ಮನ್ವಂತರ ಪ್ರಕಾಶನದಿಂದ ಸಾಮರಸ್ಯ ಸಾರುವ ಸಂಕ್ರಾಂತಿ ಹಬ್ಬ ಆಚರಣೆ
ಮನ್ವಂತರ ಪ್ರಕಾಶನದಿಂದ ಸಾಮರಸ್ಯ ಸಾರುವ ಸಂಕ್ರಾಂತಿ ಹಬ್ಬ ಆಚರಣೆ
ಚಿತ್ರ ; ಮನ್ವಂತರ ಪ್ರಕಾಶನದಿಂದ ಸಾಮರಸ್ಯ ಸಾರುವ ಸಂಕ್ರಾಂತಿ ಹಬ್ಬವನ್ನು ಕೋಲಾರದಲ್ಲಿ ಆಚರಿಸಲಾಯಿತು.


ಕೋಲಾರ, ೧೬ ಜನವರಿ (ಹಿ.ಸ.) :

ಆ್ಯಂಕರ್ : ಕಳೆದ ಎರಡು ದಶಕಗಳಿಂದ ಕೋಲಾರ ಜಿಲ್ಲೆಯಾದ್ಯಂತ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ವಿವಿಧ ಸ್ತರಗಳ ಜನರ ಗಮನ ಸೆಳೆದಿರುವ ಮನ್ವಂತರ ಪ್ರಕಾಶನ ಹಾಗೂ ಮನ್ವಂತರ ಮಾಧ್ಯಮ ಕೌಶಲ್ಯ ಅಭಿವೃದ್ಧಿ ತರಬೇತಿ ಸಂಸ್ಥೆಯು ಈ ಬಾರಿ ಎಲ್ಲರನ್ನು ಒಳಗೊಂಡ ಸಾಮರಸ್ಯ ಮತ್ತು ಸೌಹಾರ್ದ ಸಂಕ್ರಾಂತಿ ಹಬ್ಬವನ್ನು ಆಚರಿಸಿ ಗಮನ ಸೆಳೆಯಿತು.

ಕೋಲಾರ ನಗರದ ಅಂತರಗಂಗೆ ರಸ್ತೆಯಲ್ಲಿರುವ ಪತ್ರಕರ್ತರ ಭವನದಲ್ಲಿ ಸಂಕ್ರಾಂತಿ ಸಂಭ್ರಮದ ಅಂಗವಾಗಿ ವಿವಿಧ ಸಮುದಾಯಗಳ ಮುದ್ದಿನ ಮಕ್ಕಳಿಗೆ ಆರತಿ ಬೆಳಗಿ, ತಾಯಂದಿರಿಂದ ಹಾಗೂ ಸಭೀಕರಿಂದ ಆಶೀರ್ವಾದ ಮಾಡಿಸಿ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಎಲೆಮರೆಯ ಕಾಯಿಯಂತೆ ಸೇವೆ ಸಲ್ಲಿಸುತ್ತಿರುವ ೮ ಮಂದಿ ಅಪರೂಪದ ಸಾಧಕರಿಗೆ ಸತ್ಕಾರ, ಮನ್ವಂತರ ಸಮರ್ಪಣೆ ಮಾಡಿದ್ದು ವಿಶೇಷ.

ಸಾಮಾನ್ಯವಾಗಿ ಯಾವುದೇ ಕಾರ್ಯಕ್ರಮ ನಡೆದರೂ ದೀಪ ಬೆಳಗಿಸಿ, ಗಿಡಕ್ಕೆ ನೀರು ಹಾಕಿ ಕಾರ್ಯಕ್ರಮಕ್ಕೆ ಚಾಲನೆ ನೀಡುವುದು ವಾಡಿಕೆ. ಆದರೆ ಮನ್ವಂತರ ಪ್ರಕಾಶನದ ಅಧ್ಯಕ್ಷ ಹಾಗೂ ಮನ್ವಂತರ ಮಾಧ್ಯಮ ಕೌಶಲ್ಯ ಅಭಿವೃದ್ಧಿ ತರಬೇತಿ ಸಂಸ್ಥೆಯ ಮುಖ್ಯಸ್ಥರಾದ ಪಾ.ಶ್ರೀ. ಅನಂತರಾಮ ಅವರ ಆಶಯದ ಮೇರೆಗೆ ಮನ್ವಂತರ ಡಿಜಿಟಲ್ ಟಿವಿ ಚಾನೆಲ್ ಎಂಡಿ ಸ್ಪೂರ್ತಿ ದೀಕ್ಷಿತ್, ಟೆಕ್ನಿಕಲ್ ಹೆಡ್ ಪ್ರೇಮ ಕುಮಾರ್ ಉದ್ಗಿರ್, ಮನ್ವಂತರ ಪ್ರಕಾಶನದ ಪ್ರಧಾನ ಸಂಚಾಲಕ ಎಸ್. ಎನ್. ಪ್ರಕಾಶ್, ಸೇವಾ ವಿಭಾಗದ ಪ್ರಧಾನ ಸಂಚಾಲಕ ಎಸ್.ಮಂಜುನಾಥ್ , ಮಾಧ್ಯಮ ಸಂಚಾಲಕ ಆಸೀಸ್, ಗಂಗಾಧರ್ ಇತರರು ಸಂಕ್ರಾಂತಿ ಸಂಭ್ರಮದ ಉದ್ಘಾಟನೆಯನ್ನು ಪುಟ್ಟ ಮಕ್ಕಳಿಗೆ ಆರತಿ ಬೆಳಗಿ, ಉಡುಗೊರೆ ನೀಡುವ ಮೂಲಕ ಹೊಸ ಪರಂಪರೆಗೆ ನಾಂದಿ ಹಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಮಕ್ಕಳನ್ನು ಕರೆ ತಂದಿದ್ದ ತಾಯಂದಿರು ಸಹ ಆರತಿಯಲ್ಲಿ ಪಾಲ್ಗೊಂಡು ನಮಗೆ ಇದು ಹೊಸ ಅನುಭವ ನೀಡಿತು ಇನ್ನು ಮುಂದೆ ನಮ್ಮ ಮನೆಯಲ್ಲಿ ಈ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುತ್ತೇವೆ ಎಂದು ಸಂತಸ ವ್ಯಕ್ತಪಡಿಸಿದರು.

ಡಿ.ಆರ್.ರಾಜಪ್ಪ (ಜಾನಪದ, ತತ್ವಪದ ಗಾಯಕರು), ಶಾಂತಮ್ಮ (ಕೃಷಿ, ಆಶಾ ಕಾರ್ಯಕರ್ತೆ), ಜಯಮ್ಮ (ಪೌರ ಕಾರ್ಮಿಕರು), ಬಾಬು ವಿ. (ಶಿಕ್ಷಕ, ಪರಿಸರ ಸಂರಕ್ಷಕ), ಜೋಸೆಫ್ (ಶಿಕ್ಷಣ ಸಂಸ್ಥೆ), ನಾಗರಾಜ ಶೆಟ್ಟಿ (ಸಾಮಾಜಿಕ ಹೋರಾಟಗಾರ), ನಂದೀಶ್ (ಆರೋಗ್ಯ) ಹಾಗೂ ಮೀರ್ ನವೀದ್ ಅಹಮ್ಮದ್ (ಸಮಾಜ ಸೇವಕ) ಸನ್ಮಾನಕ್ಕೆ ಒಳಗಾದ ಸಾಧಕರು. ಪತ್ರಕರ್ತ ಕೆ.ಓಂಕಾರ ಮೂರ್ತಿ ಸಾಧಕರಿಗೆ ಗೌರವ ಸಮರ್ಪಣೆ ಮಾಡಿದರು.

ಮನ್ವಂತರ ಪ್ರಕಾಶನದ ಮುಖ್ಯಸ್ಥ ಪಾ.ಶ್ರೀ.ಅನಂತರಾಮ ಅವರು ಮಾತನಾಡಿ, ಹಬ್ಬಗಳನ್ನು ಆಚರಿಸುವುದು ಮನಃಶಾಂತಿಗಾಗಿ, ಸಾಮರಸ್ಯ ಹಾಗೂ ಸೌಹಾರ್ದಕ್ಕಾಗಿ ಹಬ್ಬ ಆಚರಿಸುವ ಮನೋಭಾವ ಇಂದಿನ ಅಗತ್ಯ ಎಂದು ತಿಳಿಸಿದರು.

ಸಂಕ್ರಾಂತಿ ಎಂದರೆ ಎಲ್ಲರೂ ಒಗ್ಗೂಡಿ ಆಚರಿಸಬೇಕಾದ ಸುಗ್ಗಿ ಹಬ್ಬ, ಇದು ರೈತರಿಗೆ ಅತ್ಯಂತ ಪವಿತ್ರವಾದ ಹಬ್ಬವೂ ಹೌದು. ಸುಗ್ಗಿಯ ಸಂಭ್ರಮ ಜಾತಿ, ಧರ್ಮ ಮೀರಿ ಎಲ್ಲಾ ಸಮುದಾಯದವರು ಆಚರಿಸಿದಾಗ ಸಾಮರಸ್ಯ, ಸೌಹಾರ್ದತೆ ತಾನಾಗಿಯೇ ವಿಸ್ತಾರಗೊಳಿಸಬಹುದು ಎಂದು ಆಶಿಸಿದರು.

ನಮ್ಮ ಸಂಸ್ಥೆಯಿಂದ ಕಳೆದ ಎರಡು ದಶಕಗಳಲ್ಲಿ ಅನೇಕ ಒಳ್ಳೆಯ ಕಾರ್ಯಕ್ರಮವಾಗಿದೆ, ಹತ್ತಾರು ಮಹನೀಯರನ್ನು ಗೌರವಿಸಿದ್ದೇವೆ, ೭ ವರ್ಷಗಳಿಂದ ನಮ್ಮ ಮನೆಯಲ್ಲಿ ನಡೆಸಲಾಗುತ್ತಿದ್ದ ಸಾಮರಸ್ಯ ಸಾರುವ ಕಾರ್ಯಕ್ರಮದಲ್ಲಿ ಎಲೆಮರೆಯ ಕಾಯಿಯಂತೆ ಸಾಧನೆ ಮಾಡಿರುವ ಸಾಧಕರನ್ನು ಜಾತಿ, ಧರ್ಮ ನೋಡದೆ ಸತ್ಕಾರ ಮಾಡಲಾಗಿದ್ದು ಅಪರೂಪದ ೧೦೯ ಸಾಧಕರನ್ನು ಸನ್ಮಾನಿಸಿದ್ದೇವೆ , ಇನ್ನು ಮುಂದೆ ಈ ರೀತಿಯ ಕಾರ್ಯಕ್ರಮವನ್ನು ಮನ್ವಂತರ ಪ್ರಕಾಶನದ ಮೂಲಕ ಮುಂದುವರಿಸಿಕೊಂಡು ಹೋಗಲು ನಿರ್ಧರಿಸಿದ್ದು ಸಮಾನ ಮನಸ್ಕರು ಒಳ್ಳೆಯ ಕೆಲಸಕ್ಕೆ ಕೈಜೋಡಿಸಿ ಎಂದು ಕರೆ ನೀಡಿದರು.

ಅಭಿನಂದನಾ ಭಾಷಣ ಮಾಡಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ಬಿ.ವಿ.ಗೋಪಿನಾಥ್, ನಮ್ಮ ಸಂಕುಚಿತನದ ಮನೋಭಾವದಿಂದ ಹಬ್ಬಗಳ ಮಹತ್ವ ಕಳೆದುಹೋಗಿದೆ. ಸಂಕ್ರಾಂತಿ ಎಲ್ಲರನ್ನೂ ಒಳಗೊಳ್ಳುವ ಹಬ್ಬ, ಪ್ರಕೃತಿ ಹಬ್ಬ. ಹಬ್ಬಗಳ ಹಿಂದಿನ ಆಶಯ ಮರೆತಿದ್ದೇವೆ. ಇಂಥ ಸಂದರ್ಭದಲ್ಲಿ ಪರಂಪರೆ ನೆನಪಿಸಿಕೊಳ್ಳಲಾಗಿದೆ. ಆ ಕೆಲಸವನ್ನು ಮನ್ವಂಥರ ಸಂಸ್ಥೆಯ ಪಾ.ಶ್ರೀ.ಅನಂತರಾಮು ಮಾಡುತ್ತಿದ್ದಾರೆ’ ಎಂದು ತಿಳಿಸಿದರು. ಜೊತೆಗೆ ಸಾಧಕರನ್ನು ಪರಿಚಯಿಸಿದರು.

ಸಂಘದ ಅಧ್ಯಕ್ಷ ಎಸ್.ಕೆ.ಚಂದ್ರಶೇಖರ್, ಎಲ್ಲರನ್ನೂ ಒಂದೆಡೆ ಸೇರಿಸಿ ಹಬ್ಬ ಆಚರಿಸುವುದು ಈ ಕಾಲದ ಅಗತ್ಯ. ಸನ್ಮಾನಕ್ಕೆ ಆಯ್ಕೆಗಳು ಚೆನ್ನಾಗಿವೆ. ಮಕ್ಕಳನ್ನು ಜಾತಿ ಧರ್ಮ ಮೀರಿ ಬೆಳೆಸಬೇಕಿದೆ’ ಎಂದರು.

ಸಂಘದ ಖಜಾಂಚಿ ರಾಜೇಂದ್ರ ಸಿಂಹ, ಇದೊಂದು ವಿಭಿನ್ನ, ವಿಶೇಷ ಕಾರ್ಯಕ್ರಮ. ಸನ್ಮಾನಕ್ಕೆ ಭಾಜನರಾಗಿರುವವರು ಯಾವುದೇ ನಿರೀಕ್ಷೆ ಇಲ್ಲದೆ, ಮನಸ್ಫೂರ್ತಿಯಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಶ್ಲಾಘಿಸಿದರು.

ರಾಜ್ಯ ಕಾರ್ಯಕಾರಿಣಿ ಸದಸ್ಯ ವಿ.ಮುನಿರಾಜು, ಇಂಥ ಅಪರೂಪದ ಕಾರ್ಯಕ್ರಮ ಆಯೋಜಿಸಿರುವ ಸಂಘಟಕ ಪಾ.ಶ್ರೀ.ಅನಂತರಾಮು ಅವರ ಕೆಲಸ ಹಾಗೂ ಧೈರ್ಯ ಮೆಚ್ಚುವಂಥದ್ದು. ಈ ಕಾರ್ಯ ಇದೇ ರೀತಿ ಮುಂದುವರಿಯಲಿ’ ಎಂದು ಆಶಿಸಿದರು.

ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಜೆ.ಜಿ.ನಾಗರಾಜ್, ಮನ್ವಂತರ ಸಂಸ್ಥೆ ಅನೇಕ ಆಯಾಮಗಳಲ್ಲಿ ಕಾರ್ಯಕ್ರಮ ಮಾಡಿಕೊಂಡು ಬಂದಿದೆ. ಮಾನವೀಯತೆ, ಮನುಷ್ಯತ್ವ ನಡೆ ಇಂದಿನ ಅಗತ್ಯವಿದೆ. ಮನ್ವಂತರ ಎಂದರೆ ಬದಲಾವಣೆ. ಆ ದಿಕ್ಕಿನಲ್ಲಿ ಸಂಸ್ಥೆಯ ಕೆಲಸ ಸಾಗುತ್ತಿದೆ ಎಂದರು.

ಪರಿಸರ ಲೇಖಕ ಎಚ್.ಎ. ಪುರುಷೋತ್ತಮ ರಾವ್, ಸಾಮರಸ್ಯ, ಸೌಹಾರ್ದ ಆಶಯವೇ ದೊಡ್ಡ ವಿಚಾರ. ಆದರೆ, ಅವುಗಳನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ನಮ್ಮನ್ನು ನಾವೇ ವಂಚಿಸಿಕೊಳ್ಳುತ್ತಿದ್ದೇವೆ, ಸ್ವಾರ್ಥ ಜೀವಿಗಳಾಗುತ್ತಿದ್ದೇವೆ. ಸಾಮರಸ್ಯ ಹಾಗೂ ಸೌಹಾರ್ದವನ್ನು ಮರಳಿ ಪಡೆಯಬೇಕಿದೆ ಎಂದು ಹೇಳಿದರು.

ಪ್ರಜಾವಾಣಿಯ ಹಿರಿಯ ಜಿಲ್ಲಾ ವರದಿಗಾರ ಕೆ.ಓಂಕಾರ ಮೂರ್ತಿ ಮಾತನಾಡಿ, ಸಾಧನೆ ಒಲಿಯಲು ಸತತ ಪರಿಶ್ರಮ, ಭದ್ರ ಬುನಾದಿ ಅಗತ್ಯ. ಎಲ್ಲೋ ಒಂದು ಕಡೆ ವೈಫಲ್ಯ ಎದುರಾದಾಗ ಕೈಚೆಲ್ಲಬಾರದು. ಈ ಸಂದರ್ಭದಲ್ಲಿ ಪೋಷಕರ ಬೆಂಬಲ, ದೃಢ ನಿರ್ಧಾರ, ಮತ್ತಷ್ಟು ಶ್ರಮ ಕನಸುಗಳನ್ನು ನನಸು ಮಾಡಬಲ್ಲದು ಎಂದರು.

ಕಾರ್ಯಕ್ರಮದಲ್ಲಿ ಆದಿಮ ಸಾಂಸ್ಕೃತಿಕ ಕೇಂದ್ರದ ಪ್ರಧಾನ ಕಾರ್ಯದರ್ಶಿ ಹ.ಮಾ.ರಾಮಚಂದ್ರ, ನಗರಸಭೆ ಮಾಜಿ ಉಪಾಧ್ಯಕ್ಷ ವಿ.ಕೆ.ರಾಜೇಶ್, ಕನ್ನಡ ಪರ ಹೋರಾಟಗಾರ ಅ.ಕೃ.ಸೋಮಶೇಖರ್, ಬಿಜೆಪಿ ಮುಖಂಡ ರಾಜೇಶ್ ಸಿಂಗ್, ಅರುಣಮ್ಮ, ಮನ್ವಂತರ ಪ್ರಕಾಶನದ ಮಾಧ್ಯಮ ಸಂಚಾಲಕ ಆಸಿಫ್ ಪಾಷಾ, ಗಂಗಾಧರ್, ಚಂದ್ರಶೇಖರ ಉದ್ಗಿರ್ ಇದ್ದರು. ಗಾಯಕಿ, ನಿರೂಪಕಿ ಮಂಜುಳಾ ಕೊಂಡರಾಜನಹಳ್ಳಿ ಪ್ರಾರ್ಥನೆ, ಎಸ್.ಮಂಜುನಾಥ್ ಸ್ವಾಗತ, ಎಸ್.ಎನ್.ಪ್ರಕಾಶ್ ಮಾಮಿ ವಂದನಾರ್ಪಣೆ ನೆರವೇರಿಸಿದರೆ, ಸಾಹಿತಿ ರವೀಂದ್ರ ಸಿಂಗ್ ಅಚ್ಚುಕಟ್ಟಾಗಿ ನಿರೂಪಿಸಿದರು.

ಚಿತ್ರ ; ಮನ್ವಂತರ ಪ್ರಕಾಶನದಿಂದ ಸಾಮರಸ್ಯ ಸಾರುವ ಸಂಕ್ರಾಂತಿ ಹಬ್ಬವನ್ನು ಕೋಲಾರದಲ್ಲಿ ಆಚರಿಸಲಾಯಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande