
ಗದಗ, 16 ಜನವರಿ (ಹಿ.ಸ.) :
ಆ್ಯಂಕರ್ : ಐತಿಹಾಸಿಕ ದೇವಸ್ಥಾನಗಳ ತೊಟ್ಟಿಲೆಂದೇ ಖ್ಯಾತಿ ಪಡೆದಿರುವ ಗದಗ ತಾಲೂಕಿನ ಲಕ್ಕುಂಡಿ ಗ್ರಾಮ ಇದೀಗ ಮತ್ತೆ ದೇಶದ ಗಮನ ಸೆಳೆಯುತ್ತಿದೆ. ನೂರೊಂದು ದೇವಸ್ಥಾನಗಳು, ನೂರೊಂದು ಬಾವಿಗಳು ಇದ್ದವು ಎಂಬ ಐತಿಹಾಸಿಕ ದಾಖಲೆಗಳಿರುವ ಈ ಗ್ರಾಮದಲ್ಲಿ ಇತ್ತೀಚೆಗೆ ಮನೆ ನಿರ್ಮಾಣಕ್ಕಾಗಿ ಪಾಯ ಅಗೆಯುವ ವೇಳೆ ಪುರಾತನ ನಿಧಿ ಪತ್ತೆಯಾಗಿದ್ದು, ಆ ಘಟನೆ ಅಂತರಾಷ್ಟ್ರೀಯ ಮಟ್ಟದಲ್ಲೂ ಸುದ್ದಿಯಾಗಿತ್ತು. ಈ ಹಿನ್ನೆಲೆ ಲಕ್ಕುಂಡಿಯ ಇತಿಹಾಸದ ಮತ್ತೊಂದು ಅಧ್ಯಾಯ ಅನಾವರಣಗೊಳಿಸುವ ನಿಟ್ಟಿನಲ್ಲಿ ಇದೀಗ ಅಧಿಕೃತವಾಗಿ ಉತ್ಖನನ ಕಾರ್ಯ ಆರಂಭಗೊಂಡಿದೆ.
ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗ, ಸಿದ್ಧರ ಭಾವಿ ಹಾಗೂ ಚಂದ್ರಮೌಳೇಶ್ವರ ದೇವಸ್ಥಾನದ ನಡುವಿನ ಪ್ರದೇಶದಲ್ಲಿ ಉತ್ಖನನ ಕಾರ್ಯಕ್ಕೆ ಇಂದು ಚಾಲನೆ ನೀಡಲಾಯಿತು.
ಗದಗ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಭೂಮಿ ಪೂಜೆ ನೆರವೇರಿಸುವ ಮೂಲಕ ಉತ್ಖನನ ಕಾರ್ಯಕ್ಕೆ ಅಧಿಕೃತ ಚಾಲನೆ ನೀಡಿದರು. ಉತ್ಖನನಕ್ಕೆ ಅಗತ್ಯವಾದ ಸಲಕರಣೆಗಳಿಗೆ ಪೂಜೆ ಸಲ್ಲಿಸುವ ದೃಶ್ಯ, ಅತೀ ಸೂಕ್ಷ್ಮವಾಗಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ, ಹಾಗೂ ಉತ್ಖನನಕ್ಕೂ ಮುನ್ನವೇ ಸ್ಥಳಕ್ಕೆ ಆಗಮಿಸಿದ ಕುತೂಹಲಭರಿತ ಗ್ರಾಮಸ್ಥರು—ಇವೆಲ್ಲವೂ ಲಕ್ಕುಂಡಿಯ ಮಹತ್ವವನ್ನು ಮತ್ತಷ್ಟು ಎತ್ತಿ ಹಿಡಿದವು.
ಕೇಂದ್ರ ಸರ್ಕಾರದಿಂದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗ 10 ಅಡಿ ಉದ್ದ ಹಾಗೂ 10 ಅಡಿ ಅಗಲದಲ್ಲಿ ಉತ್ಖನನ ನಡೆಸಲು ಅನುಮತಿ ದೊರೆತಿದೆ.
ಅದರಂತೆ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಧಾರವಾಡ ವಲಯ), ಪುರಾತತ್ವ ವಸ್ತು ಸಂಗ್ರಹಾಲಯ ಹಾಗೂ ಪಾರಂಪರಿಕ ಇಲಾಖೆ (ಮೈಸೂರು), ಜಿಲ್ಲಾಡಳಿತದ ಸಂಯುಕ್ತ ನೇತೃತ್ವದಲ್ಲಿ ಉತ್ಖನನ ಕಾರ್ಯ ಆರಂಭವಾಗಿದೆ. ಉತ್ಖನನಕ್ಕೆ ಮುನ್ನ ಪುರಾತತ್ವ ಇಲಾಖೆ ಅಧಿಕಾರಿಗಳು ನಿಗದಿತ ಪ್ರದೇಶವನ್ನು ಗುರುತು ಮಾಡಿ,
ಅದರೊಳಗೆ ಕಾರ್ಯಾರಂಭಿಸಿದ್ದಾರೆ.
ಇಂದಿನಿಂದ ಸುಮಾರು ನಾಲ್ಕು ತಿಂಗಳ ಕಾಲ ಉತ್ಖನನ ಕಾರ್ಯ ನಡೆಯಲಿದ್ದು, ಯಾವುದೇ ಭಾರಿ ಯಂತ್ರೋಪಕರಣಗಳನ್ನು ಬಳಸುವುದಿಲ್ಲ. ಸಂಪೂರ್ಣವಾಗಿ ಕಾರ್ಮಿಕರ ಸಹಾಯದಿಂದ, ಗುದ್ದಲಿ, ಸಲಾಕೆ, ಹಾರಿ, ಪಿಕಾಸಿ ಮುಂತಾದ ಸೂಕ್ಷ್ಮ ಉಪಕರಣಗಳ ಮೂಲಕ ಜಾಗರೂಕತೆಯಿಂದ ಉತ್ಖನನ ನಡೆಯಲಿದೆ. ನಿಧಿ ಪತ್ತೆಯಾದ ಘಟನೆಯಿಗೂ ಈ ಉತ್ಖನನಕ್ಕೂ ನೇರ ಸಂಬಂಧ ಇಲ್ಲ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದು, ಜೂನ್ ತಿಂಗಳಲ್ಲೇ ಮುಖ್ಯಮಂತ್ರಿ ಉತ್ಖನನಕ್ಕೆ ಚಾಲನೆ ನೀಡಿದ್ದರು. ಲಕ್ಕುಂಡಿಯಲ್ಲಿರುವ ಪುರಾತನ ವಸ್ತುಗಳ ಪತ್ತೆಯೇ ಈ ಉತ್ಖನನದ ಮುಖ್ಯ ಉದ್ದೇಶ ಎಂದು ಅವರು ತಿಳಿಸಿದ್ದಾರೆ.
ಕೋಟೆ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗವೇ ಉತ್ಖನನಕ್ಕೆ ಆಯ್ಕೆಯಾಗಿರುವುದಕ್ಕೆ ಗ್ರಾಮಸ್ಥರು ಐತಿಹಾಸಿಕ ಕಾರಣಗಳನ್ನು ಮುಂದಿಟ್ಟಿದ್ದಾರೆ. ಹಿರಿಯರ ಪ್ರಕಾರ, ಈ ಪ್ರದೇಶದಲ್ಲಿ ಹಿಂದೆ ಟಂಕಶಾಲೆ ಇದ್ದಿತ್ತೆನ್ನಲಾಗಿದ್ದು, ಇಲ್ಲಿ ಬಂಗಾರದ ನಾಣ್ಯಗಳನ್ನು ಮುದ್ರಿಸಲಾಗುತ್ತಿತ್ತು. ಕೋಟೆ ವೀರಭದ್ರೇಶ್ವರ ದೇವಸ್ಥಾನದಿಂದ ಸುಮಾರು 60 ರಿಂದ 70 ಮೀಟರ್ ದೂರದಲ್ಲಿ ಆ ಟಂಕಶಾಲೆ ಇದ್ದಿತ್ತೆನ್ನುವ ಮಾತುಗಳಿವೆ. ಅಲ್ಲದೆ ದೇವಸ್ಥಾನ ಹಾಗೂ ಸಿದ್ಧರ ಭಾವಿಗೆ ಭೂಗತ ಮಾರ್ಗದ ಸಂಪರ್ಕವಿತ್ತು ಎನ್ನುವ ನಂಬಿಕೆಯೂ ಇದೆ. ದೇವಸ್ಥಾನದ ಸುತ್ತಮುತ್ತಲ ಪ್ರದೇಶವನ್ನು “ಅಚ್ಚಪ್ಪನ ಬಯಲು” ಎಂದು ಕರೆಯಲಾಗುತ್ತಿದ್ದು, ಇಲ್ಲಿ ಬಂಗಾರದ ನಾಣ್ಯಗಳಿಗೆ ಅಚ್ಚು ಮುದ್ರಣ ನಡೆಯುತ್ತಿತ್ತು ಎಂಬ ದಂತಕಥೆಗಳು ಪ್ರಸಿದ್ಧವಾಗಿವೆ.
ಲಕ್ಕುಂಡಿಯಲ್ಲಿ ಇದಕ್ಕೂ ಮುನ್ನ 2003-04ರಲ್ಲಿ ಉತ್ಖನನ ಕಾರ್ಯ ನಡೆದಿದ್ದು, ಇದೀಗ ಸುಮಾರು 22 ವರ್ಷಗಳ ನಂತರ ಮತ್ತೆ ಉತ್ಖನನ ಆರಂಭವಾಗಿದೆ. ಇತ್ತೀಚೆಗೆ ನಿಧಿ ಪತ್ತೆಯಾದ ಬಳಿಕ ಉತ್ಖನನದ ಕುರಿತ ಕುತೂಹಲ ಇನ್ನಷ್ಟು ಹೆಚ್ಚಾಗಿದೆ. ಮಳೆ ಬಂದಾಗಲೂ ಹಳೆಯ ನಾಣ್ಯಗಳು, ವಜ್ರ, ಹವಳ, ಮುತ್ತುಗಳು ಸಿಕ್ಕಿರುವ ಉದಾಹರಣೆಗಳಿರುವ ಲಕ್ಕುಂಡಿಯಲ್ಲಿ, ಈ ಬಾರಿ ಉತ್ಖನನದಲ್ಲಿ ಏನೆಲ್ಲ ಪತ್ತೆಯಾಗಬಹುದು ಎಂಬ ಪ್ರಶ್ನೆ ಎಲ್ಲರಲ್ಲೂ ಕುತೂಹಲ ಕೆರಳಿಸಿದೆ.
ಉತ್ಖನನ ಸ್ಥಳಕ್ಕೆ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯವನ್ನು ವೀಕ್ಷಿಸುತ್ತಿದ್ದು, ಪುರಾತತ್ವ ಇಲಾಖೆ ಅಧಿಕಾರಿಗಳು ಸಹ ಎಚ್ಚರಿಕೆಯಿಂದ ಪ್ರತಿಯೊಂದು ಹಂತವನ್ನು ಗಮನಿಸುತ್ತಿದ್ದಾರೆ.
ದೇವಾಲಯಗಳ ಸ್ವರ್ಗವೆಂದೇ ಕರೆಯಲ್ಪಡುವ ಲಕ್ಕುಂಡಿ ಮೂರು ಅರಸರ ಆಳ್ವಿಕೆ ಕಂಡ ಚಿನ್ನದ ಊರು ಇಂದು ಮತ್ತೆ ತನ್ನ ವೈಭವದ ಇತಿಹಾಸದ ಮೂಲಕ ದೇಶದ ಗಮನ ಸೆಳೆಯುತ್ತಿದೆ. ಟಂಕಶಾಲೆಯ ಅಸ್ತಿತ್ವ ಸಾಬೀತಾದರೆ, ಅಪಾರ ಪ್ರಮಾಣದ ಬಂಗಾರದ ನಾಣ್ಯಗಳು, ರಾಜವಂಶದ ಆಭರಣಗಳು ಹಾಗೂ ಪೋಷಾಕುಗಳು ಪತ್ತೆಯಾಗುವ ಸಾಧ್ಯತೆಯನ್ನು ತಜ್ಞರು ನಿರಾಕರಿಸುವುದಿಲ್ಲ.
ಒಟ್ಟಾರೆ, ಲಕ್ಕುಂಡಿಯ ಉತ್ಖನನ ಕಾರ್ಯ ಇತಿಹಾಸದ ಮಡಿಲಲ್ಲಿ ಮರೆತುಹೋದ ಅಮೂಲ್ಯ ಸಂಪತ್ತಿನ ಹೊಸ ಅಧ್ಯಾಯವನ್ನು ಬರೆಯಲಿದೆ ಎಂಬ ನಿರೀಕ್ಷೆ ಗಟ್ಟಿಯಾಗುತ್ತಿದೆ.
ಹಿಂದೂಸ್ತಾನ್ ಸಮಾಚಾರ್ / lalita MP