ಪ್ರಾಧ್ಯಾಪಕ ಬಿ.ಕೆ. ರವಿ ಬಿಎನ್‌ಯು ಉಪಕುಲಪತಿಯಾಗಿ ಅಧಿಕಾರ ಸ್ವೀಕಾರ
ಪ್ರಾಧ್ಯಾಪಕ ಬಿ.ಕೆ. ರವಿ ಬಿಎನ್‌ಯು ಉಪಕುಲಪತಿಯಾಗಿ ಅಧಿಕಾರ ಸ್ವೀಕಾರ
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಉಪ ಕುಲಪತಿಯಾಗಿ ಪ್ರೊ. ಬಿ.ಕೆ.ರವಿ ಶುಕ್ರವಾರ ಅಧಿಕಾರ ವಹಿಸಿಕೊಂಡರು.


ಕೋಲಾರ, ೦೯ ಜನವರಿ (ಹಿ.ಸ) :

ಆ್ಯಂಕರ್ : ದಕ್ಷ ಆಡಳಿತಗಾರರು, ಸಂವಹನ ಕ್ಷೇತ್ರದಲ್ಲಿ ಅಪಾರವಾದ ಅನುಭವ ಹೊಂದಿರುವ ಪ್ರಾಧ್ಯಾಪಕ ಬಿ.ಕೆ. ರವಿ (ಭೀಮಯ್ಯ ಕೃಷ್ಣನ್ ರವಿ) ಅವರು ೨೦೨೬ರ ಜನವರಿ ೯ ರಂದು ಕೋಲಾರದ ಟಮಕಾದಲ್ಲಿರುವ ಉಪಕುಲಪತಿಗಳ ಸಚಿವಾಲಯದಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಉಪಕುಲಪತಿಯಾಗಿ ಅಧಿಕಾರ ಸ್ವೀಕರಿಸಿದರು.

ತಮ್ಮ ಮೊದಲ ಅಧಿಕೃತ ಸಭೆಯಲ್ಲಿ ಭಾರತದ ಸಂವಿಧಾನದ ಪೀಠಿಕೆಯನ್ನು ಓದುವ ಮೂಲಕ ಸಾಂಕೇತಿಕವಾಗಿ ತಮ್ಮ ಅಧಿಕಾರಾವಧಿಯನ್ನು ಆರಂಭಿಸಿದರು. ಹಂಗಾಮಿ ಉಪ ಕುಲಪತಿ ಪ್ರೊ. ಕುಮುದಾ ಅಧಿಕಾರ ಹಸ್ತಾಂತರ ಮಾಡಿದರು.

ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಗಳು, ಸಂಯೋಜಿತ ಕಾಲೇಜುಗಳ ಪ್ರಾಂಶುಪಾಲರು ಮತ್ತು ಆಡಳಿತ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ಪ್ರೊ. ರವಿ ಅವರು, ಶೈಕ್ಷಣಿಕ ಆಡಳಿತ, ಒಳಗೊಳ್ಳುವಿಕೆ ಮತ್ತು ಸಾಂಸ್ಥಿಕ ನಿರ್ಧಾರ ಕೈಗೊಳ್ಳುವಲ್ಲಿ ಸಂವಿಧಾನವು ನೈತಿಕ ದಿಕ್ಸೂಚಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.

ಸಂವಿಧಾನದಲ್ಲಿ ಅಡಕವಾಗಿರುವ ನ್ಯಾಯ, ಸ್ವಾತಂತ್ರ‍್ಯ, ಸಮಾನತೆ ಮತ್ತು ಭ್ರಾತೃತ್ವದ ಮೌಲ್ಯಗಳು ಉನ್ನತ ಶಿಕ್ಷಣ, ಸಂಶೋಧನೆ ಮತ್ತು ಕ್ಯಾಂಪಸ್ ಸಂಸ್ಕೃತಿಗೆ ಮಾರ್ಗದರ್ಶನ ನೀಡಬೇಕು, ಎಂದು ತಿಳಿಸಿದ ಅವರು, ಬೋಧನೆ, ಕಲಿಕೆ ಮತ್ತು ಆಡಳಿತದಲ್ಲಿ ಸಾಂವಿಧಾನಿಕ ತತ್ವಗಳನ್ನು ಎತ್ತಿಹಿಡಿಯುವಂತೆ ಶೈಕ್ಷಣಿಕ ಸಮುದಾಯಕ್ಕೆ ಕರೆ ನೀಡಿದರು.

ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ, ಉಪಕುಲಪತಿಗಳು ವಿಶ್ವವಿದ್ಯಾಲಯದ ಅಧಿಕಾರಿಗಳೊಂದಿಗೆ ತಮ್ಮ ಮೊದಲ ಸಭೆಯ ಅಧ್ಯಕ್ಷತೆ ವಹಿಸಿ, ನಡೆಯುತ್ತಿರುವ ಶೈಕ್ಷಣಿಕ ಕಾರ್ಯಕ್ರಮಗಳು, ಪರೀಕ್ಷಾ ವೇಳಾಪಟ್ಟಿಗಳು ಮತ್ತು ಆಡಳಿತಾತ್ಮಕ ಆದ್ಯತೆಗಳನ್ನು ಪರಿಶೀಲಿಸಿದರು. ಅವರು ಪಾರದರ್ಶಕತೆ, ಶೈಕ್ಷಣಿಕ ಸ್ವಾಯತ್ತತೆ ಮತ್ತು ವಿದ್ಯಾರ್ಥಿ ಕೇಂದ್ರಿತ ಸುಧಾರಣೆಗಳಿಗೆ ಒತ್ತು ನೀಡಿದರು.

ಸಂಶೋಧನಾ ಫಲಿತಾಂಶಗಳನ್ನು ಬಲಪಡಿಸುವುದು, ಸಾಂಸ್ಥಿಕ ಶ್ರೇಯಾಂಕಗಳನ್ನು ಸುಧಾರಿಸುವುದು ಮತ್ತು ಉದ್ಯಮ ಹಾಗೂ ರಾಷ್ಟ್ರೀಯ ಸಂಶೋಧನಾ ಸಂಸ್ಥೆಗಳೊAದಿಗೆ ಸಹಯೋಗವನ್ನು ಬೆಳೆಸುವ ಅಗತ್ಯವನ್ನು ಪ್ರೊ. ರವಿ ಒತ್ತಿಹೇಳಿದರು. ಜೊತೆಗೆ, ಅಧ್ಯಾಪಕರು ತರಗತಿಗಳ ಆಚೆಗೂ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಮೂಲಕ ಅವರನ್ನು ಸಾಮಾಜಿಕ ಜವಾಬ್ದಾರಿಗಳಿಗೆ ಸಿದ್ಧಪಡಿಸಬೇಕು ಎಂದು ಪ್ರೋತ್ಸಾಹಿಸಿದರು.

ಪ್ರೊ.ಬಿ.ಕೆ.ರವಿ ರವರು ಮೂಲತಃ ಚಿತ್ರದುರ್ಗದವರಾಗಿದ್ದು, ಮೈಸೂರು ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಪತ್ರಕರ್ತರಾಗಿ ಈ-ಸಂಜೆ ಹಾಗೂ ಪ್ರಜಾವಾಣಿಯಲ್ಲಿ ಪತ್ರಕರ್ತರಾಗಿ ಸೇವೆ ಆರಂಭಿಸಿದರು. ಆ ನಂತರ ಬೆಂಗಳೂರು ವಿಶ್ವವಿದ್ಯಾಲಯ ಸಂವಹನ ಇಲಾಖೆಯಲ್ಲಿ ಪ್ರೊಫೆಸರ್ ಆಗಿ ಸೇವೆ ಆರಂಭಿಸಿದರು. ಸಂವಹನ ಇಲಾಖೆಯ ಮುಖ್ಯಸ್ಥರಾಗಿ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ರಿಜಿಸ್ಟಾçರ್ ಆಗಿ ಸೇವೆ ಸಲ್ಲಿಸಿದ್ದರು. ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾಗಿ ಎರಡು ಬಾರಿ ಸೇವೆ ಸಲ್ಲಿಸಿದ್ದರು.

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಉಪ ಕುಲಪತಿಯಾಗಿ ಅಧಿಕಾರ ಸ್ವೀಕರಿಸುವ ಮೊದಲು ಕೊಪ್ಪಳ ವಿಶ್ವವಿದ್ಯಾಲಯದ ಉಪ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದರು. ಈ ಹಿಂದೆ ಉಪ ಕುಲಪತಿಯಾಗಿದ್ದ ಪ್ರೊ. ನಿರಂಜನ್ ವಾನಳ್ಳಿ ನಿವೃತ್ತಿಯಾದ ನಂತರ ಉಪಕುಲಪತಿ ಹುದ್ದೆಗೆ ಎಪ್ಪತ್ತಕ್ಕೂ ಹೆಚ್ಚು ಮಂದಿ ಅರ್ಜಿಗಳನ್ನು ಸಲ್ಲಿಸಿದ್ದರು. ಶೋಧನಾ ಸಮಿತಿ ಶಿಫಾರಸ್ಸಿನ ಮೇರೆಗೆ ರಾಜ್ಯ ಸರ್ಕಾರ ಪ್ರೊ.ಬಿ.ಕೆ.ರವಿರವರನ್ನು ಉಪಕುಲಪತಿಯನ್ನಾಗಿ ನೇಮಕ ಮಾಡಿದೆ.

ಕರ್ನಾಟಕ ದಲಿತ ಕಲೆಗಳ ವಿಶ್ವವಿದ್ಯಾಲಯದ ವಿಶೇಷ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಬೋಧನೆ, ಸಂಶೋಧನೆ ಹಾಗೂ ಆಡಳಿತದಲ್ಲಿ ಅಪಾರವಾದ ಅನುಭವ ಹೊಂದಿದ್ದಾರೆ. ಸಂವಹನ, ಪತ್ರಿಕೋದ್ಯಮ,ವಿದ್ಯುನ್ಮಾನ ಮಾಧ್ಯಮ, ಅಭಿವೃದ್ಧಿ ಸಂವಹನ ಹಾಗೂ ರಾಜಕೀಯ ಸಂವಹನದ ಬಗ್ಗೆ ಪರಿಣಿತಿ ಹೊಂದಿದ್ದಾರೆ. ಹಲವಾರು ಸಂಶೋಧನಾ ಪತ್ರಿಕೆಗಳನ್ನು ಹೊರತಂದಿದ್ದು, ಪಿಹೆಚ್‌ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸಿದ್ದರು. ಟಿ.ವಿ. ಸಾಕ್ಷö್ಯ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ರಾಷ್ಟç ಮತ್ತು ಅಂತರಾಷ್ಟಿಯ ಪತ್ರಿಕೆಗಳಿಗೆ ಸಂಪಾದಕೀಯ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಬೋಧನೆ, ಸಂಶೋಧನೆ ಹಾಗೂ ಆಡಳಿತದಲ್ಲಿ ಅಪಾರವಾದ ಅನುಭವ ಹೊಂದಿರುವ ಬಿ.ಕೆ. ರವಿ ರವರು ಬೆಂಗಳೂರು ಉತ್ತರ ವಿಶ್ವವಿದ್ಯಾಲಯಕ್ಕೆ ಹೊಸ ಚೈತನ್ಯ ನೀಡಲಿದ್ದಾರೆ.

ಚಿತ್ರ : ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಉಪ ಕುಲಪತಿಯಾಗಿ ಪ್ರೊ. ಬಿ.ಕೆ.ರವಿ ಶುಕ್ರವಾರ ಅಧಿಕಾರ ವಹಿಸಿಕೊಂಡರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande