
ಕೋಲಾರ, ೦೬ ಜನವರಿ (ಹಿ.ಸ) :
ಆ್ಯಂಕರ್ : ಕೋಲಾರ ಜಿಲ್ಲೆಗೆ ಕೃಷ್ಣಾ ನದಿ ನೀರು ಹಂಚಿಕೆ ಮಾಡುವ ಮೂಲಕ ಶಾಶ್ವತ ನೀರಾವರಿ ಸೌಲಭ್ಯ ಒದಗಿಸಬೇಕು ಮತ್ತು ಪ್ರಸ್ತುತ ಜಾರಿಗೊಳಿಸಿರುವ ಕೆ.ಸಿ.ವ್ಯಾಲಿ ಯೋಜನೆಯಿಂದ ಹರಿದು ಬರುತ್ತಿರುವ ಶೇ.೧೦೦ರಷ್ಟು ಶುದ್ಧೀಕರಿಸದ ಕೊಳಚೆ ನೀರಿನ ಅಪಾಯದ ವಿರುದ್ಧ ಎಚ್ಚರಿಕೆ ನೀಡಲು ಜನವರಿ ೧೭ ರಂದು ಕೋಲಾರದಲ್ಲಿ ಬೃಹತ್ 'ಜಲಾಗ್ರಹ' ಸಮಾವೇಶವನ್ನು ಆಯೋಜಿಸಲಾಗಿದೆ. ಜಿಲ್ಲೆಯ ಮೂಲೆ ಮೂಲೆಗಳಿಂದ ಮನೆಗೆ ಒಬ್ಬರಂತೆ ಸಾವಿರಾರು ಜನ ಸಮಾವೇಶಗೊಳ್ಳಬೇಕೆಂದು ಶಾಶ್ವತ ನೀರಾವರಿ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ ಕರೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಕೆಜಿಎಫ್‌ನ ಕಿಂಗ್ ಜಾರ್ಜ್ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯ ಭವಿಷ್ಯಕ್ಕೆ ಮಾರಕವಾಗಿರುವ ಪ್ರಸ್ತುತ ಪರಿಸ್ಥಿತಿ ಮರುಕಳಿಸದಂತೆ ತಡೆಯಲು ತೆಲಂಗಾಣ ಮಾದರಿಯ ಕ್ರಾಂತಿಕಾರಿ ಹೋರಾಟಕ್ಕೆ ಕರೆ ನೀಡಲಾಯಿತು.
ಜಿಲ್ಲೆಯಲ್ಲಿ ಕೆ.ಸಿ. ವ್ಯಾಲಿ, ಹೆಚ್.ಎನ್. ವ್ಯಾಲಿ ಮತ್ತು ವೃಷಭಾವತಿ ಯೋಜನೆಗಳ ಮೂಲಕ ಕೆರೆಗಳಿಗೆ ಹರಿಸುತ್ತಿರುವ ನೀರು ಸಂಪೂರ್ಣ ಶುದ್ಧೀಕರಣಗೊಳ್ಳದೆ ಬರುತ್ತಿರುವುದು ಜನರ ಆತಂಕಕ್ಕೆ ಮುಖ್ಯ ಕಾರಣವಾಗಿದೆ. ಮಹಾರಾಷ್ಟ್ರದ ಇಂದೋರ್‌ನಲ್ಲಿ ಇತ್ತೀಚೆಗೆ ಕೇವಲ ಕುಡಿಯುವ ನೀರಿನಲ್ಲಿ ಕೊಳಚೆ ನೀರು ಮಿಶ್ರಣವಾಗಿ ಏಳು ಜನ ಸಾವನ್ನಪ್ಪಿ, ೨,೫೦೦ಕ್ಕೂ ಹೆಚ್ಚು ಜನ ಆಸ್ಪತ್ರೆ ಸೇರಿರುವ ಘಟನೆಯನ್ನು ಉಲ್ಲೇಖಿಸಿ,ಕೊಳಚೆ ನೀರಿನ ದುರಂತದ ಅಪಾಯದ ಬಗ್ಗೆ ನೀರಾವರಿ ಹೋರಾಟಗಾರರಾದ ರಾಜೇಶ್ ಅವರು ಗಂಭೀರ ಎಚ್ಚರಿಕೆ ನೀಡಿದರು. ಜಿಲ್ಲೆಯ ಹಲವು ಪ್ರದೇಶಗಳು ಈಗಾಗಲೇ ಅಪಾಯಕಾರಿ 'ರೆಡ್ ಝೋನ್'ನಲ್ಲಿವೆ ಎಂದು ಸರ್ಕಾರವೇ ವರದಿ ನೀಡಿದ್ದರೂ, ಈ ಅಪಾಯವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಹೋರಾಟಗಾರರು ದೂರಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶಾಶ್ವತ ನೀರಾವರಿ ಬೇಡಿಕೆಗೆ ಸ್ಪಂದಿಸದ ಕಾರಣ ಇದೊಂದು ಅನಿವಾರ್ಯ ಹೋರಾಟವಾಗಿದ್ದು, ಕೆ.ಸಿ. ವ್ಯಾಲಿ, ಹೆಚ್.ಎನ್. ವ್ಯಾಲಿ ಮತ್ತು ವೃಷಭಾವತಿ ಯೋಜನೆಗಳ ಮೂಲಕ ಹರಿಸುತ್ತಿರುವ ಕೊಳಚೆ ನೀರನ್ನು ಶೇ. ೧೦೦ ರಷ್ಟು ಶುದ್ಧೀಕರಿಸಿ ಮಾತ್ರ ಕೆರೆಗಳಿಗೆ ತುಂಬಿಸಬೇಕು ಎಂದು ಒತ್ತಾಯಿಸಲಾಗಿದೆ.ಅಲ್ಲದೆ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಎಲ್ಲಾ ಭಾಗಗಳಿಗೆ ಶಾಶ್ವತ ಕುಡಿಯುವ ನೀರಿನ ಪರಿಹಾರವಾಗಿ ಕೃಷ್ಣಾ ನದಿಯ ಭೀಮಾ ಪಚಾವತ್ ಸ್ಕೀಮ್‌ನಿಂದ ಕೆರೆಗಳನ್ನು ತುಂಬಿಸಬೇಕು. ಆಂಧ್ರಪ್ರದೇಶವು 'ಆಂಧ್ರ ನಿವಾಸ್ ಸುಜಲಾ ಶ್ರವಂತಿ' ಯೋಜನೆಯಡಿ ೭೭೦ ಕಿ.ಮೀ. ಉದ್ದದ ಕಾಲುವೆಯನ್ನು ನಿರ್ಮಿಸಿ ಕುಪ್ಪಂವರೆಗೂ ನೀರನ್ನು ತಲುಪಿಸಿದ ಮಾದರಿಯಲ್ಲಿ ರಾಜ್ಯ ಸರ್ಕಾರವು ಕಾರ್ಯನಿರ್ವಹಿಸಬೇಕು. ಈ ಹೋರಾಟಕ್ಕೆ ನಿವೃತ್ತ ನ್ಯಾಯಮೂರ್ತಿ ಜಸ್ಟಿಸ್ ಗೋಪಾಲ್ ಗೌಡ ಅವರು 'ಜಲಾಗ್ರಹ' ಚಳುವಳಿಯ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡಿದ್ದು, ಅವರ ನೇತೃತ್ವವು ಹೋರಾಟಕ್ಕೆ ಪಾರದರ್ಶಕತೆ ಮತ್ತು ಗೆಲುವಿನ ವಿಶ್ವಾಸ ತಂದಿದೆ ಎಂದರು.
ಕಳೆದ ೩೦ ವರ್ಷಗಳಲ್ಲಿ ನಡೆಸಿದ ಚಿಕ್ಕಬಳ್ಳಾಪುರದ ೬೪ ದಿನಗಳ ಉಪವಾಸ, ಚದಲಪುರ ಕ್ರಾಸ್‌ನ ೧೬೯ ದಿನಗಳ ಹೋರಾಟ ಮತ್ತು ಕೋಲಾರದ ೩೬೮ ದಿನಗಳ ಹೋರಾಟಗಳು ಸರ್ಕಾರಕ್ಕೆ 'ಬಿಸಿ ಸಾಕಾಗಲಿಲ್ಲ' ಎಂದು ಬೇಸರ ವ್ಯಕ್ತಪಡಿಸಿದರು. ಇನ್ನು ಮುಂದೆ ಬಿಡಿಬಿಡಿ ಹೋರಾಟ ಸಾಲದು, ತೆಲಂಗಾಣ ಮಾದರಿಯಲ್ಲಿ ಮೂರು ಜಿಲ್ಲೆಗಳವರು ಒಗ್ಗಟ್ಟಾಗಿ ಎದ್ದು ನಿಂತರೆ ಖಂಡಿತ ನೀರು ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಜನರ ಭರವಸೆ ಮತ್ತು ವಿಶ್ವಾಸಕ್ಕೆ 'ಸಾಸಿವೆ ಕಾಳಿನಷ್ಟೂ ಕುಂದು ಬರದೇ ಇರೋ ತರ ನಡ್ಕೊಳ್ಳುತ್ತೇವೆ'. ಜಸ್ಟಿಸ್ ಗೋಪಾಲ್ ಗೌಡರ ಜೊತೆಗೆ ನಿವೃತ್ತ ಐಎಎಸ್, ಐಪಿಎಸ್ ಅಧಿಕಾರಿಗಳು ಮತ್ತು ಚಿಂತಕರು ಸಮಿತಿಗೆ ಬೆಂಬಲ ನೀಡುತ್ತಿರುವುದು ದೊಡ್ಡ ಬಲ ತಂದಿದೆ ಎಂದು ಅವರು ತಿಳಿಸಿದರು.
ಮಾಜಿ ಶಾಸಕ ವೈ.ಸಂಪ0ಗಿ ಅವರು ಮಾತನಾಡಿ,ನಮ್ಮ ಕೋಲಾರ ಜಿಲ್ಲೆಯಲ್ಲಿ ಶಾಶ್ವತವಾದ ಕುಡಿಯುವ ನೀರಿಗಾಗಿ ಹೋರಾಟವನ್ನು ಮಾಡುತ್ತಿದ್ದು,ಇದು ನಮ್ಮ ಜಿಲ್ಲೆಯ ಜನರ ಋಣ ತೀರಿಸುವ ಸುವರ್ಣಾವಕಾಶ. ರಾಜಕೀಯ ನಿಲುವು ಏನೇ ಇರಲಿ, ಪಕ್ಷಾತೀತವಾಗಿ ಈ ಹೋರಾಟದಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಕೆಜಿಎಫ್ ತಾಲೂಕಿನ ಜೆಡಿಎಸ್ ಮುಖಂಡರಾದ ರಮೇಶ್ ಬಾಬು ಮಾತನಾಡಿ ಕೆಜಿಎಫ್‌ನ ಕುಡಿಯುವ ನೀರಿನ ಸಮಸ್ಯೆ ಮತ್ತು ಕೈಗಾರಿಕಾ ತ್ಯಾಜ್ಯ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲು ಜನವರಿ ೧೭ ರ ಸಮಾವೇಶದ ಕೂಗು ನೇರವಾಗಿ ವಿಧಾನಸೌಧವನ್ನು ತಲುಪಬೇಕು ಎಂದು ಆಗ್ರಹಿಸಿ, ಕೆಜಿಎಫ್ ನಾಗರಿಕರು ಈ ಹೋರಾಟದಲ್ಲಿ ದೊಡ್ಡವರು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ 'ತನು,ಧನ, ಮನ' ಅರ್ಪಿಸಲು ಸಿದ್ಧರಿರುವುದಾಗಿ ಆಶ್ವಾಸನೆ ನೀಡಿದರು.
ಜನವರಿ ೧೭ರ ಕೋಲಾರ ಸಮಾವೇಶವು ಇಡೀ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಈ ಭಾಗದ ಜನರು ರೊಚ್ಚಿಗೆದ್ದಿದ್ದಾರೆ; ಅವರಿಗೆ ಕುಡಿಯುವ ನೀರನ್ನು ಕೊಡಲೇಬೇಕಾಗಿದೆ ಎಂಬ ಪ್ರಬಲ ಸಂದೇಶವನ್ನು ರವಾನಿಸಲಿದ್ದು, ಹೋರಾಟವನ್ನು ಯಶಸ್ವಿಗೊಳಿಸಲು ಮನೆ-ಮನೆಗಳಿಂದ ಒಬ್ಬೊಬ್ಬರು ಎದ್ದು ಬರಬೇಕು ಮತ್ತು ಪ್ರತಿಯೊಬ್ಬ ಭಾಗವಹಿಸುವವರು ಕನಿಷ್ಠ ೧೦ ಜನರನ್ನು ಕರೆತರಬೇಕು ಎಂದು ಮನವಿ ಮಾಡಿಕೊಂಡರು.
ಸಭೆಯಲ್ಲಿ ನೀರಾವರಿ ಹೋರಾಟಗಾರರಾದ ಹೊಳಲಿ ಪ್ರಕಾಶ್, ವಿ.ಕೆ.ರಾಜೇಶ್, ಅಬ್ಬಿಣಿ ಶಿವಪ್ಪ, ಡಾ.ಡಿ.ಕೆ.ರಮೇಶ್, ಟಮಕ ಶ್ರೀನಾಥ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಅಶ್ವಿನಿ , ಸೇವ್ ಕೆಜಿಎಫ್ ಸಮಿತಿಯ ಅಧ್ಯಕ್ಷರಾದ ಜ್ಯೋತಿ ಬಸು, ದಯಾಳ್, ತಂಗರಾಜು, ಕನ್ನಡ ಸಂಘ ಅಧ್ಯಕ್ಷರಾದ ಪ್ರಸನ್ನ ರೆಡ್ಡಿ, ವಿಜಯ ಕುಮಾರ್, ಲಕ್ಷ್ಮೀನಾರಾಯಣ ಶರ್ಮ, ಸುಲೋಚನಾ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುನೀಲ್ ಕುಮಾರ್, ಸಂಚಾಲಕರಾದ ರಾಜೇಶ್, ಮತ್ತು ಬೆವಲ್ಲಿ ರಾಮಕೃಷ್ಣಪ್ಪ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್