ಬೆಂಗಳೂರು ವಿಮಾನ ನಿಲ್ದಾಣದಲ್ಲಿ ದಸರಾ ಸಂಭ್ರಮ: ರಂಗುರಂಗಿನ ರಂಗೋಲಿಗೆ ಪ್ರಯಾಣಿಕರ ಮೆಚ್ಚುಗೆ
ದಸರಾ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಹಿಳಾ ಸಿಬ್ಬಂದಿಗಾಗಿ ವಿಶೇಷ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದ್ದು, ವಿಮಾನ ನಿಲ್ದಾಣದ ಆವರಣದಲ್ಲಿ ಬಿಡಿಸಲಾದ ಆಕರ್ಷಕ ಕಲಾಕೃತಿಗಳು ಪ್ರಯಾಣಿಕರ ಗಮನ ಸೆಳೆಯುತ್ತಿವೆ.
BLR Airport Dasara Rangoli


ಬೆಂಗಳೂರು, 19 ಅಕ್ಟೋಬರ್ (ಹಿ.ಸ.):

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಸರಾ ಸಂಭ್ರಮ ಕಳೆಗಟ್ಟಿದೆ. ನವರಾತ್ರಿಯ 9 ದಿನಗಳ ಕಾಲ ಒಂದೊಂದು ದಿನ ಒಂದೊಂದು ವಿಶೇಷ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುತ್ತಿರುವ ಕೆಐಎಬಿ ಇಂದು ತಮ್ಮ ಮಹಿಳಾ ಸಿಬ್ಬಂದಿಗೆ ವಿಶೇಷ ರಂಗೋಲಿ ಸ್ಪರ್ಧೆಯನ್ನ ಆಯೋಜನೆ ಮಾಡಿತ್ತು.

ಕೆಂಪೇಗೌಡ ಏರ್ಪೋರ್ಟ್ನ ಮಹಿಳಾ ಸಿಬ್ಬಂದಿ ದಿನದ 24 ಗಂಟೆ ಕೆಲಸದಲ್ಲೇ ಬ್ಯುಸಿಯಾಗಿರುತ್ತಾರೆ.

ಆದರೆ ಇಂದು ಮಾತ್ರ ಎಲ್ಲಾ ಕೆಲಸ ಕಾರ್ಯಗಳನ್ನು ಬಿಟ್ಟು ಸ್ಪರ್ಧೆಗಿಳಿದಿದ್ದರು. ಕಲರ್ ಕಲರ್ ರಂಗೋಲಿಯಲ್ಲಿ ಚಿತ್ತಾರ ಮೂಡಿಸಿದ್ದಾರೆ. ಮಹಿಳಾ ಸಿಬ್ಬಂದಿ ಕೈಚಳಕಕ್ಕೆ ಏರ್ಪೋರ್ಟ್ ಆಡಳಿತ ಮಂಡಳಿಯೇ ಅಚ್ಚರಿಗೊಂಡಿದೆ.

ನಾಡಿನಾದ್ಯಂತ ದಸರಾ ಹಬ್ಬದ ಸಂಭ್ರಮ ಮನೆಮಾಡಿರುವ ಬೆನ್ನಲ್ಲೇ, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ ಹಬ್ಬದ ವಾತಾವರಣ ಕಳೆಗಟ್ಟಿದೆ.

ವಿಮಾನ ನಿಲ್ದಾಣದಲ್ಲಿ ಬಿಡಿಸಲಾಗಿರುವ ಆಕರ್ಷಕ ರಂಗುರಂಗಿನ ರಂಗೋಲಿಗಳು ಪ್ರಯಾಣಿಕರ ಗಮನ ಸೆಳೆಯುತ್ತಿದ್ದು, ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿವೆ.

ದಸರಾ ಹಬ್ಬದ ಪ್ರಯುಕ್ತ ವಿಮಾನ ನಿಲ್ದಾಣದ ಆವರಣದಲ್ಲಿ ಸಾಂಪ್ರದಾಯಿಕ ಕಲೆಯ ಸೊಬಗನ್ನು ಬಿಂಬಿಸುವ ರಂಗೋಲಿಗಳನ್ನು ಬಿಡಿಸಲಾಗಿದೆ.

ವಿವಿಧ ಬಣ್ಣಗಳು ಹಾಗೂ ಕಲಾತ್ಮಕ ವಿನ್ಯಾಸಗಳಿಂದ ಕೂಡಿರುವ ರಂಗೋಲಿಗಳು ನಾಡಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುತ್ತಿವೆ.

ವಿಮಾನ ನಿಲ್ದಾಣಕ್ಕೆ ಆಗಮಿಸುವ ಹಾಗೂ ಅಲ್ಲಿಂದ ಪ್ರಯಾಣಿಸುವ ಪ್ರಯಾಣಿಕರು ಈ ಸುಂದರ ಕಲಾಕೃತಿಗಳನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಹಬ್ಬದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಸೃಷ್ಟಿಯಾಗಿರುವ ಈ ವಿಶೇಷ ವಾತಾವರಣವು ಪ್ರಯಾಣಿಕರಿಗೆ ಹಬ್ಬದ ಅನುಭವವನ್ನು ನೀಡುತ್ತಿದೆ.

ವಿಶೇಷವಾಗಿ ರಂಗೋಲಿಗಳ ಮುಂದೆ ನಿಂತು ಚಿತ್ರಗಳನ್ನು ಸೆರೆಹಿಡಿಯುವ ಮೂಲಕ ಅನೇಕರು ಈ ಸಂಭ್ರಮವನ್ನು ಸವಿಯುತ್ತಿದ್ದಾರೆ.

ನಾಡಿನ ಸಂಸ್ಕೃತಿ, ಸಂಪ್ರದಾಯ ಮತ್ತು ಹಬ್ಬಗಳ ವೈಭವವನ್ನು ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಕರಿಗೆ ಪರಿಚಯಿಸುವ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಜಂಬೂಸವಾರಿ, ಮೈಸೂರು ಅರಮನೆ, ಗಣೇಶ, ಗೋವು ಹೀಗೆ ಹಲವು ಬಣ್ಣಬಣ್ಣದ ರಂಗೋಲಿ ಬಿಡಿಸುವ ಮೂಲಕ ಏರ್ಪೋರ್ಟ್ ಮಹಿಳಾ ಸಿಬ್ಬಂದಿ ಎಲ್ಲರನ್ನು ಬೆರಗಾಗುವಂತೆ ಮಾಡಿದರು. ಇನ್ನು ಅತ್ಯುತ್ತಮವಾಗಿ ಮೂಡಿಬಂದ ರಂಗೋಲಿಗೆ ಏರ್ಪೋರ್ಟ್ ಆಡಳಿತ ಮಂಡಳಿ ಬಹುಮಾನವನ್ನು ನೀಡಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande