ಕ್ರಿಶ್ಚಿಯನ್ ಪದ ಸೇರಿರುವುದು ನೋವು ತಂದಿದೆ : ರಂಭಾಪುರಿ ಶ್ರೀ
ಗದಗ, 16 ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ : ಜಾತಿ ಜನಗಣತಿ ವರದಿಯಲ್ಲಿ ವೀರಶೈವ ಲಿಂಗಾಯತ ಧರ್ಮದ ಕಾಲಂನಲ್ಲಿ “ಕ್ರಿಶ್ಚಿಯನ್” ಪದ ಬಳಕೆಯಾದುದು ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ಈ ಬಗ್ಗೆ ರಂಭಾಪುರಿ ಪೀಠದ ಜಗದ್ಗುರು ಗದಗನಲ್ಲಿ ತೀವ್ರ ಆಕ್ರೋಶ ಹಾಗೂ ಕಳವಳ ವ್ಯಕ್ತಪಡಿಸಿದ್ದಾರೆ. ಗದಗನಲ್ಲಿ ರ
ಪೋಟೋ


ಗದಗ, 16 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಜಾತಿ ಜನಗಣತಿ ವರದಿಯಲ್ಲಿ ವೀರಶೈವ ಲಿಂಗಾಯತ ಧರ್ಮದ ಕಾಲಂನಲ್ಲಿ “ಕ್ರಿಶ್ಚಿಯನ್” ಪದ ಬಳಕೆಯಾದುದು ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ಈ ಬಗ್ಗೆ ರಂಭಾಪುರಿ ಪೀಠದ ಜಗದ್ಗುರು ಗದಗನಲ್ಲಿ ತೀವ್ರ ಆಕ್ರೋಶ ಹಾಗೂ ಕಳವಳ ವ್ಯಕ್ತಪಡಿಸಿದ್ದಾರೆ.

ಗದಗನಲ್ಲಿ ರಂಭಾಪುರಿ ಜಗದ್ಗುರು ‌ಮಾತನಾಡಿ, “ವೀರಶೈವ ಲಿಂಗಾಯತ ಧರ್ಮದ ಪಟ್ಟಿ ನೋಡಿದಾಗ ಅಚ್ಚರಿಯ ಸಂಗತಿ ಗೋಚರಿಸಿದೆ. ಏಕಾಏಕಿ ‘ಕ್ರಿಶ್ಚಿಯನ್’ ಎಂಬ ಪದ ಸೇರಿರುವುದು ನೋವು ತಂದಿದೆ. ಇದು ಅಖಂಡ ಹಿಂದೂ ಸಮಾಜವನ್ನು ವಿಭಜಿಸುವ ಹುನ್ನಾರವಾಗಿದ್ದು, ಜನರ ಭಾವನೆಗಳಿಗೆ ಧಕ್ಕೆ ತರುವಂತಿದೆ” ಎಂದು ಶ್ರೀಗಳು ಹೇಳಿದ್ದಾರೆ.

ಅವರು ಮುಂದುವರಿಸಿ, “ಬಹುಸಂಖ್ಯಾತ ಹಿಂದೂಗಳನ್ನು ಬೇರೆ ಬೇರೆ ಜಾತಿ, ಧರ್ಮಗಳ ಹೆಸರಿನಲ್ಲಿ ವಿಭಜಿಸಿ, ಇತರರಿಗೆ ರಾಜಕೀಯ ಅವಕಾಶ ಕಲ್ಪಿಸಲು ನಡೆಯುತ್ತಿರುವ ಕುತಂತ್ರ ಇದು. ಇಂತಹ ತಂತ್ರಗಳು ಕೇವಲ ಕೆಳಮಟ್ಟದಲ್ಲಿ ನಡೆಯುವುದಿಲ್ಲ, ಮೇಲ್ಮಟ್ಟದ ಧುರೀಣರ ಹಸ್ತಕ್ಷೇಪ ಇದರಲ್ಲಿ ಅಡಕವಾಗಿದೆ. ಸಮಾಜವನ್ನು ಗೊಂದಲಕ್ಕೆ ಸಿಲುಕಿಸುವ ಬದಲು, ಜನರ ಮನಸ್ಸಿನಲ್ಲಿ ಶಾಂತಿ, ನೆಮ್ಮದಿ ಬೆಳೆಸುವ ಕೆಲಸ ರಾಜಕೀಯ ನಾಯಕರು ಮಾಡಬೇಕು” ಎಂದು ಕಳಕಳಿಯಿಂದ ಮನವಿ ಮಾಡಿದರು.

ಧರ್ಮ ಪೀಠಗಳ ಮಾತುಗಳಿಗೆ ಸರ್ಕಾರಗಳು ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿಲ್ಲವೆಂಬ ಆಕ್ಷೇಪವನ್ನು ವ್ಯಕ್ತಪಡಿಸಿದ ಶ್ರೀಗಳು, “ನಾವು ಹೇಳಿದರೆ ಕೇಳ್ತಾರಂತಾನೂ ಇಲ್ಲ. ಆದರೆ ಧರ್ಮದ ಹೆಸರಿನಲ್ಲಿ ವಿಭಜನೆ ನಡೆಯಬಾರದು, ಧರ್ಮಗಳ ನಡುವೆ ಉತ್ತಮ ಸಂಬಂಧ ಬೆಳೆಸಬೇಕು ಎನ್ನುವುದು ನಮ್ಮ ಆಶಯ” ಎಂದು ಹೇಳಿದರು.

ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, “ನಾವು ಈ ಸಮೀಕ್ಷೆಯನ್ನು ಸ್ವಾಗತಿಸುತ್ತೇವೆ. ಆದರೆ ಈ ಸಮೀಕ್ಷೆಯಿಂದ ಧರ್ಮ-ಜಾತಿ ಭಾವನೆಗಳಿಗೆ ಧಕ್ಕೆ ಬಾರದು. ಹಿಂದುಳಿದ ಜಾತಿಗಳ ಪುನರುತ್ಥಾನಕ್ಕೆ ಇದು ಒಳ್ಳೆಯ ಬೆಳವಣಿಗೆ. ಆದರೆ ಇಷ್ಟೊಂದು ಸಂಖ್ಯೆಯಲ್ಲಿ ಜಾತಿಗಳನ್ನು ಪ್ರಕಟಿಸಿರುವುದು ಗಂಭೀರ ಪ್ರಶ್ನೆ. ಇಷ್ಟೊಂದು ಜಾತಿಗಳಿಗೆ ಸಮರ್ಪಕ ನ್ಯಾಯ ಸರ್ಕಾರ ಒದಗಿಸಬಹುದೇ ಎನ್ನುವುದು ಸಂದೇಹವಾಗಿದೆ” ಎಂದು ಹೇಳಿದರು.

ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಒತ್ತಾಯ ಮಾಡುವವರ ಕುರಿತು ಟಾಂಗ್ ನೀಡಿದ ಶ್ರೀಗಳು, “ಅಂತಹವರ ಮಾತಿಗೆ ಬೆಲೆ ಕೊಡುವ ಅಗತ್ಯವಿಲ್ಲ. ಕೆಲವರು ಮಾತ್ರ ಪ್ರತ್ಯೇಕ ಧರ್ಮದ ಪ್ರತಿಪಾದನೆ ಮಾಡುತ್ತಿದ್ದಾರೆ. ಆದರೆ ವೀರಶೈವ ಲಿಂಗಾಯತ ಒಂದೇ ಎಂಬುದೇ ನಮ್ಮ ಸಂದೇಶ” ಎಂದು ಸ್ಪಷ್ಟಪಡಿಸಿದರು.

ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 19ರಂದು ಹುಬ್ಬಳ್ಳಿಯ ನೆಹರು ಮೈದಾನದಲ್ಲಿ “ವೀರಶೈವ ಲಿಂಗಾಯತ ಏಕತಾ ಸಮಾವೇಶ”**ವನ್ನು ಆಯೋಜಿಸಲಾಗಿದೆ. ಇದರಲ್ಲಿ ದೇಶದ ಮೂಲೆ ಮೂಲೆಯಿಂದ ಗುರುಪೀಠದ ಜಗದ್ಗುರುಗಳು ಹಾಗೂ ಸಾವಿರಾರು ಮಠಾಧೀಶರು ಭಾಗವಹಿಸಲಿದ್ದಾರೆ. ಧರ್ಮದ ಸಮಗ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಸಮಾಜದ ಏಕತೆಯ ಸಂದೇಶ ಸಾರಲಾಗುವುದು ಎಂದು ಶ್ರೀಗಳು ತಿಳಿಸಿದರು.

ಕೊನೆಗೆ, “ಕೇವಲ ರಾಜಕೀಯ ಅಧಿಕಾರಕ್ಕಾಗಿ ಜನರ ಮನಸ್ಸುಗಳನ್ನು ಕಲುಷಿತಗೊಳಿಸಬೇಡಿ. ಬದಲಿಗೆ ಬಡತನ ನಿವಾರಣೆ, ಶಿಕ್ಷಣದ ವಿಸ್ತರಣೆ, ಜನರ ಪ್ರಗತಿಗೆ ಬದ್ಧತೆ ತೋರಬೇಕು. ಧರ್ಮವು ವಿಶ್ವಕ್ಕೆ ಶಾಂತಿ ನೀಡುವ ದಾರಿ ತೋರಬೇಕು. ಅದೇ ರಂಭಾಪುರಿ ಪೀಠದ ಸಂದೇಶ” ಎಂದು ಅವರು ಸ್ಪಷ್ಟಪಡಿಸಿದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande