






ಬಳ್ಳಾರಿ, 14 ಅಕ್ಟೋಬರ್ (ಹಿ.ಸ.)
ಪ್ರಜಾಪ್ರಭುತ್ವದ ನಿಜವಾದ ಶಕ್ತಿ ಸಾರ್ಥಕ ಹಾಗೂ ಅರ್ಥಪೂರ್ಣ ಚರ್ಚೆಗಳಲ್ಲಿ ಅಡಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನೆ ಅವರು ಹೇಳಿದರು.
ಬಳ್ಳಾರಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ‘ಅಂತಾರಾಷ್ಟಿಯ ಪ್ರಜಾಪ್ರಭುತ್ವ ದಿನಾಚರಣೆ' ಅಂಗವಾಗಿ ನಗರದ ನಲ್ಲಚೆರುವು ಬಳಿಯಿರುವ ಡಾ.ಬಾಬು ಜಗಜೀವನ್ ರಾಂ ಭವನದಲ್ಲಿ ಬುಧವಾರ ಆಯೋಜಿಸಿದ್ದ ಬಳ್ಳಾರಿ ತಾಲೂಕು ಮಟ್ಟದ ‘ಯುವ ಸಂಸತ್ತು’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಶಾಸನ ಸಭೆಗಳಲ್ಲಿ ಕೇವಲ ಗದ್ದಲ, ವಿರೋಧಕ್ಕಾಗಿಯೇ ವಿರೋಧ ವ್ಯಕ್ತವಾಗುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಅವರು, ಯುವಜನತೆ ಸಂವಿಧಾನದ ಮೌಲ್ಯಗಳನ್ನು ಅರಿತು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.
ಕೇವಲ ಗದ್ದಲ ಎಬ್ಬಿಸುವುದಕ್ಕಿಂತ ವಿಷಯಾಧಾರಿತ, ರಚನಾತ್ಮಕ ಚರ್ಚೆಗಳು ನಡೆಯುವುದು ಪ್ರಜಾಪ್ರಭುತ್ವಕ್ಕೆ ಅಗತ್ಯ. ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಕಾನೂನು ರೂಪಿಸುವ ಮುನ್ನ ಸಾಧಕ-ಬಾಧಕಗಳ ಕುರಿತು ಆಳವಾದ ಚರ್ಚೆ ನಡೆಯಬೇಕು. ಎದುರಾಳಿ ಅಥವಾ ವಿರೋಧ ಪಕ್ಷಗಳ ಅಭಿಪ್ರಾಯಗಳಿಗೆ ಗೌರವ ನೀಡುವ ‘ಒಪ್ಪಂದದ ಭಿನ್ನಾಭಿಪ್ರಾಯ’ ಸಂಸ್ಕೃತಿ ಇರಬೇಕು. ಕೇವಲ ಪರಸ್ಪರ ದ್ವೇಷ ಸಾಧಿಸುವುದು ಸರಿಯಲ್ಲ ಎಂದು ನುಡಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವು ಇಡೀ ಜಗತ್ತಿಗೆ ಮಾದರಿಯಾಗಿದೆ. ಸಂವಿಧಾನವೇ ದೇಶದ ಸರ್ವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಮಾರ್ಗದರ್ಶಿಯಾಗಿದೆ ಎಂದು ಸ್ಮರಿಸಿದ ಅವರು, ಸಾರ್ವಜನಿಕವಾಗಿ ನಿಂತು ಮಾತನಾಡುವ ಕಲೆ ಯುವಜನರಲ್ಲಿ ನಾಯಕತ್ವ ಗುಣ ಹಾಗೂ ಧೈರ್ಯವನ್ನು ಬೆಳೆಸುತ್ತದೆ. ಇಂತಹ ಯುವ ಸಂಸತ್ ಕಾರ್ಯಕ್ರಮಗಳು ಯುವಕರಲ್ಲಿ ಪ್ರಜಾಸತ್ತಾತ್ಮಕ ಚಿಂತನೆ ಬೆಳೆಸಲು ಪ್ರೇರಕವಾಗಿವೆ ಎಂದು ಪ್ರಶಂಶಿಸಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಾಮಬ್ರಹ್ಮಂ ಅವರು ಮಾತನಾಡಿ, ಪ್ರಜಾಪ್ರಭುತ್ವ ಎಂದರೆ ಕೇವಲ ಮತದಾನ ಮಾಡುವುದು ಅಥವಾ ಆಡಳಿತ ವ್ಯವಸ್ಥೆಯಲ್ಲ, ಅದು ಪ್ರತಿಯೊಬ್ಬರ ಜೀವನ ವಿಧಾನ ಮತ್ತು ಜೀವನದ ಅವಿಭಾಜ್ಯ ಅಂಗವಾಗಿದೆ ಎಂದು ಹೇಳಿದರು.
2007ರಲ್ಲಿ ವಿಶ್ವಸಂಸ್ಥೆಯು ಸೆಪ್ಟೆಂಬರ್ 15 ಅನ್ನು ‘ಅಂತಾರಾಷ್ಟಿಯ ಪ್ರಜಾಪ್ರಭುತ್ವ ದಿನ' ಎಂದು ಘೋಷಿಸಿತು. 2008ರಿಂದ ಪ್ರತಿವರ್ಷ ಪ್ರಪಂಚದಾದ್ಯAತ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಲು ಹಾಗೂ ಮಾನವ ಹಕ್ಕುಗಳ ರಕ್ಷಣೆಗಾಗಿ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.
ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮತ್ತು ಮುಷ್ಕರ ಮಾಡುವ ಹಕ್ಕು ಜನರಿಗೆ ನೀಡಲಾದ ದೊಡ್ಡ ಅಸ್ತçವಾಗಿದೆ. ಆದರೆ ಯಾವುದೇ ಹಕ್ಕನ್ನು ಚಲಾಯಿಸುವ ಮುನ್ನ ಕಾನೂನನ್ನು ಕೈಗೆತ್ತಿಕೊಳ್ಳದೆ, ಜವಾಬ್ದಾರಿಯುತವಾಗಿ ವರ್ತಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಕರೆ ನೀಡಿದರು.
ವಿಶ್ವದಲ್ಲೇ ಅತ್ಯಂತ ಬಲಿಷ್ಠ ಹಾಗೂ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹೊಂದಿರುವ ಭಾರತವು ಜಗತ್ತಿಗೆ ಮಾದರಿಯಾಗಿದೆ. ಸುಮಾರು 140 ಕೋಟಿ ಜನಸಂಖ್ಯೆ ಹೊಂದಿದ್ದರೂ ದೇಶದಲ್ಲಿ ಪ್ರಜಾಪ್ರಭುತ್ವ ಯಶಸ್ವಿಯಾಗಿ ಮುನ್ನಡೆಯಲು ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವೇ ಮೂಲ ಆಧಾರವಾಗಿದೆ ಎಂದು ಸ್ಮರಿಸಿದರು.
ವೈದ್ಯ, ಎಂಜಿನಿಯರ್, ವಕೀಲರಾಗುವ ಕನಸು ಕಾಣುವಷ್ಟೇ ಉತ್ಸಾಹದಿಂದ ಯುವಜನರು ರಾಜಕೀಯ ನಾಯಕರು, ಶಾಸಕರು ಮತ್ತು ಸಂಸದರಾಗುವ ಕನಸುಗಳನ್ನು ಕಾಣಬೇಕು. ಪ್ರಜಾಪ್ರಭುತ್ವವನ್ನು ಉಳಿಸಿ, ಬೆಳೆಸಲು ಮತ್ತು ದೇಶದ ಭವಿಷ್ಯವನ್ನು ಉಜ್ವಲಗೊಳಿಸಲು ಯುವಪೀಳಿಗೆ ಮುಂಚೂಣಿಗೆ ಬರಬೇಕಾಗಿದೆ ಎಂದು ಅವರು ಕಿವಿಮಾತು ಹೇಳಿದರು.
*ನೈಜ ಸಂಸತ್ತಿನ ಮಾದರಿಯಲ್ಲಿ ವಿದ್ಯಾರ್ಥಿಗಳಿಂದ ಗಮನಾರ್ಹ ಚರ್ಚೆ:*
ಅಣಕು ಸಂಸತ್ತು ಸಭೆಯಲ್ಲಿ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು ನೈಜ ಸಂಸತ್ತಿನ ಕಾರ್ಯಕಲಾಪಗಳನ್ನು ಮರುಸೃಷ್ಟಿಸಿದರು.
ಕಾರ್ಯಕ್ರಮದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಪಾತ್ರ ವಹಿಸಿದ್ದ ವಿದ್ಯಾರ್ಥಿಗಳು ಪ್ರಸ್ತುತ ಸಮಾಜದ ಪ್ರಮುಖ ವಿಷಯಗಳಾದ ಶಿಕ್ಷಣ, ಆರೋಗ್ಯ, ಯುವಜನರ ಉದ್ಯೋಗ, ಪರಿಸರ ಸಂರಕ್ಷಣೆ ಹಾಗೂ ಗ್ರಾಮೀಣ ಅಭಿವೃದ್ಧಿಯಂತಹ ಗಂಭೀರ ವಿಚಾರಗಳ ಕುರಿತು ವಾಸ್ತವಿಕ ಸಂಸತ್ತಿನ ಶೈಲಿಯಲ್ಲೇ ತಾರ್ಕಿಕ ಚರ್ಚೆ ನಡೆಸಿದರು.
ವಿಶೇಷವಾಗಿ ಪ್ರಶ್ನೋತ್ತರ ಕಲಾಪ, ಶೂನ್ಯ ವೇಳೆ ಹಾಗೂ ನೂತನ ವಿಧೇಯಕಗಳ ಮಂಡನೆ ಪ್ರಕ್ರಿಯೆಗಳು ನೆರೆದಿದ್ದ ವೀಕ್ಷಕರ ಮತ್ತು ಗಣ್ಯರ ಮೆಚ್ಚುಗೆಗೆ ಪಾತ್ರವಾದವು. ಸ್ಪರ್ಧೆಯ ಅಂತ್ಯದಲ್ಲಿ ಅತ್ಯುತ್ತಮ ವಾಗ್ಮಿತ್ವ ಹಾಗೂ ಸಂಸದೀಯ ಕೌಶಲ್ಯ ಪ್ರದರ್ಶಿಸಿದ ವಿದ್ಯಾರ್ಥಿಗಳನ್ನು ಜಿಲ್ಲಾ ಮಟ್ಟದ ಯುವ ಸಂಸತ್ತು ಸಭೆಗೆ ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಶಾಹೆಕಾ ಅಹಮದಿ, ಬಳ್ಳಾರಿ ತಾಲೂಕು ಗ್ರೇಡ್-2 ತಹಶೀಲ್ದಾರರಾದ ಸುಧಾ ಅರಮನೆ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ಕಸ್ತೂರಿ ಅವರು, ತಾಲೂಕು ಪಂಚಾಯತಿಯ ಸಹಾಯಕ ನಿರ್ದೇಶಕಿ ಸಂಧ್ಯಾ, ಸಸಅ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ ವಿಭಾಗದ ಮುಖ್ಯಸ್ಥ ಹೊನ್ನುರಾಲಿ, ಸರ್ಕಾರಿ (ಮಾ.ಪು) ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ನಾಗರೆಡ್ಡಿ ಕೆ.ವಿ., ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಸತೀಶ್ ಹಿರೇಮಠ್ ಸೇರಿದಂತೆ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು- ಉಪನ್ಯಾಸಕರು ಹಾಗೂ ಪೋಷಕರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್