
ವಿಜಯಪುರ, 16 ಜನವರಿ (ಹಿ.ಸ.) :
ಆ್ಯಂಕರ್ : ವಿಜಯಪುರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಜನವರಿ 26 ರಂದು ಗಣರಾಜ್ಯೋತ್ಸವ ಆಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಸಿದ್ದತೆಗೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳಾದ ಡಾ.ಆನಂದ.ಕೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಗಣರಾಜ್ಯೋತ್ಸವ ಆಚರಣೆಯ ಕುರಿತು ನಡೆದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದ ಅವರು, ಯಾವುದೇ ಗೊಂದಲಕ್ಕೆ ಆಸ್ಪದ ಕೊಡದೇ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಿರ್ವಹಿಸಲು ಸೂಚಿಸಿದರು.
ಅಧಿಕಾರಿಗಳು ತಮಗೆ ವಹಿಸಿದ ಎಲ್ಲ ಕಾರ್ಯಗಳನ್ನು ಜವಾಬ್ದಾರಿಯಿಂದ ನಿರ್ವಹಿಸಿ, ಸಮಿತಿಗಳನ್ನು ರಚಿಸಿದ್ದು, ಸಮಿತಿಯಲ್ಲಿ ಕಾರ್ಯ ಕೆಲಸಗಳನ್ನು ಹಂಚಿಕೆ ಮಾಡಲಾಗಿದ್ದು, ವಹಿಸಿದ ಕಾರ್ಯಗಳನ್ನು ಲೋಪವಾಗದಂತೆ ನಿರ್ವಹಿಸಿ, ಶಿಷ್ಟಾಚಾರದಂತೆ ಆಹ್ವಾನ ಪತ್ರಿಕೆ ಮುದ್ರಿಸಿ,ಜನಪ್ರತಿನಿಧಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ಕ್ರಮವಹಿಸಬೇಕು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ವ್ಯವಸ್ಥಿತ ಆಯೋಜನೆಗೆ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವೇದಿಕೆ ಸಿದ್ಧತೆ, ಆಸನ ವ್ಯವಸ್ಥೆ, ಶಾಮೀಯಾನ, ಧ್ವನಿ ವರ್ಧಕ ವ್ಯವಸ್ಥೆ, ಅಗತ್ಯ ಇರುವ ಎಲ್ಲ ಮೂಲಭೂತ ವ್ಯವಸ್ಥೆ ಒದಗಿಸಲು ಸಮಿತಿಯಲ್ಲಿರುವ ಅಧಿಕಾರಿಗಳು ಪರಸ್ಪರ ಸಂವಹನದೊಂದಿಗೆ ನಿರ್ವಹಿಸಲು ಸೂಚಿಸಲಾಯಿತು.
ಆಕರ್ಷಕ ಹಾಗೂ ಶಿಸ್ತುಬದ್ಧ ಪಥಸಂಚಲನಕ್ಕೆ ವ್ಯವಸ್ಥೆ, ಪಥಸಂಚಲನದ ಪೂರ್ವಭಾವಿ ಅಭ್ಯಾಸದ ಸಿದ್ಧತೆ, ಧ್ವಜ ಸಂಹಿತೆ ಅನುಸಾರ ರಾಷ್ಟ್ರ ಧ್ವಜಾರೋಹಣ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಸನ್ಮಾನಿಸಲು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿನ ಸಮಿತಿಯು ನಿಯಮಾನುಸಾರ ಅಗತ್ಯ ಕ್ರಮವಹಿಸುವಂತೆಯೂ,
ಅಲ್ಫೋಪಹಾರ ವ್ಯವಸ್ಥೆ ಅಚ್ಚುಕಟ್ಟು ವ್ಯವಸ್ಥೆಗೆ ಕ್ರಮಕೈಗೊಳ್ಳಬೇಕು. ಭದ್ರತಾ ವ್ಯವಸ್ಥೆ,ಕುಡಿಯುವ ನೀರು ನಗರದ ವೃತ್ತಗಳ ಸ್ವಚ್ಛತೆ, ದೀಪಾಲಂಕಾರಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು.
ಕಾರ್ಯಕ್ರಮಕ್ಕೆ ನಿಗದಿತ ಸಮಯದಲ್ಲಿ ಎಲ್ಲ ಅಧಿಕಾರಿಗಳು ಹಾಜರಿರಬೇಕು. ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ಅಂದು ಸಂಜೆ ಕಂದಗಲ್ ಶ್ರೀ ಹನುಮಂತರಾಯ ರಂಗ ಮಂದಿರದಲ್ಲಿ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಯಿತು. ಪ್ಲಾಸ್ಟಿಕ್ ಧ್ವಜ ಮಾರಾಟವಾಗದಂತೆ ನೋಡಿಕೊಳ್ಳಬೇಕು. ಗಣರಾಜ್ಯೋತ್ಸವದ ಸಂದೇಶ ಸಿದ್ಧಪಡಿಸಲು ಅಧಿಕಾರಿಗಳು ತಮ್ಮ ಇಲಾಖೆಯ ಅಭಿವೃದ್ಧಿ ಕಾರ್ಯಕ್ರಮಗಳ ಮಾಹಿತಿ ಸಕಾಲದಲ್ಲಿ ನೀಡುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ರಿಷಿ ಆನಂದ,ಹೆಚ್ಚುವರಿ ಪೊಲೀಸ್ ವರಿಷ್ಠಧಿಕಾರಿ ರಾಮನಗೌಡ ಹಟ್ಟಿ, ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ, ವಿಜಯಪುರ ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ ,ಅಡಿವೆಪ್ಪ ಸಾಲಗಲ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande