ಶೈಕ್ಷಣಿಕ ಕ್ರಾಂತಿಗೆ ಸಾವಿತ್ರಿಬಾಯಿ ಫುಲೆ ಮುನ್ನುಡಿ: ಚೈತ್ರಾ
ಗದಗ, 09 ಜನವರಿ (ಹಿ.ಸ.) ಆ್ಯಂಕರ್:- ಸಾಮಾಜಿಕ ಸಮಸ್ಯೆಗಳಿಗೆ ಶಿಕ್ಷಣವೊಂದೇ ಶಾಶ್ವತ ಪರಿಹಾರ ಎಂಬುದನ್ನು ಅರಿತು ಜ್ಯೋತಿಬಾ ಫುಲೆ ಅವರ ಸಹಕಾರದೊಂದಿಗೆ ಶಾಲೆಗಳನ್ನು ಸ್ಥಾಪಿಸಿ ಮಹಿಳೆಯರು ಹಾಗೂ ಕೆಳವರ್ಗದ ಜನರಿಗೆ ಶಿಕ್ಷಣ ನೀಡುವ ಮೂಲಕ ಶೈಕ್ಷಣಿಕ ಕ್ರಾಂತಿಗೆ ಸಾವಿತ್ರಿಬಾಯಿ ಫುಲೆ ಮುನ್ನುಡಿ ಬರೆದರು ಎ
ಫೋಟೋ


ಗದಗ, 09 ಜನವರಿ (ಹಿ.ಸ.)

ಆ್ಯಂಕರ್:- ಸಾಮಾಜಿಕ ಸಮಸ್ಯೆಗಳಿಗೆ ಶಿಕ್ಷಣವೊಂದೇ ಶಾಶ್ವತ ಪರಿಹಾರ ಎಂಬುದನ್ನು ಅರಿತು ಜ್ಯೋತಿಬಾ ಫುಲೆ ಅವರ ಸಹಕಾರದೊಂದಿಗೆ ಶಾಲೆಗಳನ್ನು ಸ್ಥಾಪಿಸಿ ಮಹಿಳೆಯರು ಹಾಗೂ ಕೆಳವರ್ಗದ ಜನರಿಗೆ ಶಿಕ್ಷಣ ನೀಡುವ ಮೂಲಕ ಶೈಕ್ಷಣಿಕ ಕ್ರಾಂತಿಗೆ ಸಾವಿತ್ರಿಬಾಯಿ ಫುಲೆ ಮುನ್ನುಡಿ ಬರೆದರು ಎಂದು ಎಂ.ಜಿ.ಆರ್.ಡಿ.ಪಿ.ಆರ್. ವಿಶ್ವವಿದ್ಯಾಲಯದ ಉಪನ್ಯಾಸಕಿ ಡಾ. ಚೈತ್ರಾ ಹೇಳಿದರು.

ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ತೋಂಟದ ಸಿದ್ದಲಿಂಗಶ್ರೀ ಕನ್ನಡ ಭವನದಲ್ಲಿ ಮೈಲಾರಪ್ಪ ಮೆಣಸಗಿ ಸ್ಮರಣಾರ್ಥ ಆಯೋಜಿಸಲಾದ ಕುಮಾರವ್ಯಾಸ ಹಾಗೂ ಸಾವಿತ್ರಿಬಾಯಿ ಫುಲೆ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಸ್ಪೃಶ್ಯತೆ, ಬಾಲ್ಯವಿವಾಹ, ಸತಿ ಸಹಗಮನ, ಕೇಶಮುಂಡನದಂತಹ ಅನಿಷ್ಠ ಆಚರಣೆಗಳ ವಿರುದ್ಧ ಸಾವಿತ್ರಿಬಾಯಿ ಫುಲೆ ಹೋರಾಟ ನಡೆಸಿದರು. ಮಹಿಳಾ ಸಬಲೀಕರಣಕ್ಕೆ ಅವರ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕಾರ್ಯದರ್ಶಿ ಡಾ. ದತ್ತಪ್ರಸನ್ನ ಪಾಟೀಲ, ಶ್ರಮ ಸಂಸ್ಕೃತಿಯ ಮೂಲಕ ಪ್ರಕಾಶನ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿದ ವಿದ್ಯಾನಿಧಿ ಪ್ರಕಾಶನದ ಮೈಲಾರಪ್ಪ ಮೆಣಸಗಿ ಅವರು ಕಾನೂನು ಹಾಗೂ ಶೈಕ್ಷಣಿಕ ಪುಸ್ತಕಗಳನ್ನು ಪ್ರಕಟಿಸುವ ಮೂಲಕ ನಾಡಿನ ಶಿಕ್ಷಣ ಕ್ಷೇತ್ರವನ್ನು ವಿಸ್ತರಿಸಿದ್ದಾರೆ ಎಂದು ಹೇಳಿದರು.

ದತ್ತಿದಾನಿ ಜಯದೇವ ಮೆಣಸಗಿ ಮಾತನಾಡಿ, ಗದಗ ಜಿಲ್ಲಾ ಕಸಾಪ ರಾಜ್ಯದಲ್ಲಿಯೇ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಮುಂದಿನ ವರ್ಷದಿಂದ ತಮ್ಮ ತಂದೆಯವರ ಹೆಸರಿನಲ್ಲಿ ನಾಡಿನ ಪ್ರಕಾಶಕರೊಬ್ಬರಿಗೆ ಪ್ರತಿ ವರ್ಷ ಪ್ರಶಸ್ತಿ ನೀಡುವ ದಿಸೆಯಲ್ಲಿ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ಕುಮಾರವ್ಯಾಸ ಜಯಂತಿ ಅಂಗವಾಗಿ ಹೆಸರಾಂತ ಗಮಕಿಗಳಾದ ವಾಸುದೇವಾಚಾರ್ಯ ಹೂಲಿ ಹಾಗೂ ಐಶ್ವರ್ಯ ಹೂಲಿ ಅವರು ಕುಮಾರವ್ಯಾಸ ಭಾರತದ ಪ್ರಸಂಗಗಳ ವಾಚನ ಹಾಗೂ ವ್ಯಾಖ್ಯಾನ ನಡೆಸಿಕೊಟ್ಟರು. ಮಂಜುಳಾ ವೆಂಕಟೇಶಯ್ಯ ಅವರು ಸಾವಿತ್ರಿಬಾಯಿ ಫುಲೆ ಕುರಿತು ಕವನ ವಾಚಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆಯರು ಹಾಗೂ ದಮನಿತ ವರ್ಗಗಳಿಗೆ ಶಿಕ್ಷಣ ನಿರಾಕರಿಸಲಾಗಿತ್ತು. ಶೋಷಣೆಯ ನಡುವೆ ಶಿಕ್ಷಣವನ್ನು ಮಂತ್ರದಂಡವಾಗಿಸಿಕೊಂಡು ಸಮಾನ ಸಮಾಜ ನಿರ್ಮಾಣಕ್ಕೆ ಫುಲೆ ದಂಪತಿಗಳು ಶ್ರಮಿಸಿದರು. ಶಾಲೆ ಹಾಗೂ ಆಶ್ರಮಗಳನ್ನು ಸ್ಥಾಪಿಸಿ ಮಹಿಳೆಯರ ಹಕ್ಕುಗಳಿಗಾಗಿ ಹೋರಾಟ ನಡೆಸಿದರು ಎಂದು ಹೇಳಿದರು.

ಸಂದರ್ಭದಲ್ಲಿ ನಿವೃತ್ತ ಪ್ರಾಚಾರ್ಯ ವಿ.ಎಸ್. ದಲಾಲಿ ಅವರನ್ನು ಸನ್ಮಾನಿಸಲಾಯಿತು. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಅಮರೇಶರಾಂಪೂರ ವಂದಿಸಿದರು.

ಕಾರ್ಯಕ್ರಮದಲ್ಲಿ ಹಲವಾರು ಸಾಹಿತಿಗಳು, ಶಿಕ್ಷಣ ತಜ್ಞರು ಹಾಗೂ ಗಣ್ಯರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande