ಅನ್ನಸೇವೆ ಆ್ಯಪ್ ಮೂಲಕ 12 ದಿನಗಳಲ್ಲಿ 1.60 ಲಕ್ಷ ಫಲಾನುಭವಿಗಳ ಇ-ಕೆವೈಸಿ ಪೂರ್ಣ
ಇಲಾಖೆಯ ಪ್ರಗತಿ ಪರಿಶೀಲನಾ ಸಭೆ: ತಾಂತ್ರಿಕ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ
anna-seva-app-completes-ekyc-for-1-6-lakh-beneficiaries-in-12-days


ಬೆಂಗಳೂರು, 14 ಅಕ್ಟೋಬರ್ (ಹಿ.ಸ.):

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಪ್ರಮುಖ ಯೋಜನೆಗಳ ಪ್ರಗತಿ ಪರಿಶೀಲಿಸಿದ ಸಚಿವ ರಿಜ್ವಾನ್ ಅರ್ಷದ್, ಅನ್ನ ಸೇವಾ ಆ್ಯಪ್ನಲ್ಲಿನ ತಾಂತ್ರಿಕ ಸಮಸ್ಯೆಗಳನ್ನು ಶೀಘ್ರ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಪರಿಶೀಲನಾ ಸಭೆಯಲ್ಲಿ ಇ-ಕೆವೈಸಿ ಪ್ರಕ್ರಿಯೆ, ಅನ್ನ ಸೇವಾ ಆ್ಯಪ್, ಕೃತಕ ಬುದ್ಧಿಮತ್ತೆ ಆಧಾರಿತ ಅನ್ನವಾಣಿ ನಾಗರಿಕ ಸಹಾಯ ವ್ಯವಸ್ಥೆ, ಕೇಂದ್ರೀಕೃತ ಮೇಲ್ವಿಚಾರಣಾ ಕೇಂದ್ರ ಸ್ಥಾಪನೆ ಹಾಗೂ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಸಾಗಣೆ ವಾಹನಗಳಿಗೆ ಜಿಪಿಎಸ್ ಅಳವಡಿಸುವ ಕಾರ್ಯಗಳ ಪ್ರಗತಿಯನ್ನು ಪರಿಶೀಲಿಸಲಾಯಿತು.

ರಾಜ್ಯದಲ್ಲಿ ಒಟ್ಟು 2.67 ಕೋಟಿ ಫಲಾನುಭವಿಗಳ ಪೈಕಿ 2.06 ಕೋಟಿ ಫಲಾನುಭವಿಗಳು ಇ-ಕೆವೈಸಿ ಪೂರ್ಣಗೊಳಿಸಿದ್ದು, ಶೇ.77ರಷ್ಟು ಪ್ರಗತಿ ಸಾಧಿಸಲಾಗಿದೆ. ಅನ್ನ ಸೇವಾ ಆ್ಯಪ್ ಆರಂಭಗೊಂಡ ಕಳೆದ 12 ದಿನಗಳಲ್ಲಿ 2.6 ಲಕ್ಷ ಫಲಾನುಭವಿಗಳು ಆ್ಯಪ್ ಮೂಲಕವೇ ಇ-ಕೆವೈಸಿ ಪೂರ್ಣಗೊಳಿಸಿದ್ದಾರೆ.

ಕೃತಕ ಬುದ್ಧಿಮತ್ತೆ ಆಧಾರಿತ ಅನ್ನವಾಣಿ ನಾಗರಿಕ ಸಹಾಯ ವ್ಯವಸ್ಥೆ ಹಾಗೂ ಕೇಂದ್ರೀಕೃತ ಮೇಲ್ವಿಚಾರಣಾ ವ್ಯವಸ್ಥೆ ಸ್ಥಾಪನೆಯ ಪ್ರಗತಿಯನ್ನೂ ಸಚಿವರು ಪರಿಶೀಲಿಸಿದರು. ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಸಾಗಣೆ ಕಾರ್ಯದಲ್ಲಿ ತೊಡಗಿರುವ ಒಟ್ಟು 2,093 ವಾಹನಗಳ ಪೈಕಿ 1,926 ವಾಹನಗಳಿಗೆ ಜಿಪಿಎಸ್ ಸಾಧನಗಳನ್ನು ಅಳವಡಿಸಲಾಗಿದೆ.

ಬಾಕಿ ಉಳಿದಿರುವ ಯೋಜನೆಗಳ ಅನುಷ್ಠಾನವನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ಸಾರ್ವಜನಿಕರಿಗೆ ಪರಿಣಾಮಕಾರಿ, ಪಾರದರ್ಶಕ ಮತ್ತು ಸುಗಮ ಸೇವೆ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಆಹಾರ ಇಲಾಖೆಯ ಕಾರ್ಯದರ್ಶಿ ಕನಗವಲ್ಲಿ, ಆಯುಕ್ತೆ ಬಿ.ಆರ್. ಪೂರ್ಣಿಮಾ, ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಗದೀಶ್, ಕಾನೂನು ಮಾಪನಶಾಸ್ತ್ರ ಇಲಾಖೆಯ ನಿಯಂತ್ರಕ ಸಿ.ಎನ್. ಮಂಜುನಾಥ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande