
ಗದಗ, 17 ಜನವರಿ (ಹಿ.ಸ.) :
ಆ್ಯಂಕರ್ : ದಾನ ಚಿಂತಾಮಣಿ ಅತ್ತಿ ಮಬ್ಬೆಯಿಂದ ಹಿಡಿದು ಅನೇಕ ಐತಿಹಾಸಿಕ ಸಾಕ್ಷ್ಯಗಳನ್ನು ತನ್ನ ಒಡಲಲ್ಲಿ ಹೊತ್ತಿರುವ ಲಕ್ಕುಂಡಿ ಗ್ರಾಮವನ್ನು ವಿಶ್ವ ಪಾರಂಪರಿಕ ತಾಣವನ್ನಾಗಿ ಘೋಷಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂದಾಗಿದೆ. ಈ ಹಿನ್ನೆಲೆ ಲಕ್ಕುಂಡಿಯ ಶ್ರೀ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಅಂಗಳದಲ್ಲಿ ಆರಂಭಗೊಂಡ ಉತ್ಖನನ (ಶೋಧ) ಕಾರ್ಯ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಶೋಧ ಕಾರ್ಯದ ವೇಳೆ ಪುರಾತನ ಶಿಲಾಕೃತಿ ಪತ್ತೆಯಾಗಿರುವುದು ವಿಶೇಷ ಗಮನ ಸೆಳೆದಿದೆ.
ಬೆಳಿಗ್ಗೆಯೇ ಸುಮಾರು 30 ರಿಂದ 35 ಕಾರ್ಮಿಕರ ಸಹಕಾರದೊಂದಿಗೆ ನಡೆದ ಉತ್ಖನನದ ವೇಳೆ ಪ್ರಾಚೀನ ಶಿಲಾಕೃತಿ ಹೊರಬಂದಿದ್ದು, ಪುರಾತತ್ವ ತಜ್ಞರು ಶಿಲೆಯ ಸ್ವರೂಪ ಮತ್ತು ಅದರ ಐತಿಹಾಸಿಕ ಹಿನ್ನೆಲೆಯನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಶಿಲಾಕೃತಿ ಎಷ್ಟು ವರ್ಷಗಳ ಹಳೆಯದು ಎಂಬುದು ಸ್ಪಷ್ಟವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಉತ್ಖನನ ನಡೆಯುತ್ತಿರುವ ಪ್ರದೇಶವನ್ನು ‘ಸೂಕ್ಷ್ಮ ವಲಯ’ವೆಂದು ಘೋಷಿಸಿ, ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರ ಆದೇಶದಂತೆ, ಉತ್ಖನನ ಕಾರ್ಯಕ್ಕೆ ಯಾವುದೇ ಅಡ್ಡಿ ಉಂಟಾಗದಂತೆ ಸ್ಥಳದಲ್ಲಿ ಫೋಟೋ ಹಾಗೂ ವೀಡಿಯೋಗ್ರಫಿಗೆ ನಿಷೇಧ ವಿಧಿಸಲಾಗಿದೆ.
ಸ್ಥಳೀಯರ ಮಾಹಿತಿ ಪ್ರಕಾರ, ಲಕ್ಕುಂಡಿ ಹಿಂದಿನ ಕಾಲದಲ್ಲಿ ಏಳು ಗ್ರಾಮಗಳ ಅಗ್ರಹಾರವಾಗಿದ್ದು, ವಿಜಯನಗರ ಅರಸರ ಆಡಳಿತದ ನಂತರ ಇಲ್ಲಿ ಜನವಸತಿ ಹೆಚ್ಚಾಗಿದೆ. ಈ ಪ್ರದೇಶದಲ್ಲಿ ಹಿಂದಿನಿಂದಲೂ ನಾಣ್ಯಗಳು, ಕಲ್ಲಿನ ವಿಗ್ರಹಗಳು, ಬೆಳ್ಳಿ, ಬಂಗಾರ, ಮುತ್ತು ಹಾಗೂ ಹವಳದ ತುಣುಕುಗಳು ಸಿಗುತ್ತಲೇ ಬಂದಿರುವುದು ಲಕ್ಕುಂಡಿಯ ಐತಿಹಾಸಿಕ ಮಹತ್ವವನ್ನು ಮತ್ತಷ್ಟು ದೃಢಪಡಿಸುತ್ತದೆ.
ಇನ್ನು ಉತ್ಖನನ ಕಾರ್ಯವು ದೇವಸ್ಥಾನ ಆವರಣದಲ್ಲಿ ನಡೆಯುತ್ತಿರುವುದಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಹಾಗೂ ಭಕ್ತರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಮಾರ್ಚ್ 20ರಿಂದ ನಡೆಯಲಿರುವ ಕೋಟೆ ವೀರಭದ್ರೇಶ್ವರ ಜಾತ್ರೆಗೆ ಸಿದ್ಧತೆ ನಡೆಯುತ್ತಿರುವ ಸಂದರ್ಭದಲ್ಲೇ ಸರ್ಕಾರದ ನಿರ್ಬಂಧಗಳು ಜಾರಿಯಾಗಿರುವುದರಿಂದ ಭಕ್ತರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ಸ್ಥಳದಲ್ಲಿ ವರ್ಷಗಳಿಂದ ಅಗ್ನಿಕುಂಡ ಸೇರಿದಂತೆ ಜಾತ್ರೆಯ ವಿಧಿವಿಧಾನಗಳು ನಡೆಯುತ್ತಿದ್ದು, ಉತ್ಖನನದಿಂದ ಜಾತ್ರೆಗೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ.
ಸುಮಾರು 45 ವರ್ಷಗಳ ಇತಿಹಾಸ ಹೊಂದಿರುವ ವೀರಭದ್ರೇಶ್ವರ ಜಾತ್ರೆಗೆ ಅಡ್ಡಿ ಉಂಟಾದಲ್ಲಿ ಹೋರಾಟ ನಡೆಸುವುದು ಅನಿವಾರ್ಯ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ಜಿಲ್ಲಾಡಳಿತಕ್ಕೆ ಮೌಖಿಕವಾಗಿ ಮನವಿ ಮಾಡಿರುವುದಾಗಿ ತಿಳಿಸಿರುವ ಅವರು, ಸರ್ಕಾರ ಸ್ಪಂದಿಸದಿದ್ದರೆ ಬೀದಿಗಿಳಿದು ಪ್ರತಿಭಟನೆ ನಡೆಸುವುದಾಗಿ ಕಠಿಣ ನಿಲುವು ತಳೆದಿದ್ದಾರೆ.
ಒಟ್ಟಾರೆ, ಒಂದೆಡೆ ಉತ್ಖನನದ ಮೂಲಕ ಲಕ್ಕುಂಡಿಯ ಐತಿಹಾಸಿಕ ಮಹತ್ವವನ್ನು ಜಗತ್ತಿಗೆ ಪರಿಚಯಿಸುವ ಪ್ರಯತ್ನ ನಡೆಯುತ್ತಿದರೆ, ಮತ್ತೊಂದೆಡೆ ಧಾರ್ಮಿಕ ಆಚರಣೆಗಳಿಗೆ ಅಡ್ಡಿಯಾಗುತ್ತಿದೆ ಎಂಬ ಗ್ರಾಮಸ್ಥರ ಅಸಮಾಧಾನ ಜಿಲ್ಲಾಡಳಿತಕ್ಕೆ ಸವಾಲಾಗಿ ಪರಿಣಮಿಸಿದೆ.
ಇತಿಹಾಸ ಸಂರಕ್ಷಣೆ ಮತ್ತು ಧಾರ್ಮಿಕ ಭಾವನೆಗಳ ನಡುವೆ ಸಮತೋಲನ ಸಾಧಿಸುವಲ್ಲಿ ಜಿಲ್ಲಾಡಳಿತ ಯಾವ ತೀರ್ಮಾನ ಕೈಗೊಳ್ಳುತ್ತದೆ ಎಂಬುದೇ ಈಗ ಪ್ರಮುಖ ಪ್ರಶ್ನೆಯಾಗಿದೆ.
ಹಿಂದೂಸ್ತಾನ್ ಸಮಾಚಾರ್ / lalita MP