
ವಿಜಯಪುರ, 17 ಜನವರಿ (ಹಿ.ಸ.) :
ಆ್ಯಂಕರ್ : ವಿಜಯಪುರ ನಗರದ ಜಿಲ್ಲಾ ಪಂಚಾಯತಿ ರಸ್ತೆಯಲ್ಲಿರುವ ಗಾಂಧಿ ಭವನಕ್ಕೆ ಅಗತ್ಯ ಇರುವ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮ ವಹಿಸುವಂತೆ ಇಲಾಖೆಗಳ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಆನಂದ ಕೆ ಅವರು ಸೂಚಿಸಿದರು.
ಶನಿವಾರ ನಗರದ ಗಾಂಧೀ ಭವನದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗಾಂಧಿ ಭವನವು ಗಾಂಧೀಜಿಯವರ ತತ್ವಗಳ ಪ್ರಚಾರ ಮಾಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲು ಕ್ರಮ ವಹಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಮಹಾತ್ಮಾ ಗಾಂಧೀಜಿಯವರ ಜೀವನ ಆಧಾರಿತ ಪುಸ್ತಕಗಳನ್ನು ಪಟ್ಟಿ ಮಾಡಿ, ಖರೀದಿಸಿ ಗಾಂಧೀ ಭವನದ ಗ್ರಂಥಾಲಯದಲ್ಲಿರುವ0ತೆ ಕ್ರಮ ವಹಿಸಬೇಕು ಈ ಕುರಿತು ವಾರ್ತಾಧಿಕಾರಿಗಳು ಹಾಗೂ ನೇತಾಜಿ ಗಾಂಧೀ ಅವರು ಸಮನ್ವಯ ಸಾಧಿಸಿ ಒಂದು ವಾರದೊಳಗೆ ಕ್ರಮ ವಹಿಸುವಂತೆ ಅವರು ಸೂಚಿಸಿದರು.
ಮಹಾತ್ಮಾ ಗಾಂಧಿಜಿ ಅವರ ಜೀವನ ಆಧಾರಿತ ಕಿರು ಚಿತ್ರಗಳನ್ನು ಪಡೆದು ಭವನಕ್ಕೆ ಆಗಮಿಸುವ ವಿದ್ಯಾರ್ಥಿಗಳಿಗೆ ಕಿರುಚಿತ್ರ ಪ್ರದರ್ಶಿಸುವ ಮೂಲಕ ಮಕ್ಕಳಲ್ಲಿ ಗಾಂಧೀಜಿಯವರ ಕುರಿತು ಅರಿವು ಮೂಡಿದಂತಾಗುತ್ತದೆ ಎಂದು ಸಭೆಗೆ ತಿಳಿಸಿದರು.ಗಾಂಧೀ ಭವನದಲ್ಲಿ ಸದಭಿರುಚಿ ಬಿಂಬಿಸುವ0ತಹ ಸಂಘ ಸಂಸ್ಥೆಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮುಖ್ಯಸ್ಥರಿಂದ ಅನುಮತಿ ಪಡೆದು ಅವರ ಇಲಾಖೆಯ ಪತ್ರಗಳ ಮೂಲಕ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸಭೆಯಲ್ಲಿ ನಿರ್ಣಯಿಸಲಾಯಿತು.
ಗಾಂಧೀಜಿಯವರ ವಿಚಾರಾಧಾರೆಗಳು ಅರಿತುಕೊಳ್ಳಲು ಶಿಕ್ಷಣ ಇಲಾಖೆಯು ಸಮನ್ವಯ ಸಾಧಿಸಿ ಅಗಸ್ತö್ಯ ಪೌಂಡೇಷನ್‌ದೊ0ದಿಗೆ ಸಹಯೋಗದೊಂದಿಗೆ ಮಕ್ಕಳಿಗೆ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಈ ಕುರಿತು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ಪ್ರವಾಸೋದ್ಯಮ ಇಲಾಖೆಯು ಪ್ರವಾಸಿ ತಾಣಗಳ ಪಟ್ಟಿಯನ್ನು ತಯಾರಿಸಿದ್ದು ಅದರೊಂದಿಗೆ ಗಾಂಧೀ ಭವನವನ್ನು ಸೇರಿಸಿ ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರು ಗಾಂಧಿ ಭವನ ವೀಕ್ಷಣೆಗೆ ಸೂಕ್ತ ಮಾಹಿತಿ ಒದಗಿಸುವುದಕ್ಕಾಗಿ ಪ್ರವಾಸೋದ್ಯಮ ಇಲಾಖೆ ಕ್ರಮ ವಹಿಸುವಂತೆ ಅವರು ಸೂಚಿಸಿದರು.
ಭವನದ ಸುರಕ್ಷೆತ ದೃಷ್ಟಿಯಿಂದ ಸುತ್ತಲೂ ಎತ್ತರದ ಗೋಡೆಯನ್ನು ನಿರ್ಮಿಸುವುದರೊಂದಿಗೆ ತಂತಿ ಬೇಲಿಯನ್ನು ಅಳವಡಿವಂತೆ ಕ್ರಮ ವಹಿಸಬೇಕು ಈ ಕುರಿತು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು. ಭವನದಲ್ಲಿ ಗಾಂಧೀಜಿಯವರ ಕುರಿತು ಸಾಕ್ಷö್ಯಚಿತ್ರ ಪ್ರದರ್ಶಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಗುಣಮಟ್ಟವುಳ್ಳ ಪ್ರದರ್ಶಕ ಯಂತ್ರ (ಪ್ರೊಜೆಕ್ಟರ್) ಹಾಗೂ ಪೂರಕವಾಗಿ ಪರದೆ ಅಳವಡಿಸಲು ಕ್ರಮ ವಹಿಸುವಂತೆ ಅದರೊಂದಿಗೆ ಧ್ವನಿವರ್ಧಕ ವ್ಯವಸ್ಥೆ ಕೂಡ ಪರಿಶೀಲಿಸಿ ದುರಸ್ತಿಗೊಳಿಸುವಂತೆ ಪಂಚಾಯತ ರಾಜ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಭವನದಲ್ಲಿರುವ ಶೌಚಾಲಯ ದುರಸ್ತಿ ಜೊತೆಗೆ ಇನ್ನೂ ಹೆಚ್ಚಿನ ಶೌಚಾಲಯ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ಮಹಾನಗರ ಪಾಲಿಕೆ ಅಧಿಕರಿಗಳಿಗೆ ಸೂಚಿಸಿದರು.
ಭವನದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಓರ್ವರು ಕರ್ತವ್ಯ ನಿರ್ವಹಿಸುತ್ತಿದ್ದು ಇನ್ನೋರ್ವ ಸಿಬ್ಬಂದಿಗಳನ್ನು ನಿಯೋಜಿಸುವಂತೆ ಕೋರಲಾಯಿತು.
ಭವನದ ಮುಂದೆ ಕೈ ಪಂಪು ಇದ್ದು ಅದಕ್ಕೆ ಮೋಟಾರು ಅಳವಡಿಸಿ ಭವನಕ್ಕೆ ಉಪಯೋಗಿಸಿಕೊಳ್ಳಬಹುದಾಗಿದೆ ಅದರೊಂದಿಗೆ ನೀರಿನ ಟ್ಯಾಂಕನ್ನು ಅಳವಡಿಸಿದಲ್ಲಿ ಈ ಭವನಕ್ಕೆ ನೀರಿನ ಕೊರತೆಯನ್ನು ನೀಗಿಸಬಹುದಾಗಿದೆ ಈ ಕುರಿತು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಕ್ರಮ ವಹಿಸುವಂತೆ ಸೂಚಿಸಿದರು. ಭವನಕ್ಕೆ ಸಿ.ಸಿ ಕ್ಯಾಮರಾ ಅಳವಡಿಸುವ ಕ್ರಮಕ್ಕಾಗಿ ಸೂಚನೆ ನೀಡಲಾಯಿತು.
ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ಕಾರ್ಯ ನಿರ್ವಾಹಕ ಅಭಿಯಂತರರಾದ ಸಿ.ಎಸ್ ಪೊಲೀಸ್ ಪಾಟೀಲ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಿವನಗೌಡ ಪಾಟೀಲ,ಭೂಮಾಪನ ಇಲಾಖೆಯ ಉಪ ನಿರ್ದೇಶಕರಾದ ಎಂ.ಎನ್ ಮುಳಗುಂದ, ವಾರ್ತಾಧಿಕಾರಿ ಅಮರೇಶ ದೊಡಮನಿ, ಎನ್.ಟಿ.ಪಿ.ಸಿ ಡಿಜಿಎಂ ಬದ್ರುದ್ದಿನ್ ಅನ್ಸಾರಿ ಹಾಗೂ ಎನ್.ಟಿ.ಪಿ.ಸಿ ಡಿಜಿಎಂ ಅಜಯ ಕುಮಾರ, ಪಾಲಿಕೆಯ ಅಧೀಕ್ಷಕ ಅಭಿಯಂತರರಾದ ತಿಮ್ಮಪ್ಪ, ಪಂಚಾಯತ್ ರಾಜ್ ಇಂಜಿನೀಯರಿ0ಗ್ ವಿಭಾಗದ ಅಧಿಕಾರಿ ವಿಜಯಕುಮಾರ ಹತ್ತಿ,ಕೆಆರ್‌ಈಡಿಎಲ್‌ನ ಸಹಾಯಕ ಅಭಿಯಂತರರಾದ ಸಾಳುಂಕೆ, ಜಲಮಂಡಳಿಯ ಎಇಇ ಕೋರೆಪ್ಪ ಹಾಗೂ ಮಹೇಶ ಹೊನ್ನಕಟ್ಟಿ, ಪತ್ರಕರ್ತರಾದ ಗೋಪಾಲ ನಾಯಕ, ಫಿರೋಜ್ ರೋಜಿನದಾರ, ಪೀಟರ್ ಅಲೆಕ್ಸಾಂಡರ್, ಸುರೇಶ ಘೊಣಸಗಿ, ಬಿ.ಬಿ ಪಾಟೀಲ, ಬಾಪುಗೌಡ ಪಾಟೀಲ(ಶೇಗುಣಶಿ) ಹಾಗೂ ಇತರರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande