ಕಬ್ಬು ಬೆಳೆಗಾರರಿಗೆ ಎಸ್ಎಪಿ ದರ ತಕ್ಷಣ ನಿಗದಿಪಡಿಸಿ: ಬೊಮ್ಮಾಯಿ ಆಗ್ರಹ
ಹಾವೇರಿ, 14 ಅಕ್ಟೋಬರ್ (ಹಿ.ಸ.): ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಕೂಡಲೇ ಕಬ್ಬಿನ ವಿಶೇಷ ಪ್ರೋತ್ಸಾಹಕ ದರ (ಎಸ್‌ಎಪಿ) ನಿಗದಿಪಡಿಸಿ ಸಕ್ಕರೆ ಕಾರ್ಖಾನೆಗಳಿಗೆ ಆದೇಶ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ. ಹಾವೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೊಮ್ಮಾಯಿ


ಹಾವೇರಿ, 14 ಅಕ್ಟೋಬರ್ (ಹಿ.ಸ.):

ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಕೂಡಲೇ ಕಬ್ಬಿನ ವಿಶೇಷ ಪ್ರೋತ್ಸಾಹಕ ದರ (ಎಸ್‌ಎಪಿ) ನಿಗದಿಪಡಿಸಿ ಸಕ್ಕರೆ ಕಾರ್ಖಾನೆಗಳಿಗೆ ಆದೇಶ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.

ಹಾವೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿ ಕಬ್ಬಿನ ಬೆಲೆ ನಿಗದಿಗೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿನ ಬೇಡಿಕೆಗಳು ಸಮಂಜಸವಾಗಿವೆ. ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ದೊರಕಿಸಿಕೊಡುವಲ್ಲಿ ರಾಜ್ಯ ಸರ್ಕಾರದ ಪಾತ್ರ ಮಹತ್ವದ್ದಾಗಿದೆ. ಆದರೆ, ಈ ವಿಚಾರದಲ್ಲಿ ಸರ್ಕಾರ ತನ್ನ ಕರ್ತವ್ಯ ನಿರ್ವಹಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.

ದೇಶದ ಕಬ್ಬು ಬೆಳೆಯುವ 10ರಿಂದ 12 ರಾಜ್ಯಗಳು ರೈತರ ಹಿತಾಸಕ್ತಿ ಕಾಪಾಡಲು ವಿವಿಧ ಕ್ರಮಗಳನ್ನು ಕೈಗೊಂಡಿವೆ. ತಮಿಳುನಾಡಿನಲ್ಲಿ ಪ್ರತಿ ಟನ್ ಕಬ್ಬಿಗೆ 1,000 ರೂ. ಹೆಚ್ಚುವರಿ ಮೊತ್ತ ನೀಡಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (ಎಫ್‌ಆರ್‌ಪಿ) ಮೇಲೆ ಹೆಚ್ಚುವರಿ ದರ ನೀಡಲಾಗುತ್ತಿದೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರ ಎಫ್‌ಆರ್‌ಪಿ ಮೇಲೆ ಪ್ರತಿ ಟನ್‌ಗೆ ಸುಮಾರು 400 ರೂ. ಹೆಚ್ಚುವರಿ ಮೊತ್ತ ನೀಡುತ್ತಿದೆ ಎಂದು ತಿಳಿಸಿದರು.

ಕರ್ನಾಟಕದಲ್ಲಿಯೂ ಎಸ್‌ಎಪಿ ಕಾಯ್ದೆ ಜಾರಿಯಲ್ಲಿದೆ. ಈ ಕಾಯ್ದೆಯಡಿ ಸಕ್ಕರೆ ಹಾಗೂ ಕಬ್ಬಿನಿಂದ ಉತ್ಪಾದಿಸುವ ಇತರ ಉಪ ಉತ್ಪನ್ನಗಳ ಆದಾಯದಲ್ಲಿ ರೈತರಿಗೆ ಪಾಲು ನೀಡುವ ನೀತಿಯಿದೆ. ಈ ಸೂತ್ರದ ಆಧಾರದ ಮೇಲೆ ದರ ನಿಗದಿಪಡಿಸಿ ರಾಜ್ಯ ಸರ್ಕಾರ ಸಕ್ಕರೆ ಕಾರ್ಖಾನೆಗಳಿಗೆ ಆದೇಶಿಸಬೇಕು. ಈ ಪ್ರಕ್ರಿಯೆ ಈಗಾಗಲೇ ಪೂರ್ಣಗೊಳ್ಳಬೇಕಿತ್ತು ಎಂದು ಹೇಳಿದರು.

ವಿದ್ಯುತ್, ಕಾಕಂಬಿ, ಮದ್ಯ ಮತ್ತು ಎಥೆನಾಲ್ ಸೇರಿದಂತೆ ಕಬ್ಬಿನಿಂದ ತಯಾರಾಗುವ ವಿವಿಧ ಉತ್ಪನ್ನಗಳಿಂದ ದೊರೆಯುವ ಆದಾಯದಲ್ಲಿ ರೈತರಿಗೆ ಎಷ್ಟು ಪಾಲು ನೀಡಬೇಕು ಎಂಬುದನ್ನು ಎಸ್‌ಎಪಿ ಕಾಯ್ದೆಯಡಿ ನಿರ್ಧರಿಸಬಹುದು. ಈ ಕಾನೂನನ್ನು ಬಳಸಿಕೊಂಡು ಪ್ರಸಕ್ತ ಸಾಲಿನ ದರವನ್ನು ಸರ್ಕಾರ ಘೋಷಿಸಿದರೆ ರೈತರಿಗೆ ತಾವು ಪಡೆಯಬಹುದಾದ ಬೆಲೆಯ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂದರು.

ತೂಕದ ವ್ಯತ್ಯಾಸ ತಡೆಯಲು ಸ್ವತಂತ್ರ ತೂಕದ ವ್ಯವಸ್ಥೆ

ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬಿನ ತೂಕದಲ್ಲಿ ರೈತರಿಗೆ ಅನ್ಯಾಯವಾಗುತ್ತಿರುವ ಆರೋಪಗಳ ಬಗ್ಗೆ ಪ್ರಸ್ತಾಪಿಸಿದ ಬೊಮ್ಮಾಯಿ, ಸ್ವತಂತ್ರ ತೂಕದ ಯಂತ್ರಗಳ ಸ್ಥಾಪನೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ವ್ಯವಸ್ಥೆ ಜಾರಿಗೆ ತರುವುದಾಗಿ ಹೇಳುತ್ತಾ ಹಲವು ವರ್ಷಗಳಿಂದ ವಿಳಂಬ ಮಾಡಲಾಗುತ್ತಿದೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದ್ದು, ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಎಂಎಸ್‌ಪಿ ಪರಿಷ್ಕರಣೆಗೆ ಒತ್ತಾಯ

ಕಬ್ಬಿನ ಕನಿಷ್ಠ ಮಾರಾಟ ಬೆಲೆ (ಎಂಎಸ್‌ಪಿ) ಕಳೆದ ಹತ್ತು ವರ್ಷಗಳಿಗೂ ಹೆಚ್ಚು ಕಾಲದಿಂದ ಪರಿಷ್ಕರಣೆಯಾಗಿಲ್ಲ. ಪ್ರತಿವರ್ಷ ಬೆಲೆ ಪರಿಷ್ಕರಿಸುತ್ತಿದ್ದರೆ ಇಂದಿನ ಸಮಸ್ಯೆ ಇಷ್ಟು ತೀವ್ರವಾಗುತ್ತಿರಲಿಲ್ಲ. ಈಗ ಬೆಲೆ ಪರಿಷ್ಕರಣೆ ಅನಿವಾರ್ಯವಾಗಿದೆ ಎಂದು ಬೊಮ್ಮಾಯಿ ಹೇಳಿದರು.

ಕಬ್ಬು ಬೆಳೆಗಾರರ ಹಿತಾಸಕ್ತಿಯ ಜತೆಗೆ ಸಕ್ಕರೆ ಬಳಕೆದಾರರ ಹಿತವನ್ನೂ ಗಮನದಲ್ಲಿಟ್ಟುಕೊಂಡು ಬೆಲೆ ನಿಗದಿಪಡಿಸಬೇಕು. ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಬೇಡಿಕೆಗಳನ್ನು ಪರಿಗಣಿಸಿ, ಉತ್ಪಾದಕರು ಹಾಗೂ ಗ್ರಾಹಕರ ಹಿತಾಸಕ್ತಿಗಳ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು. ಈ ನಿಟ್ಟಿನಲ್ಲಿ ರೈತರ ಪ್ರತಿನಿಧಿಗಳು ಮತ್ತು ತಜ್ಞರನ್ನು ಒಳಗೊಂಡ ಸಮಿತಿಯು ಶೀಘ್ರ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈಗಾಗಲೇ ಕಬ್ಬು ಬೆಳೆದು ಕಟಾವಿಗೆ ಸಿದ್ಧವಾಗಿದೆ. ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬು ಅರೆಯುವ ಕಾರ್ಯ ಆರಂಭವಾಗಬೇಕಿದ್ದರೂ ವಿಳಂಬವಾಗುತ್ತಿದೆ. ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕಬ್ಬು ಒಣಗಿದರೆ ತೂಕ ಕಡಿಮೆಯಾಗುವುದರ ಜತೆಗೆ ಸಕ್ಕರೆ ಇಳುವರಿಯ ಮೇಲೂ ಪರಿಣಾಮ ಬೀರಲಿದೆ. ಇದರಿಂದ ರೈತರಿಗೆ ಹೆಚ್ಚಿನ ನಷ್ಟವಾಗುವ ಸಾಧ್ಯತೆಯಿದೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ಆರಂಭಿಕ ಹಂತದಲ್ಲಿಯೇ ನ್ಯಾಯಯುತ ಬೆಲೆ ಹಾಗೂ ಆರ್ಥಿಕ ಭದ್ರತೆ ಒದಗಿಸಬೇಕು ಎಂದರು.

ಕೇಂದ್ರ ಸರ್ಕಾರ ರಚಿಸಿರುವ ಸಮಿತಿಯಲ್ಲಿ ರೈತರ ಪ್ರತಿನಿಧಿಗಳು ಮತ್ತು ತಜ್ಞರಿಗೆ ಅವಕಾಶವಿದೆ. ಈ ಸಮಿತಿಯು ಶೀಘ್ರ ಕಾರ್ಯಾರಂಭ ಮಾಡಿ, ಎಂಎಸ್‌ಪಿ ಪರಿಷ್ಕರಣೆ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ರೈತರ ಹಿತದೃಷ್ಟಿಯಿಂದ ಸಮಿತಿ ರಚನೆಗೆ ಪ್ರಯತ್ನಿಸಿರುವುದು ಸ್ವಾಗತಾರ್ಹ. ಸಮಿತಿಯ ಮೂಲಕ ರೈತರಿಗೆ ನ್ಯಾಯ ದೊರೆಯುವಂತಾಗಬೇಕು ಎಂದು ಹೇಳಿದರು.

ದೆಹಲಿಯಲ್ಲಿ ನಡೆದ ರೈತರ ಸಭೆಯಲ್ಲಿ ಕಬ್ಬಿನ ದರದ ಕುರಿತು ಚರ್ಚೆಯಾಗಿಲ್ಲ ಎಂಬ ವಾದವನ್ನು ತಳ್ಳಿಹಾಕಿದ ಅವರು, ಸಭೆಯಲ್ಲಿ ಸುಮಾರು ಮೂರು ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆದಿದೆ. ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳ ಎಂಎಸ್‌ಪಿ ಬೇಡಿಕೆಗಳ ಬಗ್ಗೆಯೂ ಸಮಗ್ರವಾಗಿ ಚರ್ಚಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಕಬ್ಬಿನ ದರ ನಿಗದಿಯ ಜವಾಬ್ದಾರಿ ಕೇಂದ್ರ ಸರ್ಕಾರದ್ದೇ ಎಂಬ ಸಕ್ಕರೆ ಸಚಿವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಸಕ್ಕರೆ ಸಚಿವರು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.

ಸಕ್ಕರೆ ಉದ್ಯಮದಿಂದ ಆರ್ಥಿಕತೆಗೆ ಕೊಡುಗೆ

ಸಕ್ಕರೆ ಕಾರ್ಖಾನೆಗಳ ಮಾಲೀಕರ ಲಾಭಕ್ಕಾಗಿ ಸರ್ಕಾರಗಳು ಕಾರ್ಯನಿರ್ವಹಿಸುತ್ತಿವೆ ಎಂಬ ಆರೋಪದ ಕುರಿತು ಮಾತನಾಡಿದ ಬೊಮ್ಮಾಯಿ, ಇದು ಮಾಲೀಕರ ಲಾಭದ ಪ್ರಶ್ನೆಯಲ್ಲ; ರೈತರನ್ನು ಉಳಿಸುವುದರ ಜತೆಗೆ ದೇಶದ ಆರ್ಥಿಕತೆಯನ್ನು ಕಾಪಾಡುವ ವಿಚಾರವೂ ಆಗಿದೆ ಎಂದರು.

ಸಕ್ಕರೆ ಉತ್ಪಾದನೆಯ ಜತೆಗೆ ಎಥೆನಾಲ್ ಉತ್ಪಾದನೆಯೂ ನಡೆಯುತ್ತಿದೆ. ಇದರಿಂದ ಕಚ್ಚಾ ತೈಲ ಆಮದಿಗಾಗಿ ವಿದೇಶಿ ವಿನಿಮಯ ವೆಚ್ಚವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಕಬ್ಬಿನಿಂದ ಸುಮಾರು 30ರಿಂದ 40 ಬಗೆಯ ಉಪ ಉತ್ಪನ್ನಗಳು ದೊರೆಯುತ್ತವೆ. ಇವುಗಳಿಂದ ಆರ್ಥಿಕತೆಗೆ ಅನುಕೂಲವಾಗುವುದರ ಜತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸರಕು ಮತ್ತು ಸೇವಾ ತೆರಿಗೆಯ ಆದಾಯವೂ ಲಭಿಸುತ್ತದೆ ಎಂದು ವಿವರಿಸಿದರು.

ಹಾವೇರಿ ಜಿಲ್ಲೆಯನ್ನು ಕೃಷ್ಣಾ ಜಲಾನಯನ ಪ್ರದೇಶದ ಮಾನದಂಡಕ್ಕೆ ಸೇರಿಸಲು ಆಗ್ರಹ

ಹಾವೇರಿ ಭಾಗದ ಸಕ್ಕರೆ ಕಾರ್ಖಾನೆಗಳು ಕಬ್ಬಿನ ಸಕ್ಕರೆ ಇಳುವರಿ ಪ್ರಮಾಣವನ್ನು ಕಡಿಮೆ ತೋರಿಸುತ್ತಿವೆ ಎಂಬ ರೈತರ ಆರೋಪದ ಕುರಿತು ಮಾತನಾಡಿದ ಬೊಮ್ಮಾಯಿ, ಕಬ್ಬಿನ ಇಳುವರಿ ಪ್ರಮಾಣ ನಿರ್ಧರಿಸುವ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇರಬೇಕು ಎಂದರು.

ರೈತರು ಮತ್ತು ಕಾರ್ಖಾನೆಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಕಬ್ಬಿನ ಮಾದರಿಗಳನ್ನು ಬೆಳಗಾವಿಯ ನಿಜಲಿಂಗಪ್ಪ ಸಂಸ್ಥೆಯ ಪ್ರಯೋಗಾಲಯಕ್ಕೆ ಕೊಂಡೊಯ್ದು ಪರೀಕ್ಷೆ ನಡೆಸಬೇಕು. ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಕಬ್ಬು ಅರೆಯುವ ಹಂಗಾಮು ಆರಂಭಕ್ಕೂ ಮುನ್ನವೇ ಇಳುವರಿ ಪ್ರಮಾಣವನ್ನು ನಿರ್ಧರಿಸಿ, ಎರಡೂ ಕಡೆಯವರ ಒಪ್ಪಿಗೆಯೊಂದಿಗೆ ಜಾರಿಗೆ ತರಬೇಕು ಎಂದು ಸಲಹೆ ನೀಡಿದರು.

ಹಾವೇರಿ ಜಿಲ್ಲೆಯು ತುಂಗಭದ್ರಾ ಮತ್ತು ಕೃಷ್ಣಾ ನದಿ ಜಲಾನಯನ ಪ್ರದೇಶಕ್ಕೆ ಸೇರಿದೆ. ಆದ್ದರಿಂದ ಉತ್ತರ ಕರ್ನಾಟಕದ ಇತರ ಪ್ರದೇಶಗಳಲ್ಲಿನ ಸಕ್ಕರೆ ಕಾರ್ಖಾನೆಗಳಿಗೆ ಅನ್ವಯಿಸುವ ಮಾನದಂಡಗಳನ್ನು ಹಾವೇರಿ ಜಿಲ್ಲೆಯ ಕಾರ್ಖಾನೆಗಳಿಗೂ ಅನ್ವಯಿಸಬೇಕು. ಈ ಮೂಲಕ ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande