ಶ್ರೀನಿವಾಸಪುರ ಮೌಲಾನ ಆಜಾದ್ ಮಾದರಿ ಶಾಲೆಗೆ ಜಿಲ್ಲಾ ಅಧಿಕಾರಿ ಭೇಟಿ
ಶ್ರೀನಿವಾಸಪುರ ಮೌಲಾನ ಆಜಾದ್ ಮಾದರಿ ಶಾಲೆಗೆ ಜಿಲ್ಲಾ ಅಧಿಕಾರಿ ಭೇಟಿ
ಕೋಲಾರ ಜಿಲ್ಲೆ ಶ್ರೀನಿವಾಸಪುರ ಪಟ್ಟಣದ ಮೌಲಾನಾ ಆಜಾದ್ ವಸತಿ ಶಾಲೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಮೈಲಾರಪ್ಪ ಭೇಟಿ ನೀಡಿ ಪರಿಶೀಲಿಸಿದರು.


ಕೋಲಾರ, ೦೬ ಜನವರಿ (ಹಿ.ಸ) :

ಆ್ಯಂಕರ್ : ಪಟ್ಟಣದ ಅಲ್ಪಸಂಖ್ಯಾತರ ಮೌಲಾನ ಆಜಾದ್ ಮಾದರಿ ಶಾಲೆಗೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಮೈಲೇರಪ್ಪ ಅವರು ಮಂಗಳವಾರ ಭೇಟಿ ನೀಡಿ, ಶಾಲಾ ಆವರಣದಲ್ಲಿ ನಡೆಯುತ್ತಿರುವ ಹಾಗೂ ಪೂರ್ಣಗೊಂಡಿರುವ ಸಿವಿಲ್ ಕಾಮಗಾರಿಗಳನ್ನು ಪರಿಶೀಲಿಸಿ, ಕಾಮಗಾರಿಗಳ ಗುಣಮಟ್ಟವನ್ನು ಅವಲೋಕಿಸಿದರು.

ಶಾಲೆಯ ಕಟ್ಟಡಗಳು, ತರಗತಿ ಕೋಣೆಗಳು, ಮೂಲಸೌಕರ್ಯಗಳು ಹಾಗೂ ವಿದ್ಯಾರ್ಥಿಗಳಿಗೆ ಒದಗಿಸಲಾಗಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಅಧಿಕಾರಿ, ಕಾಮಗಾರಿಗಳು ನಿಗದಿತ ಮಾನದಂಡಗಳಿಗೆ ಅನುಗುಣವಾಗಿ ನಡೆದಿರುವುದನ್ನು ಪರಿಶೀಲಿಸಿದರು.

ಗುಣಮಟ್ಟದಲ್ಲಿ ಯಾವುದೇ ತಾರತಮ್ಯ ಇರಬಾರದು ಹಾಗೂ ವಿದ್ಯಾರ್ಥಿಗಳಿಗೆ ಸುರಕ್ಷಿತ ಮತ್ತು ಅನುಕೂಲಕರ ವಾತಾವರಣ ಕಲ್ಪಿಸುವುದು ಅಗತ್ಯವೆಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಅರುಣ ಅವರು ಮಾತನಾಡಿ, ಶಾಲೆಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳ ಕುರಿತು ಜಿಲ್ಲಾ ಅಧಿಕಾರಿಗಳಿಗೆ ವಿವರಿಸಿದರು.

ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗೆ ಸಂಪ್ ನಿರ್ಮಾಣ, ಭದ್ರತಾ ದೃಷ್ಟಿಯಿಂದ ಸಿಸಿ ಕ್ಯಾಮೆರಾಗಳ ಅಳವಡಿಕೆ, ವಿದ್ಯುತ್ ವ್ಯತ್ಯಯದ ಸಂದರ್ಭಗಳಲ್ಲಿ ಪಾಠ ಕಾರ್ಯ ನಿರಂತರವಾಗಿರಲು ಯುಪಿಎಸ್ ವ್ಯವಸ್ಥೆ, ಸೋಲಾರ್ ಲೈಟ್ ಗುಣಮಟ್ಟದ ಬೋಧನೆಗಾಗಿ ಡಿಜಿಟಲ್ ಬೋರ್ಡ್ಗಳು ಹಾಗೂ ಶಾಲೆಗೆ ಡಿಜಿಟಲ್ ನಾಮಫಲಕ ಅಳವಡಿಸುವಂತೆ ಮನವಿ ಸಲ್ಲಿಸಿದರು.

ಶಾಲಾ ಆಡಳಿತದಿಂದ ಸಲ್ಲಿಸಲಾದ ಬೇಡಿಕೆಗಳ ಮಾಹಿತಿಯನ್ನು ಸ್ವೀಕರಿಸಿದ ಜಿಲ್ಲಾ ಅಧಿಕಾರಿ ಮೈಲೇರಪ್ಪ ಅವರು, ಈ ಎಲ್ಲ ಅಗತ್ಯಗಳನ್ನು ಇಲಾಖೆಯ ಗಮನಕ್ಕೆ ತರಲಾಗುವುದು ಮತ್ತು ನಿಯಮಾನುಸಾರ ಸಾಧ್ಯವಾದಷ್ಟು ಬೇಗ ಶಿಫಾರಸುಗಳನ್ನು ಜಾರಿಗೊಳಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಪ್ರಧಾನಮಂತ್ರಿ ಹೊಸ ೧೫ ಅಂಶಗಳ ಕಾರ್ಯಕ್ರಮದ ಸಮಿತಿಯ ಸದಸ್ಯ ಶಬ್ಬೀರ್ ಅಹ್ಮದ್ ಅವರು ಮಾತನಾಡಿ, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದು ಸರ್ಕಾರದ ಪ್ರಮುಖ ಗುರಿಯಾಗಿದ್ದು, ಅದಕ್ಕಾಗಿ ಅಗತ್ಯವಿರುವ ಮೂಲಸೌಕರ್ಯಗಳನ್ನು ತ್ವರಿತವಾಗಿ ಒದಗಿಸಬೇಕು ಎಂದು ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಇಲಾಖೆಯ ಇಂಜಿನಿಯರ್ ಸಯ್ಯದ್ ಅಬು ತಾಲೀಮ್, ಶಾಲೆಯ ಶಿಕ್ಷಕರು ಹಾಗೂ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರದ ಸಿಬ್ಬಂದಿ ಉಪಸ್ಥಿತರಿದ್ದರು.

ಚಿತ್ರ : ಕೋಲಾರ ಜಿಲ್ಲೆ ಶ್ರೀನಿವಾಸಪುರ ಪಟ್ಟಣದ ಮೌಲಾನಾ ಆಜಾದ್ ವಸತಿ ಶಾಲೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಮೈಲಾರಪ್ಪ ಭೇಟಿ ನೀಡಿ ಪರಿಶೀಲಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande