ನಡೆದ ವಿಚಾರವನ್ನು ತಿಳಿಸಿದ್ದರು. ಮರುದಿನ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಮುನಿಕೃಷ್ಣ ಅವರ ಸಾವಿಗೆ ನಯನ ಮತ್ತು ಕುಮಾರ ಕಾರಣರಾಗಿದ್ದಾರೆ ಎಂದು ಆರೋಪಿಸಿರುವ ಕುಟುಂಬಸ್ಥರು, ಇಬ್ಬರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಆರೋಪಗಳ ಕುರಿತು ಪೊಲೀಸರ ತನಿಖೆಯಿಂದ ಹೆಚ್ಚಿನ ಮಾಹಿತಿ ಹೊರಬರಬೇಕಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R