ಅಕ್ರಮವಾಗಿ ವೈದ್ಯಕೀಯ ತ್ಯಾಜ್ಯ ವಿಲೇವಾರಿ: ಅಲ್-ಶಿಫಾ ಪಾಲಿಕ್ಲಿನಿಕ್ಗೆ ₹15 ಸಾವಿರ ದಂಡ
ಬೆಂಗಳೂರಿನ ಮಂಗಮ್ಮನಪಾಳ್ಯ ಮುಖ್ಯರಸ್ತೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ವೈದ್ಯಕೀಯ ತ್ಯಾಜ್ಯ ಸುರಿದ ಆರೋಪದ ಹಿನ್ನೆಲೆಯಲ್ಲಿ ಅಲ್-ಶಿಫಾ ಪಾಲಿಕ್ಲಿನಿಕ್ಗೆ ಬೆಂಗಳೂರು ದಕ್ಷಿಣ ನಗರ ಪಾಲಿಕೆ ₹15 ಸಾವಿರ ದಂಡ ವಿಧಿಸಿದೆ. ನಿಯಮ ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಆಯುಕ್ತ ಕೆ.ಎನ್. ರ
al-shifa-polyclinic-fined-15000-for-illegal-medical-waste-dumping


ಬೆಂಗಳೂರು, 14 ಅಕ್ಟೋಬರ್ (ಹಿ.ಸ.):

ಸಾರ್ವಜನಿಕ ಸ್ಥಳದಲ್ಲಿ ವೈದ್ಯಕೀಯ ತ್ಯಾಜ್ಯ ಹಾಗೂ ಮಿಶ್ರ ಕಸವನ್ನು ಅಕ್ರಮವಾಗಿ ಸುರಿದ ಆರೋಪದ ಹಿನ್ನೆಲೆಯಲ್ಲಿ ಅಲ್-ಶಿಫಾ ಪಾಲಿಕ್ಲಿನಿಕ್ಗೆ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಅಧಿಕಾರಿಗಳು ₹15 ಸಾವಿರ ದಂಡ ವಿಧಿಸಿ, ಸ್ಥಳದಲ್ಲೇ ವಸೂಲಿ ಮಾಡಿದ್ದಾರೆ.

ಬಿಟಿಎಂ ಲೇಔಟ್ ವಿಭಾಗದ ಶ್ರೀನಿವಾಗಿಲು ಮತ್ತು ಮಂಗಮ್ಮನಪಾಳ್ಯ ಮುಖ್ಯರಸ್ತೆ ವ್ಯಾಪ್ತಿಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಔಷಧಗಳ ಪ್ಯಾಕೆಟ್ಗಳು, ವೈದ್ಯಕೀಯ ತ್ಯಾಜ್ಯ ಹಾಗೂ ಮಿಶ್ರ ಕಸವನ್ನು ಸಾರ್ವಜನಿಕ ಸ್ಥಳದಲ್ಲಿ ಸುರಿದಿರುವುದು ಪತ್ತೆಯಾಗಿದೆ.

ಸ್ಥಳದಲ್ಲಿ ದೊರೆತ ವೈದ್ಯಕೀಯ ಚೀಟಿಗಳು ಹಾಗೂ ದಾಖಲೆಗಳನ್ನು ಪರಿಶೀಲಿಸಿದಾಗ ತ್ಯಾಜ್ಯವು ಅಲ್-ಶಿಫಾ ಪಾಲಿಕ್ಲಿನಿಕ್ಗೆ ಸಂಬಂಧಿಸಿರುವುದು ತಿಳಿದುಬಂದಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು ಘನತ್ಯಾಜ್ಯ ನಿರ್ವಹಣಾ ನಿಯಮಗಳು ಹಾಗೂ ಬೃಹತ್ ತ್ಯಾಜ್ಯ ಉತ್ಪಾದಕರಿಗೆ ಸಂಬಂಧಿಸಿದ ನಿಯಮಗಳ ಉಲ್ಲಂಘನೆಗಾಗಿ ₹15 ಸಾವಿರ ದಂಡ ವಿಧಿಸಿ ವಸೂಲಿ ಮಾಡಿದ್ದಾರೆ. ಅಲ್ಲದೆ, ಕ್ಲಿನಿಕ್ನ ವೈದ್ಯರು ಮತ್ತು ಸಿಬ್ಬಂದಿಗೆ ವೈದ್ಯಕೀಯ ಹಾಗೂ ಘನತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಕುರಿತು ಜಾಗೃತಿ ಮೂಡಿಸಿ, ಅಧಿಕೃತ ಏಜೆನ್ಸಿಗಳ ಮೂಲಕವೇ ತ್ಯಾಜ್ಯ ವಿಲೇವಾರಿ ಮಾಡುವಂತೆ ಸೂಚಿಸಿದ್ದಾರೆ.

ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ: ಆಯುಕ್ತರ ಎಚ್ಚರಿಕೆ

ಈ ಕುರಿತು ಪ್ರತಿಕ್ರಿಯಿಸಿರುವ ಆಯುಕ್ತ ಕೆ.ಎನ್. ರಮೇಶ್, ಆಸ್ಪತ್ರೆಗಳು, ಕ್ಲಿನಿಕ್ಗಳು, ಪ್ರಯೋಗಾಲಯಗಳು ಹಾಗೂ ಇತರ ವಾಣಿಜ್ಯ ಸಂಸ್ಥೆಗಳು ಘನತ್ಯಾಜ್ಯ ನಿರ್ವಹಣೆ ಮತ್ತು ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಎಚ್ಚರಿಸಿದ್ದಾರೆ.

ನಗರದಲ್ಲಿ ನಿಯಮಿತ ತಪಾಸಣೆ ಮುಂದುವರಿಯಲಿದ್ದು, ನಿಯಮ ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಭಾರಿ ದಂಡ ಹಾಗೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಸಾರ್ವಜನಿಕ ಆರೋಗ್ಯದ ರಕ್ಷಣೆ ಮತ್ತು ನಗರದ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ವೈದ್ಯಕೀಯ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಸುರಿಯದೆ, ನಿಗದಿತ ನಿಯಮಗಳಂತೆ ವಿಲೇವಾರಿ ಮಾಡುವುದು ಪ್ರತಿಯೊಂದು ಸಂಸ್ಥೆಯ ಜವಾಬ್ದಾರಿಯಾಗಿದೆ ಎಂದು ಪಾಲಿಕೆ ತಿಳಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande