
ಬೆಂಗಳೂರು, 05 ಜನವರಿ (ಹಿ.ಸ.) :
ಆ್ಯಂಕರ್ : ಓಂ ಶಕ್ತಿ ಮಾಲಾಧಾರಿಗಳ ಮೆರವಣಿಗೆಯ ಮೇಲೆ ಬೆಂಗಳೂರಿನಲ್ಲಿ ಭಾನುವಾರ ರಾತ್ರಿ ಕಲ್ಲು ತೂರಾಟ ನಡೆದಿದ್ದು, ಇಬ್ಬರು ಯುವತಿಯರಿಗೆ ತಲೆಗೆ ಗಾಯಗಳಾಗಿವೆ. ಘಟನೆ ಜೆಜೆ ನಗರದ ವಿಎಸ್ ಉದ್ಯಾನವನದ ಬಳಿ ಸಂಭವಿಸಿದೆ.
ತಮಟೆ ಸದ್ದಿಗೆ ಹೆಜ್ಜೆ ಹಾಕುತ್ತಾ ಸಾಗುತ್ತಿದ್ದ ಮಾಲಾಧಾರಿಗಳ ಮೇಲೆ ಕತ್ತಲಿನಿಂದ ಕಲ್ಲುಗಳನ್ನು ಎಸೆಯಲಾಗಿದೆ. ಪರಿಣಾಮ ಇಡೀ ಪ್ರದೇಶದಲ್ಲಿ ಗೊಂದಲ ಸೃಷ್ಟಿಯಾಗಿತ್ತು. ಕಲ್ಲೇಟಿನಿಂದ ಇಬ್ಬರು ಯುವತಿಯರ ತಲೆಯಿಂದ ರಕ್ತಸ್ರಾವವಾಗಿದೆ. ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ಬೆನ್ನಲ್ಲೇ ಆಕ್ರೋಶಗೊಂಡ ಓಂ ಶಕ್ತಿ ಮಾಲಾಧಾರಿಗಳು ಜೆಜೆ ನಗರ ಪೊಲೀಸ್ ಠಾಣೆ ಎದುರು ಜಮಾವಣೆಗೊಂಡು ಪ್ರತಿಭಟನೆ ನಡೆಸಿದರು.
“ಅನ್ಯ ಕೋಮಿನವರು ಉದ್ದೇಶಪೂರ್ವಕವಾಗಿ ಕಲ್ಲೆಸೆದಿದ್ದಾರೆ. ಪ್ರತಿದಿನ ಭಯದಲ್ಲೇ ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಿಡಿಗೇಡಿಗಳನ್ನು ತಕ್ಷಣ ಬಂಧಿಸಬೇಕು” ಎಂದು ಆಗ್ರಹಿಸಿದರು.
ಕತ್ತಲಿನಿಂದ ಕಲ್ಲು ತೂರಾಟ ನಡೆದಿರುವುದರಿಂದ ಆರೋಪಿಗಳನ್ನು ಗುರುತಿಸಲು ಸಾಧ್ಯವಾಗಿಲ್ಲ ಎಂದು ಗಾಯಾಳು ಯುವತಿಯ ಸಂಬಂಧಿ ತಿಳಿಸಿದ್ದಾರೆ.
ಈ ಸಂಬಂಧ ಓಂ ಶಕ್ತಿ ಮಾಲಾಧಾರಿಗಳ ಅಧ್ಯಕ್ಷ ಶಶಿಕುಮಾರ್ ನೀಡಿದ ದೂರಿನ ಆಧಾರದಲ್ಲಿ ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಸಂಸದ ಪಿ.ಸಿ. ಮೋಹನ್ ಭೇಟಿ ನೀಡಿ, ಈ ಕ್ಷೇತ್ರದಲ್ಲಿ ಜನರು ಭಯದಿಂದ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಧಾರ್ಮಿಕ ಆಚರಣೆಗಳಿಗೂ ಅಡ್ಡಿ ಏಕೆ ಎಂದು ಪ್ರಶ್ನಿಸಿದರು.
ಪ್ರಕರಣದ ತನಿಖೆಗೆ ಇಬ್ಬರು ಇನ್ಸ್‌ಪೆಕ್ಟರ್‌ಗಳ ತಂಡ ರಚಿಸಲಾಗಿದ್ದು, ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಯತೀಶ್ ತಿಳಿಸಿದ್ದಾರೆ.
ಘಟನೆ ಬಳಿಕ ಜೆಜೆ ನಗರ ಪ್ರದೇಶದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಎರಡು ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಿ ಭದ್ರತೆ ಹೆಚ್ಚಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa