
ಕೋಲಾರ, 17 ಜನವರಿ(ಹಿ.ಸ) :
ಆ್ಯಂಕರ್ : ಬೆಂಗಳೂರಿನ ಅಪಾರ್ಟ್ನಲ್ಲಿ ಏಷಾರಾಮಿ ಬದಕು ನಡೆಸುವವರಿಗೆ ಕಾವೇರಿಯ ಶುದ್ಧ ನೀರು ಪೂರೈಕೆ ಮಾಡಲಾಗುತ್ತಿದೆ.ಅದಕ್ಕಾಗಿ ಬೆಂಗಳೂರು ಜಲಮಂಡಳಿ ಕಾರ್ಯನಿರ್ವಹಿಸುತ್ತಿದೆ. ಸಾವಿರಾರು ಕೋಟಿ ರೂಪಾಯಿ ನೀರು ಪೂರೈಕೆಗಾಗಿ ಸರ್ಕಾರ ಅನುದಾನ ನೀಡಿತ್ತಿದೆ. ಬಾಯಾರಿದ ಬಯಲು ಸೀಮೇಯ ಜನರು ನೀರು ಕೇಳಿದರೆ ನಮ್ಮನ್ನು ಆಳುವ ಸರ್ಕಾಗಳು ಕೈಗಾರಿಕಾ ತ್ಯಾಜ್ಯ ಹಾಗು ಮಲ ಮಿಶ್ರಿತ ನೀರು ಪೂರೈಕೆ ಮಾಡಿ ಹೀನಾಯವಾಗಿ ನಡೆಸಿಕೊಳ್ಳತ್ತಿವೆ.ಶುದ್ಧ ಕುಡಿಯುವ ನೀರು ನಮ್ಮ ಸಂವಿಧಾನಾತ್ಮಕ ಹಕ್ಕು ಆಗಿದೆ. ಆಳುವ ಸರ್ಕಾರಗಳು ಅಮಾನವೀಯವಾಗಿ ನಡೆದುಕೊಳ್ಳುತ್ತಿವೆ. ಶುದ್ಧ ನೀರಿಗಾಗಿ ನಡೆಯುತ್ತಿರುವ ಜಲಾಗ್ರಹ ಕೇವಲ ಸಾಮಾನ್ಯ ಹೋರಾಟವಲ್ಲ. ನೀರಿಗಾಗಿ ಎರಡನೇ ಸ್ವಾತಂತ್ರ್ಯ ಸಂಗ್ರಾಮ ನಡೆಯಬೇಕಿದೆ. ಆ ಮೂಲಕ ಆಳುವ ಸರ್ಕಾರಗಳನ್ನು ಬಡಿದೆಬ್ಬಿಸುವ ಜನಾಂದೋಲನ ನಡೆಯಬೇಕೆಂದು ಸುಪ್ರೀಮ್ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲ ಗೌಡರು ಕರೆ ನೀಡಿದರು.
ಕೋಲಾರದಲ್ಲಿ ಶನಿವಾರ ನಡೆದ ಜಲಾಗ್ರಹ ಸಮಾವೇಷವನ್ನು ಉದ್ಘಾಟಿಸಿ ಮಾತನಾಡಿದರು. ನನಗೇನು ಸಂಸತ್ ಸ್ಥಾನಮಾನ ಗೌವರ್ನರ್ ಹುದ್ದೆ ಅಥವಾ ಕಮೀಷನ್ ಬೇಕಾಗಿಲ್ಲ. ನನ್ನ ಜೀವ ಇರುವ ತನಕ ನಿಮ್ಮೊಂದಿಗೆ ನೀರಿಗಾಗಿ ಹೋರಾಟ ನಡೆಸುತ್ತೇನೆ. ನೀವು ಕುಗ್ಗಬೇಕಾಗಿಲ್ಲ. ಯಾರ ಮುಂದೆಯು ತಲೆಬಾಗಬೇಕಾಗಿಲ್ಲ. ನಿಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಶುದ್ಧ ನೀರು ಕೊಡದ ಜನಪ್ರತಿನಿಧಿಗಳನ್ನು ಬೀದಿಯಲ್ಲಿ ನಿಲ್ಲಿಸಿ ಪ್ರಶ್ನೆ ಮಾಡಲಾಗುವುದು. ನಾವು ಯಾರ ಮುಂದೆಯು ತಲೆಬಾಗಿ ನೀರು ಕೊಡಿ ಎಂದು ಅಂಗಲಾಚುತ್ತಿಲ್ಲ. ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಮುಂದೆ ಶುದ್ಧ ನೀರು ಪೂರೈಕೆ ಮಾಡಬೇಕೆಂದು ನಮ್ಮ ಹಕ್ಕೋತ್ತಾಯವನ್ನು ಮಂಡಿಸುತ್ತಿದೇವೆ. ರಾಜ್ಯಬಾರ ಮಾಡುತ್ತಿರುವವರು ಕೋಲಾರ, ಚಿಕ್ಕಬಳ್ಳಾಪುರ ಹಾಗು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯಲು ಮತ್ತು ಕೃಷಿಗಾಗಿ ಶುದ್ಧ ನೀರು ಪೂರೈಕೆ ಮಾಡಬೇಕು ಎಂಬುದು ನಮ್ಮ ಹಕ್ಕೋತ್ತಾಯವಾಗಿದೆ ಎಂದು ತಿಳಿಸಿದರು.
ಇದು ಕೇವಲ ನೀರಿಗಾಗಿ ನಡೆಯುತ್ತಿರುವ ಹೋರಾಟವಲ್ಲ. ಜನರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ನಡೆಯುತ್ತಿರುವ ಹೋರಾಟವಾಗಿದೆ. ಬೆಂಗಳೂರಿನ ಸಂಸ್ಕರಿಸಿದ ತ್ಯಾಜ್ಯ ನೀರು ಕಲುಷಿತಗೊಂಡಿದೆ.ಹಲವಾರು ಕೈಗಾರಿಕಾ ತ್ಯಾಜ್ಯಗಳ ಮಿಶ್ರಿತ ನೀರನ್ನು ಮೂರು ಜಿಲ್ಲೆಗಳಿಗೆ ಸರಬರಾಜು ಮಾಡಲಾಗತ್ತಿದೆ.ತ್ಯಾಜ್ಯ ನೀರಿನಲ್ಲಿ ಫ್ಲೋರೈಡ್ ಅಂಶ ಅಧಿಕ ಪ್ರಮಾಣದಲ್ಲಿದ್ದು ವಿಷಕಾರಿಯಾಗಿದೆ. ಎತ್ತಿನಹೊಳೆ ಯೋಜನೆಗಾಗಿ ಈಗಾಗಲೇ ಸಾವಿರಾರು ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಆದರೆ ಇದುವರೆಗೂ ನೀರು ಮಾತ್ರ ಹರಿದಿಲ್ಲ. ಎತ್ತಿನಹೊಳೆ ಯೋಜನೆಯ ಹಣ ಲೂಟಿ ಮಾಡಿ ಹಲವರು ವಿಧಾನಸಭೆ ಮತ್ತು ಸಂಸತ್ ಪ್ರವೇಶಮಾಡಿದ್ದಾರೆ.ಆದರೆ ಜನರಿಗೆ ಶುದ್ಧ ನೀರು ಇದುವರೆಗೂ ಕೊಡಲು ಅವರಿಂದ ಸಾಧ್ಯವಾಗಿಲ್ಲ ಎಂದು ಆಳುವ ವರ್ಗಗಳ ವಿರುದ್ಧ ಗುಡುಗಿದರು.
ಬಯಲು ಸೀಮೆಯ ಬಾಯಾರಿದ ಜನರ ಭವಣೆಯನ್ನು ಕೇಳುವ ತಾಳ್ಮೆ ಭಾರಿ ನೀರಾವರಿ ಮತ್ತು ಸಣ್ಣ ನೀರಾವರಿ ಸಚಿವರಿಗೆ ಪುರುಸೊತ್ತು ಇಲ್ಲ. ಸಣ್ಣ ನೀರಾವರಿ ಸಚಿವರು ಜನರಿಂದ ನೇರವಾಗಿ ಆಯ್ಕೆಯಾದವರಲ್ಲ. ಅವರು ವಿಧಾನಪರಿಷತ್‌ಗೆ ನಾಮನಿರ್ದೇಶನಗೊಂಡವರು. ಆದ್ದರಿಂದ ಅವರಿಗೆ ಜನರ ಭವಣೆ ಅರ್ಥವಾಗುವುದಿಲ್ಲ ಎಂದು ಗೋಪಾಲ ಗೌಡರು ಅಸಮದಾನ ಹೊರಹಾಕಿದರು.
ಆಂಧ್ರ ಪ್ರದೇಶದ ಉಪಮುಖ್ಯ ಮಂತ್ರಿ ಪವನ್ ಕಲ್ಯಾಣ್ ಚಿಂತಾಮಣಿ ಕಾಂರ್ಯಕ್ರಮಕ್ಕೆ ಆಗಮಿಸಿದಾಗ ಇಲ್ಲಿನ ಜನರ ನೀರಿನ ಭವಣೆಯ ಬಗ್ಗೆ ಅವರ ಗಮನ ಸೆಳೆಯಲಾಯಿತು. ಅವರು ಸಕಾರಾತ್ಮವಾಗಿ ಸ್ಪಂದಿಸಿದ್ದಾರೆ. ಅಮರಾವತಿಯಲ್ಲಿ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ರವರ ಜೊತೆಯಲ್ಲಿ ಮಾತುಕತೆಗೆ ಆಹ್ವಾನಿಸಿದ್ದಾರೆ. ಕೇಂದ್ರ ರಾಜ್ಯ ಜಲಸಚಿವ ಸೋಮಣ್ಣವರೊಡನೇ ಸಹ ಚರ್ಚಿಸಲಾಗಿದೆ. ಆಂಧ್ರಪ್ರದೇಶ ಗೌವರ್ನರ್ ಅಬ್ದುಲ್ ನಜೀರ್ ಸಾಬ್ ನನ್ನನ್ನು ದೂರವಾಣಿಯಲ್ಲಿ ಸಂಪರ್ಕ ಮಾಡಿ ಕೃಷ್ಣಾ ನದಿ ನೀರನ್ನು ಚಿತ್ತೂರು ಜಿಲ್ಲೆಯ ಮೂಲಕ ಕೋಲಾರ ಜಿಲ್ಲೆಗೆ ಹರಿಸಲು ಆಂಧ್ರಪ್ರದೇಶದ ಸರ್ಕಾರ ಸಕಾರಾತ್ಮಕವಾಗಿ ಸ್ಪಂಧಿಸಿದೆ. ಹೆಚ್ಚಿನ ಮಾತುಕತೆಗೆ ಅಮರಾವತಿಗೆ ಬನ್ನಿ ಎಂದು ತಿಳಿಸಿದರು.
ಕೃಷ್ಣಾ ನದಿಯ ನೀರನ್ನು ಈಗಾಗಲೇ ಆಂದ್ರಪ್ರದೇಶದ ಗಡಿಜಿಲ್ಲೆಗಳಿಗೆ ಹರಿಸಲಾಗಿದೆ. ಕೃಷ್ಣಾ ನದಿಯ ನಮ್ಮ ಪಾಲನ್ನು ಪಡೆಯಲು ಆಂದ್ರ ಪ್ರದೇಶದ ಸರ್ಕಾರದೊಂದಿಗೆ ಮಾತುತೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಶಾಶ್ವತ ನೀರಾವರಿ ಸಮಿತಿಯ ಅಧ್ಯಕ್ಷರಾದ ಚಿಕ್ಕಬಳ್ಳಾಪುರದ ಆಂಜನೇಯರೆಡ್ಡಿ ಮಾತನಾಡಿ ಕೋಲಾರ,ಚಿಕ್ಕಬಳ್ಳಾಪುರ ಹಾಗು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಜನರಿಗೆ ಬೆಂಗಳೂರಿನ ಕಲುಷಿತ ತ್ಯಾಜ್ಯ ನೀರು ಪೂರೈಕೆ ಮಾಡಿ ಅಮಾನವೀಯವಾಗಿ ಸರ್ಕಾರ ನಡೆದುಕೊಳ್ಳುತ್ತಿದೆ. ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳು ಪೆನ್ನಾರ್ ನದಿಯ ಪಾತ್ರದ ವ್ಯಾಪ್ತಿಗೆ ಬರುತ್ತವೆ. ಕೃಷ್ಣಾನದಿಯ ಕೊಳ್ಳದಲ್ಲಿ ನಮ್ಮ ಪಾಲು ಇದೆ. ಇಪ್ಪತ್ತೆöÊದು ವರ್ಷಗಳ ಹಿಂದೆ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಆಂದ್ರ ಪ್ರದೇಶ ಮತ್ತು ಕೋಲಾರ ಜಿಲ್ಲೆಗಳಿಗಳಿಗೆ ಏಳು ನೀರಾವರಿ ಯೋಜನೆಗಳನ್ನು ರೂಪಿಸಿದ್ದರು. ಆಂದ್ರ ಪ್ರದೇಶ ಸರ್ಕಾರ ಈಗಾಲೇ ಆರು ಯೋಜನೆಗಳನ್ನು ಜಾರಿಮಾಡಿದೆ. ಪೆನ್ನಾರ್ ಕೃಷ್ಣಾ ನದಿಯ ಯೋಜನೆ ಕೋಲಾರ ಜಿಲ್ಲೆಯಲ್ಲಿ ಕಾರ್ಯಗತವಾಗಿಲ್ಲ. ಆನಂತಪುರ ಜಿಲ್ಲೆಯ ಹಿಂದೂಪುರದವರೆಗೆ ಹಾಗು ಚಿತ್ತೂರು ಜಿಲ್ಲೆಯ ಪುಂಗನೂರು, ಪಲಮನೇರು ಹಾಗು ಕುಪ್ಪಂ ತಾಲೂಕಿನ ಕೆರೆಗಳಿಗಳಿಗೆ ನೀರು ಹರಿಸಲಾಗಿದೆ. ಕೃಷಿ ಮತ್ತು ಕುಡಿಯುವ ನೀರಿಗಾಗಿ ನೀರು ಆಂದ್ರಪ್ರದೇಶ ಪೂರೈಕೆ ಮಾಡಿದೆ. ಆದರೆ ಕರ್ನಾಟಕ ಸರ್ಕಾರದ ಜಡತ್ವದಿಂದಾಗಿ ಕೃಷ್ಣಾ ನದಿಯ ನೀರಿನ ಪಾಲನ್ನು ಅವಭಜಿತ ಕೋಲಾರ ಜಿಲ್ಲೆ ಪಡೆಯಲು ಸಾಧ್ಯವಾಗಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಂಸದ ಎಂ.ಮಲ್ಲೇಶ್ ಬಾಬು, ಮಾಜಿ ಸಂಸದ ಎಸ್.ಮುನಿಸ್ವಾಮಿ, ಚಿಕ್ಕಬಳ್ಳಾಪುರದ ಸುಷ್ಮ ಶ್ರೀನಿವಾಸ್, ವಕೀಲರಾದ ಕೆ.ವಿ.ಶಂಕರಪ್ಪ, ಜೆಡಿಎಸ್ ಮುಖಂಡ ಸಿ.ಎಂ.ಆರ್. ಶ್ರೀನಾಥ್, ಕೆಜಿಎಫ್ ಮಾಜಿ ಶಾಸಕ ಎನ್.ಸಂಪAಗಿ, ಮಾಲೂರಿನ ಹೂಡಿ ವಿಜಯಕುಮಾರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂಶಕ್ತಿ ಚಲಪತಿ, ಪ್ರಧಾನ ಕಾರ್ಯದರ್ಶಿ ಬಂಗಾರಪೇಟೆ ಮಹೇಶ್ ಮುಂತಾದವರು ಭಾಗಿಯಾಗಿದ್ದರು.
ಚಿತ್ರ : ಕೋಲಾರದಲ್ಲಿ ಶನಿವಾರ ನಡೆದ ಜಲಾಗ್ರಹ ಶುದ್ಧ ಕುಡಿಯುವ ನೀರಿನ ಆಂದೋಲನದಲ್ಲಿ ಸುಪ್ರಿಂ ಕೊರ್ಟ್ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡರು ಮಾತನಾಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್